ಶೋಷಿತ ವರ್ಗದವರಿಗೆ ಸಮಾಜದ ಋಣ ತೀರಿಸುವ ಅವಕಾಶ ಬಂದಾಗ ಯಾವಾಗಲೂ ಬಾಬಾಸಾಹೇಬ ಅಂಬೇಡ್ಕರ್ ಅವರ ತ್ಯಾಗದ ಬದುಕು ಕಣ್ಣೆದುರು ಬಂದು ನಿಲ್ಲಬೇಕು ಎಂದು ಬಂಡಾಯ ಸಾಹಿತಿ ಡಾ. ಯಲ್ಲಪ್ಪ ಹಿಮ್ಮಡಿ ಹೇಳಿದರು. ಅವರಿಂದು ಬೆಳಗಾವಿ ನಗರದ ಡಾ. ಬಿ. ಆರ್. ಅಂಬೇಡ್ಕರ್ ಉದ್ಯಾನವನದಲ್ಲಿ ಚೆನ್ನದಾಸರ ನೌಕರರ ಕ್ಷೇಮಾಭಿವೃದ್ದಿ ಸಂಘ ಆಯೋಜಿಸಿದ್ದ ನ್ಯಾಯವಾದಿ ವಸಂತ ಅಕ್ಕೆನ್ನವರ ಅವರಿಗೆ ಅಭಿನಂದನೆ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜಗತ್ತೇ ನಿಬ್ಬೆರಗಾಗುವ ಶೈಕ್ಷಣಿಕ ಪದವಿಗಳನ್ನು ಗಳಿಸಿಕೊಂಡಿದ್ದ ಬಾಬಾಸಾಹೇಬರು ಅವುಗಳಿಂದ ದೊರಕುವ ಐಸಾರಾಮಿ ಹುದ್ದೆಗಳನ್ನು ತ್ಯಜಿಸಿ, ಆರ್ಥಿಕ ಮುಗ್ಗಟ್ಟನ್ನೆದುರಿಸಿ ಶೋಷಿತ ಜನರ ವಿಮೋಚನೆಗಾಗಿ ಹೋರಾಡಿದ ತ್ಯಾಗಮಯ ಬದುಕನ್ನು ಆದರ್ಶವಾಗಿಟ್ಟುಕೊಂಡು ಮುನ್ನಡೆಯಬೇಕು, ಕಟ್ಟ ಕಡೆಯ ಸಮುದಾಯಗಳ ಹಕ್ಕುಗಳಿಗಾಗಿ ದುಡಿಯಬೇಕು ಎಂದು ಡಾ. ಹಿಮ್ಮಡಿ ಹೇಳಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ನ್ಯಾಯವಾದಿ ವಸಂತ ಅಕ್ಕೆನ್ನವರ ಬಡತನದಿಂದ ಬಂದ ನಾನು ರಾತ್ರಿ ಕೆಲಸಗಳನ್ನು ಮಾಡಿ ಶಿಕ್ಷಣ ಪೂರೈಸಿ ಈ ಹಂತಕ್ಕೆ ಬರಲು ಬಾಬಾಸಾಹೇಬ ಅಂಬೇಡ್ಕರ್ ಅವರ ಹೋರಾಟಮಯ ಬದುಕೇ ಕಾರಣವಾಗಿದ್ದು, ಅವರ ಪ್ರತಿಮೆಯೆದುರು ಸನ್ಮಾನ ಸ್ವೀಕರಿಸುತ್ತಿರುವುದು ನನ್ನ ಭಾಗ್ಯ ಎಂದು ಧನ್ಯತೆ ವ್ಯಕ್ತ ಪಡಿಸಿದರು.
ನಗರ ಸಾರಿಗೆ ಸಂಸ್ಥೆಯ ಬಾಳಾಸಾಹೇಬ ಅಕ್ಕೆನ್ನವರ, ರೈಲ್ವೆ ಆರಕ್ಷಕ ಬಸವರಾಜ ಹುಲ್ಲೆನ್ನವರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾಜಿ ಮಾಳಗೆನ್ನವರ, ವಿದ್ಯಾರ್ಥಿ ಪ್ರತಿನಿಧಿಗಳಾದ ಶಿವರಾಜ ಕಾಮಶೆಟ್ಟಿ, ವಿಶಾಲ ಅಕ್ಕೆನ್ನವರ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಮಾರುತಿ ಅಕ್ಕೆನ್ನವರ ಅಧ್ಯಕ್ಷತೆ ವಹಿಸಿದ್ದರು. ವಿಠ್ಠಲ ಗೊಳಸಂಗಿ ಸ್ವಾಗತಿಸಿದರು, ಸತೀಶ ಅಕ್ಕೆನ್ನವರ ವಂದಿಸಿದರು. ಸಂತೋಷ ಅಕ್ಕೆನ್ನವರ ನಿರೂಪಿಸಿದರು.
ಜಿಲ್ಲಾ ಚೆನ್ನದಾಸರ ನೌಕರರ ಕ್ಷೇಮಾಭಿವೃದ್ದಿ ಸಂಘದಿಂದ ನಗರದ ಡಾ. ಅಂಬೇಡ್ಕರ್ ಉದ್ಯಾನವನದಲ್ಲಿ ನ್ಯಾಯವಾದಿ ವಸಂತ ಅಕ್ಕೆನ್ನವರ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.




