ರೂಫ್‌ಟಾಪ್ ಹೋಟೆಲ್‌ಗಳು, ಬಾರ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಇತರೆ ವಾಣಿಜ್ಯ ಉದ್ದಿಮೆಗಳಲ್ಲಿ ನಿಯಮ ಪಾಲನೆ ಪರಿಶೀಲಿಸುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆ ಶುಕ್ರವಾರ ವಿಶೇಷ ಪರಿಶೀಲನಾ ಕಾರ್ಯಾಚರಣೆ ನಡೆಸಿತು.
ಕಾರ್ಯಾಚರಣೆಯಲ್ಲಿ ಸಹಾಯಕ ಆಯುಕ್ತರು, ಅಭಿವೃದ್ಧಿ ಅಧಿಕಾರಿಗಳು, ಆರೋಗ್ಯ ನಿರೀಕ್ಷಕರು, ಪರಿಸರ ಹಾಗೂ ಸಿವಿಲ್ ಅಭಿಯಂತರರು ಮತ್ತು ಆರೋಗ್ಯ ಸಿಬ್ಬಂದಿ ಭಾಗವಹಿಸಿ ವಿವಿಧ ವಲಯಗಳ ವ್ಯಾಪ್ತಿಯ ಉದ್ದಿಮೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆಯ ವೇಳೆ ವ್ಯಾಪಾರ ಪರವಾನಗಿ, ಅಗ್ನಿ ಸುರಕ್ಷತೆ, ಸಾರ್ವಜನಿಕ ಸುರಕ್ಷತೆ, ಸ್ವಚ್ಛತೆ, ನೈರ್ಮಲ್ಯ ಹಾಗೂ ಕಟ್ಟಡ ಮತ್ತು ಸ್ಥಳ ಬಳಕೆಯ ಸುರಕ್ಷತೆ ಕುರಿತು ಪರಿಶೀಲನೆ ನಡೆಸಲಾಯಿತು. ಒಟ್ಟು 9 ವಲಯಗಳಲ್ಲಿ 31 ಉದ್ದಿಮೆಗಳನ್ನು ಪರಿಶೀಲಿಸಲಾಗಿದ್ದು, 9 ಉದ್ದಿಮೆಗಳನ್ನು ಮುಚ್ಚಲಾಗಿದೆ. 16 ಉದ್ದಿಮೆಗಳಿಗೆ ನೋಟಿಸ್ ನೀಡಲಾಗಿದೆ. ಮೂರು ಉದ್ದಿಮೆಗಳಿಗೆ ಅಗ್ನಿ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳುವಂತೆ ಸೂಚಿಸಲಾಗಿದ್ದು, ಇನ್ನೂ ಮೂರು ಉದ್ದಿಮೆಗಳನ್ನು ಮುಚ್ಚಲು ಪ್ರಸ್ತಾಪಿಸಲಾಗಿದೆ.
ವಲಯವಾರು ಪರಿಶೀಲನೆಯಲ್ಲಿ ಹಲವು ಉಲ್ಲಂಘನೆಗಳು ಬೆಳಕಿಗೆ ಬಂದಿವೆ. ವಲಯ-1 ಮತ್ತು ವಲಯ-2ರಲ್ಲಿ ಕೆಲವು ರೂಫ್‌ಟಾಪ್ ರೆಸ್ಟೋರೆಂಟ್‌ಗಳಿಗೆ ನೋಟಿಸ್ ನೀಡಲು ತೀರ್ಮಾನಿಸಲಾಗಿದೆ. ವಲಯ-3ರಲ್ಲಿ ಅಗ್ನಿ ಸುರಕ್ಷತಾ ನಿಯಮ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ಮೂರು ಉದ್ದಿಮೆಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ. ವಲಯ-4ರಲ್ಲಿ ಎರಡು ರೂಫ್‌ಟಾಪ್ ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗಿದ್ದು, ಇನ್ನೂ ಮೂರು ಉದ್ದಿಮೆಗಳಿಗೆ ನೋಟಿಸ್ ನೀಡಲಾಗಿದೆ.

