ಧಾರವಾಡ | ಮಾನವ ಬಂಧುತ್ವ ವೇದಿಕೆ ಹೋರಾಟ ಬ್ರಾಹ್ಮಣರ ವಿರುದ್ಧವಲ್ಲ, ಬ್ರಾಹ್ಮಣ್ಯದ ವಿರುದ್ಧ: ಸಾಹಿತಿ ರಂಜಾನ್ ದರ್ಗಾ

Date:

ಮೂಢನಂಬಿಕೆಗಳ ನಿರಾಕರಣೆಯೇ ಮಾನವ ಹಕ್ಕುಗಳ ಮೂಲ ನಂಬಿಕೆ ಆಗಿದೆ. ಇಡೀ ಭಾರತದ ಇತಿಹಾಸವನ್ನು ಗಮನಿಸಿದಾಗ ಅವೈದಿಕ ಚಳುವಳಿ ಅಪರೂಪವಾದದ್ದು. ಚಾರ್ವಾಕರ ಹಾಗೂ ಲೋಕಾಯತರ ಕೊಲೆಯಾಗಿರುವುದೇ ಈ ದೇಶದ ಇತಿಹಾಸವಾಗಿದೆ. ಕೋಮುವಾದ, ಜಾತಿ ದೌರ್ಜನ್ಯದ ವಿರುದ್ಧದ ಹೋರಾಟ ಬ್ರಾಹ್ಮಣರ ವಿರುದ್ಧದ ಹೋರಾಟವಲ್ಲ, ಬ್ರಾಹ್ಮಣ್ಯದ ವಿರುದ್ಧದ ಹೋರಾಟವಾಗಿದೆ ಎಂದು ಸಾಹಿತಿ ಡಾ. ರಂಜಾನ್ ದರ್ಗಾ ಹೇಳಿದ್ದಾರೆ.

ಧಾರವಾಡದಲ್ಲಿರುವ ಎಂ.ಎಂ ಕಲ್ಬುರ್ಗಿ ಅವರ ಸಮಾಧಿ ಬಳಿ ಮಾನವ ಬಂಧುತ್ವ ವೇದಿಕೆ ಆಯೋಜಿಸಿದ್ದ ಪರಿವರ್ತನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಲಿಂಗಾಯತ ಒಂದು ಧರ್ಮವಲ್ಲ. ಅದೊಂದು ಹೋರಾಟ ಮತ್ತು ಚಳುವಳಿಯಾಗಿತ್ತು. ಎಲ್ಲ ಸಮುದಾಯಗಳು ಸೇರಿ ಈ ಧರ್ಮವನ್ನು ಸ್ಥಾಪಿಸಿರುವ ಕಾರಣ ಬಸವಧರ್ಮ ಜಾತಿ ಸಂಕರವಾದ ಧರ್ಮವಾಗಿದೆ. ಇತ್ತೀಚಿಗೆ ಶರಣರ ವಚನಗಳನ್ನು ನಾಲಿಗೆಯಿಂದ ಓದುವ ರೂಢಿಯಾಗಿದೆಯೆ ಹೊರತು ಹೃದಯದಿಂದ ಯಾರೂ ಓದುತ್ತಿಲ್ಲ” ಎಂದರು.

