ಜನಾಂದೋಲನದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಆರೋಪಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರಗೆ ಕಾಂಗ್ರೆಸ್‌ನವರು ಭಿಕ್ಷೆ ನೀಡಿದ್ದರೆ ವಿಜಯೇಂದ್ರ ಅವರು ರಾಜೀನಾಮೆ ನೀಡಿ ಗೆದ್ದುಬರಲಿ ಎಂದು ಹರಿಹರ ಬಿಜೆಪಿ ಶಾಸಕ ಬಿ ಪಿ ಹರೀಶ್ ಸಲಹೆ ನೀಡಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಡಿ ಕೆ ಶಿವಕುಮಾರ್ ಅವರ ಹೇಳಿಕೆ ನೋಡಿದರೆ ಇದು ಹೊಂದಾಣಿಕೆ ರಾಜಕಾರಣಕ್ಕೆ ಸಾಕ್ಷಿ ಎನಿಸುವುದಿಲ್ಲವೇ” ಎಂದು ಪ್ರಶ್ನಿಸಿದರು.
“ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ಹೊಂದಾಣಿಕೆ ನಡೆಯುತ್ತಿದೆ. ಇದು ಸತ್ಯವೆಂದು ಗೊತ್ತಾಗಿದೆ. ವಾಲ್ಮೀಕಿ ನಿಗಮ, ಮುಡಾ ಹಗರಣ ಮಾಡಿಲ್ಲ ಎನ್ನುವುದಕ್ಕಿಂತ ನೀವು ಸಹಭಾಗಿಯಾಗಿಲ್ಲವೇ, ನೀವು ಮಾಡಿಲ್ಲವೇ ಎನ್ನುವ ಪ್ರತ್ಯಾರೋಪದ ಮಾತುಗಳೇ ಕೇಳಿ ಬರುತ್ತಿವೆ. ಎಲ್ಲ ರಾಜಕೀಯ ನಾಯಕರು ಜನರಿಗೆ ಪ್ರಜಾಪ್ರಭುತ್ವಕ್ಕೆ ಮಾಡಿದ ದ್ರೋಹವಿದು” ಎಂದು ಬೇಸರ ವ್ಯಕ್ತಪಡಿಸಿದರು.
“ಎಲ್ಲ ರಾಜಕೀಯ ನಾಯಕರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಇವರ ತಪ್ಪು ಅವರು, ಅವರ ತಪ್ಪು ಇವರು ಮುಚ್ಚುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ನಾಚಿಕೆಗೆಟ್ಟವರಂತೆ ಎಲ್ಲಾ ಪಕ್ಷದ ಮುಖಂಡರು ರಾಜಕೀಯ ಎಂದರೆ ಅಸಹ್ಯ ಪಡುವಂತ ರೀತಿ ವರ್ತಿಸುತ್ತಿದ್ದಾರೆ. ಅಸಹ್ಯ ಎನಿಸುವ ಸ್ಥಿತಿಯಲ್ಲಿ ರಾಜ್ಯ ರಾಜಕಾರಣವಿದೆ ಎಂದರು.
“ದಾವಣಗೆರೆಯ ಕೃಷ್ಣಮೃಗ ವಿಚಾರದಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿದೆ. ಅಂದು ಅಸಹಾಯಕ ಪರಿಸ್ಥಿತಿಯಲ್ಲಿ ಇಂದಿನ ಜಿಲ್ಲಾ ಸಚಿವರು ಇದ್ದರು. ಅಂದಿನ ಸಿಎಂ ಬೊಮ್ಮಾಯಿ ಅವರನ್ನು ರಕ್ಷಣೆ ಮಾಡಿದರು. ಹೊಂದಾಣಿಕೆ ರಾಜಕೀಯ ಇರುವುದರಿಂದಲೇ ಒಬ್ಬರಿಗೊಬ್ಬರು ಕಚ್ಚಾಡುತ್ತ ಇವರ ಬಂಡವಾಳಗಳನ್ನು ಜನರಿಗೆ ತೋರಿಸುತ್ತಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಕೊಡಗು | 78ನೇ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ‘ನಶಾ ಮುಕ್ತ ಭಾರತ’ ಅಭಿಯಾನ
“ಜಿಲ್ಲಾ ಉಸ್ತುವಾರಿ ಸಚಿವರು ಹರಿಹರ ತಾಲೂಕಿನ ಗಡಿಭಾಗದ ಹಳ್ಳಗಳನ್ನು ಮುಚ್ಚಿದ್ದಾರೆ. ನೈಸರ್ಗಿಕ ಹಳ್ಳಗಳನ್ನು ಅವರಿಗೆ ಬೇಕಾದಂತೆ ಮುಚ್ಚಿದ್ದಾರೆ. ಗಡಿಲೈನ್ ಅಳಿಸಿ ಅಕ್ರಮವೆಸಗಿದ್ದರು. ಈ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದಾಗ ಎಲ್ಲವೂ ಸರಿಯಿದೆ ಎಂದು ಉತ್ತರ ನೀಡಿದ್ದಾರೆ. ಆದರೀಗ ನನ್ನ ಹೋರಾಟಕ್ಕೆ ಜಯದೊರೆತಿದೆ. ಅಧಿವೇಶನದಲ್ಲಿ ಧ್ವನಿ ಎತ್ತಿದ ನಂತರ ಮೊದಲಿನಂತೆ ನೈಸರ್ಗಿಕ ಹಳ್ಳಗಳನ್ನು ಸರಿಪಡಿಸಿ ಮೊದಲ ಸ್ವರೂಪಕ್ಕೆ ತರಲಾಗಿದೆ” ಎಂದು ತಿಳಿಸಿದರು.