ಹಾಸನ | ಸಾಮ್ರಾಜ್ಯಶಾಹಿಯನ್ನು ಹಿಮ್ಮೆಟ್ಟಿಸುವುದೇ ಭಗತ್ ಸಿಂಗ್‌ಗೆ ಸಲ್ಲಿಸುವ ನಿಜವಾದ ಗೌರವ: ಧರ್ಮೇಶ್ 

Date:

“ಬ್ರಿಟಿಷರ ಭೌತಿಕ ದಾಸ್ಯದಿಂದ ದೇಶ ಮುಕ್ತವಾಗಿದ್ದರೂ, ಇಂದು ಜಗತ್ತು ಕಣ್ಣಿಗೆ ಕಾಣದ ಆರ್ಥಿಕ, ಸಾಂಸ್ಕೃತಿಕ ಹಾಗೂ ಡಿಜಿಟಲ್ ನವ-ಸಾಮ್ರಾಜ್ಯಶಾಹಿಯ ಕಪಿಮುಷ್ಟಿಯಲ್ಲಿ ಸಿಲುಕಿ ನಲುಗುತ್ತಿದೆ. ಈ ಬಹುರೂಪಿ ಶೋಷಣಾ ವ್ಯವಸ್ಥೆಯ ವಿರುದ್ಧ ವಿದ್ಯಾರ್ಥಿ – ಯುವಜನರು, ರೈತರು ಹಾಗೂ ಕಾರ್ಮಿಕರ ಜೊತೆಗೆ ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಗ್ಗೂಡಿ ಹೋರಾಡುವುದೇ ಭಗತ್ ಸಿಂಗ್ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ” ಎಂದು ಕಮ್ಯೂನಿಸ್ಟ್ ನಾಯಕ ಧರ್ಮೇಶ್ ಅವರು ಪ್ರತಿಪಾಸಿದರು. ಮಾರ್ಚ್ 23 ರಂದು ಹಾಸನದ ‘ಶ್ರಮ’ದಲ್ಲಿ, ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ.) ಮತ್ತು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿ.ವೈ.ಎಫ್.ಐ.) ಜಂಟಿಯಾಗಿ ಆಯೋಜಿಸಿದ್ದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ 95ನೇ ಹುತಾತ್ಮ ದಿನಾಚರಣೆಯ ವಿಚಾರ ಗೋಷ್ಠಿಯಲ್ಲಿ ‘ಸಾಮ್ರಾಜ್ಯಶಾಹಿ: ಅಂದು – ಇಂದು’ ಎಂಬ ವಿಷಯದ ಕುರಿತು ಧರ್ಮೇಶ್ ತಮ್ಮ ವಿಚಾರವನ್ನು ಮಂಡಿಸಿ ಮಾತನಾಡುತ್ತಿದರು.

