ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ ₹5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

Date:

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೊಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬೋರ್‌ವೆಲ್‌ ಮಾಲೀಕರು ಜನರಿಗೆ ಹಣ ಪಡೆದು ನೀರು ಕೊಡುತ್ತಾರೆ. ಜನರ ಸಂಕಟಕ್ಕೆ ಕಿವಿಗೊಡದ ಅಧಿಕಾರಿಗಳು ಮೌನವಾಗಿದ್ದಾರೆ. ಖುದ್ದು ಗ್ರಾಮಸ್ಥರ ಜೊತೆಗೆ ನಿಂತು ಕಂಡು-ಕೇಳಿದ ಜಲ ಜೂಜಾಟದ ಕತೆ ಇಲ್ಲಿದೆ..

- Advertisement -

ಎತ್ತ ನೋಡಿದರೂ ಒಬ್ಬರ ಮನೆಯಿಂದ ಮತ್ತೊಬ್ಬರ ಮನೆಗೆ ಹಾದು ಹೋದ ಕಪ್ಪು ಬಣ್ಣದ ಪೈಪ್‌ಗಳು, ಊರಿನ ಸಂದಿಗೊಂದಿಗಳಲ್ಲಿ ಸುತ್ತಾಡುವಾಗ ಕಂಬ, ಛಾವಣಿ ಮೇಲಿಂದ ಪೈಪ್‌ಗಳು ಜೋತಾಡುತ್ತಿರುವುದು.. ಈ ದೃಶ್ಯ ಕಂಡು ಅರೇ! ಈ ಊರಿನಲ್ಲಿ ಎಷ್ಟು ಚೆನ್ನಾಗಿ ನೀರಿನ ವ್ಯವಸ್ಥೆ ಮಾಡಿದ್ದಾರಲ್ಲ! ಎಂದು ಅಚ್ಚರಿಯಾದ ನನ್ನ ಆಲೋಚನೆ ಹುಸಿಯಾಯ್ತು. ಅಲ್ಲಿನ ಕತೆಯೇ ಬೇರೆ ಎಂಬುದು ಆಮೇಲೆ ಅರಿವಿಗೆ ಬಂತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

ಬೀದರ್‌ ಜಿಲ್ಲೆಯ ಔರಾದ್‌ ತಾಲೂಕಿನ ಮಹಾರಾಷ್ಟ್ರ ಗಡಿಯೊಂದಿಗೆ ಹೊಂದಿಕೊಂಡಿರುವ ಹೊಕ್ರಾಣಾ ಗ್ರಾಮದ ಕತೆಯಿದು. ಜನಾಭಿಪ್ರಾಯ ರೂಪಿಸುವ ಸಮೀಕ್ಷೆ ಸಂಬಂಧ ʼಈದಿನʼ ಈ ಗ್ರಾಮಕ್ಕೆ ತೆರಳಿದಾಗ ಅಲ್ಲಿನ ಜನರ ʼನೀರಿನ ಸಂಕಟದ ಕಥೆʼ ಕೇಳಿದಾಗ ನಮಗೆ ನಿಜಕ್ಕೂ ಆಶ್ಚರ್ಯವಾಯ್ತು.

ಬೇಸಿಗೆ ಬಂದರೆ ಸಾಕು, ಜಿಲ್ಲೆಯ ಔರಾದ್‌ ಮತಕ್ಷೇತ್ರದ ಕೆಲ ಗ್ರಾಮದ ಜನರಿಗೆ ಅನ್ನಕ್ಕಿಂತ ಕುಡಿಯುವ ನೀರಿನ ಚಿಂತೆಯೇ ಹೆಚ್ಚು. ಕೆಂಡದಂತಹ ಬಿಸಿಲಿರುವ ಈ ಹೊಕ್ರಾಣದಲ್ಲಿ ಕೇವಲ ಬೇಸಿಗೆಯಲ್ಲಿ ಮಾತ್ರ ನೀರಿನ ಸಮಸ್ಯೆ ಇರಬಹುದು ಎಂಬ ನಮ್ಮ ಅಂದಾಜು ಸುಳ್ಳಾಯಿತು. ಒಂದು ದಶಕಕ್ಕೂ ಅಧಿಕ ವರ್ಷಗಳಿಂದ ಈ ಗ್ರಾಮಸ್ಥರಿಗೆ ಜಲದಾಹ ತಣಿದಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ನಮಗೆ ಸಂಬಂಧವೇ ಇಲ್ಲವೆಂಬಂತೆ, ಇದು ಬಗೆಹರಿಯದ ಸಮಸ್ಯೆ ಎಂದು ತಾವೇ ನಿರ್ಧರಿಸಿ ಕೈತೊಳೆದುಕೊಂಡಿದ್ದಾರೆ.

