ಪ್ರಯಾಣಿಕರ ಸೌಕರ್ಯ ಮತ್ತು ಸುರಕ್ಷತೆಗೆ ಒತ್ತು ನೀಡುವುದು ಯಾವುದೇ ಅಭಿವೃದ್ಧಿ ಯೋಜನೆಯ ಮೂಲ ಉದ್ದೇಶವಾಗಬೇಕು. ಇಂತಹ ಸಮಸ್ಯೆಗಳನ್ನು ಬಗೆಹರಿಸಿದರೆ, ಸಾವಿರಾರು ಪ್ರಯಾಣಿಕರ ದೈನಂದಿನ ಓಡಾಟಕ್ಕೆ ಸುಲಭವಾಗುತ್ತದೆ. ಹಾಗಾಗಿ ಆಡಳಿತದ ತ್ವರಿತ ಹಸ್ತಕ್ಷೇಪದಿಂದ ಬಸ್ ನಿಲ್ದಾಣಗಳ ಸಮಸ್ಯೆ ಬಗೆಹರಿಸಬೇಕೆಂದು ಜನರು ನಿರೀಕ್ಷಿಸುತ್ತಿದ್ದಾರೆ.
ಬೀದರ್ ಜಿಲ್ಲಾ ಕೇಂದ್ರದಿಂದ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಔರಾದ್-ಬೀದರ್ ರಾಷ್ಟ್ರೀಯ ಹೆದ್ದಾರಿ-161(ಎ)ಯಲ್ಲಿ ಬಸ್ ನಿಲ್ದಾಣಗಳಿಲ್ಲದೆ ಜನರು ಉರಿಬಿಸಿಲಿನಲ್ಲಿ ರಸ್ತೆ ಬದಿಯಲ್ಲೇ ನಿಂತು ಬಸ್ಸಿಗಾಗಿ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.
ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಔರಾದ-ಬೀದರ್ ಅಷ್ಟೇ ಅಲ್ಲದೆ, ಮಹಾರಾಷ್ಟ್ರ, ತೆಲಂಗಾಣದ ಗಡಿ ಗ್ರಾಮಗಳ ಜನರು ನಿತ್ಯ ಓಡಾಡುವ ಮುಖ್ಯ ರಸ್ತೆ ಇದಾಗಿದೆ. ದೂರದ ಊರು, ನಗರಗಳಿಗೆ ಸಂಚರಿಸುವವರು ತಂಗುದಾಣ ಇಲ್ಲದ ರಸ್ತೆ ಪಕ್ಕದ ಸರ್ವೀಸ್ ಡಿವೈಡರ್ ಮೇಲೆ ಕುಳಿತುಕೊಳ್ಳುತ್ತಿದ್ದಾರೆ. ಮಳೆ, ಬಿಸಿಲಿನಿಂದ ರಕ್ಷಿಸಿಕೊಳ್ಳಲು ರಸ್ತೆ ಪಕ್ಕದ ಅಂಗಡಿ, ಕಾಂಪ್ಲೆಕ್ಸ್‌ಗಲನ್ನು ಆಶ್ರಯಿಸಬೇಕಿದೆ.
ಜಿಲ್ಲೆಯಲ್ಲಿ ಕೆಲ ದಿನಗಳಿಂದ ಬೇಸಿಗೆಯ ಬಿಸಿಲು 40 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದೆ. ಬಿಸಿಲಿನ ತೀವ್ರತೆಯಿಂದ ಜನರು ರಸ್ತೆಗಿಳಿಯಲು ಯೋಚಿಸುತ್ತಿದ್ದಾರೆ. ಬೈಕ್ ಮೇಲೆ ಹೊರಗಡೆ ಓಡಾಡಲು ಸಾಧ್ಯವಾಗದ ಜನರು ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುವುದು ಸಾಮಾನ್ಯವಾಗಿದೆ. ಆದರೆ, ಬಸ್ ತಂಗುದಾಣಗಳಿಲ್ಲದೆ ವಾಹನಗಳಿಗಾಗಿ ಕಾಯುವ ವಿದ್ಯಾರ್ಥಿಗಳು, ಜನರು ಪರದಾಡುತ್ತಿದ್ದಾರೆ.
