ಎಸ್‌ಐಆರ್ ಪ್ರಕ್ರಿಯೆ ಪ್ರಜಾಪ್ರಭುತ್ವಕ್ಕೆ ಸವಾಲು: ಲಕ್ಷಾಂತರ ಮತದಾರರ ಹಕ್ಕು ಕಸಿಯುವ ಹುನ್ನಾರ

Date:

ಪ್ರಜಾಪ್ರಭುತ್ವದ ಯಶಸ್ಸು ಕೇವಲ ಚುನಾವಣೆಗಳು ನಡೆಯುವುದರಲ್ಲಿ ಅಲ್ಲ, ಪ್ರತಿಯೊಬ್ಬ ಅರ್ಹ ನಾಗರಿಕನು ಯಾವುದೇ ಅಡೆತಡೆಯಿಲ್ಲದೆ ಮತದಾನದ ಹಕ್ಕು ಚಲಾಯಿಸುವ ಅವಕಾಶ ಪಡೆಯುವುದರಲ್ಲಿ ಅಡಗಿದೆ. ಮತದಾನವು ಸಂವಿಧಾನಾತ್ಮಕ ವ್ಯವಸ್ಥೆಯ ಜೀವಾಳವಾಗಿದ್ದು, ಮತದಾರರ ಪಾಲ್ಗೊಳ್ಳುವಿಕೆಯೇ ಪ್ರಜಾಪ್ರಭುತ್ವದ ನಿಜವಾದ ಶಕ್ತಿಯಾಗಿದೆ. ಆದ್ದರಿಂದ ರಾಜ್ಯದ ಪ್ರತಿಯೊಬ್ಬ ಅರ್ಹ ನಾಗರಿಕನ ಹೆಸರು ಮತದಾರರ ಪಟ್ಟಿಯಲ್ಲಿ ದಾಖಲಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರ ಮತ್ತು ಚುನಾವಣಾ ಆಯೋಗದ ಮೂಲಭೂತ ಜವಾಬ್ದಾರಿಯಾಗಿದೆ. ಆದರೆ ಮತದಾರರ ಪಟ್ಟಿಯಲ್ಲಿನ ಲೋಪದೋಷಗಳು, ಹೆಸರುಗಳ ಕೈಬಿಡುವಿಕೆ, ದಾಖಲೆಗಳ ಕೊರತೆ ಹಾಗೂ ತಾಂತ್ರಿಕ ದೋಷಗಳಿಂದ ಅನೇಕ ಅರ್ಹ ನಾಗರಿಕರು ಮತದಾನದ ಹಕ್ಕಿನಿಂದ ವಂಚಿತರಾಗುವ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

