ಮಂಗಳೂರು | ಆರೋಗ್ಯ ಸೇವೆ ಖಾಸಗೀಕರಣದತ್ತ: ಜನಹಿತವೋ, ಲಾಭದ ರಾಜಕೀಯವೋ?

Date:

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿರುವ ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಸ್ತಾಂತರಿಸುವ ರಾಜ್ಯ ಸರ್ಕಾರದ ನಿರ್ಧಾರವು ಇದೀಗ ಜನಸಾಮಾನ್ಯರ ನಡುವೆ ತೀವ್ರ ಚರ್ಚೆಗೆ ಕಾರಣವಾಗಿದೆ. ಆರೋಗ್ಯ ಸೇವೆಯನ್ನು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿ ಪರಿಗಣಿಸುವ ಸಂದರ್ಭದಲ್ಲಿ, ಈ ಕ್ರಮವು ಆ ಹಕ್ಕಿನ ಮೇಲೆಯೇ ಪ್ರಶ್ನಾರ್ಥಕ ಗುರುತು ಮೂಡಿಸಿದೆ ಎಂದು ವಿವಿಧ ಸಂಘಟನೆಗಳು ಆರೋಪಿಸುತ್ತಿವೆ.

- Advertisement -

ಕಳೆದ ಹಲವು ವರ್ಷಗಳಿಂದ ದೇಶದ ಆರೋಗ್ಯ ಕ್ಷೇತ್ರದಲ್ಲಿ ನಿಧಾನವಾಗಿ ಖಾಸಗೀಕರಣದ ಪ್ರಭಾವ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯವಾದ ಹೂಡಿಕೆ, ವೈದ್ಯಕೀಯ ಸಿಬ್ಬಂದಿ, ಆಧುನಿಕ ಸಾಧನಗಳು ಮತ್ತು ಔಷಧಿಗಳ ಪೂರೈಕೆ ಸಮರ್ಪಕವಾಗಿ ನಡೆಯದೇ ಇರುವುದರಿಂದ ಜನರಿಗೆ ಅವುಗಳ ಮೇಲಿನ ವಿಶ್ವಾಸ ಕುಂದಿದಂತಾಗಿದೆ. ಇದೇ ಹಿನ್ನೆಲೆಯಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಪ್ರಮುಖ ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಒಪ್ಪಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಮೂಡುಬಿದಿರೆ, ವಿಟ್ಲ, ಬಂಟ್ವಾಳ ಮತ್ತು ಬೆಳ್ತಂಗಡಿ ಭಾಗಗಳಲ್ಲಿನ ಈ ಕ್ರಮವು ಕೇವಲ ಆಡಳಿತಾತ್ಮಕ ತೀರ್ಮಾನವಲ್ಲ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ದಿಕ್ಕನ್ನೇ ಬದಲಾಯಿಸುವ ಹೆಜ್ಜೆಯಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...
WhatsApp Image 2026 05 06 at 9.39.54 PM

ಈ ಜಿಲ್ಲೆಯಲ್ಲಿ ಖಾಸಗಿ ವೈದ್ಯಕೀಯ ಮೂಲಸೌಕರ್ಯ ಈಗಾಗಲೇ ಬಹಳ ಪ್ರಮಾಣದಲ್ಲಿ ವಿಸ್ತಾರಗೊಂಡಿದೆ. ಒಂಬತ್ತು ಖಾಸಗಿ ಮೆಡಿಕಲ್ ಕಾಲೇಜುಗಳು ಮತ್ತು ಅನೇಕ ಕಾರ್ಪೊರೇಟ್ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿರುವುದು ಅಭಿವೃದ್ಧಿಯ ಸೂಚಕವಾಗಿದ್ದರೂ, ಅವುಗಳ ಸೇವೆಗಳು ಎಲ್ಲ ವರ್ಗದ ಜನರಿಗೆ ಸಮಾನವಾಗಿ ಲಭ್ಯವಾಗುತ್ತಿಲ್ಲ. ಚಿಕಿತ್ಸಾ ವೆಚ್ಚಗಳು ಅತಿಯಾದ ಮಟ್ಟದಲ್ಲಿದ್ದು, ಅನೇಕ ಕುಟುಂಬಗಳು ಆರೋಗ್ಯ ವೆಚ್ಚಕ್ಕಾಗಿ ಸಾಲದ ಬಲೆಗೆ ಸಿಲುಕುತ್ತಿರುವ ಉದಾಹರಣೆಗಳು ಹೆಚ್ಚುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಿ ಆಸ್ಪತ್ರೆಗಳು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಒಂದು ಭದ್ರತೆಯ ವಲಯವಾಗಿರಬೇಕಾಗಿದ್ದರೂ, ಅವುಗಳ ದುರ್ಬಲ ಸ್ಥಿತಿ ಜನರನ್ನು ಖಾಸಗಿ ಆಸ್ಪತ್ರೆಗಳತ್ತ ತಳ್ಳುತ್ತಿದೆ.