- Advertisement -

ತಮ್ಮ ಭಾಷಣದಲ್ಲಿ ಭಗತ್ ಸಿಂಗ್ ಅವರ ಹೋರಾಟದ ನಿಜವಾದ ಉದ್ದೇಶಗಳನ್ನು ಬಿಚ್ಚಿಟ್ಟ ಧರ್ಮೇಶ್, “ಭಗತ್ ಸಿಂಗ್ ಅವರನ್ನು ಕೇವಲ ಕೋವಿ ಹಿಡಿದ, ಭಾವನಾತ್ಮಕ ಕ್ರಾಂತಿಕಾರಿಯಾಗಿ ಬಿಂಬಿಸುವುದು ಇತಿಹಾಸಕ್ಕೆ ಮಾಡುವ ಅಪಚಾರ. ಅವರು ಕಾರ್ಲ್ ಮಾರ್ಕ್ಸ್ ಮತ್ತು ವಿ.ಐ. ಲೆನಿನ್ ಅವರ ಕಮ್ಯೂನಿಸ್ಟ್ ವಿಚಾರಧಾರೆಗಳು ಹಾಗೂ ರಷ್ಯಾದ ಕ್ರಾಂತಿಯಿಂದ ತೀವ್ರವಾಗಿ ಪ್ರಭಾವಿತರಾಗಿದ್ದ ಅಪ್ಪಟ ಕ್ರಾಂತಿಕಾರಿ ವಿಚಾರವಾದಿ. 1929ರಲ್ಲಿ ಅಸೆಂಬ್ಲಿಗೆ ಬಾಂಬ್ ಎಸೆದಿದ್ದು ಯಾರಿಗೂ ಪ್ರಾಣಹಾನಿ ಮಾಡಲು ಅಲ್ಲ; ಬದಲಾಗಿ, ಬ್ರಿಟಿಷ್ ಸಾಮ್ರಾಜ್ಯಶಾಹಿಯ ಕಿವುಡು ಕಿವಿಗೆ ಕೇಳಿಸುವಂತೆ ಮಾಡಲು ಮತ್ತು ನ್ಯಾಯಾಲಯವನ್ನೇ ಒಂದು ವೇದಿಕೆಯನ್ನಾಗಿ ಬಳಸಿಕೊಂಡು ‘ಇಂಕ್ವಿಲಾಬ್ ಜಿಂದಾಬಾದ್’ (ಕ್ರಾಂತಿ ಚಿರಾಯುವಾಗಲಿ) ಹಾಗೂ ‘ಸಾಮ್ರಾಜ್ಯಶಾಹಿಗೆ ಧಿಕ್ಕಾರ’ ಎಂಬ ತಮ್ಮ ಸೈದ್ಧಾಂತಿಕ ಘೋಷಣೆಗಳನ್ನು ಇಡೀ ದೇಶಕ್ಕೆ ತಲುಪಿಸಲು ಅವರು ಆ ಕಠಿಣ ಮಾರ್ಗ ತುಳಿದರು” ಎಂದು ವಿವರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಬ್ರಿಟಿಷರ ಲಾರ್ಡ್ ವೈಸ್‌ರಾಯ್ ಜಾಗದಲ್ಲಿ ಭಾರತೀಯ ಬಂಡವಾಳಗಾರರು ಮತ್ತು ಭೂಮಾಲೀಕರು ಬಂದು ಕುಳಿತರೆ ಅದು ನಿಜವಾದ ಸ್ವಾತಂತ್ರ್ಯವಲ್ಲ, ಬದಲಾಗಿ ‘ಮನುಷ್ಯನಿಂದ ಮನುಷ್ಯನ ಶೋಷಣೆ’ ಸಂಪೂರ್ಣವಾಗಿ ನಿಲ್ಲುವುದೇ ನೈಜ ಸ್ವಾತಂತ್ರ್ಯ ಎಂಬುದು ಭಗತ್ ಸಿಂಗ್ ಅವರ ಅಚಲ ನಿಲುವಾಗಿತ್ತು. ಭಗತ್ ಸಿಂಗ್ ಅವರ ‘ಇಂಕ್ವಿಲಾಬ್ ಜಿಂದಾಬಾದ್’ ಘೋಷಣೆಯು ಕೇವಲ ಸ್ವಾತಂತ್ರ್ಯ ಚಳುವಳಿಗೆ ಮಾತ್ರ ಸೀಮಿತವಲ್ಲ, ಅದು ಇಂದಿನ ಕಾರ್ಪೊರೇಟ್ ಲೂಟಿಯ ವಿರುದ್ಧವೂ ಅಷ್ಟೇ ಪ್ರಸ್ತುತ ಎಂದು ಧರ್ಮೇಶ್ ನೆನಪಿಸಿದರು.

