ಕೇಂದ್ರ ಚುನಾವಣೆ ಮುಖ್ಯಾಧಿಕಾರಿ ಜ್ಞಾನೇಶಕುಮಾರ ರಾಜೀನಾಮೆ ನೀಡುವಂತೆ ಹಾವೇರಿ ಪಟ್ಟಣದ ಜಿಲ್ಲಾಧಿಕಾರಿ ಕಛೇರಿ ಎದುರು ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಶಾಸಕ ಶಾಸಕ ಬಸವಾರಾಜ ಶಿವಣ್ಣನವರ ಮಾತನಾಡಿ, “ಕೆಂದ್ರದ ಚುನಾವಣೆ ಅಧಿಕಾರಿ, ಬಿಜೆಪಿ ಸರಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವುದರಿಂದ ಭಾರತದ ನಿಜವಾದ ಮತದಾರರು ಹಿಂದುಳಿದವರು, ಬಡವರು, ಅಲ್ಪಸಂಖ್ಯಾತರು, ದಲಿತರನ್ನು ವ್ಯವಸ್ಥಿತವಾಗಿ ಮತದಾರರ ಹಕ್ಕನ್ನು ತಪ್ಪಿಸುವ ಕೆಲಸ ಮಾಡುವ ಆ ದುಷ್ಟ ಅಧಿಕಾರಿ ಆ ಹುದ್ದೆಯಲ್ಲಿ ಇರಬಾರದು” ಎಂದು ಶಾಸಕ ಬಸವರಾಜ ಶಿವಣ್ಣನವರ ಆಗ್ರಹಿಸಿದರು.
“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಬದ್ದವಾಗಿ ಕೆಲಸ ಮಾಡುವ ಚುನಾವಣೆ ಅಧಿಕಾರಿ, ಒಂದು ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡಬಾರದು. ಇಂತಹ ಕೆಲಸ ಮಾಡುವ ಕೇಂದ್ರದ ಚುನಾವಣಾ ಅಧಿಕಾರಿ ಜ್ಞಾನೇಶ ಕುಮಾರ ಅವರನ್ನು ಅಧಿಕಾರದಿಂದ ಕಿತ್ತು ಹಾಕಬೇಕೆಂದು ನಮ್ಮ ಪಕ್ಷದ ನಿರ್ದೇಶನದ ಮೇರೆ ಇಂದು ಪ್ರತಿಭಟನೆ ಮಾಡುತ್ತಿದ್ದೇವೆ” ಎಂದು ಹೇಳಿದರು.
ಕಾಂಗ್ರೇಸ್ ಜಿಲ್ಲಾಧ್ಯಕ್ಷರು ಮುಖ್ಯ ಸಂಜೀವಕುಮಾರ ನಿರಲಗಿ ಮಾತನಾಡಿ, “ಚುನಾವಣಾ ಅಧಿಕಾರಿ ಜ್ಞಾನೇಶ ಕುಮಾರ ಅವರ ಎಸ್ಐಆರ್ ಪ್ರಕ್ರಿಯೆಯಲ್ಲಿ ಸಾಕಷ್ಟು ತಪ್ಪುಗಳು ಆಗಿವೆ. ಅವರು ಸಂವಿಧಾನಿಕ ಹುದ್ದೆಯನ್ನು ಹೊಂದಿದ್ದರೂ, ಸ್ವತಂತ್ರವಾಗಿ ನಿಭಾಯಿಸಿ, 140 ಕೋಟಿ ಭಾರತದ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕಿತ್ತು. ಆದರೆ ಇವತ್ತು ಕೇಂದ್ರ ಸರಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
“ಎಸ್ಐಆರ್ ಪ್ರಕ್ರಿಯೆ ಕರ್ನಾಟಕದಲ್ಲಿ ದಾರಿ ತಪ್ಪಿ ಹೋಗುವಂತಾಗಿದೆ. ಒಂದು ಕೋಟಿ, ಏಳು ಲಕ್ಷ ಮತದಾರರು ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಪ್ರತಿ ಜಿಲ್ಲೆಯಲ್ಲಿಯೂ ಐವತ್ತರಿಂದ ಅರವತ್ತು ಸಾವಿರ ಜನರಿಗೆ ನೋಟಿಸ್ ಕೊಟ್ಟಿದ್ದಾರೆ. ವಿಶೇಷವಾಗಿ ಕಾಂಗ್ರೇಸ್ ಮತದಾರರಾದ ಅಲೆಮಾರಿ ಜನಾಂಗ, ಆದಿವಾಸಿ ಜನಾಂಗ, ಹಿಂದುಳಿದವರು, ಅಲ್ಪಸಂಖ್ಯಾತರ ಓಟುಗಳನ್ನು ಡೀಲಿಟ್ ಮಾಡುವ ಮೂಲಕ ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನು ಆಳಲು ಸಂಚನ್ನು ರೂಪಿಸಿದ್ದಾರೆ. ಇದಕ್ಕೆ ಕಾರಣಿಕರ್ತರು ಚುನಾವಣಾ ಅಧಿಕಾರಿ ಜ್ಞಾನೇಶ್ ಕುಮಾರ್ ಅವರು ಕೂಡಲೇ ರಾಜೀನಾಮೆ ಕೊಡಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೇಸ್ ಶಾಸಕರು ಯಾಸಿರ್ ಅಹಮ್ಮದ್ ಪಠಾಣ್, ಶ್ರೀನಿವಾಸ ಮಾನೆ, ಯು.ಬಿ, ಬಣಕಾರ ಸೇರಿದಂತೆ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.




