ಗುರುವಾರ (ಜೂನ್ 18), ದೆಹಲಿ ಹೈಕೋರ್ಟ್‌ನಲ್ಲಿ ನಡೆದ ಮಹತ್ವದ ವಿಚಾರಣೆಯೊಂದರಲ್ಲಿ ಕೇಂದ್ರ ಸರ್ಕಾರವು ಮೆಸೇಜಿಂಗ್ ಆ್ಯಪ್ ‘ಟೆಲಿಗ್ರಾಂ’ಅನ್ನು ‘ಹೊಸ ಡಾರ್ಕ್ ವೆಬ್’ ಎಂದು ಬಣ್ಣಿಸಿದೆ. ಜೂನ್ 21ರಂದು ನಡೆಯಲಿರುವ ನೀಟ್-ಯುಜಿ ಮರುಪರೀಕ್ಷೆಯ ಹಿನ್ನೆಲೆಯಲ್ಲಿ ಟೆಲಿಗ್ರಾಂ ಮೇಲಿನ ತಾತ್ಕಾಲಿಕ ನಿರ್ಬಂಧಗಳನ್ನು ಸರ್ಕಾರ ಸಮರ್ಥಿಸಿಕೊಂಡಿದೆ. ಈ ಆ್ಯಪ್ ಅಪರಾಧಿಗಳು, ಭಯೋತ್ಪಾದಕರು ಹಾಗೂ ವಂಚಕರ ಪಾಲಿಗೆ ಸುರಕ್ಷಿತ ತಾಣವಾಗಿ ಮಾರ್ಪಟ್ಟಿದೆ ಎಂದು ಆಪಾದಿಸಿದೆ. ಸರ್ಕಾರದ ವಾದವನ್ನು ಪುರಸ್ಕರಿಸಿರುವ ಹೈಕೋರ್ಟ್ ಕೂಡ, ಟೆಲಿಗ್ರಾಂ ಮೇಲಿನ ನಿರ್ಬಂಧವನ್ನು ಎತ್ತಿಹಿಡಿದೆ. ಆದರೆ, ಕೇಂದ್ರ ಸರ್ಕಾರದ ನಡೆಯು, ‘ಮನೆ ಕಳ್ಳನನ್ನು ಹಿಡಿಯಲಾಗದೆ ಊರ ಕಳ್ಳನಿಗೆ ದಂಡ ಹಾಕಿದರಂತೆ’ ಎಂಬಂತಾಗಿದೆ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಟೆಲಿಗ್ರಾಂ ಸಂಸ್ಥಾಪಕ ಮತ್ತು ಸಿಇಒ ಆದ ಪಾವೆಲ್ ಡುರೋವ್ ಕೂಡ ಸರ್ಕಾರದ ಧೋರಣೆಯನ್ನು ಖಂಡಿಸಿದ್ದಾರೆ. “ಸರ್ಕಾರವು ಪರೀಕ್ಷಾ ವ್ಯವಸ್ಥೆಯ ಒಳಗಿರುವ ಅಸಲಿ ಭ್ರಷ್ಟರನ್ನು ಹಿಡಿಯಲು ಸಾಧ್ಯವಾಗದೆ, ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು 15 ಕೋಟಿಗೂ ಹೆಚ್ಚು ಜನಸಾಮಾನ್ಯರು, ವಿದ್ಯಾರ್ಥಿಗಳು ಹಾಗೂ ಸಣ್ಣ ಉದ್ಯಮಿಗಳು ಬಳಸುವ ತಂತ್ರಜ್ಞಾನ ವೇದಿಕೆಯನ್ನು ಬಲಿಪಶು ಮಾಡಿದೆ. ಬಳಕೆದಾರರನ್ನು ಶಿಕ್ಷಿಸುತ್ತಿದೆ” ಎಂದು ಟೀಕಿಸಿದ್ದಾರೆ.
ಡಾರ್ಕ್ ವೆಬ್ ಎಂದರೇನು?
