ಭಾರತದ ಶೂಟಿಂಗ್ ದಂತಕಥೆ, ರಾಷ್ಟ್ರೀಯ ಕೋಚ್ ಜಸ್ಪಾಲ್ ರಾಣಾ ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಶುಕ್ರವಾರ ನಿಧನರಾಗಿದ್ದಾರೆ ಎಂದು ಭಾರತೀಯ ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ (NRAI) ತಿಳಿಸಿದೆ.
ಅವರಿಗೆ 49 ವರ್ಷ ವಯಸ್ಸಾಗಿತ್ತು. ಮ್ಯೂನಿಚ್‌ನಲ್ಲಿ ನಡೆದ ಶೂಟಿಂಗ್ ವಿಶ್ವಕಪ್‌ನಿಂದ ಮರಳಿದ ನಂತರ, ಕಳೆದ ವಾರ ದೆಹಲಿಯ ಆಸ್ಪತ್ರೆಯೊಂದರಲ್ಲಿ ರಾಣಾ ಅವರಿಗೆ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು ಎಂದು ವರದಿಯಾಗಿದೆ.
ಭಾರತದ ಅತ್ಯಂತ ಪ್ರತಿಭಾವಂತ ಶೂಟರ್‌ಗಳಲ್ಲಿ ಒಬ್ಬರಾಗಿದ್ದ ರಾಣಾ ಅವರು ಅಥ್ಲೀಟ್, ಕೋಚ್ ಹಾಗೂ ಮಾರ್ಗದರ್ಶಕರಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಶೂಟಿಂಗ್ ರಂಗಕ್ಕೆ ಅಪಾರ ಕೊಡುಗೆ ನೀಡಿದ್ದರು. ಅವರು ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ಹಲವಾರು ಪದಕಗಳನ್ನು ಗೆದ್ದಿದ್ದರು.
1994ರಿಂದ 2006ರವರೆಗೆ ಕಾಮನ್‌ವೆಲ್ತ್ ಕ್ರೀಡಾಕೂಟದ ನಾಲ್ಕು ಆವೃತ್ತಿಗಳಲ್ಲಿ 9 ಚಿನ್ನದ ಪದಕ ಸೇರಿದಂತೆ ಒಟ್ಟು 15 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದರು. ಈ ಪದಕಗಳೊಂದಿಗೆ ಕಾಮನ್‌ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತದ ಅತ್ಯಂತ ಯಶಸ್ವಿ ಅಥ್ಲೀಟ್ ಎಂಬ ಖ್ಯಾತಿ ಪಡೆದುಕೊಂಡಿದ್ದಾರೆ.
ಇಂದಿನ ಉತ್ತರಾಖಂಡ ರಾಜ್ಯದ ಉತ್ತರಕಾಶಿಯಲ್ಲಿ ಜನಿಸಿದ ರಾಣಾ, ಚಿಕ್ಕ ವಯಸ್ಸಿನಲ್ಲೇ ತಮ್ಮ ಅದ್ಭುತ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಿದ್ದರು. 1994ರಲ್ಲಿ ಹಿರೋಷಿಮಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಮತ್ತು ಮಿಲನ್‌ನಲ್ಲಿ ನಡೆದ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಜೂನಿಯರ್ ವಿಶ್ವ ದಾಖಲೆ ನಿರ್ಮಿಸುವ ಮೂಲಕ ಅವರು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದರು. ಅವರು 1996ರ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 1990 ಮತ್ತು 2000ರ ದಶಕದಲ್ಲಿ ಪಿಸ್ತೂಲ್ ಶೂಟಿಂಗ್ ವಿಭಾಗದಲ್ಲಿ ದೇಶದ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದ್ದರು.
ಅವರ ಕ್ರೀಡಾ ಜೀವನದ ಪ್ರಮುಖ ಸಾಧನೆಗಳಲ್ಲಿ 2006ರ ದೋಹಾ ಏಷ್ಯನ್ ಗೇಮ್ಸ್ ಕೂಡ ಒಂದು. ಅಲ್ಲಿ ಅವರು ಮೂರು ಚಿನ್ನದ ಪದಕ ಮತ್ತು ಒಂದು ಬೆಳ್ಳಿ ಪದಕವನ್ನು ಗೆದ್ದಿದ್ದರು. ಜೊತೆಗೆ, 25 ಮೀಟರ್ ಸೆಂಟರ್ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ 590 ಅಂಕಗಳನ್ನು ಗಳಿಸುವ ಮೂಲಕ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದರು.
ಈ ಲೇಖನ ಓದಿದ್ದೀರಾ?: ನೆಹರೂ ದಾಖಲೆ ಮುರಿದ ಮೋದಿ: ದೇಶ ಮುನ್ನಡೆಯಿತೋ, ಹಿಂದಕ್ಕೆ ಹೋಯಿತೋ?
ಅವರ ಈ ಮಹೋನ್ನತ ಸಾಧನೆಗಳಿಗಾಗಿ ರಾಣಾ ಅವರಿಗೆ ಅರ್ಜುನ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಕ್ರೀಡಾ ಜೀವನದಿಂದ ನಿವೃತ್ತರಾದ ನಂತರ ಅವರು ಯಶಸ್ವಿ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಅವರ ತರಬೇತಿ ಸಾಧನೆಯನ್ನು ಗುರುತಿಸಿ 2020ರಲ್ಲಿ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿಯನ್ನೂ ನೀಡಲಾಗಿತ್ತು.
ಭಾರತದ ಹೊಸ ಪೀಳಿಗೆಯ ಶೂಟರ್‌ಗಳನ್ನು ರೂಪಿಸುವಲ್ಲಿ ರಾಣಾ ಪ್ರಮುಖ ಪಾತ್ರ ವಹಿಸಿದ್ದರು. ಪ್ರಮುಖವಾಗಿ, ಅವರು ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಅವರಿಗೆ ಕೋಚ್ ಆಗಿ ಮಾರ್ಗದರ್ಶನ ನೀಡಿದ್ದರು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್ ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ತಮ್ಮ ಕ್ರೀಡಾ ಬದುಕಿನಲ್ಲಿ ಅದ್ಭುತ ಪುನರಾಗಮನ ಮಾಡಲು ಜಸ್ಪಾಲ್ ರಾಣಾ ಅವರ ತರಬೇತಿಯೇ ಪ್ರಮುಖ ಕಾರಣ ಎಂದು ಶ್ಲಾಘಿಸಲಾಗಿದೆ.