ಸುಮಾರು 40 ಕಿಮೀ ದೂರದ ಬೀದರ್-ಔರಾದ್ ಹೆದ್ದಾರಿಯಲ್ಲಿ ಮರಖಲ್, ಜನವಾಡ, ಕೌಠಾ(ಬಿ), ಕೌಠಾ(ಕೆ), ಬಲ್ಲೂರ(ಜೆ), ಕೌಡಗಾಂವ್, ಮುಸ್ತಾಪುರ, ಶೆಂಬೆಳ್ಳಿ, ಜೀರ್ಗಾ(ಬಿ) ಕ್ರಾಸ್, ಸಂತಪೂರ, ಜೊನ್ನೆಕೇರಿ, ಎಕಲಾರ ತಾಂಡಾ ಕ್ರಾಸ್, ಬೋರಾಳ ಸೇರಿದಂತೆ 10ಕ್ಕೂ ಅಧಿಕ ಗ್ರಾಮಗಳಿವೆ. ಈ ಎಲ್ಲ ಗ್ರಾಮಗಳ ಸಮೀಪದ ಕ್ರಾಸ್ ಬಳಿ ಬಸ್ ನಿಲುಗಡೆ ಇದೆ. ಆದರೆ, ಬಸ್ ತಂಗುದಾಣಗಳಿಲ್ಲದ ಕಾರಣ ಪ್ರಯಾಣಿಕರು ರಸ್ತೆ ಬದಿಯೇ ನಿಲ್ಲಬೇಕಾದ ಸ್ಥಿತಿ ಇದೆ.
ಈ ಹೆದ್ದಾರಿಯಲ್ಲಿ ಕೆಲ ವರ್ಷಗಳ ಹಿಂದೆ ಕೌಡಗಾಂವ್ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಇಲಾಖೆಯಿಂದ ನಿರ್ಮಿಸಿರುವ ಬಸ್ ನಿಲ್ದಾಣ ಬಿಟ್ಟರೆ ಉಳಿದ ಯಾವುದೇ ಗ್ರಾಮಗಳ ಸಮೀಪ ಬಸ್ ನಿಲ್ದಾಣಗಳಿಲ್ಲ. ಇನ್ನು ಸಂತಪೂರ ಹೊರವಲಯದಲ್ಲಿ ದಶಕದ ಹಿಂದೆ ನಿರ್ಮಿಸಲಾದ ಬಸ್ ನಿಲ್ದಾಣ ಬಸ್-ಪ್ರಯಾಣಿಕರಿಂದ ದೂರವಾಗಿ ಇದ್ದು ಇಲ್ಲದಂತಾಗಿದೆ, ಅದು ಪಾಳುಬಿದ್ದ ಸ್ಥಿತಿಯಲ್ಲಿದೆ.
ಪ್ರತಿ ದಿನ ಅಪಾರ ಸಂಖ್ಯೆಯಲ್ಲಿ ಉದ್ಯೋಗ, ಸರ್ಕಾರಿ ಕೆಲಸಕ್ಕೆ ಹೋಗುವವರು, ಶಾಲಾ–ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಬೇಸಿಗೆ ಬಿಸಿಲಿಗೆ, ಮಳೆಗಾಲದಲ್ಲಿ ಮಳೆಗೆ ನೆನೆದುಕೊಂಡು, ಮೈಕೊರೆಯುವ ಚಳಿಯಲ್ಲಿ ರಸ್ತೆ ಮೇಲೆ ನಿಂತು ವಾಹನಗಳಿಗೆ ಕಾಯುವುದು ಅನಿವಾರ್ಯ ಉಂಟಾಗಿದೆ.

ಕೋಟ್ಯಂತರ ವೆಚ್ಚದಿಂದ ಚಂದದ ಹೆದ್ದಾರಿ ರಸ್ತೆ ನಿರ್ಮಾಣ ಆಗಿದೆ.ಆದರೆ, ಅಧಿಕಾರಿಗಳು ಪ್ರಯಾಣಿಕರ ಸುರಕ್ಷತೆಗಾಗಿ ಒಂದೇ ಒಂದು ಬಸ್ ನಿಲ್ದಾಣ ನಿರ್ಮಿಸುವ ಗೋಜಿಗೆ ಹೋಗಿಲ್ಲ. ಈ ಹೆದ್ದಾರಿಯಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿಗಳಾಗಲಿ, ತಾಲೂಕು ಆಡಳಿತವಾಗಲಿ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಾಗಲಿ ಇತ್ತ ಗಮನ ಹರಿಸಿಲ್ಲ. ಶಾಸಕರು ಕೂಡ ತಮ್ಮ ಕ್ಷೇತ್ರದ ಅಭಿವೃದ್ಧಿ ಅನುದಾನದಲ್ಲಿ ತಂಗುದಾಣ ನಿರ್ಮಿಸಲು ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ಆರೋಪ.