- Advertisement -

ಇತ್ತೀಚಿನ ವರ್ಷಗಳಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ ಹಲವು ವಿವಾದಗಳಿಗೆ ಕಾರಣವಾಗಿದೆ. ಹೆಸರುಗಳ ಅಳಿವು, ವಿಳಾಸ ಬದಲಾವಣೆಯ ಸಮಸ್ಯೆಗಳು, ದಾಖಲೆಗಳ ಅಸಂಗತತೆ ಹಾಗೂ ತಾಂತ್ರಿಕ ಕಾರಣಗಳಿಂದ ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಡಲ್ಪಟ್ಟಿರುವ ಬಗ್ಗೆ ವಿವಿಧ ರಾಜ್ಯಗಳಲ್ಲಿ ದೂರುಗಳು ಕೇಳಿಬಂದಿವೆ. ಮತದಾರರ ಪಟ್ಟಿಯ ಶುದ್ಧೀಕರಣ ಅಗತ್ಯವಾದರೂ ಅದು ಯಾವುದೇ ನಾಗರಿಕನ ಹಕ್ಕಿಗೆ ಧಕ್ಕೆ ತರದ ರೀತಿಯಲ್ಲಿ ನಡೆಯಬೇಕು ಎಂಬುದು ಪ್ರಜಾಪ್ರಭುತ್ವದ ಮೂಲಭೂತ ತತ್ವವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಶೇಷ ವಿಧಾನಮಂಡಲ ಅಧಿವೇಶನವನ್ನು ಕರೆದು ಮತದಾರರ ಪಟ್ಟಿ ಪರಿಷ್ಕರಣೆ ಕುರಿತಾಗಿ ಸಮಗ್ರ ಚರ್ಚೆ ನಡೆಸಬೇಕಾಗಿದೆ. ಕೇವಲ ಆಡಳಿತಾತ್ಮಕ ನಿರ್ಧಾರಗಳ ಮೂಲಕವಲ್ಲದೆ, ಎಲ್ಲ ರಾಜಕೀಯ ಪಕ್ಷಗಳು, ಕಾನೂನು ತಜ್ಞರು, ಚುನಾವಣಾ ಪರಿಣಿತರು, ನಾಗರಿಕ ಸಮಾಜದ ಪ್ರತಿನಿಧಿಗಳು ಹಾಗೂ ಜನಸಾಮಾನ್ಯರ ಅಭಿಪ್ರಾಯಗಳನ್ನು ಪಡೆದು ದೀರ್ಘಕಾಲೀನ ಮತ್ತು ಜನಪರ ನೀತಿಗಳನ್ನು ರೂಪಿಸುವ ಅಗತ್ಯವಿದೆ. ಮತದಾರರ ಹಕ್ಕು ರಕ್ಷಣೆ ಯಾವುದೇ ಪಕ್ಷದ ವಿಚಾರವಲ್ಲ; ಅದು ಪ್ರಜಾಪ್ರಭುತ್ವದ ಉಳಿವಿನ ಪ್ರಶ್ನೆಯಾಗಿದೆ.

ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯನ್ನು ಸರಳ, ಪಾರದರ್ಶಕ ಹಾಗೂ ಜನಸ್ನೇಹಿಯಾಗಿ ರೂಪಿಸುವುದು ಇಂದಿನ ಅಗತ್ಯವಾಗಿದೆ. ಅನಗತ್ಯ ದಾಖಲೆಗಳ ಒತ್ತಡ, ಸಂಕೀರ್ಣ ಅರ್ಜಿ ವಿಧಾನಗಳು ಹಾಗೂ ತಾಂತ್ರಿಕ ಅಡೆತಡೆಗಳನ್ನು ಕಡಿಮೆ ಮಾಡಿ ಚೆಕ್‌ಲಿಸ್ಟ್ ಆಧಾರಿತ ಸುಲಭ ವ್ಯವಸ್ಥೆ ಜಾರಿಗೊಳಿಸಬೇಕು. ರಾಜ್ಯದ ಪ್ರತಿಯೊಬ್ಬ ಅರ್ಹ ನಾಗರಿಕನನ್ನು ಒಳಗೊಂಡ ನಿಖರ ಹಾಗೂ ವಿಶ್ವಾಸಾರ್ಹ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಆಡಳಿತದ ಆದ್ಯತೆಯಾಗಬೇಕು.

ಗ್ರಾಮೀಣ ಹಾಗೂ ನಗರ ಪ್ರದೇಶಗಳ ಪ್ರತಿಯೊಂದು ಗ್ರಾಮಸಭೆ, ವಾರ್ಡ್ ಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ ಶಾಶ್ವತ ಮತದಾರರ ನೆರವು ಕೇಂದ್ರಗಳನ್ನು ಸ್ಥಾಪಿಸಬೇಕು. ಮತದಾರರ ಹೆಸರು ಸೇರ್ಪಡೆ, ತಿದ್ದುಪಡಿ, ಸ್ಥಳಾಂತರ, ದಾಖಲೆಗಳ ಪರಿಶೀಲನೆ ಹಾಗೂ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದ ಎಲ್ಲ ಸೇವೆಗಳನ್ನು ಒಂದೇ ಸ್ಥಳದಲ್ಲಿ ಒದಗಿಸುವ ವ್ಯವಸ್ಥೆ ರೂಪಿಸಬೇಕು. ವಿಶೇಷವಾಗಿ ಹಿರಿಯ ನಾಗರಿಕರು, ಮಹಿಳೆಯರು, ಅಂಗವಿಕಲರು, ಪರಿಶಿಷ್ಟ ಜಾತಿ-ಪಂಗಡಗಳು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಜನರಿಗೆ ವಿಶೇಷ ನೆರವು ಒದಗಿಸಬೇಕಾಗಿದೆ.

