ಕೇವಲ ಉದ್ಯೋಗಾಕಾಂಕ್ಷಿಗಳಾಗದೇ, ಉದ್ಯೋಗ ಅವಕಾಶಗಳ ಸೃಷ್ಟಿಸುವವರಾಗಬೇಕು. ಸ್ಟಾರ್ಟ್‌ಅಪ್ ಸಂಸ್ಕೃತಿ, ನಾವೀನ್ಯತೆ ಮತ್ತು ಉದ್ಯಮಶೀಲತೆಯ ಮೂಲಕ ವೈಯಕ್ತಿಕವಾಗಿ ಮತ್ತು ಸಮಾಜಕ್ಕಾಗಿ ಹೊಸ ಸಾಧ್ಯತೆ, ಅವಕಾಶಗಳನ್ನು ಸೃಷ್ಟಿಸಲು ವಿದ್ಯಾರ್ಥಿಗಳು ಕಾರ್ಯೋನ್ಮುಖರಾಗಬೇಕು” ಎಂದು ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ 35 ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳಿಗೆ , ಸಂಶೋಧನಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಪದವಿ ಪ್ರಧಾನ ಮಾಡಿ ಮಾತನಾಡಿದ ಅವರು “ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸಿನ ಹೊಸ ಹೊಸ ಸಾಧನೆಗಳನ್ನು ಸಾಧಿಸಬೇಕು. ಆ ಮೂಲಕ ದೇಶದ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ನೀಡಬೇಕು. ಅಭಿವೃದ್ಧಿ ಹೊಂದಿದ ಭಾರತ -2047’ ಗುರಿ ಸಾಧನೆಯಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ‘ಏಕೀಕೃತ ಭಾರತ, ಶ್ರೇಷ್ಠ ಭಾರತ, ಅಭಿವೃದ್ಧಿ ಹೊಂದಿದ ಭಾರತ’ ಗುರಿಗಳ ಸಾಧನೆಗೆ ‘ಮೇಕ್ ಇನ್ ಇಂಡಿಯಾ’ ಹಾಗೂ ‘ವೋಕಲ್ ಫಾರ್ ಲೋಕಲ್’ ಅಭಿಯಾನಗಳಿಗೆ ಸಹಕಾರ ನೀಡಿ, ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವತ್ತ ಶ್ರಮಿಸಬೇಕು” ಎಂದರು.

“ನಿರಂತರ ಕಲಿಕೆ, ನವೀನ ಚಿಂತನೆ ಮತ್ತು ಸಾಮಾಜಿಕ ಜವಾಬ್ದಾರಿಯುತ ಮನೋಭಾವ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಗತ್ಯ” ಎಂದು ತಿಳಿಸಿದರು.
“ಹೊಸ ಶಿಕ್ಷಣ ನೀತಿ 2020 ಶಿಕ್ಷಣವನ್ನು ಕೇವಲ ಪದವಿಗೆ ಸೀಮಿತಗೊಳಿಸದೆ ಕೌಶಲ್ಯ, ಮೌಲ್ಯ ಹಾಗೂ ಜೀವನಾಧಾರಿತ ಶಿಕ್ಷಣದತ್ತ ಕೊಂಡೊಯ್ದಿದೆ. ಕೃತಕ ಬುದ್ಧಿಮತ್ತೆ, ಡೇಟಾ ವಿಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಡಿಜಿಟಲ್ ಕ್ರಾಂತಿ ಹೊಸ ಅವಕಾಶಗಳ ಜೊತೆಗೆ ಸವಾಲುಗಳನ್ನೂ ತಂದಿವೆ. ಶಿಕ್ಷಣವು ಇನ್ನು ಮುಂದೆ ಪದವಿ ಪಡೆಯುವ ಸಾಧನವಲ್ಲ; ಅದು ಜೀವನ ಕೌಶಲ್ಯ, ನೀತಿಶಾಸ್ತ್ರ ಮತ್ತು ಸಾಮಾಜಿಕ ಜವಾಬ್ದಾರಿಯ ಅಡಿಪಾಯವೂ ಆಗಿದೆ. ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆ ಮತ್ತು ಪರಿಸರ ಮಾಲಿನ್ಯದಂತಹ ಜಾಗತಿಕ ಸವಾಲುಗಳ ಬಗ್ಗೆ ಗಮನ ಹರಿಸಬೇಕು. ಈ ದಿಕ್ಕಿನಲ್ಲಿ ಸಕಾರಾತ್ಮಕ ಪ್ರಯತ್ನಗಳು ಅಗತ್ಯವಿದೆ. ಈ ಜಾಗತಿಕ ಸವಾಲುಗಳನ್ನು ಪರಿಹರಿಸಲು ಮುಂದಾಗಬೇಕು” ಎಂದು ತಿಳಿಸಿದರು.