ವಲಯ-5ರಲ್ಲಿ ಅಗ್ನಿ ನಂದಕಗಳನ್ನು ಅಳವಡಿಸುವಂತೆ ಸೂಚನೆ ನೀಡಲಾಗಿದ್ದು, ಅಬಕಾರಿ ಇಲಾಖೆಯ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಒಂದು ರೆಸ್ಟೋರೆಂಟ್ ಅನ್ನು ಮುಚ್ಚಲಾಗಿದೆ. ವಲಯ-6ರಲ್ಲಿ ಮೂರು ರೂಫ್‌ಟಾಪ್ ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗಿದೆ. ವಲಯ-7ರಲ್ಲಿ ಎರಡು ಉದ್ದಿಮೆಗಳನ್ನು ಮುಚ್ಚಿ, ಐದು ಉದ್ದಿಮೆಗಳಿಗೆ ನೋಟಿಸ್ ನೀಡಲು ಕ್ರಮ ಕೈಗೊಳ್ಳಲಾಗಿದೆ. ವಲಯ-8ರಲ್ಲಿ ನಾಲ್ಕು ಉದ್ದಿಮೆಗಳಿಗೆ ನೋಟಿಸ್ ನೀಡಲಾಗಿದ್ದು, ವಲಯ-9ರಲ್ಲಿ ಅಗ್ನಿ ಸುರಕ್ಷತೆ, ಗಾಳಿಚಲನೆ ಮತ್ತು ಸ್ವಚ್ಛತಾ ವ್ಯವಸ್ಥೆಗಳ ಕೊರತೆ ಹಿನ್ನೆಲೆಯಲ್ಲಿ ಸೆಲ್ಲರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಂದು ಉದ್ದಿಮೆಯನ್ನು ಮುಚ್ಚಲಾಗಿದೆ.
ಪರಿಶೀಲನೆ ವೇಳೆ ಅಗ್ನಿ ಸುರಕ್ಷತಾ ಕ್ರಮಗಳ ಕೊರತೆ, ಅಸ್ವಚ್ಛತೆ, ಸೆಲ್ಲರ್‌ನ ಅಸುರಕ್ಷಿತ ಬಳಕೆ, ಸರಿಯಾದ ಎಕ್ಸಾಸ್ಟ್ ಮತ್ತು ಗಾಳಿಚಲನೆ ವ್ಯವಸ್ಥೆಗಳ ಕೊರತೆ, ವ್ಯಾಪಾರ ಪರವಾನಗಿ ಹಾಗೂ ಇತರೆ ನಿಯಮಗಳ ಉಲ್ಲಂಘನೆಗಳು ಕಂಡುಬಂದಿವೆ ಎಂದು ಪಾಲಿಕೆ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ?ಮೈಸೂರು | ಸ್ವಾತಂತ್ರ್ಯದ ಓಟ: ಇತಿಹಾಸ, ಮಾನವೀಯತೆ ಮತ್ತು ಸ್ವಾತಂತ್ರ್ಯದ ನಿಜಾರ್ಥದ ರಂಗಯಾನ
ಮೈಸೂರು ಮಹಾನಗರ ಪಾಲಿಕೆಯು ಸಾರ್ವಜನಿಕ ಸುರಕ್ಷತೆ, ಸ್ವಚ್ಛತೆ, ನೈರ್ಮಲ್ಯ ಮತ್ತು ಅಗ್ನಿ ಸುರಕ್ಷತಾ ನಿಯಮಗಳನ್ನು ಎಲ್ಲಾ ವಾಣಿಜ್ಯ ಉದ್ದಿಮೆಗಳು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಿದೆ. ಮುಂದಿನ ದಿನಗಳಲ್ಲಿಯೂ ಇಂತಹ ಪರಿಶೀಲನೆ ಮತ್ತು ಜಾರಿ ಕಾರ್ಯಾಚರಣೆಗಳು ಮುಂದುವರಿಯಲಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.