ಆಶ್ರಯಕ್ಕೆ ಗಿಡ-ಮರಗಳಿಲ್ಲ
ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿ ವರ್ಷ ಕಳೆಯಿತು. ಹೆದ್ದಾರಿ ಕಾಮಗಾರಿ ವೇಳೆ ರಸ್ತೆಯ ಎರಡು ಬದಿಯಲ್ಲಿರುವ ಸಾವಿರಾರು ಗಿಡ-ಮರಗಳನ್ನು ನಾಶಪಡಿಸಲಾಗಿದೆ. ಜನರ ಓಡಾಟಕ್ಕೆ ರಸ್ತೆ ಜಬರದಸ್ತ್ ಆಗಿ ನಿರ್ಮಾಣಗೊಂಡರೂ ಈ ಹೆದ್ದಾರಿಯಲ್ಲಿ ಓಡಾಡುವ ಜನರು ಒಂದಿಷ್ಟು ವಿಶ್ರಾಂತಿ ಪಡೆಯಬೇಕೆಂದರೂ ಕಣ್ಣಿಗೆ ಒಂದೇ ಒಂದು ಗಿಡ-ಮರ ಕಾಣುವುದಿಲ್ಲ. ರಸ್ತೆ ಪೂರ್ಣಗೊಂಡ ಬಳಿಕ ಅರಣ್ಯ ಇಲಾಖೆಯಿಂದ ಕೆಲವು ಕಡೆ ನೆಡಲಾದ ಸಸಿಗಳು ನೆಲಬಿಟ್ಟು ಮೇಲೆದ್ದಿಲ್ಲ. ತಂಗುದಾಣಗಳಿಲ್ಲದ, ಗಿಡ-ಮರಗಳಿಲ್ಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಕರು, ವಾಹನ ಸವಾರರು ನಿತ್ಯ ಆಶ್ರಯಕ್ಕಾಗಿ ಪರದಾಡುತ್ತಿದ್ದಾರೆ.
ಈ ಹೆದ್ದಾರಿಯಲ್ಲಿ ಜನವಾಡ ಹಾಗೂ ಸಂತಪೂರ ದೊಡ್ಡ ಹೋಬಳಿ ಕೇಂದ್ರಗಳಿವೆ. ನಾಡಕಚೇರಿ, ಆಸ್ಪತ್ರೆ, ಶಾಲಾ ಕಾಲೇಜುಗಳಿಗೆ ನಿತ್ಯ ನೂರಾರು ಜನರು ಆಗಮಿಸುತ್ತಾರೆ. ಆದರೆ, ಈ ಗ್ರಾಮಗಳಿಗೆ ಬಂದು ಹೋಗುವ ಜನರ ಆಶ್ರಯಕ್ಕೆ ಕನಿಷ್ಠ ಬಸ್ ನಿಲ್ದಾಣ ಇಲ್ಲದೆ ರಸ್ತೆಯೇ ಗತಿ ಎಂಬಂತಾಗಿದೆ.
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಈ ದಿನ.ಕಾಮ್ ಜತೆಗೆ ಮಾತನಾಡಿ, “ರಾಷ್ಟ್ರೀಯ ಹೆದ್ದಾರಿಯಲ್ಲಿ ತಂಗುದಾಣ ಇಲ್ಲದೆ ಪ್ರಯಾಣಿಕರು ತೊಂದರೆ ಅನುಭವಿಸುತ್ತಿರುವುದು ವಿಪರ್ಯಾಸ. ಸ್ಥಳೀಯ ಜನಪ್ರತಿನಿಧಿಗಳು ಇದನ್ನು ನಿರೀಕ್ಷಿಸಿದ್ದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಈ ಬಗ್ಗೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗುವುದು” ಎಂದು ತಿಳಿಸಿದರು.
