ಹಾವೇರಿ ಜಿಲ್ಲೆ | ಕೊನೆ ಕ್ಷಣದ ಎಡವಟ್ಟುಗಳಿಂದ ನಷ್ಟ ಮಾಡಿಕೊಳ್ಳುವುದೇ ಕಾಂಗ್ರೆಸ್?

ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರತಿಷ್ಠೆಯ ಕಣವಾಗಿರುವ ಹಾವೇರಿ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಬಿಜೆಪಿ ಮೂರನ್ನು ಗೆಲ್ಲುವ ಸಾಧ್ಯತೆಯಿದೆ. ಕೊನೆ ಕ್ಷಣದ ಎಡವಟ್ಟುಗಳಿಂದಾಗಿ ಕಾಂಗ್ರೆಸ್‌ಗೆ ನಷ್ಟವಾಗುವ ಸಾಧ್ಯತೆಯೇ ಹೆಚ್ಚು.

ತವರು ಜಿಲ್ಲೆಯಾದ ಹಾವೇರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸ್ವಕ್ಷೇತ್ರ ಶಿಗ್ಗಾವಿಯಲ್ಲಿ ಗೆಲ್ಲುವುದೂ ಸಂಶಯ ಎಂದು ಎರಡು ತಿಂಗಳ ಹಿಂದೆ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರು. ‘ಶಿಗ್ಗಾವಿ ಬಿಟ್ಟು ಹೋದರೆ ಕಷ್ಟವಾದೀತು’ ಎಂದು ಬೊಮ್ಮಾಯಿ ನಟ ಸುದೀಪ್‌ರಿಂದ ತೊಡಗಿ ನರೇಂದ್ರ ಮೋದಿವರೆಗೆ ಎಲ್ಲರನ್ನೂ ಪ್ರಚಾರಕ್ಕೆ ಕರೆತಂದಿದ್ದಾರೆ. ಇದೀಗ ಶಿಗ್ಗಾವಿಯಲ್ಲಿ ಬೊಮ್ಮಾಯಿ ಸಲೀಸಾಗಿ ಗೆಲ್ಲಬಹುದು ಎನ್ನುವ ಅಭಿಪ್ರಾಯ ಸ್ಥಳೀಯ ರಾಜಕೀಯ ವಿಶ್ಲೇಷಕರಲ್ಲಿದೆ. ಎರಡು ತಿಂಗಳಲ್ಲಿ ಈ ಬದಲಾವಣೆಗಳು ಹೇಗಾದವು?

“ಶಿಗ್ಗಾವಿಯಲ್ಲಿ ಮಾತ್ರವಲ್ಲ, ಇಡೀ ಹಾವೇರಿ ಜಿಲ್ಲೆಯಲ್ಲಿ ಕಾಂಗ್ರೆಸ್ ತನ್ನ ಎಡವಟ್ಟುಗಳಿಂದಲೇ ಬಹುತೇಕ ಕ್ಷೇತ್ರಗಳಲ್ಲಿ ಸ್ಪಷ್ಟ ಗೆಲುವಿನಿಂದ ದೂರ ಸರಿದಿದೆ. ಅಂತಿಮವಾಗಿ ಬಿಜೆಪಿ 3 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ ಎರಡು ಸ್ಥಾನ ಹಾಗೂ ಒಂದು ಸ್ಥಾನದಲ್ಲಿ ಸ್ವತಂತ್ರ ಅಭ್ಯರ್ಥಿ ಗೆಲ್ಲಬಹುದು” ಎಂದು ‘ಈದಿನ’ದ ಜೊತೆಗೆ ಮಾತನಾಡಿದ ಸ್ಥಳೀಯ ಪತ್ರಕರ್ತರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಶಿಗ್ಗಾವಿ: ಪ್ರಬಲ ಸ್ಪರ್ಧಿಯಿಲ್ಲದೆ ಕಾಂಗ್ರೆಸ್‌ಗೆ ಮೂರನೇ ಸ್ಥಾನ

ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲ ಸ್ಪರ್ಧಿಯನ್ನು ಕಣಕ್ಕಿಳಿಸಿಲ್ಲ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಕಾಂಗ್ರೆಸ್‌ನ ಪ್ರಮುಖ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ವಿರುದ್ಧ ಬಿಜೆಪಿ ಪ್ರಬಲ ಸ್ಪರ್ಧಿಗಳನ್ನು ಕಣಕ್ಕಿಳಿಸಿದೆ. ವರುಣಾ ಕ್ಷೇತ್ರದಲ್ಲಿ ವಿ ಸೋಮಣ್ಣ ಅಬ್ಬರದ ಪ್ರಚಾರವನ್ನೂ ಮಾಡುತ್ತಿದ್ದಾರೆ. ಟಿಕೆಟ್ ಘೋಷಣೆಗೆ ಮೊದಲು ವಿನಯ್ ಕುಲಕರ್ಣಿ ಅವರನ್ನು ಬೊಮ್ಮಾಯಿ ವಿರುದ್ಧ ಕಣಕ್ಕಿಳಿಸಲಾಗುತ್ತದೆ ಎನ್ನುವ ಸುದ್ದಿಯೂ ಹರಡಿತ್ತು. ನಾಲ್ಕು ಬಾರಿ ಬೊಮ್ಮಾಯಿ ವಿರುದ್ಧ ಸೋತಿರುವ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಅವರಿಗೆ ಕನಿಷ್ಠ ಕಾಂಗ್ರೆಸ್ ಟಿಕೆಟ್ ಸಿಕ್ಕಿದ್ದರೂ ಬೊಮ್ಮಾಯಿ ಸ್ಪರ್ಧೆ ಕಠಿಣವಾಗುತ್ತಿತ್ತು. ಆದರೆ, ಇದೀಗ ಕಾಂಗ್ರೆಸ್ ಸ್ಪರ್ಧಿ ಯಾಸಿರ್ ಅಹಮದ್ ಪಠಾಣ್ ವಿರುದ್ಧ ಬೊಮ್ಮಾಯಿ ಸಲೀಸಾಗಿ ಗೆಲ್ಲುವ ಸಾಧ್ಯತೆಯಿದೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಶಶಿಧರ್ ಚನ್ನಬಸಪ್ಪ ಯಲಿಗಾರ್ ಸ್ಪರ್ಧಿಸುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಯಲಿಗಾರ್ ಉತ್ತಮ ಕೆಲಸ ಮಾಡಿ ಸಮಾಜ ಸೇವೆ ಮಾಡಿರುವುದರಿಂದ ಜನರ ನಡುವೆ ಗುರುತಿಸಿಕೊಂಡಿದ್ದಾರೆ. ಅವರು ಅಲ್ಪಸಂಖ್ಯಾತ ಸಮುದಾಯದ ಬೆಂಬಲವನ್ನೂ ಗಳಿಸುವ ಸಾಧ್ಯತೆಯಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಬಿಜೆಪಿ- ಜೆಡಿಎಸ್ ನಡುವೆ ನೇರ ಸ್ಪರ್ಧೆಯಾಗುವ ಸಾಧ್ಯತೆಯಿದ್ದು, ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಇಳಿಯಬಹುದು. ಅಲ್ಪಸಂಖ್ಯಾತರು ಕಾಂಗ್ರೆಸ್ ಕಡೆಗೆ ಹೊರಳಿದರೆ ಎರಡನೇ ಸ್ಥಾನ ಸಿಗಬಹುದು.

