ಮೈಸೂರು ನಗರದ ಜಗನ್ಮೋಹನ ಅರಮನೆಯಲ್ಲಿ ನಡೆದ ಸಾರ್ವಜನಿಕ ಸೀರತ್ ಸಮಾವೇಶವು ಧರ್ಮ, ಜಾತಿ ಹಾಗೂ ಸಮುದಾಯಗಳ ನಡುವಿನ ಸೌಹಾರ್ದ, ಮಾನವೀಯತೆ ಮತ್ತು ಸಹಬಾಳ್ವೆಯ ಅಗತ್ಯವನ್ನು ಪ್ರತಿಪಾದಿಸುವ ವೇದಿಕೆಯಾಗಿ ಗಮನ ಸೆಳೆಯಿತು.
ಸಮಾವೇಶದಲ್ಲಿ ಮಾತನಾಡಿದ ವಾಟಾಳು ಶ್ರೀ ಸೂರ್ಯಸಿಂಹಾಸನ ಮಠದ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ವಾಟಾಳು ಮಠಕ್ಕೂ ಮುಸ್ಲಿಂ ಸಮುದಾಯಕ್ಕೂ ಹಿಂದಿನಿಂದಲೂ ಭಾವೈಕ್ಯತೆಯ ಸಂಬಂಧವಿದೆ. ಧರ್ಮದ ಹೆಸರಿನಲ್ಲಿ ಭೇದಭಾವವಲ್ಲ, ಮಾನವೀಯತೆ ಮತ್ತು ಸಹಬಾಳ್ವೆಯೇ ಸಮಾಜದ ಮೂಲವಾಗಬೇಕು ಎಂದು ಹೇಳಿದರು.
“ವಾಟಾಳ್ ಶ್ರೀ ಎಂದರೆ ಮುಸ್ಲಿಮರ ಶ್ರೀ ಎನ್ನುವ ಮಟ್ಟಿಗೆ ಸಮುದಾಯದೊಂದಿಗೆ ಬಾಂಧವ್ಯವಿದೆ. ಹಿಂದಿನಿಂದಲೂ ವಾಟಾಳು ಮಠ ಹಾಗೂ ಮುಸ್ಲಿಂ ಸಮುದಾಯದ ನಡುವೆ ಭಾವೈಕ್ಯತೆಯ ಸಂಬಂಧ ಬೆಳೆದು ಬಂದಿದೆ. ಸಮಾಜದಲ್ಲಿ ಹಿಂದೂ-ಮುಸ್ಲಿಂ ಸೇರಿದಂತೆ ಎಲ್ಲರೂ ಒಂದೇ. ಯಾರನ್ನೂ ಹೊರಗಿಟ್ಟು ನೋಡುವ ಮನೋಭಾವ ಮತ್ತು ವ್ಯವಸ್ಥೆ ತೊಲಗಬೇಕು”. ಸಮುದಾಯಗಳ ನಡುವೆ ಸೌಹಾರ್ದ, ಸಹಬಾಳ್ವೆ ಹಾಗೂ ಪರಸ್ಪರ ಗೌರವದ ಬದುಕು ನಿರ್ಮಾಣವಾಗಬೇಕು. ಯಾವುದೇ ರಾಜಕೀಯ ಪ್ರೇರಿತ ವ್ಯವಸ್ಥೆಗೆ ಸಿಲುಕದೆ, ಭೇದಭಾವವನ್ನು ಬದಿಗಿಟ್ಟು ಸಮಾಜದಲ್ಲಿ ಶಾಂತಿ ಮತ್ತು ಸಹೋದರತ್ವ ಬೆಳೆಸಬೇಕಿದೆ ಎಂದು ಕರೆ ನೀಡಿದರು.
