ಕಾರವಾರ: ಗೋವಾ ರಾಜ್ಯದಿಂದ ವಿವಿಧ ಬ್ರಾಂಡ್‌ನ ಮದ್ಯವನ್ನು ಪರವಾನಗಿ ಇಲ್ಲದೆ ಕರ್ನಾಟಕಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿಯನ್ನು ಉತ್ತರ ಕನ್ನಡ ಜಿಲ್ಲಾ ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿ, ಸುಮಾರು ₹9 ಲಕ್ಷ ಮೌಲ್ಯದ ಮದ್ಯ ಹಾಗೂ ₹8 ಲಕ್ಷ ಮೌಲ್ಯದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಕಾರವಾರ ತಾಲೂಕಿನ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದ ಅಬಕಾರಿ ಸಿಬ್ಬಂದಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಲಾಗಿದೆ. ಬಂಧಿತ ಆರೋಪಿಯನ್ನು ಮನ್ಸೂರ್ ಮುಹಮ್ಮದ್ (32), ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಪೆರಿಯಾ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಚುರುಕುಗೊಂಡ ಮಳೆ; ರೈತರ ಮೊಗದಲ್ಲಿ ಮಂದಹಾಸ, ಜಲಾಶಯಗಳ ನೀರಿನ ಮಟ್ಟ ಏರಿಕೆ
ಗೋವಾದಿಂದ ಕರ್ನಾಟಕದ ಮಂಗಳೂರು ಕಡೆಗೆ ವಿವಿಧ ಬ್ರಾಂಡ್‌ನ ಒಟ್ಟು 1,296 ಲೀಟರ್ (150 ಬಾಕ್ಸ್) ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾನೆ. ವಶಪಡಿಸಿಕೊಂಡ ಮದ್ಯದ ಅಂದಾಜು ಮೌಲ್ಯ ₹9 ಲಕ್ಷವಾಗಿದ್ದು, ಬಳಸಿದ್ದ ವಾಹನದ ಮೌಲ್ಯ ₹8 ಲಕ್ಷ ಎಂದು ಅಂದಾಜಿಸಲಾಗಿದೆ.
ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ), ಮಂಗಳೂರು ವಿಭಾಗದ ನಿರ್ದೇಶನ, ಮಾನ್ಯ ಅಬಕಾರಿ ಉಪ ಆಯುಕ್ತರು, ಉತ್ತರ ಕನ್ನಡ ಜಿಲ್ಲೆ, ಕಾರವಾರ ಅವರ ಮಾರ್ಗದರ್ಶನ ಹಾಗೂ ಮಾನ್ಯ ಅಬಕಾರಿ ಉಪ ಅಧೀಕ್ಷಕರು, ಕಾರವಾರ ಉಪ ವಿಭಾಗ ಅವರ ಆದೇಶದ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ. ಆರೋಪಿಯ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ, 1965ರ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.