ಡಿಜಿಟಲ್ ಆಡಳಿತದ ಯುಗದಲ್ಲಿ ಮತದಾರರ ಗುರುತಿನ ವ್ಯವಸ್ಥೆಯನ್ನೂ ಆಧುನೀಕರಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಅರ್ಹ ಮತದಾರರಿಗೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಹೊಂದಿರುವ ‘ಸ್ಮಾರ್ಟ್ ಮತದಾರರ ಕಾರ್ಡ್’ ವಿತರಿಸುವ ಕುರಿತು ಸರ್ಕಾರ ಚಿಂತನೆ ನಡೆಸಬಹುದು. ಕ್ಯೂ-ಆರ್ ಕೋಡ್, ಡಿಜಿಟಲ್ ದೃಢೀಕರಣ ಹಾಗೂ ಸುರಕ್ಷಿತ ಗುರುತಿನ ತಂತ್ರಜ್ಞಾನಗಳನ್ನು ಒಳಗೊಂಡಿರುವ ಇಂತಹ ವ್ಯವಸ್ಥೆ ಮತದಾರರ ಗುರುತಿನ ಪರಿಶೀಲನೆಯನ್ನು ಸುಲಭಗೊಳಿಸುವುದರ ಜತೆಗೆ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯನ್ನು ಹೆಚ್ಚಿಸಬಹುದು.

ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಗಾಗಿ ವಿಶೇಷ ಗ್ರಾಮಸಭೆಗಳು ಹಾಗೂ ವಾರ್ಡ್ ಸಭೆಗಳನ್ನು ಆಯೋಜಿಸುವುದು ಅತ್ಯಂತ ಪರಿಣಾಮಕಾರಿ ಕ್ರಮವಾಗಬಹುದು. ಈ ಸಭೆಗಳಲ್ಲಿ ಮತದಾರರ ಕರಡು ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸಿ, ನಾಗರಿಕರಿಗೆ ಆಕ್ಷೇಪಣೆ ಸಲ್ಲಿಸಲು ಹಾಗೂ ತಿದ್ದುಪಡಿ ಸೂಚಿಸಲು ಅವಕಾಶ ಕಲ್ಪಿಸಬೇಕು. ದಾಖಲೆಗಳ ಕೊರತೆಯಿಂದ ಮತದಾರರ ಪಟ್ಟಿಗೆ ಸೇರ್ಪಡೆಯಾಗದ ಅರ್ಹ ನಾಗರಿಕರಿಗೆ ಸ್ಥಳದಲ್ಲೇ ಅಗತ್ಯ ದಾಖಲೆಗಳನ್ನು ಒದಗಿಸಿ ತಕ್ಷಣ ನೋಂದಣಿ ಮಾಡುವ ವ್ಯವಸ್ಥೆ ಜಾರಿಗೊಳಿಸಬೇಕು.

ಈ ಎಲ್ಲ ಚರ್ಚೆಗಳ ನಡುವೆ ಕೇಂದ್ರ ಚುನಾವಣಾ ಆಯೋಗ ಜಾರಿಗೊಳಿಸಿರುವ ಎಸ್‌ಐಆರ್(Special Intensive Revision–ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮತದಾರರ ಪಟ್ಟಿಯನ್ನು ಶುದ್ಧೀಕರಿಸುವುದು ಮತ್ತು ಅರ್ಹ ಮತದಾರರನ್ನು ಸೇರಿಸುವುದು ಇದರ ಉದ್ದೇಶ ಎಂದು ಚುನಾವಣಾ ಆಯೋಗ ಹೇಳುತ್ತಿದೆಯಾದರೂ, ಪ್ರಕ್ರಿಯೆಯ ಅನುಷ್ಠಾನ ಕುರಿತು ಅನೇಕ ಪ್ರಶ್ನೆಗಳು ಉದ್ಭವಿಸಿವೆ.