ಹಾವೇರಿ: ಕಾಂಗ್ರೆಸ್‌ಗೆ ಕಠಿಣ ಸ್ಪರ್ಧೆ ನೀಡಲಿರುವ ಬಿಜೆಪಿ

ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ನೆಹರು ಓಲೆಕಾರ್‌ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದೆ. ಈ ಆಕ್ರೋಶದಲ್ಲಿ ಅವರು ಬಹಿರಂಗವಾಗಿಯೇ ಬಸವರಾಜ ಬೊಮ್ಮಾಯಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಹಾವೇರಿಯಲ್ಲಿ ಬೊಮ್ಮಾಯಿ ಎಷ್ಟು ಸೀಟು ಗೆಲ್ಲಿಸಿಕೊಡ್ತಾರೋ ನೋಡ್ತೀನಿ” ಎಂದು ಹೇಳಿದ್ದಾರೆ. ಬಿಜೆಪಿ ಅಭ್ಯರ್ಥಿ ಗವಿಸಿದ್ದಪ್ಪ ದ್ಯಾಮಣ್ಣನವರ್ ಅವರ ವ್ಯಕ್ತಿತ್ವದ ಬಗ್ಗೆ ಕ್ಷೇತ್ರದಲ್ಲಿ ಉತ್ತಮ ಅಭಿಪ್ರಾಯವಿದೆ. ಸ್ವಚ್ಛ ವ್ಯಕ್ತಿತ್ವ, ಎಫ್‌ಡಿಸಿಯಿಂದ ತಹಶೀಲ್ದಾರ್‌ವರೆಗೆ ಕ್ಷೇತ್ರದಲ್ಲೇ ಕೆಲಸ ಮಾಡಿದ ಅನುಭವಿ. ಆರ್‌ಎಸ್‌ಎಸ್ ಹಿನ್ನೆಲೆಯೂ ಇದೆ. ತಮ್ಮ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ ಮಾಡದ ಸ್ವಚ್ಛ ಸೇವೆ ನೀಡಿದವರು ಎನ್ನುವ ಪ್ಲಸ್ ಪಾಯಿಂಟ್‌ಗಳಿವೆ. ಬಿಜೆಪಿ ಕಾರ್ಯಕರ್ತರ ಬೆಂಬಲವೂ ಸಿಕ್ಕಿದೆ. ಹೀಗಾಗಿ, ಕಾಂಗ್ರೆಸ್ ಅಭ್ಯರ್ಥಿ ರುದ್ರಪ್ಪ ಲಮಾಣಿ ಅವರಿಗೆ ಗವಿಸಿದ್ದಪ್ಪ ತೀವ್ರ ಸ್ಪರ್ಧೆಯೊಡ್ಡುವ ಸಾಧ್ಯತೆಯಿದೆ. “ಭಜರಂಗ ದಳಕ್ಕೆ ಸಂಬಂಧಿಸಿದ ನಿರ್ಧಾರ, ಪ್ರಧಾನಿ ಮೋದಿಯನ್ನು ವಿಷ ಸರ್ಪವೆಂದು ಟೀಕಿಸಿರುವುದು, ಭ್ರಷ್ಟ ಲಿಂಗಾಯತ ಸಿಎಂ ಎಂದು ಸಿದ್ದರಾಮಯ್ಯ ಅವರು ಬಸವರಾಜ ಬೊಮ್ಮಾಯಿ ಅವರ ಮೇಲೆ ಹರಿಹಾಯ್ದಿರುವುದು” ಮೊದಲಾದವು ಕಾಂಗ್ರೆಸ್ ವಿರುದ್ಧ ಹೋಗುವ ಸಾಧ್ಯತೆಯಿದೆ ಎನ್ನುವ ಅಭಿಪ್ರಾಯವೂ ಕೇಳಿ ಬಂದಿದೆ. ಈ ವಿಚಾರಗಳು ಕ್ಷೇತ್ರದಲ್ಲಿ ಪರಿಣಾಮ ಬೀರದೆ ಇದ್ದು, ನೆಹರು ಓಲೆಕಾರ್ ಬಂಡಾಯದಿಂದ ಬಿಜೆಪಿಗೆ ಪರಿಣಾಮವಾದಲ್ಲಿ ಕಾಂಗ್ರೆಸ್‌ ಗೆಲುವು ಸಲೀಸಾಗಬಹುದು.