ಸೌಹಾರ್ದದ ಸಂದೇಶ ಸಾರುವ ಅಭಿಯಾನ
ಜಮಾಅತೆ ಇಸ್ಲಾಮೀ ಹಿಂದ್ ವಲಯ ಸಂಚಾಲಕ ಜ. ಅಬ್ದುಸ್ಸಲಾಮ್ ಯು. ಮಾತನಾಡಿ, ಜಮಾಅತೆ ಇಸ್ಲಾಮೀ ಹಿಂದ್ ಹಲವು ದಶಕಗಳಿಂದ ದೇಶದಲ್ಲಿ ಸೌಹಾರ್ದ ಮತ್ತು ಮಾನವೀಯತೆಯ ಸಂದೇಶವನ್ನು ಸಾರುತ್ತಾ ಬಂದಿದೆ. ರಾಜ್ಯಾದ್ಯಂತ ಸಾರ್ವಜನಿಕ ಸೀರತ್ ಅಭಿಯಾನ ನಡೆಯುತ್ತಿದ್ದು, ಪ್ರವಾದಿ ಮುಹಮ್ಮದ್ ಅವರ ಜೀವನ, ಸಂದೇಶ ಹಾಗೂ ಅವರು ಪ್ರತಿಪಾದಿಸಿದ ಮಾನವೀಯ ಮೌಲ್ಯಗಳನ್ನು ಸಮಾಜಕ್ಕೆ ಪರಿಚಯಿಸುವ ಉದ್ದೇಶ ಹೊಂದಿದೆ. ಪ್ರವಾದಿಯವರ ಜೀವನದಲ್ಲಿ ಸಮಾಜ ಸುಧಾರಣೆ, ನ್ಯಾಯ, ಸಮಾನತೆ ಮತ್ತು ಮಾನವೀಯತೆಗೆ ವಿಶೇಷ ಸ್ಥಾನವಿತ್ತು ಎಂದು ಹೇಳಿದರು.
ಸಮಾಜದ ಒಳಿತಿಗಾಗಿ ಶ್ರಮಿಸಿದ ಮಹನೀಯರನ್ನು ಯಾವುದೇ ಒಂದು ಧರ್ಮ ಅಥವಾ ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸಲಾಗದು. ಮಾನವಕುಲದ ಒಳಿತಿಗಾಗಿ ದುಡಿದವರ ಸಂದೇಶ ಎಲ್ಲರಿಗೂ ಸೇರಿದೆ. ಪ್ರವಾದಿ ಮುಹಮ್ಮದ್ ಅವರು ಮದೀನಾದಲ್ಲಿ ತಮ್ಮ ಜೀವನದ ಅವಧಿಯಲ್ಲಿ ಸಾಮಾಜಿಕ ಪರಿವರ್ತನೆಗೆ ಮಹತ್ವದ ಕೊಡುಗೆ ನೀಡಿದರು ಎಂದು ಅವರು ಹೇಳಿದರು.
“ಧರ್ಮಗಳ ಗೌರವವೇ ಸಂವಿಧಾನದ ಆಶಯ”

ಶಾಸಕ ತನ್ವೀರ್ ಸೇಠ್ ಮಾತನಾಡಿ, ಕುರಾನ್ ಮಾರ್ಗದರ್ಶನ ನೀಡುವ ಗ್ರಂಥವಾಗಿದ್ದು, ಪ್ರವಾದಿ ಮುಹಮ್ಮದ್ ಅವರು ಆದರ್ಶಪ್ರಾಯ ವ್ಯಕ್ತಿತ್ವ ಹೊಂದಿದ್ದರು. ವಿಶ್ವಶಾಂತಿ ಮತ್ತು ಮಾನವೀಯ ಮೌಲ್ಯಗಳ ಪರವಾಗಿ ಪ್ರವಾದಿಯವರ ಸಂದೇಶವನ್ನು ಅರ್ಥಮಾಡಿಕೊಳ್ಳಬೇಕು. ಎಲ್ಲ ಧರ್ಮಗಳನ್ನೂ ಗೌರವಿಸುವುದು, ತನ್ನ ಧರ್ಮವನ್ನು ಆಚರಿಸುವುದರ ಜೊತೆಗೆ ಅನ್ಯ ಧರ್ಮಗಳ ನಂಬಿಕೆ ಮತ್ತು ಆಚರಣೆಗಳಿಗೂ ಗೌರವ ನೀಡುವುದು ಸಂವಿಧಾನದ ಆಶಯವಾಗಿದೆ ಎಂದು ಹೇಳಿದರು.