ಒಂದು ಸಾಮಾನ್ಯ ಮತ್ತು ಕೋಟ್ಯಂತರ ಜನ ಬಳಸುವ ಅಪ್ಲಿಕೇಶನ್ ಅನ್ನು ಸರ್ಕಾರ ‘ಡಾರ್ಕ್ ವೆಬ್’ ಎಂದು ಕರೆದಿದೆ. ಇದರ ಬೆನ್ನಲ್ಲೇ, ಈ ಡಾರ್ಕ್ ವೆಬ್ ಎಂದರೇನು? ಟೆಲಿಗ್ರಾಂ ಹೇಗೆ ಡಾರ್ಕ್ ವೆಬ್ ಅಗಿ ಕೆಲಸ ಮಾಡುತ್ತಿದೆ? ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ವ್ಯಕ್ತವಾಗುತ್ತಿದೆ. ಸಾಮಾನ್ಯವಾಗಿ ‘ಡಾರ್ಕ್ ವೆಬ್’ ಎಂದರೆ, “ವಿಶೇಷ ಬ್ರೌಸರ್ ಇಲ್ಲದೆ ಪ್ರವೇಶಿಸಲು ಸಾಧ್ಯವಿಲ್ಲದ, ಸಂಪೂರ್ಣ ಅಕ್ರಮ ಚಟುವಟಿಕೆಗಳೇ ನಡೆಯುವ ಅಂತರ್ಜಾಲದ ರಹಸ್ಯ ಜಗತ್ತು” ಎಂದು ಹೇಳಬಹುದು.ಆದಾಗ್ಯೂ, ಈ ಪ್ರಶ್ನೆಗೆ ಪರಿಪೂರ್ಣ ಉತ್ತರ ಹುಡುಕಿಕೊಳ್ಳಲು ಮೊದಲು ಇಂಟರ್‌ನೆಟ್‌ನ ವಿನ್ಯಾಸವನ್ನು ತಿಳಿಯುವುದು ಮುಖ್ಯ. ಈ ಇಡೀ ಅಂತರ್ಜಾಲ ವ್ಯವಸ್ಥೆಯನ್ನು ಪ್ರಮುಖವಾಗಿ ಮೂರು ಭಾಗಗಳಾಗಿ ವಿಂಗಡಿಸಬಹುದು:
- ಸರ್ಫೇಸ್ ವೆಬ್: ನಾವು ಪ್ರತಿದಿನ ಬಳಸುವ ಗೂಗಲ್, ಯೂಟ್ಯೂಬ್, ಫೇಸ್‌ಬುಕ್ ಹಾಗೂ ಸಾರ್ವಜನಿಕ ವೆಬ್‌ಸೈಟ್‌ಗಳು ಇದರ ಅಡಿಯಲ್ಲಿ ಬರುತ್ತವೆ. ಸರ್ಚ್ ಎಂಜಿನ್‌ಗಳು ಇವುಗಳನ್ನು ಸುಲಭವಾಗಿ ಹುಡುಕಬಲ್ಲವು.
- ಡೀಪ್ ವೆಬ್: ಇಮೇಲ್ ಇನ್‌ಬಾಕ್ಸ್‌ಗಳು, ಆನ್‌ಲೈನ್ ಬ್ಯಾಂಕಿಂಗ್ ಖಾತೆಗಳು, ಖಾಸಗಿ ಡೇಟಾಬೇಸ್‌ಗಳು ಹಾಗೂ ಕ್ಲೌಡ್ ಸ್ಟೋರೇಜ್‌ಗಳು ಇದರಲ್ಲಿ ಸೇರಿವೆ. ಇವುಗಳನ್ನು ಪ್ರವೇಶಿಸಲು ಪಾಸ್‌ವರ್ಡ್ ಅಥವಾ ವಿಶೇಷ ಅನುಮತಿ ಬೇಕು. ಸರ್ಚ್ ಎಂಜಿನ್‌ಗಳು ಇವುಗಳನ್ನು ಹುಡುಕಲು ಸಾಧ್ಯವಿಲ್ಲ.