ಇತ್ತೀಚಿನ ಅಂಕಿಅಂಶಗಳು ಈ ವಾಸ್ತವವನ್ನು ಇನ್ನಷ್ಟು ಸ್ಪಷ್ಟಪಡಿಸುತ್ತವೆ. ಕಳೆದ ಹನ್ನೊಂದು ತಿಂಗಳ ಅವಧಿಯಲ್ಲಿ ಸಾವಿರಾರು ಹೃದಯಾಘಾತ ಪ್ರಕರಣಗಳು ದಾಖಲಾಗಿದ್ದು, ಹೆಚ್ಚಿನವರು ಖಾಸಗಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿ ಎದುರಿಸಿದ್ದಾರೆ. ಕ್ಯಾನ್ಸರ್ ಪ್ರಕರಣಗಳಲ್ಲಿಯೂ ಇದೇ ಸ್ಥಿತಿ ಕಂಡುಬಂದಿದ್ದು, ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಗಳ ಕೊರತೆಯಿಂದ ಜನರು ಖಾಸಗಿ ಸಂಸ್ಥೆಗಳ ಮೇಲೆ ಅವಲಂಬಿತರಾಗಿದ್ದಾರೆ. ಇದು ಕೇವಲ ಆರೋಗ್ಯ ಸಮಸ್ಯೆಯಷ್ಟೇ ಅಲ್ಲ, ಆರ್ಥಿಕ ಒತ್ತಡದ ಸಮಸ್ಯೆಯಾಗಿ ರೂಪಾಂತರಗೊಂಡಿದೆ.

ಜಿಲ್ಲೆಯಲ್ಲಿ ಹೃದ್ರೋಗ ಮತ್ತು ಕ್ಯಾನ್ಸರ್ ಚಿಕಿತ್ಸೆಗಾಗಿ ಉನ್ನತ ಮಟ್ಟದ ಸರ್ಕಾರಿ ಆಸ್ಪತ್ರೆಗಳ ಕೊರತೆ ಬಹುಕಾಲದಿಂದಲೂ ಚರ್ಚೆಯ ವಿಷಯವಾಗಿದೆ. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಜಯದೇವ ಹೃದ್ರೋಗ ಸಂಸ್ಥೆ ಮತ್ತು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಂತೆಯೇ ದಕ್ಷಿಣ ಕನ್ನಡದಲ್ಲೂ ಘಟಕಗಳನ್ನು ಸ್ಥಾಪಿಸಬೇಕೆಂಬ ಬೇಡಿಕೆ ಜನರಿಂದ ನಿರಂತರವಾಗಿ ಕೇಳಿಬರುತ್ತಿದೆ. ಆದರೆ, ಈ ಬೇಡಿಕೆಗಳಿಗೆ ಸ್ಪಂದನೆ ಸಿಗದೇ ಇರುವ ಹಿನ್ನೆಲೆಯಲ್ಲಿ, ಈಗಿನ ಖಾಸಗೀಕರಣದ ಕ್ರಮವು ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.

