ಹಬ್ಬಗಳು ಕೇವಲ ಸಂಭ್ರಮದ ಆಚರಣೆಗಳಾಗಿರದೆ, ಅವುಗಳ ಹಿಂದಿರುವ ಸಾಮಾಜಿಕ, ಸಾಂಸ್ಕೃತಿಕ ಹಾಗೂ ವೈಚಾರಿಕ ನೆಲೆಗಳನ್ನು ಅರಿತುಕೊಳ್ಳುವ ಅಗತ್ಯವಿದೆ ಎಂದು ಶಿಕ್ಷಕಿ, ಸಾಹಿತಿ ಧನಲಕ್ಷ್ಮಿ ಪಾಟೀಲ್ ಹೇಳಿದರು.
ಭಾಲ್ಕಿ ತಾಲೂಕಿನ ಹಲಬರ್ಗಾ ಗ್ರಾಮದ ಕೆಪಿಎಸ್ ಪ್ರೌಢಶಾಲೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ, ಬೀದರ ಸಹಯೋಗದಲ್ಲಿ ಆಯೋಜಿಸಿದ್ದ ‘ಭಾರತದ ಹಬ್ಬಗಳ ವೈಚಾರಿಕ ನೆಲೆಗಳು’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಭಾರತದಲ್ಲಿ ರಾಷ್ಟ್ರೀಯ ಹಾಗೂ ಸಾರ್ವಜನಿಕ ಹಬ್ಬಗಳನ್ನು ಎಲ್ಲರೂ ಒಗ್ಗಟ್ಟಿನಿಂದ ಆಚರಿಸುತ್ತಾರೆ. ದಸರಾ, ದೀಪಾವಳಿ ಸೇರಿದಂತೆ ವಿವಿಧ ಹಬ್ಬಗಳು ನಮ್ಮ ಸಾಂಸ್ಕೃತಿಕ ಪರಂಪರೆಯ ಭಾಗವಾಗಿದ್ದು, ಅವುಗಳ ಆಚರಣೆಯ ಉದ್ದೇಶ ಹಾಗೂ ಮಹತ್ವವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು” ಎಂದು ಹೇಳಿದರು.
ಸಾಹಿತಿ ಪುಷ್ಪವತಿ ಚಿರ್ಕುತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಭಾರತದ ಹಬ್ಬಗಳು ಹೊಸ ಪರಂಪರೆಯನ್ನು ಕಟ್ಟಿಕೊಡುತ್ತವೆ. ಹಬ್ಬಗಳ ಆಚರಣೆಯ ಮಹತ್ವವನ್ನು ಮಕ್ಕಳಿಗೂ ತಿಳಿಸಬೇಕು. ಇಂದಿನ ಯುವ ಪೀಳಿಗೆಗೆ ನಮ್ಮ ಸಂಪ್ರದಾಯ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಪರಿಚಯಿಸುವ ಅಗತ್ಯವಿದೆ” ಎಂದರು.
ದೈಹಿಕ ಶಿಕ್ಷಕಿ ಅಕ್ಕನಾಗಮ್ಮ ಹಾಲಳ್ಳಿ ಮಾತನಾಡಿ, “ಹಬ್ಬಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಕೆಲಸವಾಗಬೇಕು” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಿಯದರ್ಶಿನಿ ಮದನಗಾಂವಕರ ಮಾತನಾಡಿ, “ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ ಬೆಳೆಸಲು ಇಂತಹ ಉಪನ್ಯಾಸಗಳು ಪ್ರೇರಣಾದಾಯಕವಾಗಿವೆ. ಹಬ್ಬಗಳನ್ನು ಆಚರಿಸುವ ಉದ್ದೇಶ ಮತ್ತು ಅದರ ಹಿಂದಿರುವ ಆಶಯವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಬೇಕು” ಎಂದರು.
ಇದನ್ನೂ ಓದಿ : SIR | ಮತ ಡಿಲೀಟ್ ಮಾಡಲು ಒಳಸಂಚು ಆರೋಪ : ಭಾಲ್ಕಿಯಲ್ಲಿ 32 ಜನರ ವಿರುದ್ಧ FIR
ಕಾರ್ಯಕ್ರಮದಲ್ಲಿ ಗಂಗಮ್ಮ ಶೀಲವಂತ್ ಹಾಗೂ ಅನುರಾಧ ಪಾಟೀಲ್ ಹಾಗೂ ಚಕೋರ ಸಾಹಿತ್ಯ ವಿಚಾರ ವೇದಿಕೆ ಜಿಲ್ಲಾ ಸಂಚಾಲಕಿ ಡಾ.ಮಕ್ತುಂಬಿ ಎಂ. ಸೇರಿದಂತೆ ಶಾಲಾ ಸಿಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