- ಡಾರ್ಕ್ ವೆಬ್: ಇದು ಡೀಪ್ ವೆಬ್‌ನ ಅತ್ಯಂತ ರಹಸ್ಯವಾದ ಭಾಗ. ಇದನ್ನು ಸಾಮಾನ್ಯ ಬ್ರೌಸರ್‌ಗಳ ಮೂಲಕ ಪ್ರವೇಶಿಸಲು ಸಾಧ್ಯವಿಲ್ಲ. ಇದಕ್ಕಾಗಿ ಟೋರ್ (Tor – The Onion Router) ನಂತಹ ವಿಶೇಷ ಸಾಫ್ಟ್‌ವೇರ್‌ಗಳು ಬೇಕಾಗುತ್ತವೆ. ಇಲ್ಲಿ ಬಲವಾದ ಎನ್‌ಕ್ರಿಪ್ಷನ್ ಮತ್ತು ಸಂಪೂರ್ಣ ಅನಾಮಧೇಯತೆ ಇರುವುದರಿಂದ ಅಪರಾಧಿಗಳು ಮಾದಕವಸ್ತುಗಳು, ಕಾನೂನುಬಾಹಿರ ಶಸ್ತ್ರಾಸ್ತ್ರಗಳು, ಕಳುವಾದ ಡೇಟಾ ಹಾಗೂ ನಿಷೇಧಿತ ವಿಷಯಗಳನ್ನು ಮಾರಾಟ ಮಾಡಲು ಇದನ್ನು ‘ಉತ್ತಮ ವೇದಿಕೆ’ಯಾಗಿ ಬಳಸುತ್ತಾರೆ. ಇಲ್ಲಿನ ಐಪಿ ವಿಳಾಸಗಳನ್ನು ಪತ್ತೆ ಹಚ್ಚುವುದು ತನಿಖಾ ಸಂಸ್ಥೆಗಳಿಗೆ ಸುಲಭವಲ್ಲ. ಮಾತ್ರವಲ್ಲ, ಬಹುತೇಕ ಅಸಾಧ್ಯ. ಆದ್ದರಿಂದ, ಡಾರ್ಕ್ ವೆಬ್‌ಗಳನ್ನು ‘ಅಪರಾಧಿಗಳ ಸ್ವರ್ಗ’ ಎಂದೂ ಕರೆಯಲಾಗುತ್ತದೆ.
ಟೆಲಿಗ್ರಾಂ ಅನ್ನು ‘ಹೊಸ ಡಾರ್ಕ್ ವೆಬ್’ ಎನ್ನಲು ಕಾರಣಗಳೇನು?
ಟೆಲಿಗ್ರಾಂ ಯಾವುದೇ ರಹಸ್ಯ ಸಾಫ್ಟ್‌ವೇರ್ ಅಲ್ಲ. ಇದನ್ನು ಗೂಗಲ್ ಪ್ಲೇಸ್ಟೋರ್ ಅಥವಾ ಆಪಲ್ ಆ್ಯಪ್ ಸ್ಟೋರ್‌ನಿಂದ ಯಾರು ಬೇಕಾದರೂ ಸುಲಭವಾಗಿ ಡೌನ್‌ಲೋಡ್ ಮಾಡಬಹುದು. ಆದರೆ, ಇದರ ಕೆಲವು ವಿಶಿಷ್ಟ ತಾಂತ್ರಿಕ ವಿನ್ಯಾಸಗಳು ಅಪರಾಧಿಗಳಿಗೆ ‘ಡಾರ್ಕ್ ವೆಬ್’ ನೀಡುವಷ್ಟೇ ಸುರಕ್ಷತೆ ಮತ್ತು ಅನಾಮಧೇಯತೆಯನ್ನು ಒದಗಿಸುತ್ತಿವೆ ಎಂಬುದು ಸರ್ಕಾರದ ಪ್ರಮುಖ ಆರೋಪ.
ಈ ಲೇಖನ ಓದಿದ್ದೀರಾ?: ಮುಖವಾಡ ಮತ್ತು ಜಂಟಿ ಹೊಣೆಗಾರಿಕೆಯ ಇಕ್ಕಟ್ಟು: ಸಂಘಕ್ಕೊಂದು ಸಾಂವಿಧಾನಿಕ ಪಾಠ
ಕೇಂದ್ರ ಸರ್ಕಾರದ ಕೌಂಟರ್ ಅಫಿಡವಿಟ್‌ನಲ್ಲಿ ಉಲ್ಲೇಖಿಸಿರುವಂತೆ; “ಟೆಲಿಗ್ರಾಂ ಹೊಸ ಡಾರ್ಕ್ ವೆಬ್ ಆಗಿ ಮಾರ್ಪಟ್ಟಿದೆ. ಇದು ಸೈಬರ್ ಅಪರಾಧಿಗಳನ್ನು ಒಂದೆಡೆ ಜೋಡಿಸುತ್ತದೆ. ಅಪರಾಧಿಗಳು ಟೆಲಿಗ್ರಾಂ ಚಾನೆಲ್‌ಗಳಲ್ಲಿ ಡಾರ್ಕ್ ವೆಬ್ ಫೋರಮ್‌ಗಳಿಗೆ ಸಂಪರ್ಕಿಸುವ ಲಿಂಕ್‌ಗಳನ್ನು ಮುಕ್ತವಾಗಿ ಪೋಸ್ಟ್ ಮಾಡುತ್ತಿದ್ದಾರೆ. ಇದರಿಂದಾಗಿ ಅಧಿಕಾರಿಗಳು ಅಪರಾಧಿಗಳನ್ನು ಟ್ರ್ಯಾಕ್ ಮಾಡುವುದು ಮತ್ತು ಅವರ ನೈಜ ಗುರುತನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ.”
