ಸಾಹಿತಿಗಳಿಗೆ ʼರಾಜಕೀಯ ಪ್ರಜ್ಞೆʼ ಅಗತ್ಯ, ಇಂದಿನ ಬಹುಪಾಲು ಸಾಹಿತಿಗಳ ಬರೆಹದಲ್ಲಿ ರಾಜಕೀಯ ದರ್ಶಿಕೆ ಕಾಣಸಿಗದು. ರಾಜಕೀಯ ಪ್ರಜ್ಞೆ ಮಿತಿಗೊಂಡರೆ ಬರಹಗಳಲ್ಲಿ ವಿಶೇಷತೆ ಕಾಣ ಸಿಗದು. ಎಲ್ಲ ಸಮುದಾಯದವರು ಬರೆಯುತ್ತಿದ್ದಾರೆ ಆದರೆ, ಅನುಭವದ ಜತೆಗೆ ರಾಜಕೀಯ ಪ್ರಜ್ಞೆ ಇದ್ದಾಗ ಮಾತ್ರವೇ ಬರಹ ಆಳವಾಗಿ ಬೇರೂರುತ್ತದೆ ಎಂದು ಖ್ಯಾತ ವಿಮರ್ಶಕ ರಂಗನಾಥ ಕಂಟನಕುಂಟೆ ಅಭಿಪ್ರಾಯಿಸಿದರು.
ಹುಬ್ಬಳ್ಳಿ ಪಟ್ಟಣದ ಆರ್.ಎನ್ ಶೆಟ್ಟಿ ಕಲ್ಯಾಣ ಮಂಟಪ ನರಗುಂದ-ನವಲಗುಂದ ರೈತ ಬಂಡಾಯ ವೇದಿಕೆಯಲ್ಲಿ 12ನೇ ಮೇ ಸಾಹಿತ್ಯ ಮೇಳದ ಎರಡನೇ ದಿನ ‘ಪ್ರಜಾಸತ್ತೆಯ ಮೇಲಿನ ದಾಳಿ; ಸೃಜನೆಶೀಲ ಸ್ಪಂದನೆ ನಾಲ್ಕನೇ ಗೋಷ್ಠಿಯಲ್ಲಿ ಅವರು ಮಾತನಾಡಿದರು.
“ಎಡ ಪಂಥೀಯ ಲೇಖಕರು ಪ್ರಭುತ್ವದ ವಿರುದ್ದ ವಿಭಿನ್ನ ಸಾಹಿತ್ಯ ಪ್ರಕಾರಗಳ ಮೂಲಕ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾವ್ಯ ಮತ್ತು ವಿಚಾರ ಸಾಹಿತ್ಯ ಪ್ರಜಾಪ್ರಭುತ್ವ ವಿರೋಧಿಗಳನ್ನು ಎದುರಿಸುವ ಪ್ರತಿರೋಧದ ಧ್ವನಿಯಾಗಿದೆ. ಈ ಎರಡು ಪ್ರಕಾರಗಳಲ್ಲಿ ಪ್ರಭುತ್ವದ ವಿರುದ್ಧ ನಿಚ್ಚಳವಾದ ಸೃಜನಶೀಲ ಅಭಿವ್ಯಕ್ತಿ ವ್ಯಕ್ತಪಡಿಸಬಹುದು ಸಮಸ್ಯೆಯೆಂದರೆ, ನಿಂಘಂಟುಗಳಲ್ಲಿ ಪದಗಳನ್ನು ಹುಡುಕಿ ಭಾಷೆಯನ್ನು ರೂಪಿಸಲು ಹೊರಡುವುದು. ಹೀಗೆ ಪದ ಜೋಡಿಸುವುದರಿಂದ ಕವಿತೆ ಆಗುತ್ತದೇಯೆ? ವೇಮನ ದರ್ಶನದಲ್ಲಿ ತೀಕ್ಷ್ಣ ಗ್ರಹಿಕೆ ಇದೆ, ಮನುಷ್ಯ ಸಂಬಂಧಗಳಿದೆ, ರಾಜಕೀಯ ಪ್ರಜ್ಞೆ ಇದೆ. ಇಂತಹ ದರ್ಶನ ಯಾರಲ್ಲಿ ಆಳವಾಗಿ ಬೀಡುಬಿಡುವುದೋ ಅವರಲ್ಲಿ ಭಾಷ ವೈಶಿಷ್ಟ್ಯ ರೂಪುಗೊಳ್ಳುತ್ತದೆ. ಬೇಂದ್ರೆ, ಕುವೆಂಪು ಕೆ.ಎಸ್ ನರಸಿಂಹಸ್ವಾಮಿ ಅವರಲ್ಲಿತ್ತು. ಇಂತಹ ದರ್ಶನ ದೃಷ್ಟಿ ಇದ್ದಲ್ಲಿ ಉತ್ತಮ ಕಾವ್ಯ ರೂಪಗೊಳುತ್ತದೆ” ಎಂದು ಹೇಳಿದರು.
