“ಸಾಮ್ರಾಜ್ಯಸಾಹಿ ಕಪಿಮುಷ್ಠಿಯಿಂದ ತಾಯ್ನಾಡಿನ ವಿಮೋಚನೆಗಾಗಿ ಅಪ್ರತಿಮವಾಗಿ ಹೋರಾಡಿದ ದೇಶದ ಅಗ್ರಗಣ್ಯ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರ ತ್ಯಾಗ ಬಲಿದಾನವನ್ನು ಸ್ಮರಿಸುವುದು ಭಾರತೀಯರಾದ ನಮ್ಮ ಕರ್ತವ್ಯ” ಎಂದು ದಲಿತ ಹಕ್ಕುಗಳ ಸಮಿತಿ (ಡಿಎಚ್ಎಸ್) ಜಿಲ್ಲಾ ಸಂಚಾಲಕರಾದ ವೀರಣ್ಣ ಗಡ್ಡಿಯವರ ಅಭಿಪ್ರಾಯಪಟ್ಟರು.
ಹಾವೇರಿ ಜಿಲ್ಲೆಯ ಶಿಗ್ಗಾವು ಪಟ್ಟಣದ ಜಿ+ಮನೆ ಆವರಣದಲ್ಲಿ ಸೋಮವಾರ ಡಿವೈಎಫ್ಐ ಹಾಗೂ ಜಿ+ ಮನೆ ಫಲಾನುಭವಿಗಳ ವತಿಯಿಂದ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರ ಹುತಾತ್ಮ ದಿನದ ಅಂಗವಾಗಿ ತೆಂಗಿನ ಸಸಿ ನೆಟ್ಟು ಮಾತನಾಡಿದರು.
“ಇಂಕ್ವಿಲಾಬ್ ಜಿಂದಾಬಾದ್, ಸಾಮ್ರಾಜ್ಯಷಾಹಿ ಮುರ್ದಾಬಾದ್” ಇದು ಭಗತ್ ಸಿಂಗ್ ಮತ್ತು ಆತನ ಸಂಗಾತಿಗಳು ಜನಪ್ರಿಯಗೊಳಿಸಿದ ಘೋಷಣೆ. ಅಂದು ಬ್ರಿಟೀಷ್ ಸಾಮ್ರಾಜ್ಯಶಾಹಿಯು ಭಾರತ ದೇಶವನ್ನು ವಸಾಹತುವನ್ನಾಗಿ ಮಾಡಿಕೊಂಡು ಬಾಚಿ ಬರಿದು ಮಾಡಿತ್ತು” ಎಂದರು.
“ತಾಯ್ನಾಡಿನ ವಿಮೋಚನೆಗಾಗಿ ಭಗತ್ ಸಿಂಗ್ ಮತ್ತು ಆತನ ಸಂಗಾತಿಗಳು ತಮ್ಮ ಪ್ರಾಣಗಳನ್ನು ಬಲಿದಾನಗೈದು, ನಮ್ಮ ದೇಶವನ್ನು ಬ್ರಿಟೀಷ್ ಸಾಮ್ರಾಜ್ಯಷಾಹಿಯಿಂದ ಪಾರು ಮಾಡಿದ್ದರು. ಆದರೆ ನಮ್ಮ ಹಿರಿಯರ ತ್ಯಾಗ ಬಲಿದಾನದಿಂದ ಗಳಿಸಿದ ಸ್ವಾತಂತ್ರ್ಯ ಹಾಗೂ ದೇಶದ ಸಾರ್ವಭೌಮತ್ವಕ್ಕೆ ಇಂದು ಧಕ್ಕೆ ಎದುರಾಗುತ್ತಿರುವುದು ದುರದೃಷ್ಟಕರ. ಭಗತಸಿಂಗ್, ರಾಜಗುರು, ಸುಖದೇವ್, ಚಂದ್ರಶೇಖರ್ ಆಜಾದ್, ಜತಿನ್ ದಾಸ್, ಅಷ್ಫಾಕ್ ವುಲ್ಲಾಕಾನ್, ಬಟುಕೇಶ್ವರ ದತ್ ತರಹದ ಯುವ ತರುಣರ ಬಲಿದಾನವನ್ನು ವ್ಯರ್ಥಗೊಳಸದೇ ನಾವು ಪ್ರಜ್ಞಾಪೂರ್ವಕವಾಗಿ ದೇಶದ ಹಿತಾಸಕ್ತಿಗಾಗಿ ದುಡಿಯಬೇಕು” ಎಂದರು.
ಪುರಸಭಾ ಸದಸ್ಯರು ಮುಕ್ತಿಯಾರ್ ತಿಮ್ಮಾಪುರ ಮಾತನಾಡಿ, “ರಾಷ್ಟ್ರೀಯ ವಿಮೋಚನಾ ಚಳುವಳಿಯಲ್ಲಿ ಅಂದು ಬ್ರಿಟೀಷರ ಜತೆ ವಿರೋಚಿತವಾಗಿ ಹೋರಾಡಿದ ದೇಶಪ್ರೇಮಿ ಕ್ರಾಂತಿಕಾರಿಗಳಲ್ಲಿ ಶಹೀದ್ ಭಗತ್‌ಸಿಂಗ್ ಅವರು ಅತ್ಯಂತ ಪ್ರಮುಖರು. ಇಂದಿನ ಯುವಜನತೆ ಭಗತ್ ಸಿಂಗ್ ಮತ್ತವರ ಸಂಗಾತಿಗಳ ನೈಜ ಇತಿಹಾಸವನ್ನು ಅಧ್ಯಯನ ಮಾಡಿ, ಅವರು ಹಾಕಿದ ಹಾದಿಯಲ್ಲಿ ಸಾಗಬೇಕು” ಎಂದರು.
ಕಾರ್ಯಕ್ರಮದಲ್ಲಿ ಡಿವೈಎಫ್ಐ ಸದಸ್ಯರು ಹಾಗೂ ಜಿ+ ಮನೆ ಫಲಾನುಭವಿಗಳಾದ ಗುರುನಗೌಡ ದುಂಡಿಗೌಡ್ರ, ಮಕಬುಲ್ ಯಲ್ಲಾಪುರ, ಮಂಜುಳಾ ಹಾನಗಲ್, ಕಸ್ತೂರಿ ವಡ್ಡರ, ಕೃಷ್ಣಪ್ಪ ಗದಗ, ನಾರಾಯಣ, ಶೈಲಾ ನಿಂಗಪ್ಪನವರ, ಸುನೀತಾ ತೋಟಿಗೇರ, ದ್ಯಾಮಕ್ಕ, ಕರಣ ಸಿಂಗ್, ಚಾಂದ್ ಸಿಂಗ್, ರುದ್ರೇಶ್ ಗುರಣ್ಣನವರ, ಜಯಲಕ್ಷ್ಮಿ ಅಂಗಡಿ, ಲಲಿತವ್ವ ಮ್ಯಾದರ, ಇಸ್ಮಾಯಿಲ್ ಮುಲ್ಲಾ, ನಾಶಿರ ಬಡಿಗೇರ, ಇಮಾಮ ಹುಸೇನ್ ಧಾರವಾಡ, ಸುಮಿತ್ರ ಶಿರಹಟ್ಟಿ, ಜಗನುಸಿಂಗ್, ಬಾನು ಬಳ್ಳಾರಿ, ಶಿವಣ್ಣ ಹಾಗೂ ರವಿ ಹರಿಜನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




