ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ವಿವಾಹಿತ ಮಹಿಳೆಯನ್ನು ಪ್ರೀತಿಸಿ ಓಡಿಸಿಕೊಂಡು ಹೋದ ಆರೋಪದ ಹಿನ್ನೆಲೆಯಲ್ಲಿ ಯುವಕನ ಮನೆಯ ಮೇಲೆ ಗುಂಪೊಂದು ದಾಳಿ ನಡೆಸಿ ಮನೆಗೆ ವ್ಯಾಪಕ ಹಾನಿ ಉಂಟುಮಾಡಿದ ಘಟನೆ ಭಾನುವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಭರಮ್ಯಾನಟ್ಟಿ ಗ್ರಾಮದ ಯಲ್ಲಪ್ಪ ನಾಯಕ ಕಳೆದ ಎರಡು ವರ್ಷಗಳಿಂದ ಉದ್ಯಮಬಾಗದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯೊಂದಿಗೆ ಪರಿಚಯ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ. ಕೆಲ ದಿನಗಳಿಂದ ಇಬ್ಬರೂ ನಿರಂತರ ಸಂಪರ್ಕದಲ್ಲಿದ್ದು, ಕೊನೆಗೆ ಮಹಿಳೆಯನ್ನು ಯಲ್ಲಪ್ಪ ಕರೆದುಕೊಂಡು ಹೋಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಈ ವಿಷಯ ತಿಳಿದ ಮಹಿಳೆಯ ಕುಟುಂಬಸ್ಥರು ಹಾಗೂ ಸಂಬಂಧಿಕರು ಆಕ್ರೋಶಗೊಂಡು, ಯಲ್ಲಪ್ಪನ ಕುಟುಂಬಕ್ಕೂ ಈ ಕುರಿತು ಮಾಹಿತಿ ಇತ್ತು ಎಂದು ಆರೋಪಿಸಿ ಭರಮ್ಯಾನಟ್ಟಿ ಗ್ರಾಮಕ್ಕೆ ಆಗಮಿಸಿದ್ದಾರೆ. ಬಳಿಕ ಗುಂಪಾಗಿ ಯುವಕನ ಮನೆ ಮೇಲೆ ದಾಳಿ ನಡೆಸಿದ್ದಾರೆ ಎಂದು ಸಂತ್ರಸ್ತ ಕುಟುಂಬ ಆರೋಪಿಸಿದೆ.
ದಾಳಿಯ ವೇಳೆ ಮನೆಯಲ್ಲಿ ಇದ್ದವರ ಮೇಲೆ ಹಲ್ಲೆ ನಡೆಸಿದ ಆರೋಪವೂ ಕೇಳಿಬಂದಿದ್ದು, ಮನೆ ಒಳಗಿದ್ದ ಪೀಠೋಪಕರಣಗಳು, ಗೃಹೋಪಯೋಗಿ ವಸ್ತುಗಳು, ಅಲ್ಮಾರಿ, ಟಿವಿ ಸೇರಿದಂತೆ ಹಲವು ಸಾಮಗ್ರಿಗಳನ್ನು ಧ್ವಂಸಗೊಳಿಸಲಾಗಿದೆ ಎನ್ನಲಾಗಿದೆ. ಮನೆಯ ಬಾಗಿಲು, ಕಿಟಕಿಗಳು ಹಾಗೂ ಹಂಚುಗಳಿಗೂ ಹಾನಿಯಾಗಿದೆ.
ಘಟನೆ ವೇಳೆ ಮನೆಯಲ್ಲಿದ್ದ ಯಲ್ಲಪ್ಪನ ಪೋಷಕರು ಜೀವಭಯದಿಂದ ಸ್ಥಳದಿಂದ ಪರಾರಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ವೇಳೆ ಮನೆಯಿಂದ ಚಿನ್ನಾಭರಣ, ನಗದು ಹಾಗೂ 25 ಕುರಿಗಳನ್ನು ದೋಚಿಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಸಂತ್ರಸ್ತ ಕುಟುಂಬ ಆರೋಪಿಸಿದೆ.
ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎರಡೂ ಕಡೆಯ ಆರೋಪಗಳ ಕುರಿತು ತನಿಖೆ ಮುಂದುವರಿದಿದೆ.




