ನೈಸ್ ರಸ್ತೆ ಯೋಜನೆಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪನ್ನು ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ ಕುಮಾರಸ್ವಾಮಿ ತಿಳಿಸಿದರು.
ಗುಳೇದಗುಡ್ಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನೈಸ್ ಯೋಜನೆಗೆ ನೀಡಿರುವ ಭೂಮಿಯನ್ನು ವಾಪಸ್ ಪಡೆಯಬೇಕು ಎಂದು ನಾನು ಹೇಳಿಲ್ಲ. ಬಿಎಂಐಸಿ ಯೋಜನೆ ಹೆಸರಿನಲ್ಲಿ ಹಲವು ಕಾನೂನುಬಾಹಿರ ಚಟುವಟಿಕೆಗಳು ನಡೆದಿವೆ. 20 ವರ್ಷಗಳಿಂದ ರೈತರ ಭೂಮಿಯನ್ನು ವಶಕ್ಕೆ ಪಡೆದಿದ್ದರೂ ಸೂಕ್ತ ಪರಿಹಾರ ನೀಡಿಲ್ಲ. ಈ ಕುರಿತು ನ್ಯಾಯಾಲಯ ಗಡುವು ನೀಡಿದೆ” ಎಂದರು.
“ರೈತರ ಹೆಸರಿನಲ್ಲಿ ಲೂಟಿ ನಡೆಸಿ, ಅವರನ್ನೇ ಬೀದಿಗೆ ತಂದು ನಿಲ್ಲಿಸಲಾಗಿದೆ. ಈ ಪ್ರಕರಣವನ್ನು ನ್ಯಾಯಾಲಯವೂ ರಾಜ್ಯದ ದೊಡ್ಡಮಟ್ಟದ ಹಗರಣ ಎಂದು ಹೇಳಿದೆ. ಜುಲೈನಲ್ಲೇ ತೀರ್ಪು ಬಂದಿದ್ದರೂ ಇದುವರೆಗೆ ಸರ್ಕಾರ ಗಮನಹರಿಸಿಲ್ಲ. ಹೀಗಾಗಿ ಕೋರ್ಟ್ ತೀರ್ಪು ಜಾರಿಗೊಳಿಸುವಂತೆ ಪತ್ರದ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದೇನೆ” ಎಂದು ಹೇಳಿದರು.
ಆರ್‌ಎಸ್‌ಎಸ್ ಸಂಘಟನೆಗೆ ಕಳ್ಳಹಣ ಬರುತ್ತಿದೆ ಎಂಬ ಸಚಿವ ವಿಜಯಾನಂದ ಕಾಶಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “ನಿಮಗೆ ಎಲ್ಲಿಂದ ಹಣ ಬರುತ್ತದೆ? ನಿಮ್ಮ ಬಳಿ ಇರುವುದು ಬೆವರು ಹರಿಸಿ ಸಂಪಾದಿಸಿದ ಹಣವೇ? ಕಳ್ಳಹಣ ಇದ್ದರೆ ತನಿಖೆ ಮಾಡಿಸಿ, ನಮ್ಮದೇನೂ ಅಭ್ಯಂತರವಿಲ್ಲ” ಎಂದಿದ್ದಾರೆ.