“ಕನ್ನಡ ಸಾಹಿತ್ಯ ಇಂದು ದ್ವೀಪ ಸಾಹಿತ್ಯ ಆಗುತ್ತಿದೆ. ನಾವು ನಮ್ಮ ನಮ್ಮ ಸುತ್ತಮುತ್ತಲ ಹತ್ತು ಹದಿನೈದು ಜನ ಲೇಖಕರ ಆಚೆಗಿರುವ ಕೃತಿಗಳನ್ನು ಜಾತಿ, ಲಿಂಗ, ಸಾಮಾಜಿಕ ಸ್ತರ, ಪ್ರಾದೇಶಿಕತೆ, ಸೈದ್ದಾಂತಿಕ ಭಿನ್ನತೆಯ ಕಾರಣದಿಂದ ಓದಿಗೆ ನಿರ್ದಿಷ್ಟ ಗಡಿ ಹಾಕಿಕೊಂಡು, ದ್ವೀಪಗಳನ್ನು ಸೃಷ್ಟಿಸಿಕೊಂಡು ಅದರೊಳಗೇ ಬದುಕುತ್ತಿದ್ದೇವೆ. ಕವಿಗಳು ಈ ಮಿತಿಯನ್ನು ಮೀರುವ ತುರ್ತು ಇದೆ. ಆಧುನಿಕ ಸಾಹಿತ್ಯ ತನ್ನ ವಲಯವನ್ನು ವಿಸ್ತರಿಸಿಕೊಂಡಮೇಲೂ, ಶ್ರೇಷ್ಠ ಸಾಹಿತ್ಯ ಸೃಷ್ಟಿಯಾಗುತ್ತಿರುವ ವೇಳೆಯೂ ನಾವು ಅನೇಕ ಸಂದರ್ಭಗಳಲ್ಲಿ ವೈಚಾರಿಕತೆಯ ಕುರಿತು ಉದಾಹರಿಸಲು ಪ್ರಾಚೀನ ಕೃತಿಗಳ ಮೊರೆ ಹೋಗುತ್ತೇವೆ. ಇದಕ್ಕೆ ಬಹುಮುಖ್ಯ ಕಾರಣ ನಮ್ಮ ಹೊಸ ಕವಿಗಳ ಕಾವ್ಯದಲ್ಲಿನ ‘ರಾಜಕೀಯ ಪ್ರಜ್ಞೆ’ಯ ಗೈರು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ> ದಕ್ಷಿಣ ಕನ್ನಡ | ಸದ್ದಿಲ್ಲದೇ ನಶಿಸುತ್ತಿದೆ ʼಶೋಲ’ ಕಾಡು; ಶಿಥಿಲಗೊಳ್ಳುತ್ತಿರುವ ʼನೈಸರ್ಗಿಕ ನೀರಿನ ಟ್ಯಾಂಕರ್ʼ!
ಗೋಷ್ಠಿಯಲ್ಲಿ ಶಿವಸುಂದರ್ ಎಸ್ಐಆರ್ ಕುರಿತ ವಿಚಾರಗಳನ್ನು ಹಂಚಿಕೊಂಡರು. ವೇದಿಕೆಲ್ಲಿಯಲ್ಲಿ ಎಂ.ಎಂ ಹೆಬ್ಬಾಳ, ಡಿ.ಎಂ ಬಡಿಗೇರಿ ಉಪಸ್ಥಿತರಿದ್ದರು.




