ಕಳೆದ 23 ವರ್ಷಗಳಿಂದ ನಿರಂತರವಾಗಿ ಇಲಾಖೆಯ ವಿವಿಧ ಭೂಮಾಪನ ಕಾರ್ಯಗಳನ್ನು ನಿರ್ವಹಿಸುತ್ತಿರುವ ಪರವಾನಗಿ ಭೂಮಾಪಕರನ್ನು ಒಂದು ಬಾರಿ ವಿಶೇಷ ನೇಮಕಾತಿ ಅಡಿಯಲ್ಲಿ ಸರ್ಕಾರಿ ಭೂಮಾಪಕರಾಗಿ ಸಕ್ರಮಗೊಳಿಸಬೇಕು ಅಥವಾ ʼಸಮಾನ ಕೆಲಸಕ್ಕೆ ಸಮಾನ ವೇತನʼ ತತ್ವದಡಿ ನ್ಯಾಯಸಮ್ಮತ ಸಂಭಾವನೆ ಹಾಗೂ ಸೌಲಭ್ಯಗಳನ್ನು ನೀಡಬೇಕು ಎಂದು ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘವು ಈಗಾಗಲೇ ಮುಷ್ಕರ ನಡೆಸುತ್ತಿದ್ದು, ಉಡುಪಿ ಘಟಕವು ಬೇಡಿಕೆಯ ಈಡೇರಿಕೆಗಾಗಿ ಸರ್ಕಾರವನ್ನು ಒತ್ತಾಯಿಸಿದೆ.

ಪರವಾನಗಿ ಭೂಮಾಪಕರ ವ್ಯವಸ್ಥೆಯನ್ನು 2000ನೇ ಸಾಲಿನಲ್ಲಿ ಕೆಎಲ್‌ಆರ್ ಕಾಯ್ದೆ 46ರ ತಿದ್ದುಪಡಿಯ ಮೂಲಕ ಇಲಾಖೆಗೆ ಪರಿಚಯಿಸಲಾಗಿತ್ತು. ಬಳಿಕ 2002ರಲ್ಲಿ ಸುಮಾರು 800ರಿಂದ 1000 ಮಂದಿಗೆ ಸರ್ಕಾರದ ನಿಯಮಾನುಸಾರ ತರಬೇತಿ ನೀಡಿ ಜಿಲ್ಲಾವಾರು ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಯಿತು. ಆ ದಿನದಿಂದ ಈವರೆಗೆ ಸಾವಿರಾರು ಪರವಾನಗಿ ಭೂಮಾಪಕರು ಇಲಾಖೆಯ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತಿದ್ದು, ಸರ್ಕಾರದ ಭೂಮಾಪಕರಿಗೆ ಸಮಾನವಾದ ಕೆಲಸಗಳನ್ನು ಮಾಡುತ್ತಿದ್ದರೂ ವೇತನ ಮತ್ತು ಸೌಲಭ್ಯಗಳಲ್ಲಿ ತೀವ್ರ ಅಸಮಾನತೆ ಮುಂದುವರಿದಿದೆ ಎಂದು ಸಂಘಟಕರು ಆರೋಪಿಸಿದ್ದಾರೆ.

