“ವಿರೋಧ ಪಕ್ಷಗಳು ಆಡಳಿತ ಪಕ್ಷದೊಂದಿಗೆ ಸೇರಿ ಕೆಲಸ ಮಾಡುವಾಗ ಡಿಎಸ್ಎಸ್ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತದೆ ಎಂದು ಪ್ರೊ.ಬಿ.ಕೃಷ್ಣಪ್ಪ ಅವರು ಹೇಳಿದ್ದರು. ಆ ಎಂಬತ್ತರ ದಶಕದ ಚಳುವಳಿಯನ್ನು ಮತ್ತೆ ಈಗ ಕಟ್ಟಬೇಕಿದೆ. ಒಂದು ವೇಳೆ ಕಟ್ಟದಿದ್ದರೆ ಉಳಿಗಾಲವಿಲ್ಲ” ಎಂದು ಡಿಎಸ್ಎಸ್ ರಾಜ್ಯ ಸಂಚಾಲಕರು ಎಂ ಗುರುಮೂರ್ತಿ ಅವರು ಕರೆ ನೀಡಿದರು.
ಗದಗ ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ ಭವನದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರೊ. ಬಿ.ಕೃಷ್ಣಪ್ಪ ಅವರ 89ನೇ ಜನ್ಮ ದಿನಾಚರಣೆ ಅಂಗವಾಗಿ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸು ಪರೀಕ್ಷೇಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
“ಪ್ರೊ ಬಿ. ಕೃಷ್ಣಪ್ಪ ಅವರು 1938 ಹರಿಹರದಲ್ಲಿ ಜನಿಸುವರು. ಅವರ ಕರ್ಮ ಭೂಮಿ ಭದ್ರಾವತಿ. ಅವರ ಜನ್ಮದಿನ ಯಾಕೆ ಆಚರಿಸುತ್ತೇವೆ ಅಂದರೆ ಅವರ ವಿಚಾರಗಳು ವರ್ತಮಾನಕ್ಕೆ ಮಾರ್ಗಸೂಚಿ ಆಗನೇಕು. ನಮ್ಮ ಒಳಗೆ ಮತ್ತೆ ಮತ್ತೆ ಹುಟ್ಟಬೇಕು. ಅವರ ವಿಚಾರಗಳು ನಾಡಿನೂದ್ದಕ್ಕೂ ಪಸರಿಸಬೇಕು” ಎಂದು ಹೇಳಿದರು.
“ಡಾ.ಬಿ.ಆರ್.ಅಂಬೇಡ್ಕರ ಅವರ ಹಣತೆಗಳಲ್ಲಿ ಬಿ.ಕೆ. ಅವರು ಬೆಳಗಿದವರು. ಇಪ್ಪತ್ತನೇ ಶತಮಾನದ ನಾಲ್ಕು ದಶಕಗಳ ಕಾಲ ಹೋರಾಟ ಮಾಡಿದರು. ಭೂ ಮಾಲೀಕರಿಗೆ, ಜಾತಿವಾದಿಗಳಿಗೆ ನಡುಕ ಹುಟ್ಟಿಸಿದವರು. ಇದೇ ಗದಗ ಜಿಲ್ಲೆಯಲ್ಲಿ ಅವರು 59ನೇ ವಯಸ್ಸಿಗೆ ನಮ್ಮಿಂದ ಅಗಲಿ ಹೋಗುತ್ತಾರೆ. ಸಾಧಕರಿಗೆ ಆಯಸ್ಸು ಕಡಿಮೆ ಇರುವುದು ಜಗಜ್ಜಾಹೀರು ಆಗಿದೆ” ಎಂದರು.
