ಕಲ್ಯಾಣ ಕರ್ನಾಟಕ ಭಾಗದ, ವಿಶೇಷವಾಗಿ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಕೌಶಲ್ಯಾಭಿವೃದ್ಧಿ ಇಲಾಖೆ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರ್ಸಿಡಿಸ್ ಬೆಂಝ್, ಸ್ಟೈಡರ್ ಎಲೆಕ್ಟ್ರಿಕ್, ಬಜಾಜ್ ಆಟೋ, ಜೆಸಿಬಿ, ಡಿ-ಮಾರ್ಟ್, ಮಹೀಂದ್ರಾ, ವಲ್‌ರ್ಪೂಲ್ ಸೇರಿದಂತೆ ದೇಶ-ವಿದೇಶಗಳ ಖ್ಯಾತ ಕಂಪನಿಗಳು ಮೇಳದಲ್ಲಿ ಭಾಗವಹಿಸಲಿವೆ ಎಂದರು.
ಒಟ್ಟು 3,500ಕ್ಕೂ ಹೆಚ್ಚು ಹುದ್ದೆಗಳನ್ನು ಗುರುತಿಸಲಾಗಿದ್ದು, ಆಟೋಮೊಬೈಲ್, ಉತ್ಪಾದನೆ, ಎಂಜಿನಿಯರಿಂಗ್, ರಿಟೇಲ್, ಐಟಿ ಹಾಗೂ ಸೇವಾ ವಲಯಗಳ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರು, ಪುಣೆ ಮತ್ತು ಹೈದರಾಬಾದ್ ನಗರಗಳಲ್ಲಿ ಉದ್ಯೋಗ ಪಡೆಯುವ ಅವಕಾಶ ಲಭ್ಯವಾಗಲಿದೆ ಎಂದು ಹೇಳಿದರು.
ಉದ್ಯೋಗ ಮೇಳಕ್ಕೆ ಆನ್‌ಲೈನ್ ನೋಂದಣಿ ಆರಂಭ
10ನೇ ತರಗತಿ, ಪಿಯುಸಿ, ಐಟಿಐ ಹಾಗೂ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು https://forms.gle/8XCtqKmTmd7KZrW77 ಮೂಲಕ ಆನ್‌ಲೈನ್ ನೋಂದಣಿ ಮಾಡಿಕೊಳ್ಳಬೇಕು.
ಬಿ.ಇ./ಬಿ.ಟೆಕ್ ಹಾಗೂ ಯಾವುದೇ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು https://forms.gle/ikTzHpfLRN8KqJUg8 ನಲ್ಲಿ ಹೆಸರು ನೋಂದಾಯಿಸಿ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ.
ಅಭ್ಯರ್ಥಿಗಳಿಗೆ ಮೊದಲ ಹಂತದಲ್ಲಿ ಉಚಿತ ಆನ್‌ಲೈನ್ ನೋಂದಣಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಗಳು ಪೂರ್ಣಗೊಂಡ ಬಳಿಕ ಉದ್ಯೋಗ ಮೇಳದ ದಿನಾಂಕ ಹಾಗೂ ಸ್ಥಳವನ್ನು ಪ್ರಕಟಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಆರಂಭಿಕ ಹಂತದ ಸಂದರ್ಶನಗಳು ಆನ್‌ಲೈನ್ ಮೂಲಕ ನಡೆಯಲಿದ್ದು, ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ಮಾತ್ರ ನೇರ ಸಂದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.
ಈ ವೇಳೆ ಮಾತನಾಡಿದ ಸಚಿವರು, ‘ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 56 ಸಾವಿರಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳ ಭರ್ತಿಗಾಗಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ನಿಗದಿತ ಕಾಲಮಿತಿಯೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರ ಕ್ರಮ ಕೈಗೊಂಡಿದ್ದು, ಶೀಘ್ರದಲ್ಲೇ ನೇಮಕಾತಿ ಅಧಿಸೂಚನೆಗಳು ಪ್ರಕಟವಾಗಲಿವೆ’ ಎಂದು ಹೇಳಿದರು.
ಕನ್ನಡಿಗರಿಗೆ ಶೇ.80ರಷ್ಟು ಉದ್ಯೋಗಾವಕಾಶ ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | ನಿಸ್ವಾರ್ಥ ಸೇವೆಯಿಂದ ಮಾತ್ರ ಸಮಾಜ ಪರಿವರ್ತನೆ ಸಾಧ್ಯ: ಡಾ. ರವೀಂದ್ರನಾಥ ಹೊಸಮನಿ
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅವರು ಇದ್ದರು.