ಅಂದ ಹಾಗೆ, ಗ್ರಾಮ ಪಂಚಾಯತ್ ಕೇಂದ್ರವಿರುವ ಈ ಊರಿನ ಜನ‌ ಯಾವ ನೀರು ಬಳಸುತ್ತಾರೆ ಎಂಬುದೇ ಬಹಳ ಸ್ವಾರಸ್ಯಕರ ಸಂಗತಿ. ನಮ್ಮನ್ನು ನೋಡಿ ಹತ್ತಿರ ಬಂದ ಬಿಜಾನ್‌ ಬಿ ಎಂಬುವವರಿಗೆ, ʼಊರಿನಲ್ಲಿ ಬಹಳ ನೀರಿನ ಸಮಸ್ಯೆ ಇದ್ಯಾ? ಎಂದು ಕೇಳಿದೆ.

ʼನೀರಿನ ಕತೀ ಕೇಳಬ್ಯಾಡ್ರೀ, ಹೇಳಲಾರದಷ್ಟು ತಕಲೀಪ್‌ ಅದಾʼ ಎಂದು ಸಿಟ್ಟಿನಿಂದಲೇ ಉತ್ತರಿಸಿದರು.

ʼಹಾಗಾದರೆ, ನೀರು ಎಲ್ಲಿಂದ ತರ್ತೀರಾ? ಎಂದು ಮತ್ತೊಮ್ಮೆ ಕೇಳಿದೆ.

ʼನಮ್ಮೂರಲ್ಲಿ ಎಲ್ಲಿಯೂ ಸರ್ಕಾರಿ ನಲ್ಲಿ ನೀರು ಇಲ್ಲ. ವರ್ಷವಿಡೀ ಖರೀದಿ ನೀರೇ ಬಳಸುತ್ತೇವೆʼ ಎಂದರು.

ʼನೀರು ಖರೀದಿನಾ? ಎಲ್ಲಿಂದ ಎಷ್ಟು ಹಣ ಕೊಡ್ತೀರಾ? ಎಂದು ಆಶ್ಚರ್ಯದಿಂದ ಕೇಳಿದೆ.

ʼವರ್ಷಕ್ಕೆ 5 ಸಾವಿರ ಕೊಡ್ತೀವಿʼ ಎಂದು ಚುಟುಕಾಗಿ ಉತ್ತರಿಸಿದರು.

ಅಷ್ಟರಲ್ಲಿ ಇನ್ನೂ ನಾಲ್ಕೈದು ಜನ ನನ್ನ ಬಳಿ ಬಂದು ನಿಂತು, ʼನೀರಿನ ಕತಿ ಯಾಕ್‌ ಕೇಳ್ತೀರಿ ಸರ್, ನಮ್ಮೂರಾಗ ಪಂಚಾಯತ್ ನೀರು ಅಂಬದೇ ಇಲ್ಲ.‌ ಎಲ್ಲರಿಗೂ ಹೇಳಿ-ಕೇಳಿ ಸಾಕಾಗ್ಯಾದ್‌, ಅದಕ್ಕೆ ಪ್ರೈವೆಟ್ ಬೋರ್‌ವೆಲ್ ಇದ್ದೋರ್‌ ಹತ್ರಾ ಖರೀದಿ ನೀರು ತಕೊಂಡಿವಿ ನೋಡಿ ಇದುʼ ಎಂದು ತಲೆ ಮೇಲೆ ವಿದ್ಯುತ್‌ ತಂತಿಯಂತೆ ಮನೆಗಳ ಮೇಲಿಂದ ಹಾದು ಹೋಗಿದ್ದ ಕಪ್ಪು ಬಣ್ಣದ ಪೈಪ್‌ ತೋರಿಸಿದರು.‌