“ಎಪ್ಪತ್ತರ ದಶಕದಲ್ಲಿ ದಲಿತರು ಅತಿ ಹೆಚ್ಚು ಅಂಕ ಪಡೆದಿದ್ದಕ್ಕೆ, ಕೊಲೆ ಮಾಡುವರು. ಜೀತ ಪದ್ದತಿಯಲ್ಲಿದ್ದ ವ್ಯಕ್ತಿ ನಾಳೆ ಬರುವುದಿಲ್ಲ ಎಂದಿದ್ದಕ್ಕೆ ಕೊಲೆ ಮಾಡಿದರು. ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಆದಾಗ ಯಾರು ಕೇಳಲಿಲ್ಲ. ದಲಿತರು ನೀರು ಮುಟ್ಟಿದರೇ ಊರಿಂದ ಬಹಿಷ್ಕಾರ ಹಾಕುತ್ತಿದ್ದರು. ಇಷ್ಟೆಲ್ಲ ನಡೆದರೂ ಯಾಕೆ ಯಾರು ಧ್ವನಿ ಎತ್ತುತ್ತಿಲ್ಲವೆಂದು ಪ್ರೋ ಬಿ.ಕೆ ಯೋಚಿಸುತ್ತಾರೆ. ಸಚಿವರಿದ್ದಾಗ ಬಸವಲಿಂಗಪ್ಪನವರು ಮಲ ಹೊರುವ ಪದ್ದತಿಯನ್ನು ನಿಷೇದ ಮಾಡುತ್ತಾರೆ. ಕನ್ನಡ ಸಾಹಿತ್ಯದಲ್ಲಿ ಬರಿ ಬೂಸಾ ಇದೆ ಎಂದು ಹೇಳಿದಾಗ, ಜಾತಿವಾದಿಗಳು ಪ್ರತಿಭಟಿಸಿ ರಾಜಿನಾಮೆ ಕೊಡುವ ಸಂದರ್ಭ ಬರುತ್ತದೆ” ಎಂದು ಹೇಳಿದರು.
“ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ಯಾರು ಕೇಳದಿದ್ದಾಗ, ಪ್ರೊ. ಬಿ.ಕೆ ಅವರು ಸಮಾಜವಾದಿ ಚಳುವಳಿಯಿಂದ ಹೊರಬಂದು 1947ರಲ್ಲಿ ಡಿಎಸ್ಎಸ್ ಹುಟ್ಟು ಹಾಕುತ್ತಾರೆ. ಆರಂಭದಲ್ಲಿ ವಿದ್ಯಾರ್ಥಿಗಳೇ ಕಾರ್ಯಕರ್ತರಾಗಿ, ಮನೆ ಮನೆಗೆ ಹೋಗಿ ಡಿಎಸ್ಎಸ್ ಕಟ್ಟಿ ಬೆಳೆಸಿದರು. ಕರ್ನಾಟಕದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿ, ಹೋರಾಟದ ಕಿಚ್ಚನ್ನು ಹೊತ್ತಿಸಿದರು” ಎಂದು ಹೇಳಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ಭತ್ತವನ್ನು ಬೆಳಯುವ ಗದ್ದೆಗಳಾಗಬೇಕೆ ಹೊರತು, ಭತ್ತ ತುಂಬುವ ಚೀಲಗಳಾಗಬಾರದು ಎಂದು ಕುವೆಂಪು ಅವರ ಮಾತನ್ನು ಹೇಳಿ ವಿದ್ಯಾರ್ಥಿಗಳು ಗದ್ದೆಗಳಾಗಬೇಕೇ ಹೊರತು ಚೀಲಗಳಾಗಬಾರದು” ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
“ಮನುಷ್ಯನಿಗೆ ವಿದ್ಯೆ ಬಹಳ ಮುಖ್ಯ. ವಿದ್ಯೆ ಹಾಳಾದರೆ ಬದುಕೇ ಹಾಳಾಗುತ್ತದೆ. ನಿಮ್ಮಲ್ಲಿರುವ ಪೆನ್ನು ಪುಸ್ತಕ ಈಡೀ ನಿಮ್ಮ ಬದುಕನ್ನೆ ಬದಲಾಯಿಸುವ ಶಕ್ತಿ ಇದೆ” ಎಂದು ತಿಳಿದುಕೊಳ್ಳಬೇಕು” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ರಾಜ್ಯ ಸಂಘಟನಾ ಸಂಚಾಲಕರು ಎಸ್.ಎನ್. ಬಳ್ಳಾರಿ: ಪ್ರಾಸ್ತಾವಿಕ ಮಾತನಾಡಿ, “ಪ್ರೊ. ಬಿ. ಕೃಷ್ಣಪ್ಪ ಅವರು ಹೋರಾಟದ ಮೂಲಕ ಸಂಘಟನೆ ಕಟ್ಟಿದವರು. ಜ್ಞಾನದ ಕಣಜ ಆದಂತಹ ಪ್ರೊ.