ಬ್ಯಾಡಗಿ: ಕಾಂಗ್ರೆಸ್‌ಗೆ ಒಲಿಯುವ ಸಾಧ್ಯತೆ

ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಕಠಿಣ ಸ್ಪರ್ಧೆಯಿದೆ. ಆದರೆ, ವಿರೂಪಾಕ್ಷಪ್ಪ ಬಳ್ಳಾರಿ ವಿರುದ್ಧ ಆಡಳಿತ ವಿರೋಧಿ ಅಲೆಯಿದೆ. ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಎನ್ ಶಿವಣ್ಣನವರ್ ಕುರುಬ ಸಮುದಾಯದವರು. ಕುರುಬ ಸಮುದಾಯದ ಜೊತೆಗೆ ಮುಸ್ಲಿಂ ಸಮುದಾಯದ ಮತಗಳೂ ಬಸವರಾಜ ಅವರಿಗೆ ಸಿಗುವ ಸಾಧ್ಯತೆಯಿರುವುದರಿಂದ ಗೆಲುವು ಸಾಧಿಸಬಹುದು. ಲಿಂಗಾಯತ ಸಮುದಾಯ ಒಗ್ಗಟ್ಟಿನಿಂದ ಬಿಜೆಪಿ ಕಡೆಗೆ ವಾಲಿದರೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬಿಜೆಪಿ ತೀವ್ರ ಸ್ಪರ್ಧೆ ಒಡ್ಡಬಹುದು. ಆದರೆ, ಹಾಗಾಗುವ ಸಾಧ್ಯತೆ ಕಡಿಮೆಯಿದೆ. ಸಾದ ಲಿಂಗಾಯತ ಸಮುದಾಯ ಬಿಜೆಪಿಯನ್ನು ಬೆಂಬಲಿಸಬಹುದು. ಬಸವರಾಜ ಬೊಮ್ಮಾಯಿ ಮತ್ತೆ ಮುಖ್ಯಮಂತ್ರಿಯಾಗುವ ಸಾಧ್ಯತೆಯಿದೆ ಎನ್ನುವ ಭಾವನೆ ಬೆಂಬಲಕ್ಕೆ ಕಾರಣವಾಗುವ ಸಾಧ್ಯತೆಯಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಪಂಚಮಸಾಲಿಗರ ಬೆಂಬಲ ಸಿಗುವ ಬಗ್ಗೆ ರಾಜಕೀಯ ವಿಶ್ಲೇಷಕರು ಸಂಶಯ ವ್ಯಕ್ತಪಡಿಸಿದ್ದಾರೆ. “ಈ ಕ್ಷೇತ್ರದಲ್ಲಿ ಹಣ ಕೂಡ ಪ್ರಮುಖ ಪಾತ್ರವಹಿಸುವ ಸಾಧ್ಯತೆಯಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಯಾರು ಹೆಚ್ಚು ಹಣ ಚೆಲ್ಲುತ್ತಾರೆ ಎನ್ನುವುದೂ ಗೆಲುವಿನ ಮೇಲೆ ಪರಿಣಾಮ ಬೀರಲಿದೆ” ಎಂದು ಸ್ಥಳೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಹಿರೇಕೆರೂರು: ಗೆಲುವಿಗೆ ಜಿದ್ದಾಜಿದ್ದಿನ ಹೋರಾಟ ಸಾಧ್ಯತೆ

ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವ ಜಿದ್ದಾಜಿದ್ದಿನ ಹೋರಾಟದ ಸಾಧ್ಯತೆಯಿದೆ. ಈ ಸ್ಪರ್ಧೆಯಲ್ಲಿ ಗೆಲುವು ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿ ಯು ಬಿ ಬಣಕಾರ ಅವರಿಗೆ ಒಲಿಯಬಹುದು. ಬಣಕಾರ ಒಳ್ಳೆಯ ವ್ಯಕ್ತಿತ್ವ ಹೊಂದಿರುವ ಘನತೆ ಹೊಂದಿದ್ದಾರೆ. ಬಿ ಸಿ ಪಾಟೀಲ್ ಕ್ಷೇತ್ರಕ್ಕೆ ಅನುದಾನ ತಂದಿದ್ದರೂ, ದುರಹಂಕಾರಿ ಎನ್ನುವ ಆರೋಪವಿದೆ. ಅಲ್ಲದೆ, ಅವರು ತಮ್ಮ ಕುಟುಂಬಕ್ಕೇ ಆದ್ಯತೆ ಕೊಟ್ಟು ಪಕ್ಷದ ಕಾರ್ಯಕರ್ತರಿಗೆ ಬೆಂಬಲಿಸಲ್ಲ; ಸ್ಥಳೀಯ ಬಿಜೆಪಿಯೊಳಗೆ ಆಂತರಿಕ ಕಲಹವಿದೆ. ಈ ಕ್ಷೇತ್ರದಲ್ಲೂ ಲಿಂಗಾಯತ ಸಮುದಾಯದ ಮತ ಯಾರ ಕಡೆಗೆ ತಿರುಗಲಿದೆ ಎನ್ನುವುದು ಅಂತಿಮ ಗೆಲುವನ್ನು ನಿರ್ಧರಿಸುವ ಸಾಧ್ಯತೆಯಿದೆ. ಐನೂರು ಸಾವಿರದೊಳಗಿನ ಮತಗಳಲ್ಲಿ ಗೆಲುವು ಕಾಂಗ್ರೆಸ್ ಅಥವಾ ಬಿಜೆಪಿ ಕಡೆಗೆ ಒಲಿಯಬಹುದು. ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಯಾನಂದ ಜವಣ್ಣನವರ್ ವಿಶೇಷ ಪ್ರಭಾವ ಬೀರುವ ಸಾಧ್ಯತೆಯಿಲ್ಲ.

ಈ ಸುದ್ದಿ ಓದಿದ್ದೀರಾ?: ಈದಿನ.ಕಾಮ್‌ ಸಮೀಕ್ಷೆ-8: ಕಾಂಗ್ರೆಸ್‌ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ

ರಾಣೆಬೆನ್ನೂರು: ಗೆಲುವಿನ ಉಡುಗೊರೆ ನೀಡುವುದೇ ಉಚಿತ ಕೊಡುಗೆಗಳು?

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸ್ಪರ್ಧೆ ಇದೆಯಾದರೂ ಸ್ವತಂತ್ರ ಅಭ್ಯರ್ಥಿ ಆರ್ ಶಂಕರ್ ಗೆಲುವಿನ ಸಾಧ್ಯತೆ ಹೆಚ್ಚಾಗಿದೆ. ಅವರು ಶಾಸಕರಾಗಿ, ಕಾಂಗ್ರೆಸ್‌- ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವರೂ ಆಗಿದ್ದರು. ಕುರುಬ ಸಮುದಾಯದವರಾದ ಆರ್ ಶಂಕರ್ ಕಾಂಗ್ರೆಸ್ ಮತಗಳನ್ನು ಕಸಿಯಬಹುದು. ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಕೋಳಿವಾಡರಿಗೆ ಹೆಚ್ಚು ಬೆಂಬಲ ಸಿಗುವುದು ಸಂಶಯ. ಪ್ರಕಾಶ್ ಅವರ ತಂದೆಯ ಬಗ್ಗೆ ಕ್ಷೇತ್ರದಲ್ಲಿ ಗೌರವವಿದೆ ಮತ್ತು ಬೆಂಬಲವೂ ಇತ್ತು. ಆದರೆ, ಅದೇ ಬೆಂಬಲ ಪ್ರಕಾಶ್‌ರಿಗೆ ಸಿಗುವ ಸಾಧ್ಯತೆ ಕಡಿಮೆ. ಅತ್ತ, ಬಿಜೆಪಿಗೂ ಬಂಡಾಯ ಅಭ್ಯರ್ಥಿಯ ಕಾಟವಿದೆ. ಬಂಡಾಯ ಅಭ್ಯರ್ಥಿ ಸಂತೋಷ್ ಬಿಜೆಪಿಯ ಮತಗಳನ್ನು ಕಸಿಯುವ ಸಾಧ್ಯತೆ ಇದೆ. ಜೆಡಿಎಸ್‌ನಿಂದ ಗೌಡ ಶಿವಣ್ಣ ನಿಂತಿರುವುದೂ ಇನ್ನಷ್ಟು ಮತ ವಿಭಜನೆಗೆ ಕಾರಣವಾಗಲಿದೆ. “ಆರ್ ಶಂಕರ್ ಆರು ತಿಂಗಳಿಂದ ಕ್ಷೇತ್ರದ ಜನರಿಗೆ ಸಾಕಷ್ಟು ಹಣ ವೆಚ್ಚ ಮಾಡಿದ್ದಾರೆ. ಕುಕ್ಕರ್‌ಗಳು, ಮಕ್ಕಳಿಗೆ ಶಾಲಾ ಬ್ಯಾಗ್‌ಗಳು ಹಾಗೂ ಸೀರೆಗಳು ಮೊದಲಾಗಿ ಸಾಕಷ್ಟು ಉಚಿತ ಉಡುಗೊರೆಗಳನ್ನು ಕ್ಷೇತ್ರದ ಜನರಿಗೆ ಹಂಚಿದ್ದಾರೆ” ಎಂದು ಸ್ಥಳೀಯರು ಹೇಳಿದ್ದಾರೆ.