ಈ ತಾಲೂಕಿನಲ್ಲಿ ನೀರಿನ ಸಮಸ್ಯೆ ಇರುವ ಗ್ರಾಮಗಳು ಅನೇಕ ಇವೆ. ಆದರೆ, ಈ ಊರಿನ ಪ್ರತಿಯೊಬ್ಬರೂ ಖರೀದಿ ನೀರಿನ ಮೇಲೆ ಅವಲಂಬಿತರಾಗಿದ್ದಾರೆ ಎಂಬ ಮಾತು ನಮ್ಮನ್ನು ಆಘಾತಕ್ಕೀಡುಮಾಡಿತು. ಹಾಗೇ ಗ್ರಾಮದ ವಿವಿಧ ಬಡಾವಣೆಯಲ್ಲಿ ಸುಮ್ಮನೆ ಹೆಜ್ಜೆ ಹಾಕಿದಾಗ ಎಲ್ಲರ ಬಾಯಲ್ಲೂ ʼನೀರಿನ ದಾಹʼ ಎದ್ದು ಕಾಣುತ್ತಿತ್ತು.

ಪ್ರತಿ ಮನೆಗೂ ಖರೀದಿ ನೀರಿನ ಪೈಪ್‌ ಜೋತು ಬಿದ್ದಿರುವುದನ್ನು ಕಂಡ ನನಗೆ, ʼಮನೆ-ಮನೆಗೆ ಗಂಗೆʼ ಎಂಬ ಯೋಜನೆ ನಿರೀಕ್ಷೆಯಂತೆ ಸಾಕಾರಗೊಳ್ಳದ ಹಿನ್ನೆಲೆ ಜನರೇ ತಮ್ಮ ಸ್ವಂತ ಹಣ ಖರ್ಚು ಮಾಡಿ ಅದರ ಪರ್ಯಾಯವೆಂಬಂತೆ ತಾತ್ಕಾಲಿಕವಾಗಿ ಯೋಜನೆ ರೂಪಿಸಿಕೊಂಡಿದ್ದಾರೆಯೇʼ ಎನ್ನುವಂತಾಗಿತು.

ತುಂಬಾ ಕುತೂಹಲ, ಅಷ್ಟೇ ಅಚ್ಚರಿ ಮೂಡಿಸಿದಕ್ಕೆ ಇನ್ನೊಂದು ಗಲ್ಲಿ ಪ್ರವೇಶಿಸಿದೆ. ಅಲ್ಲೊಬ್ಬ ಯುವ ತರುಣ ಸೋರುವ ನೀರಿನ ಪೈಪ್‌ ಜೋಡಿಸುತ್ತಿದ್ದ. ಅವರನ್ನು ಮಾತಾಡಿಸಲು ಪ್ರಯತ್ನಿಸಿ, ʼಇದು ಖರೀದಿ ನೀರಿನ ಪೈಪಾ? ಎಂದೆ.

ಒಂದೇ ಮಾತಲ್ಲಿ ʼಹೌದುʼ ಎಂದು ಉತ್ತರಿಸಿ, ನನ್ನತ್ತ ಕಣ್ಣೆತ್ತಿಯೂ ನೋಡಲಿಲ್ಲ. ʼಎಲ್ಲರೂ ಬಂದು ಬರೀ ಕೇಳೋರೇ ಹರಾ, ಯಾರೊಬ್ಬರೂ ನಮ್ಮ ಗೋಳು ಕೇಳಲ್ಲ, ಉದ್ದಾರ ಮಾಡಲ್ಲ. ಎಲ್ಲರ ಹ್ಹಾಂಗ್ ಇವರೊಬ್ಬರುʼ ಎಂದುಕೊಂಡಿರಬೇಕು ಎಂದು ನಾನು ಮರುಮಾತನಾಡದೆ ಅಲ್ಲಿಂದೆ ಬೇರೆಡೆ ಹೋದೆ.

