ಉಕ್ರೇನ್‌ನ ಅತಿದೊಡ್ಡ ಉಕ್ಕಿನ ಕಾರ್ಖಾನೆಗಳಲ್ಲಿ ಒಂದಾದ ಹಾಗೂ ಭಾರತೀಯ ಮೂಲದ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರ ಒಡೆತನಕ್ಕೆ ಸೇರಿದ ‘ಆರ್ಸೆಲರ್ ಮಿತ್ತಲ್ ಕ್ರಿವಿ ರಿಹ್’ (ArcelorMittal Kryvyi Rih) ಘಟಕದ ಮೇಲೆ ರಷ್ಯಾ ಭಾರಿ ಕ್ಷಿಪಣಿ ದಾಳಿ ನಡೆಸಿದೆ. ಈ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, 14 ಮಂದಿ ಗಾಯಗೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಉಕ್ರೇನ್ ಕೂಡ ರಷ್ಯಾದ ರಾಜಧಾನಿ ಮಾಸ್ಕೋ ಪ್ರಾಂತ್ಯದ ಮೇಲೆ ಭಾರಿ ಡ್ರೋನ್ ದಾಳಿ ನಡೆಸಿದೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರ ತವರೂರಾದ ಕ್ರಿವಿ ರಿಹ್‌ನಲ್ಲಿರುವ ಈ ಉಕ್ಕಿನ ಕಾರ್ಖಾನೆಯು, ರಷ್ಯಾದ ಇತ್ತೀಚಿನ ದಾಳಿಯ ಪ್ರಮುಖ ಕೈಗಾರಿಕಾ ಗುರಿಯಾಗಿತ್ತು. ದಾಳಿಯ ಪರಿಣಾಮವಾಗಿ ಕಾರ್ಖಾನೆಯ ವಿದ್ಯುತ್ ಉತ್ಪಾದನಾ ಘಟಕ ಹಾಗೂ ಬ್ಲಾಸ್ಟ್ ಫರ್ನೇಸ್‌ಗಳಿಗೆ ತೀವ್ರ ಹಾನಿಯಾಗಿದೆ. ಹೀಗಾಗಿ ಘಟಕದ ಉತ್ಪಾದನಾ ಪ್ರಕ್ರಿಯೆಯನ್ನು ಭಾಗಶಃ ಸ್ಥಗಿತಗೊಳಿಸಲಾಗಿದೆ ಎಂದು ಆರ್ಸೆಲರ್ ಮಿತ್ತಲ್ ಸಂಸ್ಥೆಯು ತಿಳಿಸಿದೆ. ಇದರ ಜೊತೆಗೆ ಭಾನುವಾರ ಬೆಳಿಗ್ಗೆ ಉಕ್ರೇನ್ ರಾಜಧಾನಿ ಕೀವ್ ಮೇಲೂ ರಷ್ಯಾ ಕ್ಷಿಪಣಿ ದಾಳಿ ನಡೆಸಿದ್ದು, ಎರಡು ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೀವ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ದಾಳಿಯಲ್ಲಿ ಮಗುವೂ ಸೇರಿದಂತೆ ಒಟ್ಟು ಆರು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಆಡಳಿತ ಮಾಹಿತಿ ನೀಡಿದೆ.
ರಷ್ಯಾದ ದಾಳಿಗೆ ಪ್ರತಿಯಾಗಿ ಉಕ್ರೇನ್ ಸಹ ಮಾಸ್ಕೋ ಪ್ರಾಂತ್ಯದ ಮೇಲೆ ಯುದ್ಧದ ಇತಿಹಾಸದಲ್ಲೇ ಅತಿದೊಡ್ಡ ಡ್ರೋನ್ ದಾಳಿಗಳಲ್ಲಿ ಒಂದನ್ನು ನಡೆಸಿದೆ. ಪಡೋಲ್ಸ್ಕ್ (Podolsk) ಪ್ರದೇಶದಲ್ಲಿ ನಡೆದ ದಾಳಿಯಲ್ಲಿ 83 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಈ ದಾಳಿಯಲ್ಲಿ ರಷ್ಯಾದ ಅತಿದೊಡ್ಡ ಆನ್‌ಲೈನ್ ರಿಟೇಲ್ ಸಂಸ್ಥೆಯಾದ ‘ವೈಲ್ಡ್‌ಬೆರ್ರೀಸ್’ (Wildberries) ಗೋದಾಮನ್ನು ಗುರಿಯಾಗಿಸಲಾಗಿದೆ. ಈ ಸಂಸ್ಥೆಯು ರಷ್ಯಾದ ಸೇನೆಗೆ ಮಿಲಿಟರಿ ಅಗತ್ಯ ವಸ್ತುಗಳನ್ನು ಪೂರೈಸುತ್ತಿದೆ ಎಂಬುದು ಉಕ್ರೇನ್ ಆರೋಪವಾಗಿದೆ. ಅಲ್ಲದೆ, ಬೆಲ್ಗೊರೊಡ್ ಬಳಿ ಬಸ್ ಮೇಲೆ ನಡೆದ ಡ್ರೋನ್ ದಾಳಿಗೆ ಒಬ್ಬರು ಬಲಿಯಾಗಿದ್ದು, ರೋಸ್ಟೊವ್ ಪ್ರದೇಶದಲ್ಲಿರುವ ರಷ್ಯಾದ ಕ್ಷಿಪಣಿ ಇಂಧನ ಉತ್ಪಾದನಾ ಘಟಕದ ಮೇಲೂ ಯಶಸ್ವಿ ದಾಳಿ ನಡೆಸಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ.
ಈ ನಡುವೆ, ರಷ್ಯಾ-ಉಕ್ರೇನ್ ಯುದ್ಧದ ತೀವ್ರತೆ ನೆರೆಯ ದೇಶಗಳಿಗೂ ವ್ಯಾಪಿಸುತ್ತಿರುವ ಆತಂಕ ಎದುರಾಗಿದೆ. ರೊಮೇನಿಯಾ ವಾಯುಪ್ರದೇಶಕ್ಕೆ ಪ್ರವೇಶಿಸಿದ ಡ್ರೋನ್ ಒಂದನ್ನು, ನ್ಯಾಟೋ (NATO) ವಾಯು ಗಸ್ತು ಕಾರ್ಯಾಚರಣೆಯಲ್ಲಿದ್ದ ಸ್ಪೇನ್‌ನ ‘ಎಫ್-18’ ಯುದ್ಧವಿಮಾನವು ಹೊಡೆದುರುಳಿಸಿದೆ ಎಂದು ರೊಮೇನಿಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ಈ ಡ್ರೋನ್ ರಷ್ಯಾಗೆ ಸೇರಿದ್ದು ಎಂದು ಶಂಕಿಸಲಾಗಿದೆ. ಈ ವರ್ಷ ರೊಮೇನಿಯಾ ಗಡಿಯೊಳಗೆ ಡ್ರೋನ್ ನುಗ್ಗಿದ ನಾಲ್ಕನೇ ಪ್ರಕರಣ ಇದಾಗಿದ್ದು, ಯುದ್ಧದ ಕಾವು ಉಕ್ರೇನ್ ಗಡಿ ದಾಟಿ ಇತರ ಯುರೋಪಿಯನ್ ರಾಷ್ಟ್ರಗಳಿಗೂ ಹರಡುವ ಅಪಾಯವನ್ನು ಇದು ಎತ್ತಿತೋರಿಸಿದೆ.