ಸರ್ಕಾರ ಉಲ್ಲೇಖಿಸಿದ ಕೆಲವು ಪ್ರಮುಖ ತಾಂತ್ರಿಕ ಕಾರಣ
- ಸಂಪೂರ್ಣ ಅನಾಮಧೇಯತೆ: ಟೆಲಿಗ್ರಾಂನಲ್ಲಿ ಬಳಕೆದಾರರು ತಮ್ಮ ಫೋನ್ ನಂಬರ್ ಅನ್ನು ಸಂಪೂರ್ಣವಾಗಿ ಮರೆಮಾಡಬಹುದು. ಕೇವಲ ಒಂದು ಕಾಲ್ಪನಿಕ ‘ಯೂಸರ್‌ನೇಮ್’ ಬಳಸಿ ಕಾರ್ಯನಿರ್ವಹಿಸಬಹುದು. ಇದರಿಂದಾಗಿ ಆ ಖಾತೆಯ ಹಿಂದೆ ಇರುವ ನಿಜವಾದ ವ್ಯಕ್ತಿ ಯಾರು ಎಂದು ಪತ್ತೆ ಹಚ್ಚುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
- ಬೋಟ್‌ಗಳ ಮಹಾಜಾಲ: ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೋರ್ಟ್‌ಗೆ ತಿಳಿಸಿದಂತೆ, ವಾಟ್ಸಾಪ್‌ನಂತಹ ಆ್ಯಪ್‌ಗಳಲ್ಲಿ ಒಬ್ಬ ಬಳಕೆದಾರ ಕೇವಲ ಸೀಮಿತ ಬೋಟ್‌ಗಳನ್ನು ಬಳಸಲು ಸಾಧ್ಯವಾದರೆ, ಟೆಲಿಗ್ರಾಂನಲ್ಲಿ ಒಂದು ಖಾತೆಯಿಂದ ‘40 ಬೋಟ್’ಗಳನ್ನು ಸೃಷ್ಟಿಸಬಹುದು. ಈ ಸ್ವಯಂಚಾಲಿತ ಬೋಟ್‌ಗಳು ಹಣ ಸಂಗ್ರಹಣೆ, ಫೈಲ್ ವಿತರಣೆ ಹಾಗೂ ವಂಚನೆಯ ಜಾಲವನ್ನು ಮನುಷ್ಯರ ಹಸ್ತಕ್ಷೇಪವಿಲ್ಲದೆಯೇ ನಡೆಸುತ್ತವೆ. ತನಿಖಾ ಸಂಸ್ಥೆಗಳು ಒಂದು ಬೋಟ್ ಬ್ಲಾಕ್ ಮಾಡಿದರೆ, ಅಪರಾಧಿಗಳು ಕ್ಷಣಮಾತ್ರದಲ್ಲಿ ಮತ್ತೊಂದು ಹೆಸರಿನಲ್ಲಿ ಹತ್ತಾರು ಬೋಟ್‌ಗಳನ್ನು ರಚಿಸುತ್ತಾರೆ..