ಜಮಾಅತೆ ಇಸ್ಲಾಮೀ ಹಿಂದ್ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸಂಘಟಿತವಾಗಿ ಬೆಳೆದ ಸಂಘಟನೆಯಾಗಿದ್ದು, ಅಂದಿನಿಂದ ಇಂದಿನವರೆಗೂ ಸಮಾಜದ ಒಳಿತಿಗಾಗಿ ಹಲವು ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ. ಧಾರ್ಮಿಕ ಅಪಸ್ವರ ಮತ್ತು ಅಪನಂಬಿಕೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಸೌಹಾರ್ದದ ಸಂದೇಶವನ್ನು ಇನ್ನಷ್ಟು ವ್ಯಾಪಕವಾಗಿ ತಲುಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸಾಮಾಜಿಕವಾಗಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಮಾಜ ಮುಂದುವರಿದಿದ್ದರೂ, ಸರಿ-ತಪ್ಪುಗಳನ್ನು ವಿವೇಚಿಸುವ ವಿಚಾರದಲ್ಲಿ ಹಿಂದೆ ಬೀಳುತ್ತಿರುವ ಆತಂಕವಿದೆ. ಯುವ ಸಮುದಾಯ ಮೊಬೈಲ್ ಮತ್ತು ಡಿಜಿಟಲ್ ಜಗತ್ತಿನಲ್ಲಿ ಮುಳುಗಿರುವ ಸಂದರ್ಭದಲ್ಲಿ ಮೌಲ್ಯಾಧಾರಿತ ಚಿಂತನೆ ಬೆಳೆಸಬೇಕಿದೆ. ಶಿಕ್ಷಣ ಎಲ್ಲರ ಹಕ್ಕು. ಶಿಕ್ಷಣ ಕ್ಷೇತ್ರದಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿಕೊಂಡು ಸಮಾಜವನ್ನು ಹೆಚ್ಚು ವಿದ್ಯಾವಂತ ಮತ್ತು ಜ್ಞಾನವಂತವಾಗಿಸುವ ನಿಟ್ಟಿನಲ್ಲಿ ಮುಂದುವರಿಯಬೇಕು. ಎಲ್ಲ ಸಮುದಾಯಗಳೊಂದಿಗೆ ಬೆರೆತು ಬದುಕುವ ಹಾಗೂ ಆರ್ಥಿಕವಾಗಿ ಸಬಲೀಕರಣ ಹೊಂದುವ ಅವಕಾಶಗಳನ್ನು ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸಮಾಜದ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಸಿಗುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದರು.
“ಸುಳ್ಳಿನ ಹರಡುವಿಕೆಯನ್ನು ಸತ್ಯದಿಂದ ಎದುರಿಸಬೇಕು”

ಸೀರತ್ ಸಂದೇಶ ನೀಡಿದ ಮುಹಮ್ಮದ್ ಕುಂಞೆ ಮಾತನಾಡಿ, ಧರ್ಮದ ಹೆಸರಿನಲ್ಲಿ ಭಯ ಹುಟ್ಟಿಸುವ ಪ್ರವೃತ್ತಿ ಮತ್ತು ಮಾನವೀಯ ಕಾರುಣ್ಯವನ್ನು ಕಳೆದುಕೊಳ್ಳುತ್ತಿರುವ ಮನೋಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ದಾರಿ ತಪ್ಪುತ್ತಿರುವ ಸಮಾಜಕ್ಕೆ ಅರಿವು ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಇಂದಿನ ದಿನಗಳಲ್ಲಿ ಸುಳ್ಳು ಮಾಹಿತಿಯ ಹರಡುವಿಕೆ ಹೆಚ್ಚಾಗಿದ್ದು, ಕೆಲವೊಮ್ಮೆ ಸುಳ್ಳನ್ನೇ ಸತ್ಯವೆಂಬಂತೆ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸತ್ಯ, ಜ್ಞಾನ ಮತ್ತು ವಿವೇಚನೆಯ ಮೂಲಕ ಸಮಾಜವನ್ನು ಜಾಗೃತಗೊಳಿಸುವ ಅಗತ್ಯವಿದೆ ಎಂದರು.
