ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನೇ ಕೈಬಿಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಚುನಾವಣಾ ಕರ್ತವ್ಯದಲ್ಲಿರುವ ಸುಮಾರು 65 ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಾಂಚೋಲಿ ಅವರಿದ್ದ ಪೀಠವು ಈ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ನಿರಾಕರಿಸಿದೆ. ಹಾಗೆಯೇ ಅಧಿಕಾರಿಗಳು ಈಗಾಗಲೇ ಸ್ಥಾಪಿಸಲಾಗಿರುವ ಮೇಲ್ಮನವಿ ನ್ಯಾಯಮಂಡಳಿಗಳನ್ನು ಸಂಪರ್ಕಿಸಬೇಕು ಎಂದು ಸೂಚಿಸಿದೆ.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ | ಮತದಾರರ ಪಟ್ಟಿಗೆ ‘ಕತ್ತರಿ’; ಎಸ್‌ಐಆರ್ ಅನ್ವಯ 58 ಲಕ್ಷ ಹೆಸರು ರದ್ದು
ಇನ್ನು “ಈ ತೀರ್ಪಿನಿಂದಾಗಿ ಈ ಚುನಾವಣೆಯಲ್ಲಿ ಆ ಅಧಿಕಾರಿಗಳು ಮತ ಚಲಾಯಿಸಲು ಸಾಧ್ಯವಾಗದೇ ಇರಬಹುದು. ಆದರೆ ಮತದಾರರ ಪಟ್ಟಿಯಲ್ಲಿ ಉಳಿಯುವ ಹಕ್ಕು ಹೆಚ್ಚು ಅಮೂಲ್ಯವಾದದ್ದು, ಅದನ್ನು ಸಂರಕ್ಷಿಸಲಾಗುತ್ತದೆ” ಎಂದು ಕೋರ್ಟ್ ಭರವಸೆ ನೀಡಿದೆ.
ತುರ್ತು ಪ್ರಕರಣಗಳಿದ್ದಲ್ಲಿ ಮೇಲ್ಮನವಿ ನ್ಯಾಯಮಂಡಳಿಗಳು ಆದ್ಯತೆಯ ಮೇಲೆ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಇದೇ ವೇಳೆ ನಿರ್ದೇಶಿಸಿದೆ.
ಅರ್ಜಿ ಸಲ್ಲಿಸಿದ ಅಧಿಕಾರಿಗಳು, “ಮತದಾನದ ಗುರುತಿನ ಚೀಟಿ (EPIC) ಸಂಖ್ಯೆಯನ್ನು ಆಧರಿಸಿ ತಮಗೆ ಚುನಾವಣಾ ಕರ್ತವ್ಯದ ಆದೇಶ ನೀಡಲಾಗಿದೆ. ಆದರೆ ಅದೇ ಸಂಖ್ಯೆಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದು ಏಕಪಕ್ಷೀಯ ನಿರ್ಧಾರ” ಎಂದು ದೂರಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ‘ವಿಶೇಷ ತೀವ್ರ ಪರಿಷ್ಕರಣೆ’ ಬಳಿಕ ಸುಮಾರು 91 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ. ಈ ಸಂಬಂಧ ಸುಮಾರು 34 ಲಕ್ಷಕ್ಕೂ ಹೆಚ್ಚು ಮೇಲ್ಮನವಿ ಅರ್ಜಿಗಳು ಈಗಾಗಲೇ ನ್ಯಾಯಮಂಡಳಿಗಳ ಮುಂದೆ ಬಾಕಿ ಇವೆ.