ಎಸ್‌ಐಆರ್ ಅಡಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿ ಮತದಾರರಿಗೆ ಎನ್ಯೂಮರೇಷನ್(ಗಣತಿ) ನಮೂನೆಗಳನ್ನು ವಿತರಿಸಲಿದ್ದಾರೆ. ಮತದಾರರು ನಿಗದಿತ ಅವಧಿಯೊಳಗೆ ದಾಖಲೆಗಳೊಂದಿಗೆ ನಮೂನೆಗಳನ್ನು ಸಲ್ಲಿಸಬೇಕಾಗುತ್ತದೆ. ಸಲ್ಲಿಸದಿದ್ದಲ್ಲಿ ಹೆಸರು ಮತದಾರರ ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳು, ವಲಸೆ ಕಾರ್ಮಿಕರು, ಹಿರಿಯ ನಾಗರಿಕರು ಹಾಗೂ ದಾಖಲೆಗಳ ಕೊರತೆಯಿರುವ ಬಡ ಕುಟುಂಬಗಳಿಗೆ ಇದು ಸವಾಲಾಗಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಈ ಪ್ರಕ್ರಿಯೆಯಲ್ಲಿ ಜನನ ಪ್ರಮಾಣಪತ್ರ, ಶಾಲಾ ದಾಖಲಾತಿ, ಪಾಸ್‌ಪೋರ್ಟ್, ಆಸ್ತಿ ದಾಖಲೆ ಸೇರಿದಂತೆ ಹಲವು ದಾಖಲೆಗಳನ್ನು ಸಲ್ಲಿಸುವ ಅವಶ್ಯಕತೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ದೇಶದ ಅನೇಕ ಕುಟುಂಬಗಳ ಬಳಿ ಇಂತಹ ದಾಖಲೆಗಳು ಲಭ್ಯವಿಲ್ಲ ಎಂಬುದು ಸಾಮಾಜಿಕ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳ ಪ್ರಮುಖ ವಾದವಾಗಿದೆ. ದಾಖಲೆಗಳ ಕೊರತೆಯಿಂದ ಅರ್ಹ ನಾಗರಿಕರು ಮತದಾನದ ಹಕ್ಕು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂಬುದು ಜನಸಾಮಾನ್ಯರ ಕಳವಳವಾಗಿದೆ.

ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಮುಂದೆ ಹಲವು ಮಹತ್ವದ ಪ್ರಶ್ನೆಗಳು ನಿಂತಿವೆ. ದೇಶಾದ್ಯಂತ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎನ್ನಲಾಗುತ್ತಿರುವ ಕೋಟ್ಯಂತರ ಹೆಸರುಗಳಲ್ಲಿ ನಿಜವಾಗಿ ಅನಧಿಕೃತ ಮತದಾರರು ಅಥವಾ ನುಸುಳುಕೋರರು ಎಷ್ಟು ಮಂದಿ ಎಂಬುದರ ಕುರಿತು ಸ್ಪಷ್ಟ ಮಾಹಿತಿ ಪ್ರಕಟಿಸಲಾಗಿದೆಯೇ? ಹೆಸರು ಕೈಬಿಡುವ ಪ್ರಕ್ರಿಯೆಯಲ್ಲಿ ಅನುಸರಿಸಿದ ಮಾನದಂಡಗಳು ಯಾವುವು? ತಪ್ಪಾಗಿ ಹೆಸರು ಕೈಬಿಟ್ಟವರ ಸಂಖ್ಯೆ ಎಷ್ಟು? ಈ ಪ್ರಶ್ನೆಗಳಿಗೆ ಪಾರದರ್ಶಕ ಉತ್ತರ ನೀಡುವುದು ಚುನಾವಣಾ ಆಯೋಗದ ಜವಾಬ್ದಾರಿಯಾಗಿದೆ.