ಬಿ.ಕೃಷ್ಣಪ್ಪ ಅವರನ್ನು ಆಗ ಗದಗಿನ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವು. ಉತ್ಸುಕದಿಂದ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕಾರ್ಯಕ್ರಮದ ಹಿಂದಿನ ದಿನ ಅವರಿಗೆ ಆರೋಗ್ಯದಲ್ಲಿ ಏರುಪೇರಾದಾಗ ಆಸ್ಪತ್ರೆಗೆ ದಾಖಲಿಸಿದರು. ಆಗ ನಮಗೆಲ್ಲರಿಗೂ ಬೇಸರವಾಯಿತು. ಕಾರ್ಯಕ್ರಮವನ್ನು ತರಾತುರಿಯಲ್ಲಿ ಮುಗಿಸಿ, ಸಂಜೆ ಆಸ್ಪತ್ರೆಗೆ ಹೋಗಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದೆವು. ಸ್ವಲ್ಪ ಸಮಯಕ್ಕೆ ಪ್ರೊ.ಬಿ.ಕೃಷ್ಣಪ್ಪ ಅವರು ನಮ್ಮನ್ನು ಬಿಟ್ಟು ಹೋದ ಸುದ್ದಿ ತಿಳಿದು ಬಹಳ ದುಃಖದಲ್ಲಿ ಮುಳಿಗಿದೇವು” ಎಂದು ಅಂದಿನ ನೆನಪುಗಳನ್ನು ಹಂಚಿಕೊಂಡರು.
“ಪ್ರೊ.ಬಿ.ಕೃಷ್ಣಪ್ಪ ಅವರು ತಮಗಾಗಿ ಏನನ್ನು ಮಾಡಿಕೊಳ್ಳದೇ ದಲಿತರ ಪರವಾಗಿ ಸಾಕಷ್ಟು ಹೋರಾಟಗಳನ್ನು ಮಾಡಿದರು. ಚಂದ್ರಗುತ್ತಿಯ ಬೆತ್ತಲೇ ಸೇವೆಯ ವಿರುದ್ದ ಸುಮಾರು ವರ್ಷಗಳ ಹೋರಾಟ ಮಾಡಿದರು. ಹೋರಾಟದ ಫಲದಿಂದ ಸರಕಾರ ಬೆತ್ತಲೆ ಸೇವೆಯನ್ನು ತಡೆಗಟ್ಟಿತು. ಅಂತಹ ಮಹಾನ್ ನಾಯಕನ ಹುಟ್ಟು ಹಬ್ಬವನ್ನು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುವ ಮೂಲಕ ಆಚರಿಸುತ್ತಿದ್ದೇವೆ” ಎಂದರು.
ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕ ಪಡೆದ ಎಸ್.ಎಸ್ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಪೌರ ಕಾರ್ಮಿಕರಿಗೆ ಗೌರವ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಡಿಎಸ್ಎಸ್ ಜಿಲ್ಲಾ ಸಂಚಾಲಕರು ಎಲ್.ಎಚ್ ದುರುಗಪ್ಪ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಸಂಘಟನಾ ಸಂಚಾಲಕರು ಹನುಮಂತಪ್ಪ ಕಾಕರಗಲ್, ಮಿಥುನ್ ಪಾಟೀಲ್, ಪ್ರಕಾಶ ಹೊಸಳ್ಳಿ, ಶರಣು ಪೂಜಾರ, ಬಸವರಾಜ ಕಡೆಮನಿ, ಮಂಜುನಾಥ ಬುರಡಿ, ನಾಗರಾಜ ಹೊಸಮನಿ, ಸುಬಾಸ್ ದೊಡ್ಡಮನಿ, ಶರೀಫ್ ಬಿಳಿಯಲಿ ಜಿಲ್ಲಾ ಮಹಿಳಾ ಒಕ್ಕೂಟ ಜಿಲ್ಲಾ ಸಂಚಾಲಕರು ಸುಶೀಲಾ ಶಿವಪ್ಪ ಛಲವಾದಿ ಇನ್ನೂ ಅನೇಕರು ವೇದಿಕೆ ಮೇಲೆ ಉಪಸ್ಥಿತರಿದ್ದರು.