“ಶರಣರು ಜಾತಿ, ಧರ್ಮ, ಲಿಂಗಭೇದವಿಲ್ಲದ ಶರಣ ಸಂಕುಲವನ್ನು ಕಟ್ಟುತ್ತಾರೆ. ಬಸವಣ್ಣ ನವ ಸಮಾಜದ ನಿರ್ಮಾಪಕರಾಗಿದ್ದಾರೆಯೇ ಹೊರತು ಸಮಾಜ ಸುಧಾರಕರಲ್ಲ. ಶರಣರು ಬಸವಧರ್ಮದ ಮೂಲಕ ಎಲ್ಲದಕ್ಕೂ ಪರ್ಯಾಯವನ್ನು ನೀಡಿದ್ದಾರೆ. ಇಸ್ಲಾಂ ಧರ್ಮವು ಪರಿಹಾರವಾಗಿ ಬಂದಿದೆ ಎಂದು ವಿವೇಕಾನಂದರು ಹೇಳುತ್ತಾರೆ. ಹೀಗೆ ಬ್ರಾಹ್ಮಣ್ಯದ ದೌರ್ಜನ್ಯದಿಂದ ಈ ನೆಲದಲ್ಲಿ 4 ಧರ್ಮಗಳ ಉದಯವಾದವು. ನಮ್ಮ ದೇಶದ ಸಂಸ್ಕೃತಿಯ ಮೂಲ ಮಾತೃಪ್ರಧಾನವೆ ಹೊರತು, ಪಿತೃಪ್ರಧಾನವಲ್ಲ. ಈ ನೆಲದ ಸಂಸ್ಕೃತಿ ದ್ರಾವಿಡ ಸಂಸ್ಕೃತಿ ಮತ್ತು ಮೆಹಂಜೋದಾರೊ ಸಂಸ್ಕೃತಿಯಾಗಿದೆ. ಬ್ರಾಹ್ಮಣರನ್ನೇ ಗುರಿಮಾಡಿ ವಿರೋಧಿಸುವುದು ತಪ್ಪಾಗುತ್ತದೆ. ಅವರು ತಮ್ಮ ಧರ್ಮವನ್ನು ಅಚರಿಸಿಕೊಂಡು ಹೊರಟಿದ್ದಾರೆ. ಬ್ರಾಹ್ಮಣ್ಯವು ಎಲ್ಲ ಧರ್ಮಗಳಲ್ಲೂ ಅರ್ಥಾತ್ ಬ್ರಾಹ್ಮಣೇತರರಲ್ಲಿ ಹಾಸುಹೊಕ್ಕಾಗಿರುವ ಕಾರಣ ಮಾನವ ಬಂಧುತ್ವ ವೇದಿಕೆಯ ಹೋರಾಟ ಬ್ರಾಹ್ಮಣ್ಯದ ವಿರುದ್ಧವಾಗಿದೆ” ಎಂದು ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಲೋಕಾಯತರಿಂದ ಲಿಂಗಾಯತರವರೆಗೆ ನಡೆದ ಹೋರಾಟದ ಪ್ರತಿಫಲವೇ ಬಾಬಾಸಾಹೇಬ ಅಂಬೇಡ್ಕರ್. ಭಾರತದ ಸಂವಿಧಾನವನ್ನು ಕಳೆದುಕೊಂಡರೆ; ಜೀವನ ನಾಯಿಪಾಡಾಗಬಹುದು. ಕಾರಣ; ಸಂವಿಧಾನವು ಸಂಪೂರ್ಣ ಅವೈದಿಕವಾಗಿದೆ. ಪುರೋಹಿತಶಾಯಿಗಳು ಎಲ್ಲ ಧರ್ಮಗಳಲ್ಲೂ ಇದ್ದಾರೆ. ಕರ್ಮಸಿದ್ದಾಂತವು ಮನುಸ್ನೃತಿಯ ಆತ್ಮವಾದರೆ ಸಕಲ ಜೀವಾತ್ಮರಿಗೆ ಲೇಸ ಬಯಸುವ ಗುಣ; ಬುದ್ಧ, ಬಸವ, ಬಾಬಾಸಾಹೇಬರ ವಿಚಾರ ಮತ್ತು ಭಾರತದ ಸಂವಿಧಾನದಲ್ಲಿದೆ. ದ್ರಾವಿಡರ ಸಂಸ್ಕೃತಿ ಸರ್ವರನ್ನೂ ಒಳಗೊಳ್ಳುವ ಬಂಧುತ್ವ ಸಂಸ್ಕೃತಿಯಾಗಿದೆ” ಎಂದರು.

ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಡಾ. ಎಂ.ಚಂದ್ರ ಪೂಜಾರಿ ಮಾತನಾಡಿ, “ಪ್ರಸ್ತುತ ದೇಶದಲ್ಲಿ ಪರಾವಲಂಬಿಗಳು ಉತ್ಪಾದಕರಂತೆ, ಉತ್ಪಾದಕರು ಪರಾವಲಂಬಿಗಳಂತೆ ಬಿಂಬಿಸುತ್ತಿರುವ ಹುನ್ನಾರ ನಡೆದಿದೆ. ನಮ್ಮ ದೇಶದ ಸಂಸ್ಕೃತಿಯು ಕಟ್ಟ ಕಡೆಯ ವ್ಯಕ್ತಿಗೆ ಉನ್ನತ ಸ್ಥಾನ ಸಿಕ್ಕಾಗ ಮಾತ್ರ ಉಳಿಯುತ್ತದೆ. ದೇಶವೆಂದರೆ ಇಲ್ಲಿ ಬದುಕುವ ಜನರಾಗಿದ್ದಾರೆ” ಎಂದು ಹೇಳಿದರು.

ಎಮ್.ಎಮ್.ಕಲಬುರ್ಗಿ ಟ್ರಸ್ಟ್ ನ ಅಧ್ಯಕ್ಷ ಡಾ. ವೀರಣ್ಣ ರಾಜೂರ ಮಾತನಾಡಿ, “ಬಾಬಾಸಾಹೇಬರು ರಚಿಸಿದ ಸಂವಿಧಾನವೇ ಈ ದೇಶದ ಎಲ್ಲ ಧರ್ಮಗಳಿಗೂ ಪವಿತ್ರ ಗ್ರಂಥವಾಗಿದೆ. ಶರಣರ ವಚನಗಳಲ್ಲಿ ಬಂದ ಸಮಾನತೆ, ಭ್ರಾತೃತ್ವ, ಸ್ವಾತಂತ್ರ್ಯ ಇತ್ಯಾದಿ ವಿಚಾರಗಳನ್ನು ಸಂವಿಧಾನದಲ್ಲಿ‌ ಕಾಣಬಹುದು. ನಮ್ಮ ಸಮಾಜದಲ್ಲಿ ಮೌಢ್ಯತೆಯು ತಾಂಡವವಾಡುತ್ತಿದೆ. ಅದಕ್ಕೆ‌ ಮುಖ್ಯ ಕಾರಣವೆಂದರೆ; ದೇವರು ಮತ್ತು ದೇಗುಲವಾಗಿದೆ. ಆದ್ಧರಿಂದಲೆ ಶರಣರು ದೇವರು-ದೇಗುಲ ಹಾಗೂ ಗೋತ್ರ-ಸೂತ್ರದ ಕಲ್ಪನೆಯನ್ನೇ ಬದಲಿಸಿ ಪರ್ಯಾಯ ಮಾರ್ಗವನ್ನು ಹಾಕಿಕೊಟ್ಟಿದ್ದಾರೆ” ಎಂದರು.

ಅಂಬೇಡ್ಕರ್ ಅಧ್ಯಯನ ವಿಭಾಗದ ಸಂಯೋಜಕ ಡಾ. ಎಸ್.ಸಿ.ನಾಟೀಕಾರ ಮಾತನಾಡಿ, “ಪ್ರಸ್ತುತ ಸಮಾಜದಲ್ಲಿ ಯುದ್ಧದ ಸನ್ನಿವೇಶಗಳು ಎದ್ದುಕಾಣುತ್ತಿವೆ. ಈಗಲೂ ನಾವೆಲ್ಲ ಎಚ್ಚರಗೊಳ್ಳದಿದ್ದರೆ; ಮುಂದೆ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ. ಈ ದೇಶ ಮತ್ತೆ ಗುಲಾಮಗಿರಿ ಪರಿಸ್ಥಿತಿಗೆ ತಲುಪುವ ಮುನ್ಸೂಚನೆ ಎದ್ದು ಕಾಣುತ್ತಿದೆ. ಹೀಗಾಗಿ ದಾರ್ಶನಿಕರ ವಿಚಾರಗಳಿಂದ ವಿದ್ಯಾರ್ಥಿಗಳು ಎಚ್ಚರಗೊಂಡು ನಮ್ಮದು ಮನು ಭಾರತವಲ್ಲ; ಬುದ್ಧ, ಬಸವ, ಅಂಬೇಡ್ಕರ್ ಭಾರತವೆಂದು ಸಾರಿ ಹೇಳಬೇಕಿದೆ” ಎಂದರು.