ಪ್ರವಾದಿ ಮುಹಮ್ಮದ್ ಅವರನ್ನು ಮಾನವೀಯತೆಯ ನಾಯಕನಾಗಿ ನೋಡಬೇಕಿದ್ದು, ಅವರು ಜಗತ್ತಿಗೆ ನೀಡಿದ ಮಾರ್ಗದರ್ಶನವು ಜ್ಞಾನ, ಸಮಾನತೆ ಮತ್ತು ಸಾಮಾಜಿಕ ಸುಧಾರಣೆಯ ಮೌಲ್ಯಗಳನ್ನು ಒಳಗೊಂಡಿದೆ.
ಪ್ರವಾದಿಯವರನ್ನು ದೇವರೆಂದು ಪೂಜಿಸುವುದಕ್ಕಿಂತ, ಅವರು ಮನುಷ್ಯನಾಗಿ ಬದುಕಿ ತೋರಿಸಿದ ಮೌಲ್ಯಗಳು ಮತ್ತು ಸಂದೇಶಗಳನ್ನು ಅರ್ಥಮಾಡಿಕೊಂಡು ಅನುಸರಿಸುವುದು ಮುಖ್ಯ ಎಂಬ ವಿಚಾರವನ್ನು ಅವರು ಪ್ರಸ್ತಾಪಿಸಿದರು. “ಎಲ್ಲರೂ ಸಮಾನರು ಎಂಬ ಸಂದೇಶ ಅಂದೇ ಸಾರಲಾಗಿತ್ತು”. ಮಾನವ ಸಮಾನತೆಯ ಕುರಿತು ಪ್ರವಾದಿ ಮುಹಮ್ಮದ್ ಅವರು ಶತಮಾನಗಳ ಹಿಂದೆಯೇ ನೀಡಿದ ಸಂದೇಶವನ್ನು ವಿವರಿಸಿದರು.
ಮನುಷ್ಯರೆಲ್ಲರೂ ಸಮಾನರು ಎಂಬ ವಿಚಾರವನ್ನು ಪ್ರವಾದಿಯವರ ಸಂದೇಶದಲ್ಲಿ ಸ್ಪಷ್ಟವಾಗಿ ಕಾಣಬಹುದು. ಜಾತಿ, ಜನಾಂಗ, ವರ್ಣ ಅಥವಾ ಸಾಮಾಜಿಕ ಸ್ಥಾನಮಾನದ ಆಧಾರದ ಮೇಲೆ ಮನುಷ್ಯರನ್ನು ಮೇಲು-ಕೀಳು ಎಂದು ವಿಂಗಡಿಸಬಾರದು ಎಂಬ ಮಾನವೀಯ ಚಿಂತನೆ ಅವರ ಬೋಧನೆಗಳ ಪ್ರಮುಖ ಅಂಶವಾಗಿದೆ. ಸಮಾಜದಲ್ಲಿ ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿರುವುದಕ್ಕೆ ಸಾರ್ವಜನಿಕವಾಗಿ ನಡೆದ ಕೆಲವು ಘಟನೆಗಳು ಸಾಕ್ಷಿಯಾಗಿವೆ ಎಂದು ಅವರು ಉಲ್ಲೇಖಿಸಿದರು. ಜಾತಿ ಮತ್ತು ಧರ್ಮದ ಆಧಾರದ ಮೇಲೆ ನಡೆಯುವ ತಾರತಮ್ಯವನ್ನು ತೊಡೆದುಹಾಕಿ ಮಾನವ ಸಮಾನತೆಯನ್ನು ಸ್ಥಾಪಿಸುವ ಅಗತ್ಯವಿದೆ ಎಂದರು.