ಹಿಂದಿನ ಮತ್ತು ಇಂದಿನ ಸಾಮ್ರಾಜ್ಯಶಾಹಿಯ ನಡುವಿನ ವ್ಯತ್ಯಾಸವನ್ನು ಎಳೆಎಳೆಯಾಗಿ ಬಿಡಿಸಿಟ್ಟ ಧರ್ಮೇಶ್ ಅವರು, ಇಂದಿನ ನವ-ಸಾಮ್ರಾಜ್ಯಶಾಹಿಯ ಕರಾಳ ಮುಖಗಳನ್ನು ವಿವರಿಸಿದರು. ಅಂದು ಬ್ರಿಟಿಷರು, ಡಚ್ಚರು, ಪೋರ್ಚುಗೀಸರು, ಫ್ರೆಂಚರು ಹೊಸಹಾತುಗಳನ್ನಾಗುಸುವ ಮೂಲಕ ದೇಶಗಳನ್ನು ಆಳುತ್ತಿದ್ದರು. ಆದರೆ ಇಂದು, ವಿಶ್ವ ಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ ಇಂತಹ ಜಾಗತಿಕ ಹಣಕಾಸು ಸಂಸ್ಥೆಗಳು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಸಾಲದ ಶೂಲಕ್ಕೆ ಸಿಲುಕಿಸಿ ಆಳುತ್ತಿವೆ. ಹಾಗೂ ರಾಜಕೀಯ ಮತ್ತು ಆರ್ಥಿಕ ನೀತಿ ನಿಲುವುಗಳನ್ನು ನಿಯಂತ್ರಿಸುವ ಮೂಲಕ ದೇಶದ ಸಾರ್ವಭೌಮತ್ವವನ್ನೇ ಕಿತ್ತುಕೊಂಡಿವೆ. ನಮ್ಮ ದೇಶದ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ  ಹಾಗೂ ಹಾಸನ ಮಹಾನಗರ ಪಾಲಿಕೆಯ ಬಜೆಟ್‌ಗಳನ್ನೂ ಸಹ ಈ ಸಾಮ್ರಾಜ್ಯಶಾಹಿ ಶಕ್ತಿಗಳ, ಕಾರ್ಪೊರೇಟ್ ಕುಳಗಳ ಲಾಭದ ಹಿತಾಸಕ್ತಿಗೆ ತಕ್ಕಂತೆ ರೂಪಿಸುವಂತಹ ಅಪಾಯಕಾರಿ ಸ್ಥಿತಿ ಇಂದು ನಿರ್ಮಾಣವಾಗಿದೆ. ಇದು ಸಾಮ್ರಾಜ್ಯಶಾಹಿಯ ಆರ್ಥಿಕ ಮತ್ತು ಸಾಂಸ್ಥಿಕ ನಿಯಂತ್ರಣದ ಸ್ವರೂಪವಾಗಿದೆ. ನಾವು ಬಳಸುವ ಸ್ಮಾರ್ಟ್‌ಫೋನ್‌ಗಳು, ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಮ್‌, ಎಕ್ಸ್, ಅಮೆಜಾನ್, ಫ್ಲಿಪ್‌ಕಾರ್ಟ್ ಇನ್ನಿತರೆ ಡಿಜಿಟಲ್ ವೇದಿಕೆಗಳು ಉಚಿತ ಎಂದು ನಾವು ಭ್ರಮಿಸಿದ್ದೇವೆ. ಆದರೆ, ಡಿಜಿಟಲ್ ಜಗತ್ತಿನಲ್ಲಿ ನಾವೇ ‘ಮಾರಾಟದ ಸರಕು’ಗಳಾಗಿದ್ದೇವೆ. ಇಂದು ನಮ್ಮ ಮನೆಗಳ ಲಿವಿಂಗ್ ರೂಮ್, ಕಿಚನ್ ಹಾಗೂ ಬೆಡ್ ರೂಮ್‌ಗಳಿಗೂ ಎಂಟ್ರಿ ಕೊಟ್ಟಿರುವ ಸ್ಮಾರ್ಟ್‌ಫೋನ್‌ಗಳು ಮತ್ತು ಸೋಶಿಯಲ್ ಮೀಡಿಯಾಗಳು ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ನಮ್ಮ ಮನೆಗಳ ಒಳಗೇ ತಂದು ಸುರಿದಿವೆ. ಅಂತರರಾಷ್ಟ್ರೀಯ ಟೆಕ್-ದೈತ್ಯ ಕಂಪನಿಗಳು ನಮ್ಮ ವೈಯಕ್ತಿಕ ಮಾಹಿತಿ, ನಮ್ಮ ರಾಜಕೀಯ ಒಲವು-ನಿಲುವು, ಆಹಾರ, ಉಡುಗೆ, ಭಾಷೆ, ಸಂಸ್ಕೃತಿಯನ್ನು ಆಲ್ಗಾರಿದಮ್‌ಗಳ ಮೂಲಕ ನಿಯಂತ್ರಿಸುತ್ತಾ ನಮ್ಮನ್ನೇ ಡಿಜಿಟಲ್ ಗುಲಾಮರನ್ನಾಗಿ ಮಾಡುತ್ತಿವೆ. ಇದು