ಅಕ್ರಮ ಸಂಬಂಧ ಹೊಂದಿದ್ದ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿ ಅದನ್ನು ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ ಖತರ್ನಾಕ್ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ. ಮೃತರನ್ನು ಅಂಗೋಲ್‌ನ ಬಬಲೆ ಗಲ್ಲಿ ನಿವಾಸಿಯಾದ ಆಯುರ್ವೇದ ಥೆರಾಪಿಸ್ಟ್ ಅವಿನಾಶ್ ಅಶೋಕ್ ಸುಪ್ಪಣ್ಣ (40) ಎಂದು ಗುರುತಿಸಲಾಗಿದೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆ ಬಳಿಯೇ ಮೊಬೈಲ್ ಫೋನ್ ಅಂಗಡಿ ಇಟ್ಟುಕೊಂಡಿರುವ ಕೈಲಾಶ್ ಬಾಲಕೃಷ್ಣ (43) ಮತ್ತು ಮೃತನ ಪತ್ನಿ ಲಕ್ಷ್ಮಿ ಅವಿನಾಶ್ ಸುಪ್ಪಣ್ಣ (29) ತಪ್ರೊಪ್ಪಿಕೊಂಡ ನಂತರ ಅವರನ್ನು ಬಂಧಿಸಲಾಗಿದೆ. ಗೃಹಿಣಿಯಾಗಿರುವ ಲಕ್ಷ್ಮಿ ಆಗಾಗ್ಗೆ ಕ್ಲಿನಿಕ್ ನಲ್ಲಿ ತನ್ನ ಪತಿಗೆ ಸಹಾಯ ಮಾಡುತ್ತಿದ್ದರು ಎನ್ನಲಾಗಿದೆ.
ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?
ಏಪ್ರಿಲ್ 5 ರಂದು ಸಂಜೆ ಅಂಗೋಲ್‌ನ ಅಂಕುಶ ಆಯುರ್ವೇದಿಕ್ ಕೇರ್ ಕ್ಲಿನಿಕ್‌ನಲ್ಲಿ ತನ್ನ ಮಗ ಅವಿನಾಶ್ ತಲೆಗೆ ಗಾಯವಾಗಿ ಸಾವನ್ನಪ್ಪಿದ್ದಾನೆ ಎಂದು ಕಮಲ್ ಅಶೋಕ್ ಸುಪ್ಪಣ್ಣ ಅವರು ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 6 ರಂದು ದೂರು ದಾಖಲಿಸಿದ್ದರು. ಕೊಲೆಯಲ್ಲಿ ಸಂಚಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ನಂತರ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ.
ಇಬ್ಬರೂ ಸೇರಿ ಕೊಲೆಗೆ ಯೋಜನೆ ರೂಪಿಸಿದ್ದರು. ಕೈಲಾಶ್ ಕ್ಲಿನಿಕ್ ಗೆ ಹೋಗಿ ಅವಿನಾಶ್ ಮೇಲೆ ಗ್ಯಾಸ್ ಸಿಲಿಂಡರ್ ನಿಂದ ಹಲ್ಲೆ ನಡೆಸಿದ್ದರೆ, ಲಕ್ಷ್ಮಿ ಮನೆಯಲ್ಲಿಯೇ ಇದ್ದಳು. ಅವಿನಾಶ್ ತಲೆಗೆ ನಾಲ್ಕು ಗಾಯಗಳಾಗಿದ್ದು, ಎದೆಯ ಮೇಲೂ ಸಿಲಿಂಡರ್ ನಿಂದ ಹಲ್ಲೆ ನಡೆಸಲಾಗಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದರು.
ಆರಂಭದಲ್ಲಿ ಮೃತನ ಪತ್ನಿ ತನ್ನ ಪತಿಗೆ ಕಡಿಮೆ ಬ್ಲಡ್ ಶುಗರ್ ಮತ್ತು ಅಧಿಕ ರಕ್ತದೊತ್ತಡವಿದೆ ಎಂದು ಪೊಲೀಸರಿಗೆ ತಿಳಿಸಿದ್ದು, ಕೆಳಗೆ ಬಿದ್ದು ಮೇಜಿನ ಮೇಲೆ ಬಿದ್ದಿರಬಹುದು ಎಂದು ಹೇಳಿದ್ದರು. ಆದರೆ ಮೊದಲಿನಿಂದಲೂ ಆಕೆಯ ಹೇಳಿಕೆ ಬಗ್ಗೆ ನಮಗೆ ಅನುಮಾನವಿತ್ತು. ಲಕ್ಷ್ಮಿ ಮತ್ತು ಕೈಲಾಶ್ ಅವರ ಸಂಬಂಧ ಹೇಗಿತ್ತು ಎಂಬುದು ತನಿಖೆಯಲ್ಲಿ ವಿವರವಾಗಿ ತಿಳಿಯಿತು ಎಂದು SP ಬೊರಸೆ ತಿಳಿಸಿದರು.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ಯುದ್ಧದ ಕಾರಣ ಎಲೆಕೋಸು ಬೆಳೆ ಹೊಲದಲ್ಲೇ ನಾಶ ಮಾಡುತ್ತಿರುವ ರೈತರು: ಸರ್ಕಾರ ಪರಿಹಾರ ನೀಡಲಿ
ಸಂತ್ರಸ್ತೆಯ ತಾಯಿ ದೂರು ದಾಖಲಿಸಿದ್ದಾರೆ. ಆರಂಭದಲ್ಲಿ ಅದನ್ನು ಅಸ್ವಾಭಾವಿಕ ಸಾವು ಎಂದು ದಾಖಲಿಸಿದ್ದೇವು. ಆದರೆ ಘಟನಾ ಸ್ಥಳವನ್ನು ಪರೀಕ್ಷಿಸಿದ ನಂತರ ಮರಣೋತ್ತರ ಪರೀಕ್ಷೆಯ ವರದಿ ಮತ್ತು ರಕ್ತದ ಕಲೆಗಳ ಮಾದರಿ ವಿಶ್ಲೇಷಣೆಯ ನಂತರ ನಮ್ಮ ಅನುಮಾನಗಳು ಹೆಚ್ಚಾದವು. ಫೋರೆನ್ಸಿಕ್ ತಂಡವು ಈ ಪ್ರಕರಣದಲ್ಲಿ ಉತ್ತಮ ಕೆಲಸ ಮಾಡಿದ್ದು, ನಮ್ಮ ಅನುಮಾನವನ್ನು ದೃಢಪಡಿಸಿದವು ಎಂದು ಅವರು ಹೇಳಿದರು.



