ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಬೆಳಗಾವಿ ಅರಣ್ಯ ವಿಭಾಗ ವ್ಯಾಪ್ತಿಯ ಅರಣ್ಯ ಪ್ರದೇಶ ಹಾಗೂ ಜಲಪಾತಗಳಿಗೆ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.
ಕಳೆದ ಕೆಲ ದಿನಗಳಿಂದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ತೀವ್ರಗೊಂಡಿದ್ದರೂ, ಅಪಾಯವನ್ನು ಲೆಕ್ಕಿಸದೆ ಸಾರ್ವಜನಿಕರು ಜಲಪಾತಗಳಿಗೆ ಭೇಟಿ ನೀಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಂಭವನೀಯ ಅವಘಡಗಳನ್ನು ತಪ್ಪಿಸಲು ಮುನ್ನೆಚ್ಚರಿಕಾ ಕ್ರಮವಾಗಿ ಜಲಪಾತಗಳು ಮತ್ತು ಅರಣ್ಯ ಪ್ರದೇಶಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಆಯಕಟ್ಟಿನ ಪ್ರದೇಶಗಳಲ್ಲಿ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಿ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ.
ಅರಣ್ಯ ಇಲಾಖೆಯ ಎಚ್ಚರಿಕೆ ನಡುವೆಯೂ ಕೆಲವರು ಸಿಬ್ಬಂದಿಗಳ ಕಣ್ಣಪ್ಪಿಸಿ ಅರಣ್ಯ ಪ್ರದೇಶ ಪ್ರವೇಶಿಸಿ ಅಪಾಯಕಾರಿ ಜಲಪಾತಗಳಿಗೆ ತೆರಳಲು ಯತ್ನಿಸುತ್ತಿದ್ದಾರೆ. ಇಂತಹವರ ವಿರುದ್ಧ ಈಗಾಗಲೇ ಕರ್ನಾಟಕ ಅರಣ್ಯ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರು ಜಲಪಾತಗಳ ವೀಕ್ಷಣೆ ಹಾಗೂ ಚಾರಣಕ್ಕಾಗಿ ಅರಣ್ಯ ಪ್ರದೇಶಕ್ಕೆ ತೆರಳದೆ ಇಲಾಖೆಯ ಸೂಚನೆಗಳನ್ನು ಪಾಲಿಸಿ ಸಹಕರಿಸುವಂತೆ ಬೆಳಗಾವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮನವಿ ಮಾಡಿದ್ದಾರೆ. ನಿರ್ಬಂಧ ಉಲ್ಲಂಘಿಸಿ ಅನಧಿಕೃತವಾಗಿ ಪ್ರವೇಶಿಸಿದವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನೊಂದೆಡೆ, ಆರಂಭದಲ್ಲಿ ನಿರಾಸೆ ಮೂಡಿಸಿದ್ದ ಮುಂಗಾರು ಇದೀಗ ಕರಾವಳಿ ಕರ್ನಾಟಕ ಹಾಗೂ ಖಾನಾಪುರ ಭಾಗದಲ್ಲಿ ಚುರುಕುಗೊಂಡಿದೆ. ಮಳೆ ಕೊರತೆಯಿಂದ ಡೆಡ್ ಸ್ಟೋರೇಜ್ ಹಂತ ತಲುಪಿದ್ದ ಬೆಳಗಾವಿಯ ಜೀವನಾಡಿ ರಾಕಸ್ಕೊಪ್ಪ ಜಲಾಶಯಕ್ಕೂ ಇದೀಗ ನಿರೀಕ್ಷೆಯ ಮಳೆ ಸುರಿಯುತ್ತಿದೆ.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ಜಿಲ್ಲೆಯಲ್ಲಿ ಮಳೆ ಕೊರತೆ: ಒಣಗಿದ ಬೆಳೆ,ಕಡಿಮೆಯಾದ ಬಿತ್ತನೆ ಪ್ರಮಾಣ
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ, ಮುಂದಿನ ಆರು ದಿನಗಳಲ್ಲಿ ಕೇರಳ, ಕರಾವಳಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದ ಕೆಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದ್ದು, ಕರಾವಳಿ ಕರ್ನಾಟಕದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಇಲಾಖೆ ಸಲಹೆ ನೀಡಿದೆ.



