ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮಳೆಯ ಕೊರತೆ ತೀವ್ರವಾಗಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ.
ಜೂನ್ 12ರಿಂದ 18ರವರೆಗೆ 22.9 ಮಿ.ಮೀ ಮಳೆಯಾಗಬೇಕಿದ್ದರೆ ಕೇವಲ 1.1 ಮಿ.ಮೀ ಮಳೆಯಾಗಿದೆ, ಬಾಗಲಕೋಟೆ ಹಾಗೂ ಮುಧೋಳ ತಾಲ್ಲೂಕಿನಲ್ಲಿ ಶೇ.100ರಷ್ಟು ಸೇರಿದಂತೆ ಬಹುತೇಕ ತಾಲೂಕುಗಳಲ್ಲಿ ಭಾರೀ ಮಳೆ ಕೊರತೆ ಕಂಡುಬಂದಿದೆ.
3.17 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಲ್ಲಿ 1.73 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ನೀರಾವರಿ ಕಬ್ಬು ಪ್ರದೇಶವನ್ನು ಹೊರತುಪಡಿಸಿ ಕೇವಲ 56 ಸಾವಿರ ಹೆಕ್ಟೇರ್ ಬಿತ್ತನೆಯಾಗಿದೆ. ಗೋವಿನ ಜೋಳ, ಸಜ್ಜೆ, ತೊಗರಿ ಹಾಗೂ ಹೆಸರಿನ ಬಿತ್ತನೆ ಗುರಿಗಿಂತ ಕಡಿಮೆಯಾಗಿದೆ. ಮಳೆ ಇಲ್ಲದ ಕಾರಣ ಈಗಾಗಲೇ ಬಿತ್ತಿದ ಬೆಳೆಗಳ ಮೊಳಕೆ ಬಾಡುವ ಆತಂಕ ರೈತರನ್ನು ಕಾಡುತ್ತಿದೆ.
ಕೃಷಿ ಇಲಾಖೆ ರೈತರಿಗೆ ಮಿಶ್ರ ಹಾಗೂ ಅಂತರ ಬೆಳೆ ಬೆಳೆಯಲು, ಎಡೆಕುಂಟೆ ಹೊಡೆದು ತೇವಾಂಶ ಸಂರಕ್ಷಿಸಲು ಮತ್ತು ಕಡಿಮೆ ಅವಧಿಯ ಬೆಳೆಗಳಿಗೆ ಆದ್ಯತೆ ನೀಡುವಂತೆ ಸಲಹೆ ನೀಡಿದೆ.




