ರಾಮಮಂದಿರದ ಭಕ್ತರು ದೇವರಿಗೆ ಅರ್ಪಿಸಿರುವ ಬೆಳ್ಳಿ ಇಟ್ಟಿಗೆಗಳು ಹಾಗೂ ಆಭರಣಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ ಎಂದು ಅಯೋಧ್ಯೆಯ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಖಜಾಂಚಿ ಗೋವಿಂದ ದೇವಗಿರಿ ತಿಳಿಸಿದ್ದಾರೆ.
ಇತ್ತೀಚೆಗೆ ರಾಮಮಂದಿರದ ದೇಣಿಗೆ ಹಾಗೂ ಬೆಳ್ಳಿ ವಸ್ತುಗಳ ನಿರ್ವಹಣೆಯ ಕುರಿತು ಎದ್ದಿದ್ದ ಕೆಲವು ಊಹಾಪೋಹಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದು, ಭಕ್ತರ ಮನಸ್ಸಿನಲ್ಲಿದ್ದ ಗೊಂದಲಗಳನ್ನು ನಿವಾರಿಸಲು ಈ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.
ರಾಮಮಂದಿರ ನಿರ್ಮಾಣದ ಸಂದರ್ಭದಲ್ಲಿ ಹಾಗೂ ಪ್ರಾಣಪ್ರತಿಷ್ಠೆಯ ಸಮಯದಲ್ಲಿ ದೇಶಾದ್ಯಂತ ಲಕ್ಷಾಂತರ ಭಕ್ತರು ಇರಿಸಿದ್ದ ಬೆಳ್ಳಿ ಇಟ್ಟಿಗೆಗಳು, ಬೆಳ್ಳಿಯ ಛತ್ರಿಗಳು ಮತ್ತು ವಿವಿಧ ಬಗೆಯ ಬೆಳ್ಳಿ ಹಾಗೂ ಚಿನ್ನದ ಆಭರಣಗಳನ್ನು ಕಾಣಿಕೆಯಾಗಿ ನೀಡಿದ್ದಾರೆ. ಟ್ರಸ್ಟ್ ನಿಯಮಗಳ ಪ್ರಕಾರ, ಈ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ಅತ್ಯಂತ ಎಚ್ಚರಿಕೆಯಿಂದ ಮತ್ತು ವ್ಯವಸ್ಥಿತವಾಗಿ ಬ್ಯಾಂಕ್ ಲಾಕರ್‌ಗಳು ಹಾಗೂ ಟ್ರಸ್ಟ್‌ನ ಸುಪರ್ದಿಯಲ್ಲಿರುವ ಸುರಕ್ಷಿತ ಸ್ಥಳಗಳಲ್ಲಿ ಇರಿಸಲಾಗಿದೆ. ಈ ವಸ್ತುಗಳಿಗೆ ಯಾವುದೇ ರೀತಿಯ ಧಕ್ಕೆಯಾಗಿಲ್ಲ ಎಂದು ಅವರು ವಿವರಿಸಿದ್ದಾರೆ.
ಇದನ್ನು ಓದಿದ್ದೀರಾ? ಎಂಜಿನ್‌ಗೆ ತುಕ್ಕು, ಮೈಲೇಜ್‌ಗೆ ಕತ್ತರಿ: ಮಾಲೀಕರಿಗೆ ತಲೆನೋವಾದ ‘ಎಥೆನಾಲ್ ಪೆಟ್ರೋಲ್’
“ಶ್ರೀರಾಮನ ಸೇವೆಗಾಗಿ ಭಕ್ತರು ನೀಡಿರುವ ಪ್ರತಿಯೊಂದು ಕಾಣಿಕೆಗೂ ನಮ್ಮ ಬಳಿ ನಿಖರವಾದ ಲೆಕ್ಕಾಚಾರವಿದೆ. ಸ್ವೀಕರಿಸಲಾದ ಎಲ್ಲಾ ಬೆಳ್ಳಿ ಇಟ್ಟಿಗೆಗಳು ಮತ್ತು ಆಭರಣಗಳನ್ನು ಲೆಕ್ಕಪರಿಶೋಧನೆಗೆ ಒಳಪಡಿಸಲಾಗಿದ್ದು, ಎಲ್ಲವೂ ಆಡಿಟ್ ವರದಿಯಲ್ಲಿ ದಾಖಲಾಗಿವೆ. ಈ ವಸ್ತುಗಳನ್ನು ಕರಗಿಸಲಾಗಿದೆ ಅಥವಾ ದುರ್ಬಳಕೆ ಮಾಡಲಾಗಿದೆ ಎಂಬ ಆರೋಪಗಳು ಸಂಪೂರ್ಣ ಸತ್ಯಕ್ಕೆ ದೂರವಾದವು” ಎಂದು ಗೋವಿಂದ ದೇವಗಿರಿ ತಿಳಿಸಿದ್ದಾರೆ.
ಕೆಲವರು ಉದ್ದೇಶಪೂರ್ವಕವಾಗಿ ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯಲು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ರಾಮಮಂದಿರದಂತಹ ಪವಿತ್ರ ಕಾರ್ಯದ ಬಗ್ಗೆ ಸುಳ್ಳು ವದಂತಿಗಳನ್ನು ಹಬ್ಬಿಸುವುದು ಸಮಾಜಕ್ಕೆ ಮಾಡುವ ದ್ರೋಹವಾಗಿದೆ. ಟ್ರಸ್ಟ್ ಆಡಳಿತ ಮಂಡಳಿಯು ಪ್ರತಿದಿನವೂ ಕಾಣಿಕೆಗಳ ಎಣಿಕೆ ಮತ್ತು ನಿರ್ವಹಣೆಯನ್ನು ಅತ್ಯಂತ ಕಟ್ಟುನಿಟ್ಟಿನ ಭದ್ರತೆಯ ನಡುವೆ ಸಿ.ಸಿ.ಟಿ.ವಿ ಕಣ್ಗಾವಲಿನಲ್ಲಿಯೇ ಪಾರದರ್ಶಕವಾಗಿ ನಡೆಸುತ್ತಿದೆ ಎಂದು ದೇವಗಿರಿ ತಿಳಿಸಿದ್ದಾರೆ.
ಸಾರ್ವಜನಿಕರು ಹಾಗೂ ರಾಮಭಕ್ತರು ಯಾವುದೇ ಆಧಾರರಹಿತ ವದಂತಿಗಳಿಗೆ ಕಿವಿಗೊಡಬಾರದು ಎಂದು ಗೋವಿಂದ ದೇವಗಿರಿ ಅವರು ಮನವಿ ಮಾಡಿದ್ದಾರೆ. ಮಂದಿರದ ವ್ಯವಹಾರಗಳಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯ ಅಗತ್ಯವಿದ್ದಲ್ಲಿ, ಭಕ್ತರು ನೇರವಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಅಧಿಕೃತ ಮೂಲಗಳನ್ನು ಮಾತ್ರ ಸಂಪರ್ಕಿಸಿ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಬೇಕು ಎಂದು ಅವರು ವಿನಂತಿ ಮಾಡಿದ್ದಾರೆ.




