ಪಟ್ಟಣವು ಇತ್ತೀಚಿನ ದಿನಗಳಲ್ಲಿ ವೇಗವಾಗಿ ಬೆಳೆಯುತ್ತಿದ್ದು, ರಸ್ತೆ, ಚರಂಡಿ ಸೇರಿದಂತೆ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಕೋಟ್ಯಂತರ ರೂಪಾಯಿ ಅನುದಾನದ ಅಗತ್ಯವಿದೆ. ಪಟ್ಟಣದ ಎಲ್ಲಾ ವಾರ್ಡ್‌ಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಕೆ.ವೆಂಕಟೇಶ್ ಭರವಸೆ ನೀಡಿದರು.
ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಒಟ್ಟು ₹7.61 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಬಿ.ಎಂ. ರಸ್ತೆಯ 4 ಕಿ.ಮೀ. ಉದ್ದದ ಇಂಟರ್‌ಲಾಕ್, ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡಿ, ಈ ಹಿಂದೆ ಪಟ್ಟಣದ ಕೆಲವೇ ವಾರ್ಡ್‌ಗಳಿಗೆ ಕಾವೇರಿ ಕುಡಿಯುವ ನೀರು ಸರಬರಾಜಾಗುತ್ತಿತ್ತು. ಇದೀಗ ಅಮೃತ್-2 ಯೋಜನೆಯಡಿ ಪಟ್ಟಣದ 23 ವಾರ್ಡ್‌ಗಳಿಗೂ ಕಾವೇರಿ ನೀರು ಒದಗಿಸುವ ಕಾಮಗಾರಿ ನಡೆಯುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಪಟ್ಟಣದ ಅಭಿವೃದ್ಧಿಗಾಗಿ ₹80 ಕೋಟಿಗೂ ಅಧಿಕ ಅನುದಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿಯೂ ಪಟ್ಟಣದ ಎಲ್ಲ ವಾರ್ಡ್‌ಗಳ ಅಭಿವೃದ್ಧಿಗೆ ಆದ್ಯತೆ ನೀಡಿ, ಪಿರಿಯಾಪಟ್ಟಣವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಲು ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರ ಭೂ ಸಾರಿಗೆ ಇಲಾಖೆ (ಡಲ್ಟ್) ಅನುದಾನದಡಿ ₹4.92 ಕೋಟಿ ವೆಚ್ಚದಲ್ಲಿ ಬಿ.ಎಂ. ರಸ್ತೆಯ 4 ಕಿ.ಮೀ. ಪಾದಚಾರಿ ಮಾರ್ಗ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅಮೃತ ನಗರೋತ್ಥಾನ ಯೋಜನೆಯಡಿ ಮಡಿವಾಳರ ಬೀದಿಯಲ್ಲಿ ₹10 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಅಂಗನವಾಡಿ ಕಟ್ಟಡ ಉದ್ಘಾಟಿಸಲಾಗಿದೆ. ಮೂರು ಮುಸ್ಲಿಂ ಬ್ಲಾಕ್‌ಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಹಾಗೂ ನೌಕರರ ಬಡಾವಣೆಯಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ₹12 ಕೋಟಿ ಎಸ್‌ಎಫ್‌ಸಿ ಅನುದಾನದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಪಟ್ಟಣದ ಕುಡಿಯುವ ನೀರು ಹಾಗೂ ಅರಸಿಕೆರೆ ಅಭಿವೃದ್ಧಿಗೆ ಸಂಬಂಧಿಸಿದ ಡಿಪಿಆರ್ ಸಲ್ಲಿಸಲಾಗಿದೆ. ಸ್ವಚ್ಛ ಭಾರತ್ ಯೋಜನೆಯಡಿ ಕೆರೆಗಳಿಗೆ ಸೇರುತ್ತಿರುವ ಮಲೀನ ನೀರು ತಡೆಗಟ್ಟುವ ಕಾಮಗಾರಿಗೆ ಸಂಬಂಧಿಸಿದ ಡಿಪಿಆರ್ ಅನುಮೋದನೆ ಪ್ರಕ್ರಿಯೆಯಲ್ಲಿದೆ. 