ಆ ಊರಿನ ಯಾರೊಬ್ಬರಿಗೂ ʼನೀರಿನʼ ಬಗ್ಗೆ ಕೇಳಿದರೂ ʼಸಗಳ್ಯಾಚಾ ಘರಾಲಾ ಪಾನಿ ಖರೀದಿ ಆಹೇʼ (ಎಲ್ಲರ ಮನೆಗೂ ಖರೀದಿ ನೀರೇ ಅವಾ) ಎಂದು ಮರಾಠಿ-ಕನ್ನಡ ಮಿಶ್ರಿತ ಭಾಷೆಯಲ್ಲಿ ಉತ್ತರಿಸುವುದು ಬಿಟ್ಟರೆ ಬೇರೇನು ಹೇಳಲ್ಲ.‌

ʼನಾವು ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೇ ಇರೋದು, ವಯಸ್ಸಾಗಿದೆ. ಆದರೆ, ವರ್ಷಕ್ಕೆ ₹5 ಸಾವಿರ ನೀರಿಗೆ ಕೊಡಲೇಬೇಕು. ಹಣ ಕೊಟ್ಟು ನೀರು ಖರೀದಿಸದೇ ಬೇರೆ ದಾರಿಯಿಲ್ಲ. ಕೆಲಸ ಮಾಡಲು ಮೈಯಲ್ಲಿ ಶಕ್ತಿಯಿಲ್ಲ, ಆರೋಗ್ಯ ಕೈಕೊಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲದಕ್ಕೂ ಹಣ ಎಲ್ಲಿಂದ ತರೋದುʼ ಎಂದು ಬೀಜಾನಬಿ ಖಿನ್ನ ಮುಖಭಾವದೊಂದಿಗೆ ಹೇಳಿದರು.

WhatsApp Image 2026 03 23 at 6.16.47 PM
ಖಾಸಗಿಯವರಿಂದ ಪಡೆದ ಖರೀದಿ ನೀರಿನ ಪೈಪ್‌ ಸರಿಪಡಿಸುತ್ತಿರುವ ಗ್ರಾಮದ ಯುವಕ

ಗ್ರಾಮದ ಹಿರಿಯರಾದ ವೆಂಕಟರಾವ್‌ ಎಂಬುವರಿಗೆ ʼಯಾರ ಬಳಿ ನೀರು ಖರೀದಿಸುತ್ತೀರಾ? ಎಂದು ಕೇಳಿದೆ.

ʼಊರಿನ ಸಮೀಪದ ತೋಟದಲ್ಲಿ ಖಾಸಗಿಯವರ ಬೋರ್‌ವೆಲ್ ಇವೆ. ನಾವೇ ಪೈಪ್‌ ಖರೀದಿಸಿ ಕನೆಕ್ಸನ್‌ ತಕೊಂಡಿವಿ, ಊರಿನ ಅರ್ಧಕ್ಕಿಂತ ಹೆಚ್ಚು ಜನರ ಮನೆಗೆ ಇದೇ ರೀತಿ ಖರೀದಿ ನೀರಿನ ಪೈಪ್‌ಲೈನ್ ಇದೆ. ವರ್ಷಕ್ಕೆ ಐದು ಸಾವಿರ ಒಮ್ಮೆಲೇ ಕೊಡ್ತೀವಿ. ಪ್ರತಿದಿನ ನೀರು ಹರಿಸುತ್ತಾರೆ. ಇನ್ನು ಕುಟುಂಬದಲ್ಲಿ ಹೆಚ್ಚು ಜನರಿದ್ದರೆ ವರ್ಷಕ್ಕೆ ₹7-8 ಸಾವಿರ ತಕೋತಾರೆ. ಒಬ್ಬೊಬ್ಬ ಖಾಸಗಿ ಬೋರ್‌ವೆಲ್ ಅವರು ಕನಿಷ್ಠ 50ಕ್ಕಿಂತ ಹೆಚ್ಚು ಮನೆಗಳಿಗೆ ಖರೀದಿ ನೀರು ಕೊಟ್ಟಿದ್ದಾರೆʼ ಎಂದು ಒಂದೇ ಮಾತಿನಲ್ಲಿ ಹೇಳಿಬಿಟ್ಟರು.