ಈ ಬೆಳವಣಿಗೆಗಳ ನಡುವೆ ಡಿವೈಎಫ್ಐ ಸೇರಿದಂತೆ ಹಲವು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಸರ್ಕಾರಿ ಆಸ್ಪತ್ರೆಗಳನ್ನು ಉದ್ದೇಶಪೂರ್ವಕವಾಗಿ ದುರ್ಬಲಗೊಳಿಸಿ, ನಂತರ ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸುವುದು ಜನಹಿತಕ್ಕೆ ವಿರುದ್ಧವಾದ ಕ್ರಮ ಎಂದು ಅವುಗಳು ಆರೋಪಿಸಿವೆ. ಈಗಾಗಲೇ ಕೆಲವು ಆಸ್ಪತ್ರೆಗಳು ಪಿಪಿಪಿ ಮಾದರಿಯಲ್ಲಿ ಖಾಸಗಿ ಪಾಲುದಾರಿಕೆಗೆ ಒಪ್ಪಿಸಲ್ಪಟ್ಟಿರುವುದನ್ನು ವಿರೋಧಿಸಿದ್ದ ಸಂಘಟನೆಗಳು, ಇದೀಗ ಮತ್ತಷ್ಟು ಆಸ್ಪತ್ರೆಗಳ ಹಸ್ತಾಂತರದ ವಿರುದ್ಧ ಹೋರಾಟವನ್ನು ತೀವ್ರಗೊಳಿಸಿವೆ. ಈ ಹಿನ್ನಲೆಯಲ್ಲಿ ನಡೆದ ‘ಜಿಲ್ಲಾ ಉಸ್ತುವಾರಿ ಕಚೇರಿ ಚಲೋ’ ಪಾದಯಾತ್ರೆ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ, ಈ ವಿಚಾರದ ಗಂಭೀರತೆಯನ್ನು ತೋರಿಸುತ್ತದೆ.

WhatsApp Image 2026 05 06 at 9.39.53 PM

ಆರೋಗ್ಯ ತಜ್ಞರ ಅಭಿಪ್ರಾಯದಲ್ಲಿ, ಖಾಸಗೀಕರಣ ಅಥವಾ ಪಿಪಿಪಿ ಮಾದರಿ ಕೆಲವು ಸಂದರ್ಭಗಳಲ್ಲಿ ತಾತ್ಕಾಲಿಕ ಪರಿಹಾರ ನೀಡಬಹುದು. ಆದರೆ, ದೀರ್ಘಾವಧಿಯಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು ಮಾತ್ರವೇ ಸಮಗ್ರ ಪರಿಹಾರ ಎಂದು ಅವರು ಸೂಚಿಸುತ್ತಾರೆ. ಸರ್ಕಾರಿ ಮೆಡಿಕಲ್ ಕಾಲೇಜುಗಳ ಸ್ಥಾಪನೆ, ತಾಲೂಕು ಮತ್ತು ಗ್ರಾಮ ಮಟ್ಟದ ಆರೋಗ್ಯ ಕೇಂದ್ರಗಳ ಬಲವರ್ಧನೆ ಮತ್ತು ಸೂಪರ್ ಸ್ಪೆಷಾಲಿಟಿ ಸೇವೆಗಳ ವಿಸ್ತರಣೆ ಇವೆಲ್ಲವೂ ಅವಶ್ಯಕ ಕ್ರಮಗಳಾಗಿವೆ.

ಈ ವಿವಾದದ ಕೇಂದ್ರದಲ್ಲಿರುವ ಪ್ರಮುಖ ಪ್ರಶ್ನೆ ಎಂದರೆ ಆರೋಗ್ಯ ಸೇವೆಯ ಸ್ವರೂಪವೇನು ಎಂಬುದು. ಅದು ಸಾರ್ವಜನಿಕ ಹ‌ಕ್ಕಾಗಿದೆಯೇ? ಅಥವಾ ಖಾಸಗಿ ವ್ಯಾಪಾರವೇ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಹಂತಕ್ಕೆ ಸಮಾಜ ಬಂದಿದೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆರೋಗ್ಯ ಸೇವೆ ಕೈಗೆಟುಕುವಂತಿರಬೇಕೆಂಬುದು ಪ್ರಜಾಪ್ರಭುತ್ವದ ಮೂಲಭೂತ ಆಶಯ. ಆ ದೃಷ್ಟಿಯಿಂದ ನೋಡಿದಾಗ, ಸರ್ಕಾರಿ ಆಸ್ಪತ್ರೆಗಳ ಬಲವರ್ಧನೆಗೆ ಆದ್ಯತೆ ನೀಡಬೇಕೆಂಬ ಒತ್ತಾಯ ಇನ್ನಷ್ಟು ಗಟ್ಟಿಯಾಗುತ್ತಿದೆ.

