ಪತ್ರಕರ್ತರು ಯಾವುದೇ ಭಯ, ಒತ್ತಡಗಳಿಗೆ ಮಣಿಯದೆ ನಿಷ್ಪಕ್ಷಪಾತ, ನಿರ್ಭೀತ ಹಾಗೂ ಸತ್ಯನಿಷ್ಠೆಯಿಂದ ವಾಸ್ತವಾಂಶಗಳನ್ನು ಜನರಿಗೆ ತಲುಪಿಸಬೇಕು ಹಾಗೂ
ಪತ್ರಕರ್ತರು ಸಮಾಜದ ಬಗ್ಗೆ ಪ್ರಾಮಾಣಿಕ ಕಳಕಳಿ ಹೊಂದಿ, ಜನಪರ ಧೋರಣೆಯಲ್ಲಿ ಕಾರ್ಯನಿರ್ವಹಿಸಿದಾಗ ಮಾತ್ರ ಪತ್ರಿಕೋದ್ಯಮಕ್ಕೆ ನಿಜವಾದ ಗೌರವ ದೊರೆಯುತ್ತದೆ
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ಹಾಗೂ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಉಸ್ತುವಾರಿಗಳಾದ ಎಂ.ವಾಸುದೇವ ಹೊಳ್ಳ ಹೇಳಿದರು.
ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಬಾಗೇಪಲ್ಲಿ ತಾಲ್ಲೂಕು ಘಟಕ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗವು ಸಮಾಜದ ಕಣ್ಣು ಮತ್ತು ಧ್ವನಿಯಾಗಿದ್ದು, ಪ್ರಜಾಪ್ರಭುತ್ವವನ್ನು ಸದಢಗೊಳಿಸುವಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು. ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಎನ್.ಚಂದ್ರಶೇಖರ ಮಾತನಾಡಿ ಜನರ ಸಮಸ್ಯೆಗಳನ್ನು ಆಡಳಿತದ ಗಮನಕ್ಕೆ ತಂದು ಪರಿಹಾರ ಕಲ್ಪಿಸುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಪತ್ರಿಕೋದ್ಯಮವು ಸಮಾಜದ ಅಭಿವೃದ್ಧಿಗೆ ಪೂರಕವಾದ ಶಕ್ತಿಯಾಗಿದೆ. ನಿಷ್ಪಕ್ಷಪಾತ ಹಾಗೂ ಜವಾಬ್ದಾರಿಯುತ ವರದಿಗಾರಿಕೆ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುತ್ತದೆ. ಅಭಿವೃದ್ಧಿ ಪರ ಮತ್ತು ಜನಪರವಾದ ವರದಿಗಳಿಗೆ ಪತ್ರಕರ್ತರು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್. ಹನುಮಂತ ರೆಡ್ಡಿ ಮಾತನಾಡಿ ಸಮಾಜದ ಪ್ರಗತಿಯಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪತ್ರಿಕಾ ದಿನಾಚರಣೆ ಕೇವಲ ಆಚರಣೆಯಲ್ಲ, ಸಮಾಜಕ್ಕಾಗಿ ದುಡಿಯುವ ಪತ್ರಕರ್ತರ ಸೇವೆಯನ್ನು ಗೌರವಿಸುವ ದಿನವಾಗಿದೆ. ಸರ್ಕಾರಿ ನೌಕರರು ಮತ್ತು ಪತ್ರಕರ್ತರು ಸಮಾಜದ ಹಿತದೃಷ್ಟಿಯಿಂದ ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕು ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕಾಗತಿ ನಾಗರಾಜು ಮಾತನಾಡಿ ಸುದ್ದಿ ಮಾಧ್ಯಮ ಸಮಾಜದ ನ್ಯೂನತೆಗಳನ್ನು ತಿದ್ದುವ ಪ್ರಬಲ ಅಸ್ತ್ರವಾಗಿದೆ. ಸಮಾಜದ ಬಗ್ಗೆ ಕಾಳಜಿ ಇಲ್ಲದ ಪತ್ರಿಕೋದ್ಯಮಕ್ಕೆ ಜನಮನ್ನಣೆ ಸಿಗುವುದಿಲ್ಲ. ಮಹಾತ್ಮ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಿ.ವಿ. ಗುಂಡಪ್ಪ ಅವರಂತಹ ಮಹನೀಯರು ಪತ್ರಿಕೆಯನ್ನು ಸಮಾಜ ಪರಿವರ್ತನೆಯ ಸಾಧನವಾಗಿ ಬಳಸಿಕೊಂಡು ಪತ್ರಿಕೋದ್ಯಮದ ಮೌಲ್ಯ ಹೆಚ್ಚಿಸಿದ್ದಾರೆ ಎಂದು ಹೇಳಿದರು.
ಪತ್ರಕರ್ತರು ಯಾರ ವೈಯಕ್ತಿಕ ತೇಜೋವಧೆ ಮಾಡುವುದಕ್ಕಿಂತ ಸಮಾಜದ ಸಮಸ್ಯೆಗಳಿಗೆ ಧ್ವನಿಯಾಗಬೇಕು. ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪತ್ರಕರ್ತರ ಸಮಸ್ಯೆಗಳನ್ನು ಹಂತಹಂತವಾಗಿ ಸರ್ಕಾರದ ಮಟ್ಟದಲ್ಲಿ ಬಗೆಹರಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಾಗವಹಿಸಿ ವಿಜೇತರಾದ. ಪತ್ರಕರ್ತರಿಗೆ ಬಹುಮಾನ ವಿತರಣೆ ಮಾಡಿದರು.
ಇದನ್ನು ಓದಿದ್ದೀರಾ..?ಕೋಲಾರ | ಗೃಹಲಕ್ಷ್ಮಿ ಯೋಜನೆಗೆ ಮೂರು ವರ್ಷ ಹಿನ್ನೆಲೆ ಸಸಿ ನೆಡುವ ಕಾರ್ಯಕ್ರಮ: ವೇಮಗಲ್ ಮುನಿಯಪ್ಪ
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಕೃಷ್ಣಾರೆಡ್ಡಿ, ನಿಕಟ ಪೂರ್ವ ಅಧ್ಯಕ್ಷರಾದ ಪಿ ಮಂಜುನಾಥ ರೆಡ್ಡಿ, ಜಿಲ್ಲಾ ಉಪಾಧ್ಯಕ್ಷರಾದ ಜೆಕೆ ಆನಂದ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಸುರೇಶ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸೈಯದ್ ಸಿದ್ದೀಕ್, ಖಜಾಂಚಿಗಳಾದ ರಾಮಕೃಷ್ಣ ಹೆಗಡೆ, ಕಾರ್ಯದರ್ಶಿಗಳಾದ ಡಿವಿ ಮಂಜುನಾಥ್,ಎಸ್.ಎಸ್. ಶ್ರೀನಿವಾಸ್, ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರಾದ ಆರ್.ಎನ್. ಗೋಪಾಲ ರೆಡ್ಡಿ,ಪಿ.ಎಸ್. ರಾಜೇಶ್, ಮುನಿರಾಜ್, ವೆಂಕಟೇಶ್, ಲೋಕೇಶ್, ಸಂಘದ ಸದಸ್ಯರಾದ ವೆಂಕಟೇಶ್, ಬಿ.ಆರ್.ಕೃಷ್ಣ ಸುಬ್ಬು, ರಮೇಶ್ ಹಾಗೂ ರಂಗನಾಥ್ ರೆಡ್ಡಿ ಹಾಜರಿದ್ದರು.