“ಬೀದರ್-ಔರಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ರಾಮೀಣ ಪ್ರದೇಶದ ಹಲವಾರು ಗ್ರಾಮಗಳ ಜನರು ಪ್ರಯಾಣಿಸುತ್ತಾರೆ. ಬಸ್ ಬರುವ ತನಕ ವಿರಮಿಸಲು ಮುಖ್ಯ ರಸ್ತೆಯಲ್ಲಿ ಬಸ್ ನಿಲ್ದಾಣಗಳಿಲ್ಲದೆ ರಸ್ತೆಯಲ್ಲೇ ನಿಲ್ಲಬೇಕಾದ ಪರಿಸ್ಥಿತಿ ಇದೆ. ಇನ್ನು ಮಹಿಳೆಯರು, ಪುಟ್ಟ ಮಕ್ಕಳು, ವೃದ್ಧರಿಗೆ ರಸ್ತೆಯಲ್ಲೇ ಕಾಯುವುದು ಸಾಧ್ಯವಾಗುತ್ತಿಲ್ಲ. ಕೂಡಲೇ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅಥವಾ ಇತರ ಯೋಜನೆಯಡಿ ಪ್ರತಿ ಗ್ರಾಮಗಳ ಬಳಿ ಸುಸಜ್ಜಿತ ಹೈಟೆಕ್ ಬಸ್ ತಂಗುದಾಣಗಳನ್ನು ನಿರ್ಮಿಸಬೇಕು” ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಕೆಕೆಆರ್‌ಟಿಸಿ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಂದ್ರ ಜಾಧವ್ ಈ ದಿನ.ಕಾಮ್ ಜತೆಗೆ ಮಾತನಾಡಿ,”ಬೀದರ್-ಔರಾದ್ ರಸ್ತೆಯಲ್ಲಿ ಕೌಡಗಾಂವ್ ಹಾಗೂ ಸಂತಪೂರನಲ್ಲಿ ನಮ್ಮ ಸಂಸ್ಥೆಯಿಂದ ನಿರ್ಮಿಸಲಾದ ಬಸ್ ನಿಲ್ದಾಣಗಳಿವೆ. ಸಂತಪೂರ ಪಟ್ಟಣದ ಹೊರವಲಯದಲ್ಲಿ ಇರುವ ಕಾರಣ ಜನರು ನಿಲ್ದಾಣಕ್ಕೆ ಹೋಗುತ್ತಿಲ್ಲ. ಉಳಿದ ಗ್ರಾಮಗಳಲ್ಲಿ ಬಸ್ ನಿಲ್ದಾಣ ನಿರ್ಮಿಸುವ ಬಗ್ಗೆ ಸಾರಿಗೆ ಸಾರಿಗೆ ಇಲಾಖೆಯಿಂದ ಪ್ರಯೋಜನೆ ಇಲ್ಲ. ನಿವೇಶನ ನೀಡಿದರೆ ಮಾಡಬಹುದುʼ ಎಂದು ತಿಳಿಸಿದರು.
ಇದನ್ನೂ ಓದಿದ್ದೀರಾ? ಅಲ್ಪಸಂಖ್ಯಾತರಿಗೆ ʼಪರ್ಯಾಯ ಪಕ್ಷವಿಲ್ಲʼವೆಂಬ ಭಾವನೆಯನ್ನು ಕಾಂಗ್ರೆಸ್ ಬದಲಾಯಿಸಿಕೊಳ್ಳಬೇಕು
ಈ ಮುಖ್ಯ ಹೆದ್ದಾರಿಯಲ್ಲಿ ಸುರಕ್ಷಿತ, ನೆರಳಿನೊಂದಿಗೆ ಬಸ್ ನಿಲ್ದಾಣಗಳ ನಿರ್ಮಾಣವು ಅತ್ಯಂತ ಅಗತ್ಯವಾಗಿದೆ. ಜಿಲ್ಲಾ ಆಡಳಿತ, ಕೆಕೆಆರ್‌ಡಿಬಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರವೇ ಬಸ್ ನಿಲ್ದಾಣಗಳನ್ನು ನಿರ್ಮಿಸಬೇಕು ಎಂದು ಪ್ರಯಾಣಿಕರ ಒತ್ತಾಯವಾಗಿದೆ.
ಪ್ರಯಾಣಿಕರ ಸೌಕರ್ಯ ಮತ್ತು ಸುರಕ್ಷತೆಗೆ ಒತ್ತು ನೀಡುವುದು ಯಾವುದೇ ಅಭಿವೃದ್ಧಿ ಯೋಜನೆಯ ಮೂಲ ಉದ್ದೇಶವಾಗಬೇಕು. ಇಂತಹ ಸಮಸ್ಯೆಗಳನ್ನು ಬಗೆಹರಿಸಿದರೆ, ಸಾವಿರಾರು ಪ್ರಯಾಣಿಕರ ದೈನಂದಿನ ಓಡಾಟಕ್ಕೆ ಸುಲಭವಾಗುತ್ತದೆ. ಹಾಗಾಗಿ ಆಡಳಿತದ ತ್ವರಿತ ಹಸ್ತಕ್ಷೇಪದಿಂದ ಸಮಸ್ಯೆ ಬಗೆಹರಿಸಬೇಕೆಂದು ಜನರು ನಿರೀಕ್ಷಿಸುತ್ತಿದ್ದಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.