ಆರಂಭಿಕ ಹಂತದಲ್ಲಿ ವಿಭಾಗ, ದಾನ, ಕ್ರಯ ಹಾಗೂ 11-ಇ ನಕ್ಷೆ ತಯಾರಿ, ತತ್ಕಾಲ್ ಪೋಡಿ ಮತ್ತು ಅಲಿನೇಷನ್ ಪೂರ್ವ ನಕ್ಷೆ ಸಿದ್ಧಪಡಿಸುವಂತಹ ನಿರ್ದಿಷ್ಟ ಕೆಲಸಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ನಂತರ ಕೆಎಲ್‌ಆರ್ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿ ಹೊಸ ಹುದ್ದೆಗಳನ್ನು ಸೃಜಿಸುವ ಮೂಲಕ ಪರವಾನಗಿ ಭೂಮಾಪಕರ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲಾಯಿತು. 2005ರಿಂದ 2024ರವರೆಗೆ ವಿವಿಧ ಹಂತಗಳಲ್ಲಿ ಸಿಇಟಿ ಪರೀಕ್ಷೆಗಳ ಮೂಲಕ ಸುಮಾರು 7,500 ಮಂದಿ ಪರವಾನಗಿ ಭೂಮಾಪಕರನ್ನು ಇಲಾಖೆಗೆ ಸೇರ್ಪಡೆಗೊಳಿಸಲಾಗಿದ್ದು, ಪ್ರಸ್ತುತ ಸುಮಾರು 5,000 ಮಂದಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

2021ರಲ್ಲಿ ಕೆಎಲ್‌ಆರ್ ಕಾಯ್ದೆಗೆ ಮತ್ತೊಮ್ಮೆ ತಿದ್ದುಪಡಿ ತರಲಾಗಿದ್ದು, ಸರ್ಕಾರಿ ಭೂಮಾಪಕರು ನಿರ್ವಹಿಸುವ ಬಹುತೇಕ ಎಲ್ಲ ಕಾರ್ಯಗಳನ್ನು ಪರವಾನಗಿ ಭೂಮಾಪಕರಿಗೂ ವಹಿಸಲು ಅವಕಾಶ ಕಲ್ಪಿಸಲಾಯಿತು. ಅದರಂತೆ ಪೋಡಿ, ಆರ್‌ಆರ್ ಪಕ್ಕಾ, ದುರಸ್ತಿ, ಅರಣ್ಯ ಅಳತೆ, ಆಟ್ಲಾಸ್, ಡಿಜಿಟಲ್ ಸ್ಕ್ಯಾನಿಂಗ್ ಮತ್ತು ಅಪ್‌ಲೋಡ್, ಗ್ರಾಮ ಪಂಚಾಯಿತಿ ಇ-ಸ್ವತ್ತು, ಅನುದಾನ ಪೂರ್ವ ನಕ್ಷೆ, ಕೆರೆ-ಕಟ್ಟೆ, ರಸ್ತೆ, ಕಾಲುವೆ, ದೇವಸ್ಥಾನ, ಮಸಣ, ಒತ್ತುವರಿ ನಕ್ಷೆ, ದರಕಾಸ್ತು ಪೋಡಿ, ಮನೆಗಳ ಅಳತೆ ಮತ್ತು ಹಕ್ಕುಪತ್ರ ವಿತರಣೆ ಸೇರಿದಂತೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ʼನಕ್ಷೆ ಸ್ವಾಮಿತ್ವʼ ಯೋಜನೆಯ ಕಾರ್ಯಗಳನ್ನೂ ಪರವಾನಗಿ ಭೂಮಾಪಕರಿಂದಲೇ ನಿರ್ವಹಿಸಲಾಗುತ್ತಿದೆ.
“ಸರ್ಕಾರಿ ಭೂಮಾಪಕರಿಗೆ ನೀಡುವ ತರಬೇತಿ ಮತ್ತು ಪರವಾನಗಿ ಭೂಮಾಪಕರಿಗೆ ನೀಡುವ ತರಬೇತಿ ಬಹುತೇಕ ಒಂದೇ ರೀತಿಯದ್ದಾಗಿದ್ದು, ವಿದ್ಯಾರ್ಹತೆಯಲ್ಲಿಯೂ ಸಮಾನತೆ ಇದೆ. ಆದರೂ ಸರ್ಕಾರಿ ಭೂಮಾಪಕರಿಗೆ ಮಾಸಿಕ ಸುಮಾರು 60 ಸಾವಿರ ರೂ. ವೇತನ, ವಿವಿಧ ಭತ್ಯೆಗಳು ಮತ್ತು ಸೌಲಭ್ಯಗಳು ದೊರೆಯುತ್ತಿವೆ. ಆದರೆ ಪರವಾನಗಿ ಭೂಮಾಪಕರಿಗೆ ತಿಂಗಳಿಗೆ ಕೇವಲ 15 ಸಾವಿರದಿಂದ 20 ಸಾವಿರ ರೂ.ವರೆಗೆ ಮಾತ್ರ ಸಂಭಾವನೆ ನೀಡಲಾಗುತ್ತಿದ್ದು, ಯಾವುದೇ ಭದ್ರತೆ ಅಥವಾ ಸೇವಾ ಸೌಲಭ್ಯಗಳಿಲ್ಲ” ಎಂದು ಸಂಘಟಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರವಾನಗಿ ಭೂಮಾಪಕರಿಗೆ ಆರಂಭದಲ್ಲಿ ಪ್ರತಿ ಕಡತಕ್ಕೆ 300 ರೂ. ಸಂಭಾವನೆ ನಿಗದಿಪಡಿಸಲಾಗಿತ್ತು. ಬಳಿಕ ತತ್ಕಾಲ್ ಪೋಡಿ ಯೋಜನೆ ಸಂದರ್ಭದಲ್ಲಿ ಪ್ರತಿ ಕಡತಕ್ಕೆ 800 ರೂ. ನೀಡಲಾಗುತ್ತಿತ್ತು. ಪ್ರಸ್ತುತ ತಿಂಗಳಿಗೆ 23 ಕಡತಗಳನ್ನು ನಿಗದಿಪಡಿಸಿ ಪ್ರತಿ ಕಡತಕ್ಕೆ 1,200 ರೂ. ಸಂಭಾವನೆ ನೀಡಲಾಗುತ್ತಿದೆ. ಆದರೆ ಕಾರ್ಯಭಾರ ಮತ್ತು ಹೊಣೆಗಾರಿಕೆಗೆ ತಕ್ಕಂತೆ ಸಂಭಾವನೆ ಇಲ್ಲವೆಂದು ಸಂಘದ ಪದಾಧಿಕಾರಿಗಳು ಆರೋಪಿಸಿದರು.
