ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮತ್ತಿತರ ಇಲಾಖೆಗಳ ಸಹಯೋಗದಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮದ ಅರಿವು ಕಾರ್ಯಕ್ರಮ ಹಾಗೂ ಆರೋಗ್ಯ ತಪಾಸಣೆ ಶಿಬಿರ ಬಾಗಲಕೋಟೆಯ ನವನಗರದ ನಗರಸಭೆ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ದಯಾನಂದ ಕರೆಯನವರ, “ತಂಬಾಕು ಸೇವನೆ ದೈಹಿಕ ಹಾಗೂ ಮಾನಸಿಕ ಅವಲಂಬನೆಯನ್ನು ಉಂಟುಮಾಡಿ ವ್ಯಕ್ತಿಯನ್ನು ವ್ಯಸನಿಯಾಗಿಸುತ್ತದೆ ಎಂದು ಹೇಳಿದರು. ತಂಬಾಕಿನಲ್ಲಿ ಸಾವಿರಾರು ವಿಷಕಾರಿ ರಾಸಾಯನಿಕಗಳಿದ್ದು, ಅವು ಕ್ಯಾನ್ಸರ್ ಸೇರಿದಂತೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ” ಎಂದು ತಿಳಿಸಿದರು.
ನಗರಸಭೆಯ ನೋಡಲ್ ಅಧಿಕಾರಿ ಡಾ. ಜಯಂತ ಮಾತನಾಡಿ, “ಬಾಯಿ ಆರೋಗ್ಯವು ದೇಹದ ಒಟ್ಟಾರೆ ಆರೋಗ್ಯದ ಪ್ರತಿಬಿಂಬವಾಗಿದೆ. ತಂಬಾಕು ಸೇವನೆಯಿಂದ ಬಾಯಿ ಕ್ಯಾನ್ಸರ್ ಸೇರಿದಂತೆ ವಿವಿಧ ರೀತಿಯ ಕ್ಯಾನ್ಸರ್‌ಗಳ ಅಪಾಯ ಹೆಚ್ಚಾಗುತ್ತದೆ. ಆರಂಭಿಕ ಹಂತದಲ್ಲೇ ತಪಾಸಣೆ ನಡೆಸಿದರೆ ಕ್ಯಾನ್ಸರ್ ನಿಯಂತ್ರಿಸಲು ಸಾಧ್ಯವಾಗುತ್ತದೆ” ಎಂದು ಸಲಹೆ ನೀಡಿದರು.
ಶಿಬಿರದಲ್ಲಿ ನಗರಸಭೆಯ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಎಲ್ಲಾ ದಂತ ವೈದ್ಯಾಧಿಕಾರಿಗಳು ಆರೋಗ್ಯ ತಪಾಸಣೆಯಲ್ಲಿ ಭಾಗವಹಿಸಿ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಡಾ. ಗೀತಾ, ಡಾ. ಎ ವಿ ಪಾಟೀಲ, ಜಿಲ್ಲಾ ತಂಬಾಕು ಸಲಹೆಗಾರ ಶಶಿಕಾಂತ ಕುಮಟಳ್ಳಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಾರುತಿ ನಡುವಿನಕೇರಿ, ಎಚ್ ಪಿ ನಾಯ್ಕರ ಹಾಗೂ ಆರೋಗ್ಯ ಇಲಾಖೆ ಮತ್ತು ನಗರಸಭೆಯ ಸಿಬ್ಬಂದಿ ಉಪಸ್ಥಿತರಿದ್ದರು.