ʼಮತ್ತೆ ನಿಮ್ಮೂರು ಗ್ರಾಮ ಪಂಚಾಯತ್‌ ಕೇಂದ್ರ, ಇಷ್ಟು ದೊಡ್ಡ ಊರಿಗೆ ನೀರಿಲ್ಲಂದ್ರೆ ಹೇಗೆ?ʼ ಎಂದೆ. ಅದಕ್ಕೆ ʼದೊಡ್ಡ ಪಂಚಾಯತ್‌ ಇದ್ರೆ ಏನ್‌ ಬಂತು. ಊರಲ್ಲಿ 9 ಜನ ಗ್ರಾಮ ಪಂಚಾಯತ್‌ ಸದಸ್ಯರಿದ್ದಾರೆ. 500ಕ್ಕೂ ಅಧಿಕ ಕುಟುಂಬಗಳಿವೆ. ಆದರೆ, ನೀರಿನ ಸಮಸ್ಯೆ ಬಗ್ಗೆ ಯಾರೊಬ್ಬರಿಗೂ ಕಾಳಜಿ ಇಲ್ಲ. ಗ್ರಾಮದ ಶೇ 70ಕ್ಕೂ ಅಧಿಕ ಮನೆಗಳಿಗೆ ಖರೀದಿ ನೀರಿನ ಪೂರೈಕೆಯಿದೆ. ಈ ಹಿಂದೆ ವರ್ಷಕ್ಕೆ ₹5 ಸಾವಿರ ಇತ್ತು. ಈಗ ₹1 ಸಾವಿರ ಹೆಚ್ಚು ಕೊಡಬೇಕೆಂಬ ಬೇಡಿಕೆಯಿಟ್ಟಿದ್ದಾರೆʼ ಎಂದು ಬೇಸರದಿಂದ ಹೇಳಿದರು.

ʼಇಡೀ ಗ್ರಾಮದಲ್ಲಿ ಸುಮಾರು 6-7 ಸಾವಿರ ಜನಸಂಖ್ಯೆ ಇದೆ. ಮೂರ್ನಾಲ್ಕು ವರ್ಷಗಳ ಹಿಂದೆ ‌ಜಲ ಜೀವನ್ ಮಿಷನ್‌ ಯೋಜನೆ ಅಡಿಯಲ್ಲಿ 696 ಮನೆಗಳಿಗೆ ನಲ್ಲಿಗಳನ್ನು ಹಾಕಲಾಗಿದೆ.‌ ಕೆಲಸ ಪೂರ್ಣಗೊಂಡಿರುವ ಬಗ್ಗೆ ಅಧಿಕೃತ ದಾಖಲೆ ಹೇಳುತ್ತಿವೆ. ಆದರೆ, ಆ ನಲ್ಲಿಗಳಿಗೆ ಹನಿ ನೀರು ಬಾರದೆ ಹಾಳಾಗುತ್ತಿವೆ. ಅಧಿಕಾರಿಗಳು ನೀರಿನ ವ್ಯವಸ್ಥೆ ಮಾಡುವುದಿಲ್ಲ ಎಂದು ಬೇಸತ್ತ ಜನ ಕೊನೆಗೆ ಸ್ವಂತ ದುಡ್ಡಿನಿಂದಲೇ ನೀರು ಖರೀದಿಸುವುದು ಈಗ ಸಾಮಾನ್ಯವಾಗಿದೆ. ಗ್ರಾಮದ ಪ್ರತಿಯೊಬ್ಬರು ಖರೀದಿ ನೀರಿನ ಪರ್ಯಾಯ ಮಾರ್ಗ ಹುಡುಕಿಕೊಂಡಿರುವ ಕಾರಣಕ್ಕೆ ಅಧಿಕಾರಿಗಳಿಗೆ ಈ ಊರಿನ ನೀರಿನ ಸಮಸ್ಯೆ ಕಾಣುವುದಿಲ್ಲ. ಕೂಡಲೇ ಜೆಜೆಎಂ ಕಾಮಗಾರಿ ಪೂರ್ಣಗೊಳಿಸಬೇಕು. ಅಲ್ಲಿಯವರೆಗೆ ಪಂಚಾಯತ್‌ ಸುಪರ್ದಿಗೆ ತೆಗೆದುಕೊಳ್ಳಬಾರದುʼ ಎನ್ನುತ್ತಾರೆ ಗ್ರಾಮದ ಮುಖಂಡ ಬಾಲಾಜಿ ಪಾಟೀಲ್‌.