ಭೂದಾಖಲೆ ಇಲಾಖೆ ಸೇವಾ ನಿಯಮ 88ರ ಅಡಿಯಲ್ಲಿ ಇರುವ ಪೂರಕ ಅಂಶಗಳು, 2013ರ ಡಬ್ಲ್ಯೂಪಿ 51923-52207/2012 ಹಾಗೂ 2023ರ ಡಬ್ಲ್ಯೂಪಿ 18763/2022 ಪ್ರಕರಣಗಳಲ್ಲಿ ವ್ಯಕ್ತವಾದ ಕಾನೂನಾತ್ಮಕ ಅಂಶಗಳ ಆಧಾರದಲ್ಲಿ ಪರವಾನಗಿ ಭೂಮಾಪಕರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಲಾಯಿತು. ಇದೇ ವೇಳೆ ಭೂಮಾಪನ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ನೀಡಿದ್ದ ಭರವಸೆಯನ್ನು ಸರ್ಕಾರ ಈಡೇರಿಸಬೇಕು ಎಂದು ಸಂಘಟಕರು ಒತ್ತಾಯಿಸಿದ್ದಾರೆ.
ಈ ಕುರಿತು ಈ ದಿನ.ಕಾಮ್ ಜತೆಗೆ ಮಾತನಾಡಿದ ಉಡುಪಿ ಜಿಲ್ಲಾ ಭೂಮಾಪಕರ ಸಂಘದ ಅಧ್ಯಕ್ಷ ಹಸನ್ ಅವರು, “ಈಗಾಗಲೇ ಎರಡೂವರೆ ತಿಂಗಳಿನಿಂದ ನಾವು ಮುಷ್ಕರ ನಡೆಸುತ್ತಿದ್ದೇವೆ. ಆದರೆ ಇದಕ್ಕೆ ಪ್ರತಿಕ್ರಿಯೆಯಾಗಿ ಇಲಾಖೆಯವರು ವಿವಿಧ ರೀತಿಯ ಬೆದರಿಕೆ ತಂತ್ರಗಳನ್ನು ಹೂಡುತ್ತಿದ್ದಾರೆ. ರಾಜ್ಯಾದ್ಯಂತ ಎಲ್ಲರಿಗೂ ನೋಟಿಸ್ ನೀಡಿ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿಯೂ ಹತ್ತು ಮಂದಿಯ ಪರವಾನಗಿ ರದ್ದುಪಡಿಸುವ ಪ್ರಸ್ತಾವನೆಯನ್ನು ಈಗಾಗಲೇ ಕಳುಹಿಸಲಾಗಿದೆ” ಎಂದು ಆರೋಪಿಸಿದರು.