ವಿಶೇಷವಾಗಿ ಮಹಿಳೆಯರು, ಪರಿಶಿಷ್ಟ ಜಾತಿ-ಪಂಗಡಗಳು ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಮತದಾರರ ಹೆಸರುಗಳು ಹೆಚ್ಚಾಗಿ ಕೈಬಿಡಲ್ಪಟ್ಟಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಆರೋಪಗಳು ಸತ್ಯವೇ ಅಥವಾ ತಪ್ಪು ಕಲ್ಪನೆಗಳೇ ಎಂಬುದನ್ನು ಚುನಾವಣಾ ಆಯೋಗವೇ ಅಧಿಕೃತ ಅಂಕಿಅಂಶಗಳ ಮೂಲಕ ಸ್ಪಷ್ಟಪಡಿಸಬೇಕು. ಪ್ರಜಾಪ್ರಭುತ್ವದಲ್ಲಿ ದುರ್ಬಲ ವರ್ಗಗಳ ರಾಜಕೀಯ ಹಕ್ಕುಗಳಿಗೆ ಧಕ್ಕೆಯಾಗುವ ಯಾವುದೇ ಬೆಳವಣಿಗೆ ಗಂಭೀರ ಚಿಂತೆಯ ವಿಷಯವಾಗಿದೆ.

ತಾಂತ್ರಿಕ ದೋಷಗಳ ಪ್ರಶ್ನೆಯೂ ಅಷ್ಟೇ ಮಹತ್ವದ್ದಾಗಿದೆ. ಕೆಲವು ರಾಜ್ಯಗಳಲ್ಲಿ ಸಾಫ್ಟ್‌ವೇರ್ ಆಧಾರಿತ ಪರಿಶೀಲನಾ ಕ್ರಮಗಳಿಂದ ಅರ್ಹ ಮತದಾರರ ಹೆಸರುಗಳು ಕೈಬಿಡಲ್ಪಟ್ಟಿವೆ ಎಂಬ ಆರೋಪಗಳು ಕೇಳಿಬಂದಿವೆ. ತಂತ್ರಜ್ಞಾನ ಬಳಕೆ ಚುನಾವಣಾ ವ್ಯವಸ್ಥೆಯನ್ನು ಬಲಪಡಿಸಬೇಕೇ ಹೊರತು ನಾಗರಿಕರ ಹಕ್ಕುಗಳಿಗೆ ಅಡ್ಡಿಯಾಗಬಾರದು. ಆದ್ದರಿಂದ ಬಳಸಲಾಗುತ್ತಿರುವ ಎಲ್ಲ ಡಿಜಿಟಲ್ ವ್ಯವಸ್ಥೆಗಳ ಕುರಿತು ಸಾರ್ವಜನಿಕ ಪರಿಶೀಲನೆ ಹಾಗೂ ಸ್ವತಂತ್ರ ತಾಂತ್ರಿಕ ಮೌಲ್ಯಮಾಪನ ನಡೆಸಬೇಕಾಗಿದೆ.

ಚುನಾವಣಾ ಕೈಪಿಡಿಯ ಪ್ರಕಾರ ಕರಡು ಮತದಾರರ ಪಟ್ಟಿಯನ್ನು ಗ್ರಾಮಸಭೆಗಳು ಹಾಗೂ ವಾರ್ಡ್ ಸಭೆಗಳಲ್ಲಿ ಸಾರ್ವಜನಿಕ ಪರಿಶೀಲನೆಗೆ ಒಳಪಡಿಸುವುದು ಅತ್ಯಂತ ಮುಖ್ಯವಾದ ಹಂತವಾಗಿದೆ. ಸ್ಥಳೀಯ ಮಟ್ಟದಲ್ಲಿ ಸಾರ್ವಜನಿಕ ಪರಿಶೀಲನೆ ನಡೆದರೆ ಮಾತ್ರ ತಪ್ಪುಗಳನ್ನು ಪತ್ತೆಹಚ್ಚಲು ಹಾಗೂ ತಿದ್ದುಪಡಿ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ ಕರಡು ಪಟ್ಟಿಯ ಬಗ್ಗೆ ವ್ಯಾಪಕ ಸಾರ್ವಜನಿಕ ಚರ್ಚೆ ಹಾಗೂ ಆಕ್ಷೇಪಣೆ ಸಲ್ಲಿಸುವ ಅವಕಾಶವನ್ನು ವಿಸ್ತರಿಸಬೇಕಾಗಿದೆ.

ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೂ ಸಾಕಷ್ಟು ಸಮಯವಿರುವ ಸಂದರ್ಭದಲ್ಲಿ, ಎಸ್‌ಐಆರ್ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಅಗತ್ಯವೇನು ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ. ಮತದಾರರಿಗೆ ದಾಖಲೆಗಳನ್ನು ಸಂಗ್ರಹಿಸಲು, ಹೆಸರು ಕೈಬಿಟ್ಟಿರುವುದನ್ನು ಪ್ರಶ್ನಿಸಲು ಹಾಗೂ ಅಪೀಲು ಸಲ್ಲಿಸಲು ಸಮರ್ಪಕ ಕಾಲಾವಕಾಶ ನೀಡಬೇಕು. ಕನಿಷ್ಠ ಆರು ತಿಂಗಳ ಅವಧಿಯವರೆಗೆ ಆಕ್ಷೇಪಣೆ ಮತ್ತು ಅಪೀಲು ಸಲ್ಲಿಕೆಗೆ ಅವಕಾಶ ನೀಡುವುದು ನ್ಯಾಯಸಮ್ಮತ ಕ್ರಮವಾಗಲಿದೆ.

ಭಾರತದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಗೆ ಈಗಾಗಲೇ ಸಮ್ಮರಿ ರಿವಿಷನ್, ಇಂಟೆನ್ಸಿವ್ ರಿವಿಷನ್, ಸ್ಪೆಷಲ್ ರಿವಿಷನ್ ಹಾಗೂ ಇತರೆ ವಿಧಾನಗಳು ಅಸ್ತಿತ್ವದಲ್ಲಿವೆ. ಹೊಸ ಮತದಾರರ ಸೇರ್ಪಡೆ, ಮೃತರ ಹೆಸರುಗಳ ತೆಗೆದುಹಾಕುವಿಕೆ ಹಾಗೂ ಸ್ಥಳಾಂತರಗೊಂಡವರ ವಿವರಗಳ ನವೀಕರಣಕ್ಕೆ ಕಾನೂನಿನಲ್ಲಿ ಸ್ಪಷ್ಟ ವ್ಯವಸ್ಥೆಗಳಿವೆ. ಈ ಹಿನ್ನೆಲೆ ಎಸ್‌ಐಆರ್ ಪ್ರಕ್ರಿಯೆಯ ವಿಶೇಷತೆ ಏನು ಮತ್ತು ಅದು ಈಗಿನ ವ್ಯವಸ್ಥೆಗಳಿಂದ ಹೇಗೆ ಭಿನ್ನ ಎಂಬುದನ್ನು ಚುನಾವಣಾ ಆಯೋಗ ಜನರಿಗೆ ಸ್ಪಷ್ಟಪಡಿಸಬೇಕಾಗಿದೆ.