ಗ್ರಾಮದ ಹಿರಿಯರಾದ ವೈಜನಾಥ ಮುಚಳಂಬೆ ಅವರನ್ನು ಮಾತಿಗೆಳೆದಾಗ, “ನಮ್ಮೂರಲ್ಲಿ ಮನೆ-ಮನೆಗೂ ಖಾಸಗಿ ಬೋರ್‌ವೆಲ್ ದಿಂದ ಪಡೆದ ಖರೀದಿ ನೀರೇ ಗತಿಯಾಗಿದೆ. ಕ್ಷೇತ್ರದ ಶಾಸಕ ಪ್ರಭು ಚವ್ಹಾಣ ಅವರು ʼನಿಮ್ಮೂರಿಗೆ ನೀರು ಕೊಡಿಸುವರೆಗೂ ಊರಿಗೆ ಬರುವುದಿಲ್ಲʼ ಎರಡು ಬಾರಿ ವಾಗ್ದಾನ ಮಾಡಿದ್ದರು. ಆದರೆ, ನಾಲ್ಕು ಸಲ ಆಯ್ಕೆಯಾದರೂ ಇಲ್ಲಿಯವರೆಗೆ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಿಲ್ಲ. ಬಾವಲಗಾಂವ್‌ ಕೆರೆಯಿಂದ ನೀರು ತರುವ ಯೋಜನೆಯು ನಿರುಪಯುಕ್ತವಾಗಿದೆ. ಗ್ರಾಮ ಪಂಚಾಯತ್‌ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಲವು ಬಾರಿ ಹೇಳಿದರೂ ಸ್ಪಂದಿಸುತ್ತಿಲ್ಲ” ಎಂದು ಆಕ್ರೋಶ ಹೊರಹಾಕಿದರು.

WhatsApp Image 2026 03 23 at 6.16.49 PM
ಹನಿ ನೀರು ಹೊರಹಾಕದ ಜೆಜೆಎಂ ನಲ್ಲಿ ತುಕ್ಕು ಹಿಡಿಯುತ್ತಿದೆ.

ಪ್ರತಿವರ್ಷ ಔರಾದ್‌ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗಾಗಿ ಆಹಾಕಾರ ಎದುರಾಗುತ್ತದೆ.‌ ಜನ ದೂರದಿಂದ ತಲೆ ಮೇಲೆ ನೀರು ಹೊತ್ತು ತರುವುದು ಪರಿಸ್ಥಿತಿ ಇದ್ದೇ ಇದೆ. ಅಧಿಕಾರಿಗಳು ಅಂತಹ ಊರು-ತಾಂಡಾಗಳನ್ನು ಗುರುತಿಸಿ ಎರಡ್ಮೂರು ತಿಂಗಳ ಮಟ್ಟಿಗೆ ಬಾಡಿಗೆ ಪಡೆದ ಖಾಸಗಿ ಬಾವಿ-ಬೋರ್‌ವೆಲ್ ನೀರು, ಅದೂ ಇಲ್ಲದಿದ್ದರೆ ಟ್ಯಾಂಕರ್‌ ಮೂಲಕ ನೀರು ಪೂರೈಸುವುದು ರೂಢಿಯಾಗಿದೆ. ಜನರೂ ಅದನ್ನು ಮಾಮೂಲಿ ಎಂಬಂತೆ ಗಂಭೀರವಾಗಿ ಪರಿಗಣಿಸದೇ ತಮ್ಮ ಆಕ್ರೋಶವನ್ನು ಮೌನವಾಗಿ ನುಂಗುತ್ತಿದ್ದಾರೆ.

