ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಡಿ.ಕೆ. ಶಿವಕುಮಾರ್ ಅವರಿಗೆ ಕಾರಂಜಾ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗ್ಗೆ ಸಮಗ್ರ ಅರಿವು ಇದೆ. ಆದ್ದರಿಂದ ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯೊಳಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಆಗ್ರಹಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಹಾಗೂ ಬೀದರ್ ಸಮಗ್ರ ಅಭಿವೃದ್ಧಿ ಜಂಟಿ ಕ್ರಿಯಾ ಸಮಿತಿ ವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “1981ರಿಂದ 1986ರ ಅವಧಿಯಲ್ಲಿ ಕಾರಂಜಾ ನೀರಾವರಿ ಯೋಜನೆ ನಿರ್ಮಾಣಕ್ಕಾಗಿ ಸುಮಾರು 28 ಗ್ರಾಮಗಳ ರೈತರು ಯಾವುದೇ ಷರತ್ತಿಲ್ಲದೆ ತಮ್ಮ ಭೂಮಿಯನ್ನು ನೀಡಿದ್ದರು. ಆದರೆ ಇಂದಿಗೂ ಅವರಿಗೆ ನ್ಯಾಯಸಮ್ಮತ ಪರಿಹಾರ ದೊರೆತಿಲ್ಲ” ಎಂದು ಅವರು ತಿಳಿಸಿದರು.
“2018ರಲ್ಲಿ ಪರಿಹಾರಕ್ಕಾಗಿ 70 ದಿನಗಳ ಕಾಲ ಹೋರಾಟ ನಡೆಸಲಾಗಿತ್ತು. ಆಗಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಈ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ಒದಗಿಸುವಂತೆ ಆಗಿನ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಸೂಚಿಸಿದ್ದರು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ ಅವರ ಭರವಸೆಯ ಮೇರೆಗೆ ಹೋರಾಟವನ್ನು ಹಿಂಪಡೆಯಲಾಗಿತ್ತು. ನಂತರ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರವೂ ಸಂತ್ರಸ್ತರ ಬೇಡಿಕೆಯನ್ನು ನಿರ್ಲಕ್ಷಿಸಿತು. 2022ರ ಜುಲೈನಿಂದ 926 ದಿನಗಳ ಕಾಲ ನಿರಂತರ ಧರಣಿ ಸತ್ಯಾಗ್ರಹ ನಡೆಸಲಾಯಿತು. ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಮುತುವರ್ಜಿಯಿಂದ ಆಗಿನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ರಹೀಂ ಖಾನ್ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಬೆಳಗಾವಿ ಅಧಿವೇಶನದಲ್ಲಿ ವಿಷಯ ಚರ್ಚಿಸಿ ಶೀಘ್ರದಲ್ಲೇ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು” ಎಂದು ತಿಳಿಸಿದರು.
“ಪರಿಹಾರ ಬೇಡಿಕೆ ಈಡೇರದಕ್ಕೆ ಕಾರಂಜಾ ಸಂತ್ರಸ್ತರು ವಿಷಪ್ರಾಶನಕ್ಕೂ ಮುಂದಾಗಿದ್ದರು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಇತ್ತೀಚೆಗೆ ಬೀದರ್‌ನಲ್ಲಿ ನಡೆದ ಪತ್ರಕರ್ತರ 40ನೇ ರಾಜ್ಯ ಸಮ್ಮೇಳನದ ಸಂದರ್ಭದಲ್ಲೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿತ್ತು. ಸರ್ಕಾರದ ಮುಂದೆ ಮೂರು ಪ್ರಮುಖ ಬೇಡಿಕೆಗಳನ್ನು ಇಡಲಾಗಿದೆ. ಕಾರಂಜಾ ಸಂತ್ರಸ್ತರಿಗೆ ವೈಜ್ಞಾನಿಕ ಆಧಾರದ ಮೇಲೆ ಪರಿಹಾರ ನೀಡಬೇಕು, ಜಿಲ್ಲಾಡಳಿತ ಕಚೇರಿಯಲ್ಲಿರುವ ಭೂಸ್ವಾಧೀನಾಧಿಕಾರಿ ಹುದ್ದೆಯನ್ನು ತಕ್ಷಣ ಭರ್ತಿ ಮಾಡಬೇಕು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅವರು ವಿಶೇಷ ಮುತುವರ್ಜಿ ವಹಿಸಿ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಬೇಕು” ಎಂದು ಒತ್ತಾಯಿಸಿದರು.