- ಕ್ಲೌಡ್ ತಂತ್ರಜ್ಞಾನ ಮತ್ತು ಸಂದೇಶ ಎಡಿಟಿಂಗ್: ಟೆಲಿಗ್ರಾಂನಲ್ಲಿ 2GB ವರೆಗಿನ ದೊಡ್ಡ ಫೈಲ್‌ಗಳನ್ನು ಸುಲಭವಾಗಿ ಹಂಚಿಕೊಳ್ಳಬಹುದು. ಜೊತೆಗೆ, ಇಲ್ಲಿ ಕಳುಹಿಸಿದ ಮೆಸೇಜ್‌ಗಳನ್ನು ಎಡಿಟ್ ಮಾಡಬಹುದು ಮತ್ತು ಅದರ ಟೈಮ್‌ಸ್ಟ್ಯಾಂಪ್ (ದಿನಾಂಕ/ಸಮಯ) ಬದಲಾಯಿಸಬಹುದು. ಇದು ಡಿಜಿಟಲ್ ಪುರಾವೆಗಳನ್ನು ತಿರುಚಲು ಅಪರಾಧಿಗಳಿಗೆ ದೊಡ್ಡ ಆಯುಧವಾಗಿದೆ.
- ಸೀಕ್ರೆಟ್ ಚಾಟ್‌ಗಳು ಮತ್ತು ಡೇಟಾ ಅಳಿಸುವಿಕೆ: ಟೆಲಿಗ್ರಾಂನಲ್ಲಿನ ಸೀಕ್ರೆಟ್ ಚಾಟ್‌ಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಹೊಂದಿವೆ. ಇದು ‘ಸೆಲ್ಫ್-ಡಿಸ್ಟ್ರಕ್ಟ್’ (ಸ್ವಯಂ ಅಳಿಸುವಿಕೆ) ವೈಶಿಷ್ಟ್ಯವನ್ನು ಹೊಂದಿರುತ್ತವೆ. ಒಂದು ಚಾನೆಲ್ ಅಥವಾ ಅಕೌಂಟ್ ಡಿಲೀಟ್ ಮಾಡಿದರೆ ಅದಕ್ಕೆ ಸಂಬಂಧಿಸಿದ ಎಲ್ಲ ಡೇಟಾಗಳು ಸರ್ವರ್‌ನಿಂದಲೂ ಶಾಶ್ವತವಾಗಿ ಅಳಿಸಿಹೋಗುತ್ತವೆ. ಇದರಿಂದ, ಪೊಲೀಸರಿಗೆ ಯಾವುದೇ ಡಿಜಿಟಲ್ ಸಾಕ್ಷ್ಯಗಳು ಸಿಗುವುದಿಲ್ಲ.
ಅಪರಾಧಿಗಳು ಟೆಲಿಗ್ರಾಂ ಅನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ?
ಟೆಲಿಗ್ರಾಂನಲ್ಲಿ ಬೃಹತ್ ಸಾರ್ವಜನಿಕ ಚಾನೆಲ್‌ಗಳನ್ನು ರಚಿಸಬಹುದು. ಇದರಲ್ಲಿ ಲಕ್ಷಾಂತರ ಸದಸ್ಯರು ಒಂದೇ ಚಾನೆಲ್‌ನಲ್ಲಿ ಒಗ್ಗೂಡಬಹುದು. ಈ ವೈಶಿಷ್ಟ್ಯಗಳನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಅಪರಾಧಿಗಳು ಟೆಲಿಗ್ರಾಂಅನ್ನು ಒಂದು ಅಕ್ರಮ ಮಾರುಕಟ್ಟೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ. ಇತ್ತೀಚಿನ ದಿನಗಳಲ್ಲಿ ಟೆಲಿಗ್ರಾಂ ‘ಅಕ್ರಮ ಮುಕ್ತ ಮಾರುಕಟ್ಟೆ’ಯಾಗಿ ಮಾರ್ಪಟ್ಟಿದೆ ಎಂದು ದೂರಿದೆ. ಹಲವಾರು ಅಪರಾಧಿ ಕೃತ್ಯಗಳಿಗೆ ಟೆಲಿಗ್ರಾಂ ಬಳಕೆಯಾಗುತ್ತಿದೆ ಎಂದು ಆಪಾದಿಸಿದೆ.