ಗ್ರಾಮ ಪಂಚಾಯತ್‌ ಕೇಂದ್ರ, ಸರ್ಕಾರಿ ಪ್ರೌಢ ಶಾಲೆ, ಪೊಲೀಸ್‌ ಠಾಣೆ ಇರುವ ಹೊಕ್ರಾಣ ಆ ಭಾಗದ ದೊಡ್ಡ ಊರುಗಳಲ್ಲಿ ಒಂದು. ʼಎಲ್ಲಾ ಇದ್ದರೂ ಏನೂ ಇಲ್ಲʼ ಎಂಬಂತೆ ಗ್ರಾಮದಲ್ಲಿ ಕಳೆದ ಹತ್ತು ವರ್ಷಗಳಿಂದ ಜನರಿಗೆ ಕುಡಿಯುವ ನೀರಿನ ತತ್ವಾರಕ್ಕೆ ಶಾಶ್ವತ ಪರಿಹಾರ ಇಲ್ಲದಂತೆ ಆಗಿದೆ.‌ ಈ ಸಮಸ್ಯೆಗೆ ಅಂತ್ಯ ಹಾಡಲು ಸ್ಥಳೀಯ ಜನಪ್ರತಿನಿಧಿಗಳಿಂದಲೂ ‌ಸಾಧ್ಯವಾಗಿಲ್ಲವೇ ಎಂಬುದು ಪ್ರಜ್ಞಾವಂತರ ಪ್ರಶ್ನೆ.

ನೀರಿನ ಸಮಸ್ಯೆ ಸಂಬಂಧ ಔರಾದ್‌ ತಾಲೂಕು ಪಂಚಾಯತ್‌ ವ್ಯಾಪ್ತಿಯಲ್ಲಿ ಬರುವ ಎಲ್ಲ ಪಂಚಾಯತ್‌ಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಆದರೆ, ಈ ಬಗ್ಗೆ ಹೊಕ್ರಾಣಾ ಗ್ರಾಮ ಪಂಚಾಯತ್‌ ಪಿಡಿಒ ಕೃಷ್ಣಪ್ಪ ಅವರನ್ನು ಮಾಹಿತಿಗಾಗಿ ʼಈದಿನʼ ಕರೆ ಮಾಡಿದರೆ ಅವರು ಸ್ಪಂದಿಸಿರುವುದಿಲ್ಲ.

ಈ ಬಗ್ಗೆ ಔರಾದ್‌ ತಾಲೂಕು ಪಂಚಾಯತ್‌ ಇಒ ಕಿರಣ ಪಾಟೀಲ್‌ ಅವರನ್ನು ಕೇಳಿದಾಗ, ʼಹೊಕ್ರಾಣ ಗ್ರಾಮದ ನೀರಿನ ಸಮಸ್ಯೆ ಹಾಗೂ ಜಲ ಜೀವನ ಮಿಷನ್‌ ಯೋಜನೆ ಕುರಿತು ಮಾಹಿತಿ ಪಡೆಯುವೆʼ ಎಂದರು.

WhatsApp Image 2026 03 24 at 11.50.17 AM

ಇದನ್ನೂ ಓದಿ : ಬೀದರ್‌ | ʼಜಲ ಜೀವನʼಕ್ಕೆ ಗ್ರಹಣ, ಹನಿ ನೀರಿಗೂ ತತ್ವಾರ; ಬೇಕಿದೆ ದೂರಗಾಮಿ ಪರಿಹಾರ-ಭಾಗ-1

