ಪ್ರತಿ ಟನ್ ಕಬ್ಬಿಗೆ ₹5,500 ಬೆಂಬಲ ಬೆಲೆ ನೀಡಬೇಕೆಂಬ ರೈತರ ಬೇಡಿಕೆ ಪ್ರಸ್ತುತ ಸಕ್ಕರೆ ಉದ್ಯಮದ ಪರಿಸ್ಥಿತಿಯಲ್ಲಿ ಯಾವುದೇ ಸಕ್ಕರೆ ಕಾರ್ಖಾನೆಗೆ ಸಾಧ್ಯವಿಲ್ಲ. ಕಾರ್ಖಾನೆಯನ್ನೇ ಮಾರಾಟ ಮಾಡಿದರೂ ಅಷ್ಟು ದರ ನೀಡಲು ಸಾಧ್ಯವಾಗುವುದಿಲ್ಲ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಉದ್ಯಮಿ ಡಾ. ಪ್ರಭಾಕರ ಕೋರೆ ಸ್ಪಷ್ಟಪಡಿಸಿದರು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಣದಿ ಗ್ರಾಮದ ಚಿದಾನಂದ ಕೋರೆ ಸಕ್ಕರೆ ಕಾರ್ಖಾನೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಕ್ಕರೆ ಉದ್ಯಮ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳ ಕುರಿತು ವಿವರಿಸಿದರು.
ಕಳೆದ 15 ವರ್ಷಗಳಿಂದ ಸಕ್ಕರೆಯ ಮಾರುಕಟ್ಟೆ ದರದಲ್ಲಿ ಗಮನಾರ್ಹ ಏರಿಕೆಯಾಗಿಲ್ಲ. ಆದರೆ ಕಚ್ಚಾ ವಸ್ತುಗಳು ಹಾಗೂ ಉತ್ಪಾದನಾ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ. ಸಿದ್ಧ ಉತ್ಪನ್ನದ ದರ ಮತ್ತು ಕಚ್ಚಾ ವಸ್ತುವಿನ ವೆಚ್ಚದ ನಡುವೆ ದೊಡ್ಡ ಅಂತರ ಉಂಟಾಗಿದೆ ಎಂದು ಹೇಳಿದರು.