ಪ್ರಗತಿಪರ ಚಿಂತಕ ಡಾ. ಜೆ.ಎಸ್.ಪಾಟೀಲ್ ಮಾತನಾಡಿ, “ಅಸತ್ಯದ ಕೈಯಲ್ಲಿ ಎಮ್.ಎಮ್.ಕಲಬುರ್ಗಿ ಎಂಬ ಸತ್ಯವಾದಿ ಕೊಲೆಯಾದರು. ಪುರಾಣಗಳನ್ನೇ ನಮ್ಮ ಇತಿಹಾಸವೆಂದು ತಿಳಿದಿದ್ದ ಮೂಲನಿವಾಸಿಗಳಿಗೆ ಬ್ರಿಟಿಷರ ಅಳ್ವಿಕೆಯಿಂದ ನಮಗೂ ಒಂದು ಭವ್ಯ ಇತಿಹಾಸವಿದೆ ಎಂಬುದು ತಿಳಿಯಿತು. ನಕಲಿ ರಾಷ್ಟ್ರೀಯವಾದದಿಂದಲೇ ಅಂದು ನಮ್ಮ‌ ದೇಶ ಪರಕೀಯರ ಗುಲಾಮಗಿರಿಗೆ ಬೀಳಲು ಕಾರಣವಾಯಿತು. ಹೀಗೇ ಬದುಕಬೇಕೆಂಬ ಸ್ಥಾಪಿತ ಮೌಲ್ಯಗಳನ್ನು ಬಸವಣ್ಣ ತನ್ನ ಎಡಗಾಲಿನಿಂದ ಒದ್ದು ಹೊರಬಂದರು. ಬ್ರಾಹ್ಮಣರೇ ದೇವರೆಂಬ ವಾದವನ್ನು ಶರಣರು ಸಂಪೂರ್ಣ ದಿಕ್ಕರಿಸುತ್ತಾರೆ” ಎಂದು ತಿಳಿಸಿದರು.

ಸಾನಿಧ್ಯ ವಹಿಸಿದ ಆಳಂದ ಅನುಭವ ಮಂಟಪದ ಕೋರಣೇಶ್ವರ ಸ್ವಾಮೀಜಿ ಮಾತನಾಡಿ, “ಯು.ಆರ್.ಅನಂತಮೂರ್ತಿ ಬರೆದದ್ದನ್ನು ಮ್.ಎಮ್.ಕಲಬುರ್ಗಿಯವರು ಹೇಳಿದರೆ ಕೊಲೆ ಮಾಡಿಸಿದರು. ಬರೆದವರಿಗೆ ಮಾತ್ರ ಏಕೆ ಯಾವುದೇ ತೊಂದರೆ ಉಂಟುಮಾಡಲಿಲ್ಲ‌ ಎಂಬುದನ್ನು ಯೋಚಿಸಬೇಕಿದೆ. ಕಲಬುರ್ಗಿಯವರ ನೈಜ ಇತಿಹಾಸದ ಸಂಶೋಧನೆಗೆ ಅವರ ಕೊಲೆಯಾಗುತ್ತದೆ. ಏಕೆಂದರೆ ಲಿಂಗಾಯತ ಚಳುವಳಿಯ ಕ್ರಾಂತಿ, ಬುದ್ದ ಚಳುವಳಿಯ ಮುಂದುವರೆದ ಭಾಗವೆಂದು ಅವರು ಹೇಳಿದ್ದರು. ಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳನ್ನು ಓದಿಯೂ ಆಚರಣೆಗೆ ತರದೆ ಇರುವ ಯಾರೇ ಇರಲಿ ಆ ಮಹಾ ಪುರುಷರ ಕೊಲೆ ಮಾಡಿದಂತೆಯೆ ಅಗುತ್ತದೆ. ಕುರುಡರ ಸಮಾಜದಲ್ಲಿ ನಾವು ಬದುಕುತ್ತಿರುವುದು ನೋವಿನ ಸಂಗತಿಯಾಗಿದೆ” ಎಂದರು.