- ಪರೀಕ್ಷಾ ಪೇಪರ್ ಲೀಕ್ ಮತ್ತು ಚೀಟಿಂಗ್ ನೆಟ್‌ವರ್ಕ್‌ಗಳು: ಭಾರತದಲ್ಲಿ ಪ್ರಸ್ತುತ ಇದು ಅತ್ಯಂತ ಗಂಭೀರ ಸಮಸ್ಯೆಯಾಗಿದೆ. ಉದಾಹರಣೆಗೆ, 18,000ಕ್ಕೂ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದ ‘NEET Mafia’ ರೀತಿಯ ಚಾನೆಲ್‌ಗಳಲ್ಲಿ ಪ್ರಶ್ನೆ ಪತ್ರಿಕೆಗಳ ಲೀಕ್, ಬುಕಿಂಗ್ ಹಾಗೂ ಪಾವತಿಗಾಗಿ ಕ್ಯೂಆರ್ ಕೋಡ್‌ಗಳನ್ನು ಹಂಚಿಕೊಳ್ಳಲಾಗಿತ್ತು. ಇದೇ ಕಾರಣಕ್ಕಾಗಿ 2026ರ ಮೇನಲ್ಲಿ ನಡೆದ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿ, ಜೂನ್ 21ಕ್ಕೆ ಮರುಪರೀಕ್ಷೆ ನಿಗದಿಪಡಿಸಬೇಕಾಯಿತು ಎಂದು ಕೇಂದ್ರ ಸರ್ಕಾರ ವಾದಿಸಿದೆ.
- ಸೈಬರ್ ಫ್ರಾಡ್ ಮತ್ತು ಡೇಟಾ ಮಾರಾಟ: ಫಿಶಿಂಗ್ ಲಿಂಕ್‌ಗಳು, ಇನ್ವೆಸ್ಟ್‌ಮೆಂಟ್ ಸ್ಕ್ಯಾಮ್‌ಗಳು ಇಲ್ಲಿ ಸರ್ವೇಸಾಮಾನ್ಯವಾಗಿವೆ. ಕಳುವಾದ ವೈಯಕ್ತಿಕ ಗುರುತಿನ ಚೀಟಿಗಳ ವಿವರಗಳು (ಆಧಾರ್ ಮತ್ತು ಇತರೆ ದಾಖಲೆಗಳು) ಹಾಗೂ ಲಕ್ಷಾಂತರ ಜನರ ಮೊಬೈಲ್ ನಂಬರ್‌ಗಳ ಡೇಟಾಬೇಸ್ ಅನ್ನು ಇಲ್ಲಿ ಬಹಿರಂಗವಾಗಿ ಮಾರಾಟ ಮಾಡಲಾಗುತ್ತದೆ ಎಂದು ಆರೋಪಿಸಲಾಗಿದೆ.
- ಮೂಲ್ ಬ್ಯಾಂಕ್ ಖಾತೆಗಳ ದಂಧೆ: ಸೈಬರ್ ವಂಚನೆಯಿಂದ ಲೂಟಿ ಮಾಡಿದ ಹಣವನ್ನು ಬೇರೆಡೆಗೆ ವರ್ಗಾಯಿಸಲು ಬಳಸುವ ನಕಲಿ ಅಥವಾ ಬೇರೆಯವರ ಹೆಸರಿನ ಬ್ಯಾಂಕ್ ಖಾತೆಗಳು, ಯುಪಿಐ ಐಡಿಗಳು ಹಾಗೂ ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ಗಳ ವ್ಯವಹಾರ ಇಲ್ಲಿ ಅವ್ಯಾಹತವಾಗಿ ನಡೆಯುತ್ತದೆ ಎಂಬ ಆರೋಪಗಳಿವೆ.
- ಮಾದಕವಸ್ತು ಮತ್ತು ಶಸ್ತ್ರಾಸ್ತ್ರ ವ್ಯಾಪಾರ: ಮಾದಕವಸ್ತು ಕಾಳಸಂತೆಗೆ ಸಂಬಂಧಿಸಿದ ಜಾಹೀರಾತುಗಳು, ಡೆಲಿವರಿ ವಿವರಗಳು ಹಾಗೂ ಪಾವತಿಗಳನ್ನು ಬಾಟ್‌ಗಳ ಮೂಲಕ ನಿಯಂತ್ರಿಸುವ ಜಾಲಗಳು ಇಲ್ಲಿ ಸಕ್ರಿಯವಾಗಿವೆ ಎನ್ನಲಾಗಿದೆ.
- ಪೈರಸಿ: ಸಿನಿಮಾ, ವೆಬ್ ಸೀರೀಸ್‌ಗಳ ಅಕ್ರಮ ಹಂಚಿಕೆ, ಮಾಲ್‌ವೇರ್ ಮತ್ತು ಸ್ಟೋಲನ್ ಡೇಟಾ ವಿತರಣೆಗಳು ಇಲ್ಲಿ ಹೆಗ್ಗಿಲ್ಲದೆ ನಡೆಯುತ್ತವೆ ಎಂಬ ಆಪಾದನೆ ಇದೆ.
