ದಕ್ಷಿಣ ಕನ್ನಡ ಜಿಲ್ಲೆಯ ಹಲವು ಶಾಲೆಗಳಲ್ಲಿ 6ನೇ ತರಗತಿಯಿಂದ ತೃತೀಯ ಐಚ್ಚಿಕ ಭಾಷೆಯಾಗಿ ʼತುಳುʼ ಮತ್ತು ʼಕೊಂಕಣಿʼ ಭಾಷೆಗಳನ್ನು ಕಲಿಸಲಾಗುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ʼಬ್ಯಾರಿʼ ಭಾಷೆಯನ್ನೂ ಅಳವಡಿಸುವಂತೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು ಹೆಚ್ ಅವರು ಸರ್ಕಾರಕ್ಕೆ ಮನವಿ ಮಾಡಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾದ ಅವರು ಮನವಿ ಸಲ್ಲಿಸಿದ್ದು, ಸಚಿವರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.
ಬ್ಯಾರಿ ಭಾಷೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 6ನೇ ತರಗತಿಯಿಂದ ತೃತೀಯ ಐಚ್ಚಿಕ ಭಾಷೆಯಾಗಿ ಅಳವಡಿಸಬೇಕೆಂಬ ಬೇಡಿಕೆಯನ್ನು ಈ ಹಿಂದಿನ ಅವಧಿಗಳಲ್ಲಿ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಶಿಕ್ಷಣ ಇಲಾಖೆಯ ಆಯುಕ್ತರು, ನಿರ್ದೇಶಕರು ಸೇರಿ ಈಗಾಗಲೇ ಜಿಲ್ಲಾದ್ಯಂತ ಇಲಾಖೆಯ ಉಪನಿರ್ದೇಶಕರ ಮುಖಾಂತರ ಜಿಲ್ಲೆಯ ಎಲ್ಲ ಶಾಲೆಗಳ ಅಭಿಪ್ರಾಯ ಸಂಗ್ರಹಿಸಿದ್ದು, ಈ ಬಗ್ಗೆ ಸಕಾರಾತ್ಮಕವಾದ ಅಭಿಪ್ರಾಯವನ್ನು ಸರ್ಕಾರಕ್ಕೆ ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಗೃಹಲಕ್ಷ್ಮೀ ಯೋಜನೆ: 28ನೇ ಕಂತು ಬಿಡುಗಡೆ; ಎಂ.ಸಿ.ಶಿವಾನಂದಸ್ವಾಮಿ
“ಹಲವು ಸುತ್ತಿನ ತಜ್ಞರ ಸಮಿತಿಯ ಸಭೆಯು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(DSERT)ಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲ ಬ್ಯಾರಿ ಭಾಷೆಯನ್ನು ಅಳವಡಿಸುವ ನಿಟ್ಟಿನಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಸರ್ವ ಪ್ರಯತ್ನ ಮುಂದುವರಿಸಲಿದೆ” ಎಂದು ಅಕಾಡೆಮಿಯ ಅಧ್ಯಕ್ಷ ಉಮರ್ ಯು ಹೆಚ್ ತಿಳಿಸಿದ್ದಾರೆ.





