ಕೆನಡಾದ ವಿನ್ನಿಪೆಗ್‌ನಲ್ಲಿ ನಡೆದ ಪ್ರತಿಷ್ಠಿತ 2026 ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ತಿಗಣಿಬಿದರಿ ಗ್ರಾಮದ ಕ್ರೀಡಾಪಟು ಸಚಿನ್ ತುಕಾರಾಮ್ ಸಾಲೊಂಕೆ ಅವರು ಭಾರತವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಗೆದ್ದು ದೇಶ, ರಾಜ್ಯ ಹಾಗೂ ವಿಜಯಪುರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಗ್ರಾಮೀಣ ಪರಿಸರದಿಂದ ಬೆಳೆದು ಬಂದಿರುವ ಸಚಿನ್ ಸಾಲೊಂಕೆ ಅವರು ಹಲವು ಸವಾಲುಗಳ ನಡುವೆಯೂ ಕಠಿಣ ಪರಿಶ್ರಮ, ನಿರಂತರ ಅಭ್ಯಾಸ ಹಾಗೂ ಕ್ರೀಡೆಯ ಮೇಲಿನ ಬದ್ಧತೆಯಿಂದ ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿದ್ದಾರೆ. ಭಾರತ ತಂಡಕ್ಕೆ ಆಯ್ಕೆಯಾಗಿ ಕೆನಡಾದಲ್ಲಿ ನಡೆದ ಪ್ರತಿಷ್ಠಿತ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಿ ಗಮನಾರ್ಹ ಪ್ರದರ್ಶನ ನೀಡುವ ಮೂಲಕ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಪರಿಶ್ರಮಕ್ಕೆ ಒಲಿದ ಅಂತಾರಾಷ್ಟ್ರೀಯ ಮನ್ನಣೆ
ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಎದುರಾಗುವ ಮೂಲಭೂತ ಸೌಲಭ್ಯಗಳ ಕೊರತೆ ಸೇರಿದಂತೆ ಹಲವು ಅಡೆತಡೆಗಳನ್ನು ಮೆಟ್ಟಿನಿಂತು ಸಚಿನ್ ಸಾಧಿಸಿರುವ ಈ ಯಶಸ್ಸು, ಗ್ರಾಮೀಣ ಪ್ರತಿಭೆಗಳಿಗೆ ಹೊಸ ಭರವಸೆ ಮೂಡಿಸಿದೆ.
ಅಂತಾರಾಷ್ಟ್ರೀಯ ಕ್ರೀಡಾಕೂಟದ ವೇದಿಕೆಯಲ್ಲಿ ಭಾರತದ ಪರ ಸ್ಪರ್ಧಿಸಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಸಚಿನ್ ಅವರು ವಿಜಯಪುರ ಜಿಲ್ಲೆಯ ಕ್ರೀಡಾ ಕ್ಷೇತ್ರದ ಸಾಮರ್ಥ್ಯವನ್ನು ವಿಶ್ವಮಟ್ಟದಲ್ಲಿ ಪರಿಚಯಿಸಿದ್ದಾರೆ.
ಅಭಿನಂದನೆಗಳ ಮಹಾಪೂರ
ಸಚಿನ್ ಸಾಲೊಂಕೆ ಅವರ ಸಾಧನೆಗೆ ಕ್ರೀಡಾಭಿಮಾನಿಗಳು, ಜನಪ್ರತಿನಿಧಿಗಳು, ಕ್ರೀಡಾ ಸಂಘಟನೆಗಳ ಮುಖಂಡರು ಹಾಗೂ ತಿಗಣಿಬಿದರಿ ಗ್ರಾಮದ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ. ಸ್ವಗ್ರಾಮದ ಯುವಕನೊಬ್ಬ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಗೆದ್ದಿರುವುದು ಜಿಲ್ಲೆಯ ಜನರಲ್ಲಿ ಹೆಮ್ಮೆಯ ಭಾವನೆ ಮೂಡಿಸಿದೆ.
ಈ ಸುದ್ದಿ ಓದಿದ್ದೀರಾ? ಮುದ್ದೇಬಿಹಾಳ | ದಾಸೋಹಿ ರೈತ ಉತ್ಪಾದಕ ಸಹಕಾರಿ ಸಂಘದ ಆರ್ಥಿಕ ಚಟುವಟಿಕೆ: ಗವಿಸಿದ್ದೇಶ್ವರ ಶ್ರೀಗಳಿಂದ ಚಾಲನೆ
ಗ್ರಾಮೀಣ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ, ತರಬೇತಿ ಹಾಗೂ ಮೂಲಸೌಕರ್ಯ ದೊರೆತರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ಸಚಿನ್ ಸಾಲೊಂಕೆ ಅವರ ಈ ಸಾಧನೆ ಸಾಕ್ಷಿಯಾಗಿದೆ.