ಟೆಲಿಗ್ರಾಂ ಮೇಲಿರುವ ಇಂತಹ ಆರೋಪಗಳು ಕೇವಲ ಭಾರತಕ್ಕೆ ಸೀಮಿತವಾಗಿಲ್ಲ ಎಂಬುದೂ ಸ್ಪಷ್ಟ. 2024ರಲ್ಲಿ ಫ್ರಾನ್ಸ್‌ನಲ್ಲಿ ಟೆಲಿಗ್ರಾಂ ಸಂಸ್ಥಾಪಕ ಪಾವೆಲ್ ಡುರೋವ್ ಅವರನ್ನು ಅಪರಾಧಗಳಿಗೆ ಸಹಕರಿಸಿದ, ಮಾದಕವಸ್ತು ಸಾಗಣೆ ಮತ್ತು ವಂಚನೆಗೆ ವೇದಿಕೆ ಒದಗಿಸಿದ ಆರೋಪದ ಮೇಲೆ ಬಂಧಿಸಲಾಗಿತ್ತು.
ಸೈಬರ್ ಅಪರಾಧಗಳ ಅಂಕಿ-ಅಂಶಗಳು
ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (NCRP) ನೀಡಿರುವ ಅಂಕಿ-ಅಂಶಗಳು ಟೆಲಿಗ್ರಾಂ ಮೂಲಕ ದೇಶದಲ್ಲಿ ನಡೆಯುತ್ತಿರುವ ವಂಚನೆಯನ್ನು ಬಿಚ್ಚಟ್ಟಿವೆ.
| ವರ್ಷ | ದಾಖಲಾದ ಒಟ್ಟು ದೂರುಗಳು | ವಂಚನೆಯಾದ ಅಂದಾಜು ಮೊತ್ತ |
| 2023 | 75,688 ದೂರುಗಳು | ಲಭ್ಯವಿಲ್ಲ |
| 2025 | 2,75,000ಕ್ಕೂ ಹೆಚ್ಚು | ₹3,086 ಕೋಟಿ ರೂ. |
| 2026 (ಮೇ ವರೆಗೆ) | 88,000ಕ್ಕೂ ಹೆಚ್ಚು | ಲಭ್ಯವಿಲ್ಲ |
ಟೆಲಿಗ್ರಾಂನ ಸಕಾರಾತ್ಮಕ ಬಳಕೆ ಮತ್ತು ಭಾರತದಲ್ಲಿ ಅದರ ವ್ಯಾಪ್ತಿ
ಟೆಲಿಗ್ರಾಂ ಕೇವಲ ಅಪರಾಧಿಗಳ ತಾಣವಲ್ಲ ಎಂಬುದು ಅಷ್ಟೇ ಸತ್ಯ. ಭಾರತದಲ್ಲಿ ಪ್ರಸ್ತುತ 15 ಕೋಟಿಗೂ ಹೆಚ್ಚು ಕಾನೂನುಬದ್ಧ ಬಳಕೆದಾರರು ಈ ಆ್ಯಪ್ ಅನ್ನು ಬಳಸುತ್ತಿದ್ದಾರೆ:
- ಗೌಪ್ಯ ಸಂವಹನ: ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ತಮ್ಮ ಸುರಕ್ಷಿತ ಮತ್ತು ಗೌಪ್ಯ ಸಂವಹನಕ್ಕಾಗಿ ಈ ವೇದಿಕೆಯನ್ನು ಬಳಸುತ್ತಾರೆ.
- ಶಿಕ್ಷಣ ಮತ್ತು ಉದ್ಯೋಗ: ಶೈಕ್ಷಣಿಕ ಗ್ರೂಪ್‌ಗಳು, ಉಚಿತ ಸ್ಟಡಿ ಮೆಟೀರಿಯಲ್‌ಗಳು, ನ್ಯೂಸ್ ಚಾನೆಲ್‌ಗಳು ಮತ್ತು ಉದ್ಯೋಗ ಮಾಹಿತಿಯ ಹಂಚಿಕೆಗೆ ಇದು ವಿದ್ಯಾರ್ಥಿಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ.