ಡೇಟಾ ಮತ್ತು ಡಿಜಿಟಲ್ ವಸಾಹತುಶಾಹಿಯಾಗಿದ್ದು ಇದೊಂದು ಹೊಸ ಮತ್ತು ಭೀಕರ ಸ್ವರೂಪದ ವಸಾಹತುಶಾಹಿಯಾಗಿದೆ. ಅಮೆರಿಕದಂತಹ ಬಲಾಢ್ಯ ದೇಶಗಳು ಪ್ರಜಾಪ್ರಭುತ್ವ ಸ್ಥಾಪನೆ, ಭಯೋತ್ಪಾದನೆ ಅಥವಾ ಡ್ರಗ್ಸ್ ಮಾಫಿಯಾ ತಡೆಗಟ್ಟುವ ನೆಪದಲ್ಲಿ, ಸಾರ್ವಭೌಮ ದೇಶಗಳಾದ ವೆನೆಜುವೆಲಾ, ಇರಾನ್, ಕ್ಯೂಬಾದಂತಹ ದೇಶಗಳ ತೈಲ ಸಂಪತ್ತನ್ನು, ನೈಸರ್ಗಿಕ ಸಂಪತ್ತನ್ನು, ಸಾರ್ವಜನಿಕ ಆಸ್ತಿ ಮತ್ತು ರೈತರು ಹಾಗೂ ಕಾರ್ಮಿಕರ ಶ್ರಮಶಕ್ತಿಯನ್ನು ಲೂಟಿ ಮಾಡಲು ಅಲ್ಲಿನ ಸರ್ಕಾರಗಳನ್ನು ಉರುಳಿಸುವ ಯತ್ನ ಮಾಡುತ್ತಿವೆ ಇದು ಪ್ರಜಾಪ್ರಭುತ್ವದ ಮುಖವಾಡದಲ್ಲಿ ನಡೆಸುತ್ತಿರುವ ಸಾಮ್ರಾಜ್ಯಶಾಹಿ ದೌರ್ಜನ್ಯವಾಗಿದೆ ಎಂದು ಆರೋಪಿಸಿದರು. ಜೊತೆಗೆ ಭಾರತದಲ್ಲಿ ಬಂಡವಾಳಶಾಹಿ ವ್ಯವಸ್ಥೆಯು ತನ್ನ ಬೇರನ್ನು ಗಟ್ಟಿಮಾಡಿಕೊಳ್ಳಲು ಧರ್ಮವನ್ನು ಅಸ್ತ್ರವಾಗಿಸಿಕೊಂಡಿದೆ. ಆರ್‌ಎಸ್‌ಎಸ್ ಮತ್ತು ಹಿಂದೂತ್ವದ ಅಜೆಂಡಾಗಳು ನೇರವಾಗಿ ಅಮೆರಿಕನ್ ಸಾಮ್ರಾಜ್ಯಶಾಹಿ ಮತ್ತು ಬಂಡವಾಳಶಾಹಿಗಳ ಏಳಿಗೆಗೆ ರತ್ನಗಂಬಳಿ ಹಾಸುತ್ತಿವೆ ಎಂದು ಅವರು ತೀವ್ರ ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರವು ಸಾಮ್ರಾಜ್ಯಶಾಹಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ಟೀಕಿಸಿದ ಅವರು, ದೇಶದಲ್ಲಿ ಜಾರಿಗೆ ತರಲು ಹೊರಟಿದ್ದ ಮೂರು ಕೃಷಿ ಕಾಯ್ದೆಗಳು ಮತ್ತು ಈಗ ತರಲಾಗಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಭಾರತದ ಜನರ ಹಿತಾಸಕ್ತಿಯಿಂದ ರೂಪಿಸಿದ್ದಲ್ಲ, ಇವು ಅಮೆರಿಕನ್ ಸಾಮ್ರಾಜ್ಯಶಾಹಿ ಮತ್ತು ಕಾರ್ಪೊರೇಟ್ ಕುಳಗಳ ಲಾಭಕ್ಕಾಗಿ ತರಲಾದ ನೀತಿಗಳಾಗಿವೆ. ವಿದೇಶಾಂಗ ನೀತಿಯಲ್ಲೂ ಭಾರತವು ತನ್ನ ಅಲಿಪ್ತ ನಿಲುವನ್ನು ಕೈಬಿಟ್ಟು, ಇಸ್ರೇಲ್‌ನಂತಹ ದಬ್ಬಾಳಿಕೆಯ ದೇಶವನ್ನು ಬೆಂಬಲಿಸುತ್ತಾ, ಅಮೆರಿಕದ ಮಿಲಿಟರಿ ಮತ್ತು ಆರ್ಥಿಕ ಕಾರ್ಯತಂತ್ರದ ಜೀತದಾಳಾಗಿ ಬದಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ನೋಟು ಅಮಾನ್ಯೀಕರಣ, ಜಿ.ಎಸ್.ಟಿ. ಯಂತಹ ನೀತಿ ನಿರ್ಧಾರಗಳು ಜನಸಾಮಾನ್ಯರ ಬೆನ್ನುಮೂಳೆ ಮುರಿದರೆ, ಕಾರ್ಪೊರೇಟ್ ವಲಯಕ್ಕೆ ವರದಾನವಾದವು ಎಂದು ಉದಾಹರಣೆ ನೀಡಿದರು.