ಈ ಕುರಿತು ಈ‌ ದಿನ.ಕಾಮ್ ಜತೆಗೆ ಮಾತನಾಡಿದ ಸಿಪಿಐಎಂಎಲ್ ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ, “ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ಖಾಸಗೀಕರಣಕ್ಕೆ ಒಪ್ಪಿಸುವ ಸರ್ಕಾರದ ನಿರ್ಧಾರವು ಜನರ ಹಕ್ಕುಗಳ ಮೇಲಿನ ನೇರ ದಾಳಿ. ಜನರ ಆರೋಗ್ಯವನ್ನು ರಕ್ಷಿಸಬೇಕಾದ ಸರ್ಕಾರವೇ ಖಾಸಗಿ ಆಸ್ಪತ್ರೆಗಳ ಲಾಭದಾಸೆಗೆ ತಲೆಬಾಗುತ್ತಿದೆ. ಹಂತ ಹಂತವಾಗಿ ಸರ್ಕಾರಿ ಆಸ್ಪತ್ರೆಗಳನ್ನು ಖಾಸಗೀಕರಣದತ್ತ ಕೊಂಡೊಯ್ಯುವ ಪ್ರಯತ್ನ ನಡೆಯುತ್ತಿದೆ” ಎಂದು ತೀವ್ರವಾಗಿ ಆರೋಪಿಸಿದರು.

ಈ ಕ್ರಮವು ಬಡಜನರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುವುದಾಗಿ ಎಚ್ಚರಿಸಿದ ಅವರು, “ಈ ಒಪ್ಪಂದವನ್ನು ಹಿಂತೆಗೆದುಕೊಳ್ಳುವವರೆಗೆ ನಿರಂತರ ಹೋರಾಟದ ಅಗತ್ಯವಿದೆ. ಚಿಕಿತ್ಸೆ ಹೆಸರಿನಲ್ಲಿ ಸಾವಿರಾರು ರೂಪಾಯಿಗಳನ್ನು ವಸೂಲಿ ಮಾಡುವ ವ್ಯವಸ್ಥೆಗೆ ಸರ್ಕಾರವೇ ಕಾನೂನುಬದ್ಧ ಬಲ ನೀಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸುವುದು ಸರ್ಕಾರದ ಮೊದಲ ಕರ್ತವ್ಯವಾಗಿದ್ದರೂ, ಅದನ್ನು ಕಡೆಗಣಿಸಿ ಖಾಸಗೀಕರಣದ ದಾರಿಗೆ ಸಾಗುವುದು ಬಡವರನ್ನು ಆರೋಗ್ಯ ಸೇವೆಯಿಂದ ದೂರ ತಳ್ಳುವ ಅನ್ಯಾಯಕರ ಕ್ರಮವಾಗಿದೆ.‌ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜಿಗಾಗಿ ದೀರ್ಘಕಾಲದಿಂದ ಹೋರಾಟ ನಡೆಯುತ್ತಿದ್ದರೂ ನಿರ್ಲಕ್ಷ್ಯ ಮಾಡುತ್ತಿರುವುದು ಜನತೆಗೆ‌ ಮಾಡುತ್ತಿರುವ ದ್ರೋಹ” ಎಂದು ಆರೋಪಿಸಿದರು.

WhatsApp Image 2026 05 06 at 9.39.53 PM 2

ಇದೇ ವೇಳೆ ಈ ದಿನ.ಕಾಮ್ ಜತೆ ಮಾತನಾಡಿದ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಝ್, “ಕಳೆದ ಹಲವು ವರ್ಷಗಳಿಂದ ನಾವು ಇಟ್ಟಿರುವ ಬೇಡಿಕೆಗಳನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಕಡೆಗಣಿಸಿದೆ. ಆರೋಗ್ಯ ಇಲಾಖೆ ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸುವ ಬದಲು ಖಾಸಗಿ ಆಸ್ಪತ್ರೆಗಳ ಲಾಬಿಗೆ ಶರಣಾಗಿದೆ. ವಿರೋಧ ಪಕ್ಷ ಬಿಜೆಪಿ ಕೂಡ ಈ ಬಗ್ಗೆ ಮೌನ ವಹಿಸಿದೆ. ಜಿಲ್ಲೆಯ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಖಾಸಗಿ ಆಸ್ಪತ್ರೆಗಳ ಲಾಬಿಯ ವಿಷಯದಲ್ಲಿ ಒಂದೇ ರೀತಿಯ ನಿಲುವು ಹೊಂದಿವೆ” ಎಂದು ಟೀಕಿಸಿದರು.