- ಆಟೋಮೇಷನ್: ಸಣ್ಣ ಮತ್ತು ಬೃಹತ್ ಬಿಸಿನೆಸ್ ಕಮ್ಯುನಿಟಿಗಳು ಗ್ರಾಹಕರ ಸೇವೆಗಾಗಿ ಇದರ ಬಾಟ್ ಆಟೋಮೇಷನ್ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿವೆ.
ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಗಂಭೀರ ಕೃತ್ಯಗಳನ್ನು ತಡೆಯಲಾದ ಸರ್ಕಾರವು, ‘ಕೆಟ್ಟಿದ್ದಕ್ಕೆಲ್ಲ ಶನೇಶ್ವರನೇ ಕಾರಣ’ ಎಂಬಂತೆ ತನ್ನೆಲ್ಲ ವೈಫಲ್ಯಗಳಿಗೂ ಟೆಲಿಗ್ರಾಂ ಸೌಲಭ್ಯಗಳೇ ಕಾರಣವೆಂದು ದೂರುತ್ತಿದೆ. ಟೆಲಿಗ್ರಾಂ ಮೇಲೆ ನಿರ್ಬಂಧ ಹೇರುವುದು ಅನಿವಾರ್ಯ ಎನ್ನುತ್ತಿದೆ.
ಗೌಪ್ಯತೆ vs ಸರ್ಕಾರ:
ಟೆಲಿಗ್ರಾಂ ಸಂಸ್ಥೆಯು ಬಳಕೆದಾರರ ವೈಯಕ್ತಿಕ ಗೌಪ್ಯತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತನ್ನ ಮೂಲ ಮಂತ್ರವಾಗಿಸಿಕೊಂಡಿದೆ. ಆದರೆ, ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಅಪರಾಧಗಳನ್ನು ತಡೆಯಲು ಡಿಜಿಟಲ್ ಡೇಟಾ ಮತ್ತು ತನಿಖಾ ಸಹಕಾರದ ಅಗತ್ಯವಿದೆ ಎಂದು ಸರ್ಕಾರ ವಾದಿಸುತ್ತಿದೆ.
ಇತ್ತೀಚಿನ ದಿನಗಳಲ್ಲಿ ಟೆಲಿಗ್ರಾಂ ಕೆಲವು ಸುಧಾರಣೆಗಳನ್ನು ತರುತ್ತಿದೆ. ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಸ್ವಯಂಚಾಲಿತ ತಪಾಸಣೆ ನಡೆಸುವುದು ಹಾಗೂ ಟ್ರಾನ್ಸ್‌ಪರೆನ್ಸಿ ರಿಪೋರ್ಟ್ ನೀಡುವುದನ್ನು ಮಾಡುತ್ತಿದೆ.
ತಾಂತ್ರಿಕ ತಜ್ಞರು ಹೇಳುವಂತೆ; ಟೆಲಿಗ್ರಾಂ ಅನ್ನು ಸಂಪೂರ್ಣವಾಗಿ ‘ಡಾರ್ಕ್ ವೆಬ್’ ಎಂದು ಕರೆಯುವುದು ತಾಂತ್ರಿಕವಾಗಿ ತಪ್ಪಾಗುತ್ತದೆ. ಆದರೆ, ಅದರ ಮುಕ್ತ ಹಾಗೂ ನಿಯಂತ್ರಣವಿಲ್ಲದ ವೈಶಿಷ್ಟ್ಯಗಳು ಅಪರಾಧಿಗಳಿಗೆ ಡಾರ್ಕ್ ವೆಬ್‌ನಷ್ಟೇ ಸುರಕ್ಷಿತ ಮತ್ತು ಸುಲಭವಾದ ಅಖಾಡವನ್ನು ಸೃಷ್ಟಿಸಿಕೊಟ್ಟಿರುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ಆದ್ದರಿಂದ, ಟೆಲಿಗ್ರಾಂ ಕಾನೂನುಬದ್ಧ ಬಳಕೆದಾರರ ಗೌಪ್ಯತೆಯ ಹಕ್ಕನ್ನು ರಕ್ಷಿಸುತ್ತಲೇ, ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ಜಾರಿಗೆ ತರುವುದು ಜರೂರತ್ತಾಗಿದೆ.