ಕೇವಲ ಹುತಾತ್ಮ ದಿನವನ್ನು ಆಚರಿಸಿ, ಭಾವಚಿತ್ರಗಳಿಗೆ ಹಾರ ಹಾಕಿದರೆ ಸಾಲದು ಭಗತ್ ಸಿಂಗ್ ಅವರ ಆಶಯದಂತೆ ಕಾರ್ಮಿಕರು, ರೈತರು, ದಲಿತರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಮೇಲಿನ ಶೋಷಣೆಯನ್ನು ನಿಲ್ಲಿಸಲು ಕಾರ್ಲ್ ಮಾರ್ಕ್ಸ್ ಹೇಳಿದಂತೆ ‘ಜಗತ್ತಿನ ಶ್ರಮ ಜೀವಿಗಳೇ ಒಂದಾಗಿ’ ಎಂಬ ಅಂತರರಾಷ್ಟ್ರೀಯ ಭ್ರಾತೃತ್ವದ ಕಲ್ಪನೆಯನ್ನು ನಾವು ಮೈಗೂಡಿಸಿಕೊಳ್ಳಬೇಕು. ಈ ಬಂಡವಾಳಶಾಹಿ, ಅರೆ ಪಾಳೆಗಾರಿ ಭೂಮಾಲಿಕ ಮತ್ತು ಕಾರ್ಪೊರೇಟ್ ವ್ಯವಸ್ಥೆಯ ವಿರುದ್ಧ ಕಾರ್ಮಿಕರು, ರೈತರು, ದಲಿತರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಜೊತೆಗೆ ವಿದ್ಯಾರ್ಥಿ ಯುವಜನರು ನಿರಂತರವಾಗಿ ಬೀದಿಗಿಳಿದು ಹೋರಾಡುವುದೇ ಭಗತ್ ಸಿಂಗ್‌ಗೆ ಸಲ್ಲಿಸುವ ಅತ್ಯುನ್ನತ ಗೌರವವಾಗಿದೆ ಎಂದು ಧರ್ಮೇಶ್ ಪ್ರತಿಪಾದಿಸಿದರು.