“ಉಡುಪಿ ಮತ್ತು ಮಂಗಳೂರಿನಲ್ಲಿ ‘ದರ್ಖಾಸ್ತ್ ಪೋಡಿ’ ಎಂಬ ವಿಶೇಷ ಯೋಜನೆ ಯಶಸ್ವಿಯಾಗಿ ಜಾರಿಯಾಯಿತು. ಈ ಯೋಜನೆ ಯಶಸ್ವಿಯಾಗಲು ಶೇ.70ರಷ್ಟು ನೇರವಾಗಿ ಪರವಾನಗಿ ಭೂಮಾಪಕರ ಕೊಡುಗೆ ಇದೆ. ಈ ಕಾರ್ಯಕ್ಕೆ ತಹಶೀಲ್ದಾರ್ ಅವರಿಗೂ ಅಭಿನಂದನೆ ಸಲ್ಲಿಸಲಾಗಿದೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಕೂಡ ಅಭಿನಂದನಾ ಪತ್ರ ನೀಡಿದ್ದಾರೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ರಾಜ್ಯ ಮಟ್ಟದ ಸಾಧನಾ ಸಮಾವೇಶದಲ್ಲಿಯೂ ಈ ಯೋಜನೆಯನ್ನು ಅಭಿವೃದ್ಧಿ ಕಾರ್ಯವೆಂದು ಪ್ರಸ್ತಾಪಿಸಿದ್ದಾರೆ” ಎಂದು ಹೇಳಿದರು.
“ಆದರೆ ಇದೀಗ ಲೈಸೆನ್ಸ್ ಸರ್ವೇಯರ್‌ಗಳಿಗೆ ಕೇವಲ 60 ರೂ., 100 ರೂ. ದಂಡ ವಿಧಿಸುವ ಮೂಲಕ ಕಿರುಕುಳ ನೀಡಲಾಗುತ್ತಿದೆ. ಬೆದರಿಕೆಯ ಭಾಗವಾಗಿ 10 ಮಂದಿಯ ಪರವಾನಗಿ ರದ್ದುಪಡಿಸುವ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಉಡುಪಿ ಜಿಲ್ಲಾ ಉಪ ನಿರ್ದೇಶಕರ ಕಚೇರಿಗೆ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಸ್ಪಂದನೆ ದೊರಕಿಲ್ಲ. ಏನೇ ಆಗಲಿ, ಯಾವುದೇ ಕಾರಣಕ್ಕೂ ನಾವು ಜಗ್ಗುವುದಿಲ್ಲ” ಎಂದು ತಿಳಿಸಿದರು.

ಈ ದಿನ.ಕಾಮ್ ಜತೆ ಮಾತನಾಡಿದ ಸಂಘದ ಸದಸ್ಯ ರವಿಕಾಂತ್ ಭಟ್, “ನಮ್ಮನ್ನು ಖಾಯಂಗೊಳಿಸಬೇಕು ಎಂಬುದು ನಮ್ಮ ಪ್ರಮುಖ ಆಗ್ರಹವಾಗಿದೆ. ಕಳೆದ ಎರಡು ವರ್ಷಗಳಿಂದ ಸರ್ಕಾರದ ಕೆಲಸಕ್ಕೆ ನಮ್ಮನ್ನು ನಿಯೋಜಿಸಲಾಗಿದೆ. ಆದರೆ ತಿಂಗಳಿಗೆ ಕೇವಲ ₹3,200 ರಿಂದ ₹6,000ರವರೆಗೆ ಮಾತ್ರ ಸಂಬಳ ನೀಡಲಾಗುತ್ತಿದೆ. ಇಂತಹ ಅಲ್ಪ ಸಂಬಳದಲ್ಲಿ ಜೀವನ ನಡೆಸುವುದು ತುಂಬಾ ಕಷ್ಟಕರವಾಗಿದೆ” ಎಂದು ಹೇಳಿದರು.