“ವಿಶ್ವ ಮಾನವತೆ”ಯ ಸಂದೇಶವನ್ನು ಬೋಧಿಸಿದ “ಕುವೆಂಪು” ಅವರ ಹೆಸರನ್ನು ಈ ವಿಶ್ವವಿದ್ಯಾಲಯಕ್ಕೆ ಇಡಲಾಗಿದೆ. ಅವರ ಸಾಹಿತ್ಯವು ಸಮಾಜದಲ್ಲಿ ಸಮಾನತೆ, ಮಾನವೀಯತೆ ಮತ್ತು ಪ್ರಗತಿಪರ ಚಿಂತನೆಯನ್ನು ಪ್ರೇರೇಪಿಸಿದೆ. ಕುವೆಂಪು ಅವರ ಆದರ್ಶಗಳನ್ನು ಅಳವಡಿಸಿಕೊಂಡು ವಿಶ್ವ ಮಾನವ ಸಂದೇಶವನ್ನು ಸಾಕಾರಗೊಳಿಸಿ. ಕುವೆಂಪು ಅವರ “ವಿಶ್ವ ಮಾನವ” ತತ್ವವನ್ನು ಅಳವಡಿಸಿಕೊಂಡು ಸಮಾನತೆ, ಮಾನವೀಯತೆ ಮತ್ತು ಪ್ರಗತಿಪರ ಚಿಂತನೆ ಬೆಳೆಸಿಕೊಳ್ಳಬೇಕು” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕುವೆಂಪು ವಿಶ್ವವಿದ್ಯಾಲಯದ 35 ನೇ ಘಟಿಕೋತ್ಸವದಲ್ಲಿ ಶಿವಮೊಗ್ಗದ ಗಾಡಿಕೊಪ್ಪದ ಸೃಷ್ಟಿ ಆರ್ ಬಯೋಟೆಕ್ನಾಲಜಿ ವಿಭಾಗದಲ್ಲಿ 6 ಸ್ವರ್ಣ ಪದಕಗಳನ್ನು ಪಡೆದಿದ್ದಾರೆ. ಕನ್ನಡ ವಿಭಾಗದಲ್ಲಿ ಚಿಕ್ಕಮಗಳೂರಿನ ಅಜ್ಜಂಪುರ ತಾಲೂಕಿನ ಹರೆಕಾನುವಂಗಲದ ಅಭಿಷೇಕ್ 10 ಸ್ವರ್ಣ ಗಳಿಸಿದ್ದು, ಪರಿಸರ ವಿಜ್ಞಾನ ವಿಭಾಗದಲ್ಲಿ ಕುಂದಾಪುರ ಮೂಲದ ರಕ್ಷಾ 7 ಚಿನ್ನದ ಪದಕ ಗಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಧಿಕಾರ ದುರುಪಯೋಗ, ಹಣಬಲ ಅಕ್ರಮದಿಂದ ಕಾಂಗ್ರೆಸ್ ಚುನಾವಣೆ ಗೆದ್ದಿದೆ: ಎಸ್‌ಡಿಪಿಐ
ಸಮಾರಂಭದಲ್ಲಿ ಸಚಿವರಾದ ಡಾ. ಎಂ.ಸಿ. ಸುಧಾಕರ್, ಮುಖ್ಯ ಅತಿಥಿ ಪ್ರೊ.ಅನಿಲ್ ಡಿ ಸಹಸ್ರಬುಧೆ, ಕುಲಪತಿ ಪ್ರೊ.ಶರತ್ ಅನಂತ ಮೂರ್ತಿ ಸೇರಿದಂತೆ ಗಣ್ಯರು, ಬೋಧಕ, ಬೋಧಕೇತರ ಸಿಬ್ಬಂದಿ , ವಿದ್ಯಾರ್ಥಿಗಳು, ಹಾಜರಿದ್ದರು.