“ಡಿವೈಎಫ್ಐ ಮುಂದಿಟ್ಟಿರುವ ಬೇಡಿಕೆಗಳು ಈಡೇರುವವರೆಗೆ ಚಳವಳಿಯನ್ನು ಮುಂದುವರಿಸಲಾಗುವುದು‌ ಎಂದು ಸ್ಪಷ್ಟಪಡಿಸಿದ ಅವರು, ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಿ, ಜನಸಾಮಾನ್ಯರಿಗೆ ಕೈಗೆಟುಕುವ ಚಿಕಿತ್ಸಾ ಸೌಲಭ್ಯ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಅದರಿಂದ ಹಿಂದೆ ಸರಿಯುವುದನ್ನು ಸಹಿಸಲಾಗುವುದಿಲ್ಲ” ಎಂದು ಸಂಘಟನೆ ಎಚ್ಚರಿಕೆ ನೀಡಿದೆ.

ಒಟ್ಟಾರೆ, ದಕ್ಷಿಣ ಕನ್ನಡದಲ್ಲಿ ಉಂಟಾಗಿರುವ ಈ ವಿವಾದವು ಕೇವಲ ಆಸ್ಪತ್ರೆಗಳ ನಿರ್ವಹಣೆಯ ಪ್ರಶ್ನೆಯಲ್ಲ, ಸಾರ್ವಜನಿಕ ಆರೋಗ್ಯದ ಭವಿಷ್ಯದ ಬಗ್ಗೆ ನಡೆಯುತ್ತಿರುವ ಮಹತ್ವದ ಚರ್ಚೆಯಾಗಿದೆ. ಆರೋಗ್ಯ ಸೇವೆ ಜನರ ಹಕ್ಕಾಗಿಯೇ ಉಳಿಯಬೇಕೋ ಅಥವಾ ಖಾಸಗಿ ಲಾಭದ ವಲಯಕ್ಕೆ ಸೀಮಿತವಾಗಬೇಕೋ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಹಂತಕ್ಕೆ ಈ ಚರ್ಚೆ ತಲುಪಿದೆ. ಹಾಗಾಗಿ ಈ ವಿವಾದಕ್ಕೆ ಅಂತ್ಯ ಹಾಡುವುದು ಸರ್ಕಾರದ ಕೈಯಲ್ಲಿದೆ. ಮುಂದೆ ಏನಾಗುವುದು ಎಂಬುದನ್ನು ಕಾದು ನೋಡಬೇಕಿದೆ.

WhatsApp Image 2023 08 22 at 3.23.15 PM
ಶಾರೂಕ್ ತೀರ್ಥಹಳ್ಳಿ
+ posts

ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಶಾರೂಕ್ ತೀರ್ಥಹಳ್ಳಿ
ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು: ಜನವಾದಿ ಮಹಿಳಾ ಸಂಘಟನೆ ಆಗ್ರಹ

ದೇಶದ ಚುನಾವಣಾ ಪ್ರಜಾಪ್ರಭುತ್ವದ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಪುನಃಸ್ಥಾಪಿಸಲು ಮುಖ್ಯ ಚುನಾವಣಾ...

ಕಲೆ ಉಳಿಯಲಿ, ಕೌಶಲ್ಯ ಬೆಳೆಯಲಿ: ಕರ್ನಾಟಕ ಪರ್ವ 2026ಕ್ಕೆ ಡಿ.ಕೆ ಶಿವಕುಮಾರ್ ಚಾಲನೆ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ವೈವಿಧ್ಯತೆಯಲ್ಲಿ ಏಕತೆ, ಕೌಶಲ್ಯದಲ್ಲಿ ಸ್ವಾವಲಂಬನೆ ಎಂಬ...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...