ಬಳ್ಳಾರಿಯಲ್ಲಿ ಕುಡಿತಿನಿ ತಾಲೂಕಿನ ಹಳ್ಳಿಗಳ ಭೂಸ್ವಾಧೀನ ಸಂತ್ರಸ್ತರ ಆಕ್ರೋಶ ಭುಗಿಲೆದ್ದಿದ್ದು, ಬಳ್ಳಾರಿ ಬಂದ್‌ಗೆ ಕರೆ ನೀಡಿದ್ದ ಸಂತ್ರಸ್ತರು ಬೃಹತ್ ಪ್ರತಿಭಟನೆ ಮೆರವಣಿಗೆ ಮಾಡಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕಳೆದ 15 ವರ್ಷದ ಹಿಂದೆ ಕುಡಿತಿನಿ ಬಳಿ ಹತ್ತು ಸಾವಿರ ಎಕರೆಗೂ ಹೆಚ್ಚು ಜಮೀನು ಸ್ವಾಧೀನಪಡಿಸಿಕೊಂಡಿದ್ದರು. ಆಗ ಕಡಿಮೆ ಬೆಲೆಗೆ ಜಮೀನು ಪಡೆದು ಈಗ ಕಂಪನಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪವಿದೆ. ಅಂದು ನೀಡಿದ ಪರಿಹಾರ ಅವೈಜ್ಞಾನಿಕವಾಗಿದೆ. ಹೆಚ್ಚುವರಿ ಪರಿಹಾರ ನೀಡಬೇಕು” ಎಂದು ರೈತರು ಆಗ್ರಹಿಸಿದ್ದಾರೆ.
“ಕುಡಿತಿನಿಯಲ್ಲಿ ಈಗಾಗಲೇ 1500 ದಿನಗಳಿಂದ ಅನಿರ್ಧಿಷ್ಟಾವಧಿ ಹೋರಾಟ ನಡೆಯುತ್ತಿದೆ. 2024ರ ಉಪಚುನಾವಣೆ ವೇಳೆ ಅಂದಿನ ಸಿಎಂ ಸಿದ್ದರಾಮಯ್ಯ, ಸಂಸದ ತುಕಾರಾಂ, ಉಸ್ತುವಾರಿ ಸಚಿವರಾಗಿದ್ದ ಜಮೀರ್ ಸೇರಿದಂತೆ ಹಲವು ನಾಯಕರು ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ ನಾಯಕರು ಕೊಟ್ಟ ಭರವಸೆ ಈಡೇರಿಸದ ಹಿನ್ನೆಲೆ ನಿರಂತರ ಹೋರಾಟ ಕೈಗೊಳ್ಳಲಾಗಿದೆ. ಬಳ್ಳಾರಿ ಬಂದ್ ಮಾಡಲಾಗಿದೆ. ಒಂದು ವೇಳೆ ನಮ್ಮ ಬೇಡಿಕೆ ಈಡೇರಿಸದೇ ಇದ್ದರೆ ತೀವ್ರ ಹೋರಾಟ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
“ಕೈಗಾರಿಕಾ ಉದ್ದೇಶಕ್ಕಾಗಿ ಸ್ವಾಧೀನ ಮಾಡಿಕೊಂಡ ಭೂಮಿಯಲ್ಲಿ ಸುಮಾರು 16 ವರ್ಷ ಕಳೆದರೂ ಯಾವುದೇ ಕೈಗಾರಿಕೆ ಸ್ಥಾಪಿಸದೇ ಅನ್ಯ ಉದ್ದೇಶಕ್ಕಾಗಿ ಭೂಮಿಯನ್ನು ಬಳಸಲಾಗುತ್ತಿದೆ. ಕೈಗಾರಿಕೆ ಸ್ಥಾಪಿಸಲು ಸಾಧ್ಯವಾಗದೇ ಇದ್ದರೆ ರೈತರಿಗೆ ಭೂಮಿಯನ್ನು ಹಿಂದಿರುಗಿಸಬೇಕು. ಭೂ ಸಂತ್ರಸ್ಥರ ಹೋರಾಟ ಸಮಿತಿ ನೇತೃತ್ವದಲ್ಲಿ ಸುಮಾರು 1270 ದಿನ ಅನಿರ್ದಿಷ್ಟಾವಧಿ ಧರಣಿ ವೇಳೆ ಜಿಂದಾಲ್ ಕಂಪನಿಗೆ ಭೂಮಿ ಹಸ್ತಾಂತರ ಮಾಡಿದ್ದರ ವಿರುದ್ಧ ಭೂಮಿಯನ್ನು ಉಳುಮೆ ಮಾಡಿ ಪ್ರತಿಭಟನೆ ನಡೆಸಲಾಗಿತ್ತು. ಇದೀಗ ರಿಯಲ್ ಎಸ್ಟೇಟ್‌ಗಾಗಿ ಮಾರಾಟ ಮಾಡುತ್ತಿರುವುದು ಖಂಡನೀಯ. ಇಂತಹ ಚಟುವಟಿಕೆಗಳನ್ನು ನಿಲ್ಲಿಸಬೇಕು. ಸುಪ್ರೀಂ ಕೋರ್ಟ್ ತೀರ್ಪಿನಂತೆ ಭೂ ಬೆಲೆಯನ್ನು ಪರಿಷ್ಕರಿಸಿ ಪರಿಹಾರ ಕ್ರಮ ರೂಪಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಬಸ್ ಕೊರತೆಗೆ ಬೇಸತ್ತ ಗಡಿಭಾಗದ ಜನ; ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಾರಿಗೆ ಸಂಕಷ್ಟದ ಕಾಟ
ರೈತ ಸಂಘದ ರಾಜ್ಯಾಧ್ಯಕ್ಷ ಎಸ್ ಎ ಖಾದರಿ ಅವರು ರಕ್ತದಲ್ಲಿ ಸರ್ಕಾರಕ್ಕೆ ಪತ್ರ ಬರೆದು ಎಚ್ಚರಿಕೆ ನೀಡಿದ್ದಾರೆ. ಸರ್ಕಾರವು ರೈತರ ಜಮೀನನ್ನು ಅವರಿಗೆ ವಾಪಸ್ ಕೊಡಿಸಬೇಕು. ಇಲ್ಲದಿದಿದ್ದರೆ ಅವರಿಗೆ ಸೂಕ್ತ ಪರಿಹಾರ ಕೊಡಬೇಕೆಂದು ಪತ್ರ ಬರೆದು ಮನವಿ ಮಾಡಿದ್ದಾರೆ.
ಈ ಹೋರಾಟದಲ್ಲಿ ರೈತ ಸಂಘಟನೆಗಳ ಮುಖಂಡರು, ಕುಡಿತಿನಿ ತಾಲೂಕಿನ ಕೊಳಗಲ್ ಸೇರಿದಂತೆ 7 ಗ್ರಾಮಗಳ ಜನರು ಭಾಗಿಯಾಗಿದ್ರು.