16ನೇ ಹಣಕಾಸು ಆಯೋಗದಡಿ ₹2.14 ಕೋಟಿ ಕ್ರಿಯಾ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ಪಟ್ಟಣದಲ್ಲಿ ಈಗಾಗಲೇ ಒಳಚರಂಡಿ (ಯುಜಿಡಿ) ಕಾಮಗಾರಿ ಪೂರ್ಣಗೊಂಡಿದೆ. ಸಾರ್ವಜನಿಕರು ಯುಜಿಡಿ ವ್ಯವಸ್ಥೆಯನ್ನು ಕಡ್ಡಾಯವಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಸಾರ್ವಜನಿಕರಿಗೆ ಆರ್ಥಿಕ ಹೊರೆಯಾಗದಂತೆ ಯುಜಿಡಿ ಸಂಪರ್ಕದ ವೆಚ್ಚವನ್ನು ಕಡಿಮೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪಟ್ಟಣದ ಶ್ರೀ ಮಸಣಿಕಮ್ಮ ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಇದಕ್ಕಾಗಿ ₹9.19ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ಹಳೇ ಮೈಸೂರು: ಆಡಳಿತ, ನೀರಾವರಿ ಮತ್ತು ಸಾರ್ವಜನಿಕ ಬದುಕಿನಲ್ಲಿ ಅಚ್ಚಳಿಯದ ಹೆಜ್ಜೆ ಗುರುತು ಎಚ್.ಎಂ. ಚನ್ನಬಸಪ್ಪ
ಪತ್ರಕರ್ತರು ಈ ಹಿಂದೆ ದೇವಾಲಯ ನಿರ್ಮಾಣದ ಹೆಸರಿನಲ್ಲಿ ಸಂಗ್ರಹಿಸಲಾಗಿದ್ದ ದೇಣಿಗೆ ಹಣದ ಕುರಿತು ಪ್ರಶ್ನಿಸಿದಾಗ, ದೇವಾಲಯ ನಿರ್ಮಾಣದ ಹೆಸರಿನಲ್ಲಿ ಅಕ್ರಮವಾಗಿ ದೇಣಿಗೆ ಸಂಗ್ರಹಿಸಿದವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರು ಜಾಮೀನು ಪಡೆದುಕೊಂಡಿದ್ದಾರೆ. ಸಂಗ್ರಹಿಸಿದ ಹಣ ಹಾಗೂ ಪ್ರಕರಣದ ಕುರಿತು ತಹಶೀಲ್ದಾರ್ ಅವರನ್ನು ವಿಚಾರಿಸಬೇಕು. ತಾವು ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸಿರುವುದಾಗಿ ಶಾಸಕ ಕೆ.ವೆಂಕಟೇಶ್ ಉತ್ತರಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ಮಾತೃಭಾಷೆಯೇ ಜ್ಞಾನಭಾಷೆ: ಶಿಕ್ಷಣ ಯಾರ ಹಕ್ಕು?
ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಪುರಸಭಾ ಮುಖ್ಯಾಧಿಕಾರಿ ಹೆಚ್.ಎನ್.ಮಧು, ಪುರಸಭಾ ಮಾಜಿ ಅಧ್ಯಕ್ಷ ಪಿ.ಎಸ್.ವಿಷಕಂಠಯ್ಯ, ಮೈಮುಲ್ ಮಾಜಿ ನಿರ್ದೇಶಕ ಪ್ರಕಾಶ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊಲದಪ್ಪ, ಟೌನ್ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಗೌಡ, ಕೆಪಿಸಿಸಿ ಸದಸ್ಯ ಅನಿಲ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ಮುಖಂಡರಾದ ಬಸವರಾಜು, ಚೀಟಿ ಸುರೇಶ್, ಅಬ್ದುಲ್ ಅಜೀಜ್, ಚಂದ್ರಶೇಖರ್, ಮಂಜುನಾಥ್, ಸುವರ್ಣಮ್ಮ, ರಾಜೇಶ್, ಪಿ.ಎಸ್.ರವಿ, ಸ್ಟುಡಿಯೋ ಆನಂದ್ ಸೇರಿದಂತೆ ಹಲವರು ಇದ್ದರು.