ಸಚಿವ ಸಂಪುಟ ರಚನೆಯಾದ ಬಳಿಕ 15 ದಿನಗಳೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಗಾಂಧೀಜಿ, ಅಂಬೇಡ್ಕರ್ ಅವರ ತತ್ವಗಳ ಆಧಾರದ ಮೇಲೆ ಹಂತ ಹಂತವಾಗಿ ನಿರಂತರ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಲಕ್ಷ್ಮಣ ದಸ್ತಿ ಎಚ್ಚರಿಕೆ ನೀಡಿದರು.
ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಹಾಗೂ ಬೀದರ್ ಸಮಗ್ರ ಅಭಿವೃದ್ಧಿ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹೋಚಕನಳ್ಳಿ ಮಾತನಾಡಿ, “ಬೆಲೆಬಾಳುವ ಜಮೀನು ಕಳೆದುಕೊಂಡ ಅನೇಕ ಸಂತ್ರಸ್ತರು ಜೀವನೋಪಾಯಕ್ಕಾಗಿ ಊರು ತೊರೆದು ವಲಸೆ ಹೋಗುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಹೀಗಾಗಿ ಸರ್ಕಾರ ತುರ್ತಾಗಿ ಪರಿಹಾರ ಒದಗಿಸಬೇಕು” ಎಂದು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಚಾಲಕ ವಿನಯಕುಮಾರ ಮಾಳಗೆ ಮಾತನಾಡಿ, “ಜನಪ್ರತಿನಿಧಿಗಳು ರಾಜಕೀಯ ಇಚ್ಛಾಶಕ್ತಿ ತೋರಿದರೆ ಕಾರಂಜಾ ಸಂತ್ರಸ್ತರಿಗೆ ಪರಿಹಾರ ನೀಡುವುದು ಕಷ್ಟದ ಕೆಲಸವಲ್ಲ. ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದಂತೆಯೇ ಈ ಪ್ರಕರಣವನ್ನೂ ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ಒದಗಿಸಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಬೀದರ್ | ವಿದ್ಯಾವಂತ ಮೋಸಗಾರರು, ದೇಶದ್ರೋಹಿಗಳ ಸಂಖ್ಯೆ ಹೆಚ್ಚಳ : ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ
ಸುದ್ದಿಗೋಷ್ಠಿಯಲ್ಲಿ ಕಾರಂಜಾ ಮುಳುಗಡೆ ಸಂತ್ರಸ್ತರಾದ ಮಲ್ಲಿನಾಥ ಕಲಬುರಗಿ, ರಾಜಪ್ಪ ಕಮಲಾಪುರ, ಡಾ. ರಾಜಕುಮಾರ ಬುಸ್ಸಾ, ಸಂಗಾರೆಡ್ಡಿ ಔರಾದ, ವೀರೇಂದ್ರ ಮರಕಲ್, ಮಾದಪ್ಪ ಕೌದೆ, ಲಕ್ಷ್ಮೀಬಾಯಿ ಕೆ. ಅಹ್ಮದ್ ಬಗದಲ್, ಯೂಸೂಫ್ ಮಿಯಾ, ಬಸವರಾಜ ಹಿಂದಾ, ಮಾಣಿಕಪ್ಪ ನೆಲವಾರ, ಪ್ರಭುರಾವ ತೂಗಾಂವ, ಶಂಕರಪ್ಪ ನಾರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.




