ಡಾ. ಎಂ.ಎಸ್.ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು ಹಾಗೂ ಪ್ರತಿ ಟನ್ ಕಬ್ಬಿಗೆ ಎಫ್ಆರ್ಪಿ ₹5000 ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಹುಮನಾಬಾದ್ನಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.
ಬೀದರ್ ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಹಲವು ಬಾರಿ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬಿಗೆ ಪ್ರತಿ ಟನ್ಗೆ ಎಫ್ಆರ್ಪಿ ₹5,500 ಬೆಲೆ ನಿಗದಿಪಡಿಸಬೇಕು. ಸಕ್ಕರೆಗೆ ಪ್ರತಿ ಟನ್ಗೆ ₹6,000 ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಘೋಷಿಸಬೇಕು. ಬರಗಾಲದಿಂದ ಸಂಕಷ್ಟಕ್ಕೀಡಾದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಬೆಳೆ ನಷ್ಟಕ್ಕೆ ಪ್ರತಿ ಹೆಕ್ಟೇರ್ಗೆ ₹50,000 ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ನೀರಾವರಿ ಪಂಪ್ಸೆಟ್ಗಳಿಗೆ ಹಗಲಿನ ವೇಳೆಯಲ್ಲಿ 10 ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಸಬೇಕು. 2026ನೇ ಸಾಲಿನಲ್ಲಿ ಬೆಳೆ ವಿಮೆ ಪಾವತಿಸಿದ ರೈತರ ಖಾತೆಗಳಿಗೆ ವಿಮೆ ಹಣವನ್ನು ಸಮರ್ಪಕವಾಗಿ ಜಮೆ ಮಾಡಬೇಕು. ಕಾಡುಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸಲು ರೈತರಿಗೆ ಶೇ 90ರಷ್ಟು ರಿಯಾಯಿತಿಯಲ್ಲಿ ಸೋಲಾರ್ ಬೇಲಿ ಅಳವಡಿಸಿಕೊಡಬೇಕು. ಕೇಂದ್ರ ಸರ್ಕಾರ ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ರೈತರ ವಿವಿಧ ಬೇಡಿಕೆಗಳನ್ನು ಒಂದು ವಾರದೊಳಗೆ ಈಡೇರಿಸಬೇಕು. ಇಲ್ಲವಾದಲ್ಲಿ ಬೀದರ್ ಜಿಲ್ಲಾದ್ಯಂತ ರಸ್ತೆ ತಡೆ ನಡೆಸಿ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳು ಬರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದರು. ಸಂಜೆ 6 ಗಂಟೆ ಸುಮಾರಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ ಮನವಿ ಪತ್ರ ಸ್ವೀಕರಿಸಿದ ಬಳಿಕ ಧರಣಿ ಹಿಂಪಡೆದರು.

ಇದನ್ನೂ ಓದಿ : ಬೀದರ್ | ನ.28, 29ರಂದು 47ನೇ ಶರಣ ಕಮ್ಮಟ, ಅನುಭವಮಂಟಪ ಉತ್ಸವ
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿರಾದಾರ, ಯುವ ಕ್ರಾಂತಿಯ ರಾಜ್ಯ ಸಂಚಾಲಕ ಗುಂಡುರೆಡ್ಡಿ, ಭಾರತೀಯ ಕಿಸಾನ್ ಮೋರ್ಚಾ ಮುಖಂಡ ಬಾಬುರಾವ ಹೊನ್ನಾ, ರೈತ ಮುಖಂಡರಾದ ಕಿರಣ ಖಂಡ್ರೆ, ವೀರಾರೆಡ್ಡಿ ಪಾಟೀಲ್, ವಿಶ್ವನಾಥ ಧರಣೆ, ಶಿವರಾಜ ಪಾಟೀಲ್ ಅತಿವಾಳ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಖಾಸೀಂ ಅಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಗುದಗೆ, ಬಸವಕಲ್ಯಾಣ ತಾಲೂಕಾಧ್ಯಕ್ಷ ರುದ್ರಯ್ಯಾ ಸ್ವಾಮಿ, ಹುಮನಾಬಾದ್ ತಾಲೂಕಾಧ್ಯಕ್ಷ ಮೋಖಿಂ ನಂದಗಾಂವ್, ಅನೀಲ ಮರಪಳ್ಳೆ, ಭೀಮರೆಡ್ಡಿ ಸಿಂಧನಕೇರಾ, ಅರವಿಂದ ಜೋಗಿರೆ, ಎಂ.ಡಿ.ಶಫಾಯತ್ ಅಲಿ, ನಜೀರ್ ಮಿಯ್ಯಾ, ಖಾಸೀಂ ಸಾಬ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.