ಇದನ್ನೂ ಓದಿದ್ದೀರಾ?ಹಾಸನ | ಭಗತ್ ಸಿಂಗ್ ಹುತಾತ್ಮ ದಿನದಂದು ಪ್ರತಿಜ್ಞೆ; ನಮ್ಮೂರ ಶಾಲೆ, ನಮ್ಮ ಹಕ್ಕು!

ಈ ವಿಚಾರ ಗೋಷ್ಟಿಯಲ್ಲಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ‌ ಪ್ರಾಸ್ತವಿಕ ಮಾತುಗಳನ್ನಾಡಿದರು. ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಎಸ್‌ಎಫ್‌ಐ ಮತ್ತು ಡಿವೈಎಫ್‌ಐ ಸಂಘಟನೆಯ ಪದಾಧಿಕಾರಿಗಳು, ಕಾರ್ಮಿಕ ಮುಖಂಡರು, ವಿದ್ಯಾರ್ಥಿಗಳು ಹಾಗೂ ಪ್ರಗತಿಪರ ಚಿಂತಕರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುದ್ದೇಬಿಹಾಳ | ದಾಸೋಹಿ ರೈತ ಉತ್ಪಾದಕ ಸಹಕಾರಿ ಸಂಘದ ಆರ್ಥಿಕ ಚಟುವಟಿಕೆ: ಗವಿಸಿದ್ದೇಶ್ವರ ಶ್ರೀಗಳಿಂದ ಚಾಲನೆ

ರೈತರೇ ಮಾಲೀಕರಾಗಿ, ರೈತರ ಆರ್ಥಿಕ ಸಬಲೀಕರಣವನ್ನೇ ಕೇಂದ್ರವಾಗಿಟ್ಟುಕೊಂಡು ಅಸ್ತಿತ್ವಕ್ಕೆ ಬಂದಿರುವ ದಾಸೋಹಿ...

ಮಾನವೀಯತೆಯೇ ಎಲ್ಲ ಧರ್ಮಗಳ ಸಾರ: ಸಿದ್ದರಾಮಯ್ಯ

ಪ್ರವಾದಿ ಮುಹಮ್ಮದ್‌(ಸ) ಅವರು ಯಾವುದೇ ಒಂದು ಧರ್ಮ ಅಥವಾ ಸಮುದಾಯಕ್ಕೆ ಮಾತ್ರ...

ಕೋಲಾರ | ಮರಗಳ ಹರಾಜು ಅಕ್ರಮ, ತನಿಖೆಗೆ ವಿಶೇಷ ತಂಡ ರಚಿಸಲು ರೈತ ಸಂಘ ಆಗ್ರಹ

ಕೋಲಾರ–ವೇಮಗಲ್ ರಸ್ತೆ ವಿಸ್ತರಣೆಗೆ ಮರಗಳ ತೆರವು ಸಂಬಂಧ ನಡೆದಿರುವ ಹರಾಜು ಪ್ರಕ್ರಿಯೆಯಲ್ಲಿ...

ಗವಿಸಿದ್ದೇಶ್ವರ ಸ್ವಾಮೀಜಿ ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿದ್ದಾರೆಂಬ ಸುಳ್ಳುಸುದ್ದಿ: ತಪ್ಪಿತಸ್ಥನ ವಿರುದ್ಧ FIR

ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಆಹ್ವಾನವನ್ನು...