ಭಟ್ಕಳ: ನಗರದಲ್ಲಿ ತೀವ್ರ ಸಂಚಲನ ಮೂಡಿಸಿರುವ ‘ಮೂರಿನಕಟ್ಟೆ’ ಜಾಗದ ವಿವಾದಕ್ಕೆ ಸಂಬಂಧಿಸಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ದೀಪನ್ ಮಹತ್ವದ ಮಾಹಿತಿ ನೀಡಿದ್ದಾರೆ. ಮೂಲ ಮೂರಿನಕಟ್ಟೆ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಅದಕ್ಕೆ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ಅವರು ಛಾಯಾಚಿತ್ರಗಳೊಂದಿಗೆ ಸ್ಪಷ್ಟಪಡಿಸಿದ್ದಾರೆ.
ಕೆಲವು ಸಂಘಟನೆಗಳು ಮಾಡುತ್ತಿರುವ ಧ್ವಂಸದ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯ ಹಿನ್ನೆಲೆಯಲ್ಲಿ ಈ ಮೂಲ ಕಟ್ಟೆಯನ್ನು ಬೇರೆಡೆಗೆ ಸ್ಥಳಾಂತರಿಸಲು ಈ ಹಿಂದೆ ಆದೇಶಿಸಲಾಗಿತ್ತು.
ಇದಕ್ಕೆ ಸಂಬಂಧಿಸಿ ಹಿಂದೂ ಕಾರ್ಯಕರ್ತರು ನಡೆಸಿದ ನಿರಂತರ ಹೋರಾಟದ ಫಲವಾಗಿ, ಎನ್‌ಎಚ್‌ಎಐ (NHAI) ಸಿಬ್ಬಂದಿ ಮೂಲ ಜಾಗದ ಪಕ್ಕದಲ್ಲೇ ಹೊಸ ಸ್ಥಳವನ್ನು ಗುರುತಿಸಿ ಚೀರೆಕಲ್ಲಿನಿಂದ ಪರ್ಯಾಯ ಕಟ್ಟೆಯನ್ನು ನಿರ್ಮಿಸುತ್ತಿದ್ದರು. ಈ ಹೊಸ ಕಟ್ಟೆ ನಿರ್ಮಾಣದ ದೃಶ್ಯಗಳನ್ನು ಅನ್ಯಕೋಮಿನ ಯುವಕನೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದನು.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಯುವಕರ ಗುಂಪೊಂದು, ಹೊಸದಾಗಿ ನಿರ್ಮಿಸಲಾಗುತ್ತಿದ್ದ ಪರ್ಯಾಯ ಕಟ್ಟೆಯನ್ನು ಧ್ವಂಸಗೊಳಿಸಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಪ್ರತಿಭಟನಾಕಾರರನ್ನು ಮನವೊಲಿಸಲು ಯತ್ನಿಸಿದ ಪೊಲೀಸ್ ಸಿಬ್ಬಂದಿಯ ಮೇಲೆಯೇ ಗುಂಪು ಹಲ್ಲೆ ನಡೆಸಿ ಗದ್ದಲ ಸೃಷ್ಟಿಸಲು ಯತ್ನಿಸಿದೆ.
ಈ ಸುದ್ದಿ ಓದಿದ್ದೀರಾ? ಭಟ್ಕಳ | ಮುರಿನ ಕಟ್ಟೆ ಧ್ವಂಸ ಪ್ರಕರಣ; ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ, ನಗರದಲ್ಲಿ ನಿಷೇಧಾಜ್ಞೆ ಜಾರಿ
ಇದಕ್ಕೂ ಮಧ್ಯೆ, ಸ್ಥಳಕ್ಕೆ ಭೇಟಿ ನೀಡಿದ ಸಚಿವ ಮಂಕಾಳ ವೈದ್ಯ ಅವರಿಗೆ ಹಿಂದೂ ಕಾರ್ಯಕರ್ತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ತಡರಾತ್ರಿ ಅದೇ ಜಾಗದಲ್ಲಿ ಮತ್ತೆ ಕಟ್ಟೆ ನಿರ್ಮಿಸಲು ಮುಂದಾದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪೊಲೀಸರ ಮೇಲಿನ ಹಲ್ಲೆ, ಹೆದ್ದಾರಿ ತಡೆ, ವ್ಯಕ್ತಿಯ ಮೇಲಿನ ಹಲ್ಲೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ವಿಡಿಯೋ ಹಂಚಿಕೆ ಆರೋಪಗಳಡಿ ಒಟ್ಟು ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಆರು ಜನರನ್ನು ಬಂಧಿಸಲಾಗಿದ್ದು, ತನಿಖೆ ಚುರುಕುಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಭಟ್ಕಳ ಪಟ್ಟಣ ಪಂಚಾಯಿತಿ ಹಾಗೂ ಜಾಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಂದಿನ ಮೂರು ದಿನಗಳ ಕಾಲ ನಿಷೇಧಾಜ್ಞೆ (ಬಿಎನ್‌ಎಸ್‌ಎಸ್ 163 / ಸೆಕ್ಷನ್ 144) ಜಾರಿಗೊಳಿಸಲಾಗಿದೆ.
ಪಟ್ಟಣದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು 9 ಕೆಎಸ್‌ಆರ್‌ಪಿ ಮತ್ತು 3 ಡಿಎಆರ್ ತುಕಡಿಗಳು ಸೇರಿದಂತೆ ನೆರೆ ಜಿಲ್ಲೆಗಳಿಂದ 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ಸದ್ಯ ಭಟ್ಕಳದಲ್ಲಿ ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದ್ದು, ಶಾಂತಿಯುತವಾಗಿದೆ ಎಂದು ಜಿಲ್ಲಾ ಎಸ್‌ಪಿ ದೀಪನ್ ತಿಳಿಸಿದ್ದಾರೆ.