ಹಾನಗಲ್: ಕಾಂಗ್ರೆಸ್‌ಗೆ ಎರವಾಗುವುದೇ ತಹಶೀಲ್ದಾರ್ ಬಂಡಾಯ?

ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ 2021ರಲ್ಲಿ ಉಪಚುನಾವಣೆಯಲ್ಲಿ ಶ್ರೀನಿವಾಸ್ ಮಾನೆ  ಅವರು ಭರ್ಜರಿ ಗೆಲುವು ಸಾಧಿಸಿದ್ದರು. ಹೀಗಾಗಿ ಕಾಂಗ್ರೆಸ್ ಈ ಬಾರಿ ಅವರಿಗೇ ಟಿಕೆಟ್ ನೀಡಿ ಗೆಲುವಿನ ಭರವಸೆಯಲ್ಲಿದೆ. ಆದರೆ, ಉಪ ಚುನಾವಣೆ ಸಂದರ್ಭದಲ್ಲಿ ಸ್ಥಳೀಯ ಬಂಡಾಯವಿರಲಿಲ್ಲ. ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ವರ್ಚಸ್ಸಿನಲ್ಲಿ ಗೆಲುವು ಸಾಧಿಸಿದ್ದರು. ಇದೀಗ ನಾಲ್ಕು ಬಾರಿ ಸಚಿವರಾಗಿದ್ದ ಕಾಂಗ್ರೆಸ್ ಮುಖಂಡ ಮನೋಹರ್ ತಹಶೀಲ್ದಾರ್ ಪಕ್ಷದಿಂದ ಹೊರಹೋಗಿ ಜೆಡಿಎಸ್‌ ಅಭ್ಯರ್ಥಿಯಾಗಿರುವುದು ಪರಿಸ್ಥಿತಿ ಕಠಿಣವಾಗಿಸಿದೆ. ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಮತ್ತು ಶ್ರೀನಿವಾಸ್ ಮಾನೆ ನಡುವೆ ಗೆಲುವು 60:40 ನಡುವೆ ತೂಗುಯ್ಯಾಲೆಯಲ್ಲಿದೆ. ಶಿವರಾಜ್ ಸಜ್ಜನರ್ ಗೆಲುವಿನ ಸಾಧ್ಯತೆಯೇ ಹೆಚ್ಚಿದೆ. ಲಿಂಗಾಯತ ಸಮುದಾಯದ ಬೆಂಬಲ ಸಿಕ್ಕಲ್ಲಿ ಕಾಂಗ್ರೆಸ್ ಗೆಲ್ಲಬಹುದು. ಪ್ರಚಾರದ ವೇಳೆಯಲ್ಲಿ ಹೇಳಿದ ಮಾತುಗಳು ಮತ್ತು ಪ್ರಣಾಳಿಕೆಯಲ್ಲಿ ಭಜರಂಗದಳದ ಉಲ್ಲೇಖ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ವಿರುದ್ಧವಾಗಿ ಹೋದಲ್ಲಿ ಶ್ರೀನಿವಾಸ್ ಮಾನೆಗೆ ಗೆಲುವು ಕಷ್ಟವಾಗಲಿದೆ.

LEAVE A REPLY

Please enter your comment!
Please enter your name here