ಹೊನ್ನಾವರ: ಪಟ್ಟಣದ ತಹಶೀಲ್ದಾರ್ ಕಚೇರಿ ಸಮೀಪದ ಪ್ರದೇಶದಲ್ಲಿ ಹಲವು ಮನೆಗಳ ಬಾವಿ ನೀರು ಕಲುಷಿತಗೊಂಡಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಸ್ಥಳೀಯ ನಿವಾಸಿಗಳು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಪಟ್ಟಣದ ಕೆಳಗಿನ ಪಾಳ್ಯದ ನಿವಾಸಿಗಳ ಮಾಹಿತಿ ಪ್ರಕಾರ, ಸುಮಾರು ಏಳು ಮನೆಗಳ ಬಾವಿಗಳ ನೀರಿನಲ್ಲಿ ಕಳೆದ ಕೆಲ ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ವಾಸನೆ ಕಾಣಿಸುತ್ತಿದ್ದು, ನೀರಿನ ಬಣ್ಣದಲ್ಲಿಯೂ ಬದಲಾವಣೆ ಕಂಡುಬಂದಿದೆ. ಇದರಿಂದ ಕುಡಿಯುವ ನೀರು ಸೇರಿದಂತೆ ದಿನನಿತ್ಯದ ಬಳಕೆಗೆ ತೊಂದರೆ ಉಂಟಾಗಿರುವುದಾಗಿ ಅವರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಭಟ್ಕಳ | ಕಾರು ಹೊಂಡಕ್ಕೆ ಸಿಲುಕಿದ ಘಟನೆಗೆ ಹೊಸ ತಿರುವು; ಮೂರು ಪ್ರಕರಣ ದಾಖಲು
ಸ್ಥಳೀಯರ ಆರೋಪದಂತೆ, ಸಮೀಪದ ಪೆಟ್ರೋಲ್ ಬಂಕ್‌ನಲ್ಲಿ ಇತ್ತೀಚೆಗೆ ನಿರ್ವಹಣಾ ಕಾರ್ಯಗಳು ನಡೆದ ನಂತರ ಈ ಸಮಸ್ಯೆ ಕಾಣಿಸಿಕೊಂಡಿದೆ. ವಿಷಯವನ್ನು ಬಂಕ್ ನಿರ್ವಹಣೆಯ ಗಮನಕ್ಕೆ ತಂದಾಗ ಬಾವಿ ಸ್ವಚ್ಛಗೊಳಿಸುವ ಕಾರ್ಯ ನಡೆಸಲಾಗಿತ್ತಾದರೂ, ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ ಎಂದು ನಿವಾಸಿಗಳು ತಿಳಿಸಿದ್ದಾರೆ.
ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿದ್ದರೂ, ಇನ್ನೂ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಸಾರ್ವಜನಿಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಬಾವಿ ನೀರನ್ನು ಅವಲಂಬಿಸಿರುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ಸಂಬಂಧಿತ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೀರಿನ ಮಾದರಿಯನ್ನು ಪರೀಕ್ಷಿಸಿ ಸಮಸ್ಯೆಯ ಮೂಲ ಪತ್ತೆಹಚ್ಚಬೇಕು ಎಂದು ಆಗ್ರಹಿಸಿದ್ದಾರೆ.
ಜೊತೆಗೆ, ಸಮಸ್ಯೆ ಪರಿಹಾರವಾಗುವವರೆಗೆ ಬದಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ. ಘಟನೆ ಕುರಿತು ಅಧಿಕಾರಿಗಳು ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.




