ಬೆಂಗಳೂರಿನ ಪ್ರಿಡಂ ಪಾರ್ಕ್‌ನಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ನೇತ್ರತ್ವದಲ್ಲಿ ಜುಲೈ 3ರಂದು ದಲಿತ ಜನಾಗೃಹ ಸಮಾವೇಶ ಆಯೋಜಿಸಲಾಗಿದೆ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ರಮೇಶ ಡಾಕುಳಗಿ ತಿಳಿಸಿದ್ದಾರೆ.
ಹುಮನಾಬಾದ್ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಮಾವೇಶದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ, “ಭೂಮಿ, ವಸತಿ, ಬ್ಯಾಕ್‌ಲಾಗ್, ಉದ್ಯೋಗ ಅವಕಾಶ, ಏಕ್ ಗವಾಕ್ಷಿ ನೀತಿ, ವಿಶೇಷ ಘಟಕ ಯೋಜನೆ, ಬೌದ್ಧ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ಅನುದಾನ ಬೇಡಿಕೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಮಾವೇಶ ಆಯೋಜಿಸಲಾಗಿದೆ” ಎಂದರು.
ತಾಲೂಕು ಅಧ್ಯಕ್ಷ ರಾಹುಲ ಉದ್ದಾ ಮಾತನಾಡಿ, “ಸರ್ಕಾರದ ನಿಷ್ಕಾಳಜಿ ಖಂಡಿಸಿ ದಲಿತರ ಸಮಗ್ರ ಸಬಲೀಕರಣಕ್ಕೆ ಆಯೋಜಿಸಿರುವ ದಲಿತ ಜನಾಗೃಹ ಸಮಾವೇಶಕ್ಕೆ ಬೀದರ್ ಜಿಲ್ಲೆಯಿಂದ 2-3 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಸಮಾವೇಶದಲ್ಲಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು” ಎಂದು ಮನವಿ ಮಾಡಿದರು.
ಇದನ್ನೂ ಓದಿ : ಬೀದರ್ | ಶಿಕ್ಷಕರಿಗೆ ಟಿಇಟಿ ಕಡ್ಡಾಯ: ರಾಜ್ಯ ಸರ್ಕಾರ ಮಧ್ಯಸ್ಥಿಕೆ ವಹಿಸಲಿ
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ರಮೇಶ ಮಂದಕನಳ್ಳಿ, ಮಲ್ಲಿಕಾರ್ಜುನ ಶರ್ಮಾ, ವಿಠಲ್ ಲಾಡಕರ್, ಸುಧಾಕರ ಸಿಂಧೆ, ವಿನೋದ ಮೇಲ್ಕೇರಿ, ಶ್ರೀನಿವಾಸ ಕಟ್ಟಿಮನಿ, ಮೋಹನ ಬೀರನಳ್ಳಿ, ಆನಂದ ಮಾಸಿಮಾಡೆ, ಈಶ್ವರ ಮೇಲ್ಕೇರಿ, ಈಶ್ವರ, ರಾಮ ದಂಡೆ ಸೇರಿದಂತೆ ಅನೇಕರಿದ್ದರು.