ಪ್ರಾಸ್ತಾವಿಕವಾಗಿ ರಾಜ್ಯ ಸಂಚಾಲಕ ಡಾ. ಎ.ಬಿ.ರಾಮಚಂದ್ರಪ್ಪ ಮಾತನಾಡಿ, “ಇವತ್ತು ಸಮಾಜವು ಮನುವಾದಿಗಳ ಕುತಂತ್ರದಿಂದಾಗಿ ಮೌಢ್ಯತೆಯ ಕೂಫಕ್ಕೆ ಬಿದ್ದು ನಲುಗುತ್ತಿದೆ. ದೇಶಪ್ರೇಮದ ಹೆಸರಿನಲ್ಲಿ ಕೋಮುವಾದ ತಾಂಡವವಾಡುತ್ತಿದೆ. ದೇಶದ ಎಲ್ಲ ಸಮುದಾಯಗಳು ಒಂದಾಗಿ ಬುದ್ಧ, ಬಸವ, ಅಂಬೇಡ್ಕರ್ ಭಾರತವನ್ನು ಕಟ್ಟಲು ಮುಂದಾದರೆ ಮಾತ್ರ ಸಂವಿಧಾನದ ಆಶಯ ಉಳಿಯುತ್ತದೆ” ಎಂದರು.

ಬೆಂಗಳೂರಿನ ವಿಚಾರವಾದಿ ಡಾ. ಸ್ವಾಮಿ ಎಚ್.ಆರ್ ಪವಾಡ ರಹಸ್ಯ ಬಯಲು ಕಾರ್ಯಕ್ರಮ ನಡೆಸಿಕೊಟ್ಟರು. ಸಿದ್ಧಾರ್ಥ ಡಿ. ಚಿಮ್ಮಾಈದ್ಲಾಯಿ ಹಾಗೂ ಸಂಗಡಿಗರು ಹೋರಾಟದ ಹಾಡುಗಳನ್ನು ಹಾಡಿದರು, ಎಸ್.ಸಿ/ ಎಸ್.ಟಿ ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟ, ವಿದ್ಯಾರ್ಥಿ ಬಂಧುತ್ವ ವೇದಿಕೆ, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಮಿತಿಯ ಸರ್ವಸದಸ್ಯರು ಉಪಸ್ಥಿತರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟದಿಂದ ವಿದ್ಯಾರ್ಥಿ ಯುವಜನರ ಪ್ರಣಾಳಿಕೆ ಬಿಡುಗಡೆ 

ರಾಜ್ಯದಲ್ಲಿ ಒಟ್ಟು ಎಂಟು ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟದಿಂದ 2024ರ ಈ ಬಾರಿಯ...

ವಿಜಯಪುರ | ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಸಭೆ

ರಾಜ್ಯದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ‌ ಕೆ ಶಿವಕುಮಾರ್,...

ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಗೆಲುವು ಗ್ಯಾರಂಟಿ: ಸದಾಶಿವ ಉಳ್ಳಾಲ್ ವಿಶ್ವಾಸ

ಉಳುವವನೇ ಭೂಮಿಯೊಡೆಯ, ಲೋನ್ ಮೇಳ, ಬ್ಯಾಂಕ್ ರಾಷ್ಟ್ರೀಕರಣ, ಮಂಗಳೂರಿಗೆ ಎನ್‌ಎಂಪಿಟಿ, ವಿಮಾನ...

ವಿಜಯಪುರ ಲೋಕಸಭಾ ಕ್ಷೇತ್ರ; 21 ಅಭ್ಯರ್ಥಿಗಳಿಂದ 35 ನಾಮಪತ್ರ ಸಲ್ಲಿಕೆ

ಲೋಕಸಭಾ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ ವಿಜಯಪುರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ಏಪ್ರಿಲ್‌...