“ಕಳೆದ ಮೂರು ತಿಂಗಳಿನಿಂದ ನಾವು ಮುಷ್ಕರ ನಡೆಸುತ್ತಿರುವ ಪರಿಣಾಮ ತುರ್ತಾಗಿ ಜಾಗ ಮಾರಾಟ ಮಾಡಬೇಕಿರುವವರ ಕೆಲಸಗಳು ಕೂಡ ಸ್ಥಗಿತಗೊಂಡಿವೆ. ಸರ್ಕಾರದ ಆದೇಶದಂತೆ ಅವರು ಸ್ವತಃ ನಕ್ಷೆ ತಯಾರಿಸಿಕೊಳ್ಳಬಹುದು. ಕೆಲವರು ಅದನ್ನು ಮಾಡುತ್ತಿದ್ದರು. ಆದರೆ ನಕ್ಷೆಯಲ್ಲಿ ಯಾವುದೇ ತಪ್ಪುಗಳಾದರೆ ಅದರ ಸಂಪೂರ್ಣ ಹೊಣೆಗಾರಿಕೆ ಅವರ ಮೇಲೇ ಬರುತ್ತದೆ. ಈ ವಿಚಾರ ಬಹುತೇಕರಿಗೆ ತಿಳಿದಿಲ್ಲ. ಅಲ್ಲದೆ ಯಾರೂ ಸರಿಯಾದ ಮಾಹಿತಿ ನೀಡುತ್ತಿಲ್ಲ. ಆದ್ದರಿಂದ ಸರ್ಕಾರ ಆದಷ್ಟು ಬೇಗ ನಮ್ಮ ಬೇಡಿಕೆಗಳನ್ನು ಈಡೇರಿಸಿ, ಮುಷ್ಕರ ಅಂತ್ಯಗೊಳ್ಳಲು ಮಧ್ಯಸ್ಥಿಕೆ ವಹಿಸಬೇಕು” ಎಂದು ಆಗ್ರಹಿಸಿದರು.
ಪರವಾನಗಿ ಭೂಮಾಪಕರ ಸೇವೆ ಸ್ಥಗಿತಗೊಂಡ ಪರಿಣಾಮ ರಾಜ್ಯದಾದ್ಯಂತ ಸುಮಾರು 5.79 ಲಕ್ಷ ಅರ್ಜಿಗಳು ಮತ್ತು ಉಡುಪಿ ಜಿಲ್ಲೆಯಲ್ಲಿ ಸುಮಾರು 16 ಸಾವಿರ ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ. ಸರ್ಕಾರ ತಕ್ಷಣವೇ ವಿಶೇಷ ನೇಮಕಾತಿ ಮೂಲಕ ಸಕ್ರಮಗೊಳಿಸುವ ಅಥವಾ ʼಸಮಾನ ಕೆಲಸಕ್ಕೆ ಸಮಾನ ವೇತನʼ ಜಾರಿಗೆ ತರುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂಬುದು ಸಂಘಟಕರ ಆಗ್ರಹವಾಗಿದೆ.
ಇದನ್ನೂ ಓದಿದ್ದೀರಾ? ತುಮಕೂರು | ಇಂಪ್ರೆಶನ್ 2026 ಮಾಧ್ಯಮ ಹಬ್ಬ:ಮೈಸೂರು – ಧಾರವಾಡ ವಿವಿಗಳಿಗೆ ಚಾಂಪಿಯನ್ ಶಿಪ್
ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದ ಮುಷ್ಕರ ಮತ್ತು ಉಡುಪಿ ಘಟಕದ ಒತ್ತಾಯವು ಈ ಸಮಸ್ಯೆಯ ಗಂಭೀರತೆಯನ್ನು ಎತ್ತಿ ತೋರಿಸುತ್ತಿದೆ. ಇದನ್ನು ಶೀಘ್ರವಾಗಿ ಪರಿಹರಿಸದಿದ್ದಲ್ಲಿ ಭೂಮಾಪನ ಕಾರ್ಯಗಳು ಪ್ರತಿಕೂಲ ಪರಿಣಾಮ ಬೀರಲಿವೆ. ಆದ್ದರಿಂದ ಸರ್ಕಾರವು ಈ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಪರಿಶೀಲಿಸಿ, ಪರವಾನಗಿ ಭೂಮಾಪಕರಿಗೆ ಯೋಗ್ಯ ನ್ಯಾಯ ಒದಗಿಸುವ ಮೂಲಕ ಅವರ ದೀರ್ಘಕಾಲದ ಅಸಮಾಧಾನವನ್ನು ಹೋಗಲಾಡಿಸಬೇಕು.
ಇದು ಕೇವಲ ಉದ್ಯೋಗ ಸಮಸ್ಯೆಯಲ್ಲ, ರಾಜ್ಯದ ಭೂ ಸಂಬಂಧಿ ಕಾರ್ಯಗಳಿಗೆ ತಡೆಯಾಗದಂತೆ ಸುಗಮವಾಗಿ ನಡೆಸಬೇಕಾಗಿರುವ ದೂರದೃಷ್ಟಿಯ ನಿರ್ಧಾರವೂ ಆಗಿದೆ.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




