ಪ್ರತಿ ಮನೆಯಲ್ಲೂ ಪೂಜಾ ಕೊಠಡಿ ಇರುವಂತೆ ಪ್ರತ್ಯೇಕ ಗ್ರಂಥಾಲಯವೂ ಇರಬೇಕು. ಈ ಕುರಿತು ಜಾಗೃತಿ ಮೂಡಿಸುವುದೇ ‘ಮನೆಗೊಂದು ಗ್ರಂಥಾಲಯ’ ಯೋಜನೆಯ ಉದ್ದೇಶವಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ಮಾನಸ ಹೇಳಿದರು.
ಬೆಳಗಾವಿ ನಗರದ ರಾಮತೀರ್ಥ ನಗರದ ಹಿರಿಯ ಸಾಹಿತಿ ಶಿವಯೋಗಿ ಕುಸುಗಲ್ ಅವರ ನಿವಾಸದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿ ಆಯೋಜಿಸಿದ್ದ ‘ಮನೆಗೊಂದು ಗ್ರಂಥಾಲಯ’ ಅನುಷ್ಠಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪುಸ್ತಕ ಓದುವ ಅಭಿರುಚಿ ಹೆಚ್ಚಿಸುವ ಉದ್ದೇಶದಿಂದ ಪ್ರತಿ ಮನೆಯಲ್ಲೂ ಗ್ರಂಥಾಲಯ ಸ್ಥಾಪಿಸುವ ಯೋಜನೆಯನ್ನು ಜಿಲ್ಲಾ ಜಾಗೃತಿ ಸಮಿತಿಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಪುಸ್ತಕಗಳು ಜ್ಞಾನದ ಕಟ್ಟು ಹಾಗೂ ಅರಿವಿನ ಹೊತ್ತಿಗೆಗಳಾಗಿದ್ದು, ಮನೆಯಲ್ಲಿ ಗ್ರಂಥಾಲಯ ಹೊಂದಿರುವ ವ್ಯಕ್ತಿ ಹಾಗೂ ಕುಟುಂಬಕ್ಕೆ ಗೌರವ ದೊರೆಯುವಂತಾಗಬೇಕು. ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲೂ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.
ವಿಮರ್ಶಕಿ ಡಾ. ನಿರ್ಮಲಾ ಬಟ್ಟಲ ಮಾತನಾಡಿ, ಶಿವಯೋಗಿ ಕುಸುಗಲ್ ಅವರು ಬೆಳಗಾವಿಯ ಸಾಂಸ್ಕೃತಿಕ ಲೋಕದ ವಿನಯವಂತ ಸಾಹಿತಿಯಾಗಿದ್ದು, ತಮ್ಮ ಮನೆಯಲ್ಲಿ ಉತ್ತಮ ಕೃತಿಗಳ ಗ್ರಂಥಾಲಯ ನಿರ್ಮಿಸಿರುವುದು ಓದುಗರಿಗೆ ಮಾದರಿಯಾಗಿದೆ ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಡಾ. ಕುಶಾಲ್ ಬರಗೂರು ಆಶಯ ನುಡಿಗಳನ್ನಾಡಿದರು. ಗ್ರಂಥಾಲಯ ಇಲಾಖೆಯ ಉಪನಿರ್ದೇಶಕ ಜಿ. ರಾಮಯ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಯಲ್ಲಪ್ಪ ಹಿಮ್ಮಡಿ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ಜಗದೀಶ ಹೊಸಮನಿ, ಬಿ.ವೈ. ನಾಯಕ, ಸ.ರಾ. ಸುಳಕುಡೆ, ದೀಪ್ತಿ ಎಲಿಗಾರ, ವೀರಣ್ಣ ಕೆಂಚಕ್ಕನವರ, ಬಸಪ್ಪ ನಾಯ್ಕರ್, ಶಿವಾನಂದ ಮಸಳಿ, ಅಕ್ಕಮಹಾದೇವಿ ತೆಗ್ಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಐಶ್ವರ್ಯ ಕಾಂಬಳೆ ನಾಡಗೀತೆ ಹಾಡಿದರು. ಡಾ. ಸಂತೋಷ ನಾಯಿಕ ಸ್ವಾಗತಿಸಿದರು. ಡಾ. ಕವಿತಾ ಕುಸುಗಲ್ ವಂದಿಸಿದರು. ವಿನಾಯಕ ನಂದಿ ನಿರೂಪಿಸಿದರು.



