ಸೌಜನ್ಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ರಚಿಸಲಾಗಿರುವ ವಿಶೇಷ ತನಿಖಾ ತಂಡ (SIT) ಗುರುವಾರ ಮಂಗಳೂರಿಗೆ ಆಗಮಿಸಿ ತನಿಖೆಯ ಪ್ರಾಥಮಿಕ ಸಿದ್ಧತೆಗಳನ್ನು ಆರಂಭಿಸಿದೆ.
ಬೆಂಗಳೂರಿನ ಗುಪ್ತಚರ ವಿಭಾಗದ ಎಸ್ಪಿ ನಿಶಾ ಜೇಮ್ಸ್ ಹಾಗೂ ಬೆಂಗಳೂರಿನ ಸಿಐಡಿ ಎಸ್ಪಿ ಲೋಕೇಶ್ ಜಗಲಾಸರ್ ಮಂಗಳೂರಿಗೆ ಆಗಮಿಸಿದ್ದು, ನಗರದ ಹಳೆ ಡಿಸಿ ಕಚೇರಿಯ ಎರಡನೇ ಮಹಡಿಯಲ್ಲಿ ತೆರೆಯಲಾಗಿರುವ ಎಸ್ಐಟಿ ಕಚೇರಿಗೆ ಭೇಟಿ ನೀಡಿ ಅಗತ್ಯ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ, ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿಗೂ ಭೇಟಿ ನೀಡಿ, ಪೊಲೀಸ್ ಠಾಣೆ ಸಮೀಪದಲ್ಲಿರುವ ಕಟ್ಟಡವೊಂದನ್ನು ಕಚೇರಿ ಕಾರ್ಯಾಚರಣೆಗೆ ಬಳಸುವ ಸಾಧ್ಯತೆ ಕುರಿತು ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ ಧರ್ಮಸ್ಥಳ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಎಸ್ಐಟಿ ಕಚೇರಿ ಕಾರ್ಯನಿರ್ವಹಿಸಿದ್ದ ಕಟ್ಟಡದಲ್ಲಿನ ಸೌಲಭ್ಯಗಳನ್ನೂ ಅಧಿಕಾರಿಗಳು ಪರಿಶೀಲಿಸಿದ್ದಾರೆ.
2012ರ ಅಕ್ಟೋಬರ್ 9ರಂದು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ 17 ವರ್ಷದ ಸೌಜನ್ಯಾ ಅತ್ಯಾಚಾರ ಮತ್ತು ಹತ್ಯೆಗೊಳಗಾದ ಪ್ರಕರಣಕ್ಕೆ ಸಂಬಂಧಿಸಿ ಹೊಸದಾಗಿ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ನಿರ್ದೇಶನ ನೀಡಿತ್ತು. ಅಲ್ಲದೆ, ಎಸ್ಐಟಿ ರಚಿಸಿ ಮೂರು ತಿಂಗಳೊಳಗೆ ಅನುಸರಣೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಐಜಿಪಿ ಎನ್. ಶಶಿಕುಮಾರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ, ಎಸ್ಪಿ ನಿಶಾ ಜೇಮ್ಸ್, ಎಸ್ಪಿ ಲೋಕೇಶ್ ಜಗಲಾಸರ್, ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಎಸ್ಪಿ ವೆಂಕಟೇಶ್ ಪ್ರಸನ್ನ ಸೇರಿದಂತೆ ಒಟ್ಟು 16 ಅಧಿಕಾರಿಗಳು ತಂಡದಲ್ಲಿದ್ದಾರೆ.
ಎಸ್ಐಟಿ ಕಚೇರಿಯ ಕೇಂದ್ರಸ್ಥಾನ ಮಂಗಳೂರಿನಲ್ಲೇ ಇರಲಿದೆಯೇ ಅಥವಾ ಬೆಳ್ತಂಗಡಿಯಲ್ಲೂ ಪ್ರತ್ಯೇಕ ಕಚೇರಿ ಕಾರ್ಯನಿರ್ವಹಿಸಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ತನಿಖಾ ಕಾರ್ಯಾಚರಣೆಗೆ ಸ್ಥಳೀಯವಾಗಿ ಅನುಕೂಲವಾಗುವಂತೆ ಬೆಳ್ತಂಗಡಿಯಲ್ಲೂ ಕಚೇರಿ ವ್ಯವಸ್ಥೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಕುರಿತು ಗುರುವಾರ ಮಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಮಹತ್ವದ ಸಭೆ ನಡೆಯಲಿದ್ದು, ಸಭೆಯ ಬಳಿಕ ಎಸ್ಐಟಿ ಕಚೇರಿಯ ಕಾರ್ಯವ್ಯಾಪ್ತಿ ಹಾಗೂ ಕೇಂದ್ರಸ್ಥಾನದ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯುವ ನಿರೀಕ್ಷೆಯಿದೆ.