ಜನಾಂಗೀಯ ದೌರ್ಜನ್ಯಗಳು, ಯುದ್ಧಗಳು ಹಾಗೂ ವಿಶ್ವದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಸಂಘರ್ಷಗಳು ಮಾನವಕುಲಕ್ಕೆ ಆತಂಕಕಾರಿ ಬೆಳವಣಿಗೆಗಳಾಗಿವೆ. ಇರಾನ್-ಪ್ಯಾಲೆಸ್ತೀನ್ ಸೇರಿದಂತೆ ಸಂಘರ್ಷಪೀಡಿತ ಪ್ರದೇಶಗಳಲ್ಲಿ ಶಾಂತಿ ನೆಲೆಸಬೇಕಿದ್ದು, ಯಾವುದೇ ಭಯವಿಲ್ಲದೆ ಬದುಕುವ ಅವಕಾಶ ಪ್ರತಿಯೊಬ್ಬ ಮನುಷ್ಯನಿಗೂ ದೊರೆಯಬೇಕು ಎಂದು ಹೇಳಿದರು.
ಸಮಾವೇಶದ ಒಟ್ಟಾರೆ ಸಂದೇಶವು ಧರ್ಮಗಳ ನಡುವೆ ಸಂಘರ್ಷಕ್ಕಿಂತ ಸಂವಾದ, ದ್ವೇಷಕ್ಕಿಂತ ಪ್ರೀತಿ, ಭೇದಭಾವಕ್ಕಿಂತ ಸಮಾನತೆ ಹಾಗೂ ಭಯಕ್ಕಿಂತ ವಿಶ್ವಾಸದ ಸಮಾಜ ನಿರ್ಮಾಣದ ಅಗತ್ಯವನ್ನು ಪ್ರತಿಪಾದಿಸಿತು. ಪ್ರವಾದಿ ಮುಹಮ್ಮದ್ ಅವರ ಜೀವನ ಮತ್ತು ಸಂದೇಶವನ್ನು ಒಂದು ಸಮುದಾಯದ ಧಾರ್ಮಿಕ ಆಚರಣೆಯಾಗಿ ಮಾತ್ರ ನೋಡದೆ, ಮಾನವೀಯ ಮೌಲ್ಯಗಳ ದೃಷ್ಟಿಕೋನದಿಂದ ಅರ್ಥೈಸಿಕೊಳ್ಳುವ ಅಗತ್ಯವಿದೆ ಎಂಬ ಅಭಿಪ್ರಾಯಗಳು ಸಮಾವೇಶದಲ್ಲಿ ವ್ಯಕ್ತವಾದವು.
ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಧರ್ಮಗಳ ನಡುವೆ ಪರಸ್ಪರ ಅರಿವು ಹೆಚ್ಚಿಸುವುದು, ಯುವಜನರಲ್ಲಿ ವೈಚಾರಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಹಾಗೂ ಸಮಾಜದ ದುರ್ಬಲ ವರ್ಗಗಳಿಗೂ ಸಮಾನ ಅವಕಾಶ ಕಲ್ಪಿಸುವುದು ಅತ್ಯಗತ್ಯ ಎಂಬ ಸಂದೇಶ ಸಮಾವೇಶದಿಂದ ಹೊರಹೊಮ್ಮಿತು.
ಈ ವಿಶೇಷ ಸುದ್ದಿ ಓದಿದ್ದೀರಾ? ಶಾಲಾ ದಾಖಲೆ ಪರಿಶೀಲಿಸಿ; ತಿದ್ದುಪಡಿಗೆ ಶಾಲೆ-BEO ಹಂತದವರೆಗೆ ಇರುವ ಮಾರ್ಗವೇನು?
ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಡಾ. ಬೆಳ್ಗಾಮಿ ಮುಹಮ್ಮದ್ ಸಾದ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಮೈಸೂರು ಡಯಾಸಿಸ್‌ನ ಸ್ಟ್ಯಾನಿ ಡಿ. ಅಲ್ಮೇಡ ಸೇರಿದಂತೆ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು, ಸೀರತ್ ಸಮಾವೇಶ ಸಮಿತಿ ಸದಸ್ಯರು ಹಾಗೂ ವಿವಿಧ ಕ್ಷೇತ್ರಗಳ ಆಹ್ವಾನಿತ ಗಣ್ಯರು ಭಾಗವಹಿಸಿದ್ದರು.