ಯಾವುದೇ ಒಂದು ಸರ್ಕಾರಿ ಯೋಜನೆ ಕೇವಲ ಸಾಧನೆಯ ಪಟ್ಟಿಗೆ ಸೀಮಿತವಾಗದೆ, ಜನರ ಬದುಕಿನಲ್ಲಿ ಬದಲಾವಣೆ ತಂದಾಗ ಮಾತ್ರ ಅದಕ್ಕೆ ಸಾರ್ಥಕತೆ ದೊರೆಯುತ್ತದೆ. ‘ನಾಮ್‌ ಕಾವಾಸ್ತೆ’ (ಹೆಸರಿಗಷ್ಟೇ)ಗೆ ಜಾರಿಯಾಗುವ ಯೋಜನೆಗಳು ಸಾರ್ವಜನಿಕ ಹಣದ ಪೋಲಲ್ಲದೆ ಬೇರೇನೂ ಅಲ್ಲ. ಪ್ರಕೃತಿ ಮುನಿದಾಗ ಬರ, ಒಲಿದಾಗ ಪ್ರವಾಹ ಎಂಬ ಸ್ಥಿತಿ ನಿರ್ಮಾಣವಾಗಿದ್ದರೂ, ನೀರಿನ ತತ್ವಾರ ನೀಗದಿರುವುದು ನಮ್ಮ ಜಲ ನಿರ್ವಹಣೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.

ಊರಿನ ಸುತ್ತ ಕೆರೆ-ಕಟ್ಟೆಗಳಿದ್ದರೂ ಅವು ಬತ್ತಿ ಹೋಗುತ್ತಿವೆ ಎಂದರೆ, ನಾವು ಮಳೆನೀರನ್ನು ಹಿಡಿದಿಡುವ (Rainwater Harvesting) ಮತ್ತು ಅಂತರ್ಜಲ ಮರುಪೂರಣ ಮಾಡುವ ಮೂಲಭೂತ ಕೆಲಸಗಳಲ್ಲಿ ಎಡವುತ್ತಿದ್ದೇವೆ ಎಂದರ್ಥ. ಅಬ್ಬರದ ಪ್ರಚಾರದ ಯೋಜನೆಗಳಿಗಿಂತ, ನೆಲದ ಜಲ ಮೂಲಗಳನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನವನ್ನು ಜನಪ್ರತಿನಿಧಿಗಳು ಮಾಡಲೇಬೇಕಾಗಿದೆ.

– ನಿಮ್ಮ ಊರು, ನಗರ, ಪಟ್ಟಣದ ಕುಂದು-ಕೊರತೆಗಳ ಪೋಟೋ, ವಿಡಿಯೋ ಮಾಹಿತಿಯನ್ನು
ಈದಿನ.ಕಾಮ್ ನ್ಯೂಸ್ ಬೀದರ್ ಸಹಾಯವಾಣಿ 9035053805 ವಾಟ್ಸಪ್ ನಂಬರ್‌ಗೆ ಕಳುಹಿಸಿ.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ: 11 ಮಂದಿ ಬಲಿ, 30 ಜನರಿಗೆ ಗಾಯ

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶನಿವಾರ ನಡೆದ ಭೀಕರ ಆತ್ಮಾಹುತಿ ದಾಳಿಯಲ್ಲಿ...

KPSC ಹಗರಣ | ಅಮಾನತಿನಲ್ಲಿರುವ ಐಎಎಸ್‌ ಗಂಗ್ವಾರ್‌ಗೆ ಜಾಮೀನು ನಿರಾಕರಣೆ

KPSC (ಕರ್ನಾಟಕ ಲೋಕಸೇವಾ ಆಯೋಗ) ನಡೆಸಿದ ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ...

ಏಕಪಕ್ಷೀಯ ನಿರ್ಧಾರ ವಿವಾದದ ಬೆನ್ನಲ್ಲೇ ಸಭೆ: ಸರ್ವಮತದಿಂದ ತೀಮಾರ್ನಗಳ ತಗೆದುಕೊಂಡಿದ್ದು ಎಂದ ಇಸಿಐ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ...

ಮಂಗಳೂರು | ಕಾರಿಡಾರ್‌ ಗೋಡೆ ಕುಸಿದು ಐವರು ವಿದ್ಯಾರ್ಥಿಗಳಿಗೆ ಗಾಯ, ಓರ್ವ ಗಂಭೀರ

ಮಂಗಳೂರಿನ ಪಾಂಡೇಶ್ವರ ಸಮೀಪದ ಎಮ್ಮೆಕೆರೆ ಕ್ರಾಸ್ ಬಳಿಯ ರಾಮಲಕ್ಷ್ಮೀ ಹಾಲ್ ಸಭಾಭವನದಲ್ಲಿ...