ಮಂಡ್ಯದ ವಕೀಲ ಬಿ ಟಿ ವಿಶ್ವನಾಥ್ ಈ ದಿನ.ಕಾಮ್ ಜತೆಗೆ ಮಾತನಾಡಿ, “ಕೇಂದ್ರ ಚುನಾವಣಾ ಆಯೋಗ ಜಾರಿಗೊಳಿಸಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆ ದೇಶದ ಅನೇಕ ನಾಗರಿಕರ ಅಸ್ತಿತ್ವ ಮತ್ತು ಪೌರತ್ವವನ್ನೇ ಪ್ರಶ್ನಿಸುವ ಹಂತಕ್ಕೆ ತಲುಪಿದೆ. ಅದಷ್ಟೇ ಅಲ್ಲದೆ ಎಸ್‌ಐಆರ್ ಪ್ರಕ್ರಿಯೆ ಕೇವಲ ಮತದಾರರ ಪಟ್ಟಿಯ ಪರಿಷ್ಕರಣೆ ಎನ್ನುವುದಕ್ಕಿಂತ ಹೆಚ್ಚಾಗಿ ನಾಗರಿಕರು ತಮ್ಮ ಅಸ್ತಿತ್ವ ಮತ್ತು ಪೌರತ್ವವನ್ನು ಮತ್ತೆ ಸಾಬೀತುಪಡಿಸಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ” ಎಂದು ಹೇಳಿದರು.

“ವಿಶೇಷವಾಗಿ ಅಲೆಮಾರಿ ಸಮುದಾಯಗಳು, ಲಂಬಾಣಿ ಜನಾಂಗ, ಆದಿವಾಸಿಗಳು ಹಾಗೂ ಸಮಾಜದ ಅಂಚಿನಲ್ಲಿರುವ ವರ್ಗಗಳ ಸ್ಥಿತಿ ಅತ್ಯಂತ ಸಂಕಷ್ಟಕರವಾಗಿದೆ. ಈ ಸಮುದಾಯಗಳ ಅನೇಕ ಜನರ ಬಳಿ ಜನನ ಪ್ರಮಾಣಪತ್ರ, ಶಾಲಾ ದಾಖಲಾತಿ ಅಥವಾ ಇತರ ಅಧಿಕೃತ ದಾಖಲೆಗಳು ಇಲ್ಲ. ಅಂತಹವರು ಎಸ್‌ಐಆರ್ ಪ್ರಕ್ರಿಯೆಯಲ್ಲಿ ದಾಖಲೆಗಳನ್ನು ಸಲ್ಲಿಸಿ ತಮ್ಮ ಗುರುತು ಮತ್ತು ಪೌರತ್ವವನ್ನು ಸಾಬೀತುಪಡಿಸುವುದು ಸುಲಭದ ಮಾತಲ್ಲ” ಎಂದು ತಿಳಿಸಿದರು.

“ದೇಶದ ಅನೇಕ ಮಹಿಳೆಯರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಹುಟ್ಟಿದ ಮನೆಯಲ್ಲಿದ್ದ ಹೆಸರು, ಮದುವೆಯ ನಂತರ ಬದಲಾಗಿರುವ ಹೆಸರು, ಉಪನಾಮಗಳ ಸೇರ್ಪಡೆ ಅಥವಾ ಸಂಪ್ರದಾಯದ ಕಾರಣಗಳಿಂದ ಹೆಸರುಗಳಲ್ಲಿ ಆಗಿರುವ ಬದಲಾವಣೆಗಳು ಹಲವು ಬಾರಿ ಯಾವುದೇ ಕಾನೂನುಬದ್ಧ ದಾಖಲೆ ಪ್ರಕ್ರಿಯೆಗೆ ಒಳಪಟ್ಟಿರುವುದಿಲ್ಲ. ಗಣಕೂಟ, ದೇವರ ಬಲ, ಕುಟುಂಬದ ಸಂಪ್ರದಾಯಗಳು ಅಥವಾ ಇತರೆ ಕಾರಣಗಳಿಂದ ಲಗ್ನಪತ್ರಿಕೆಯಲ್ಲಿ ಹೆಸರು ಬದಲಾಯಿಸುವ ಪದ್ಧತಿ ಇಂದಿಗೂ ಅನೇಕ ಕಡೆಗಳಲ್ಲಿ ಕಂಡುಬರುತ್ತಿದೆ” ಎಂದು ಹೇಳಿದರು.

“ಇಂತಹ ಹೆಸರು ಬದಲಾವಣೆಗಳು ಮುಂದೆ ಹಲವು ಕಾನೂನು ಸಮಸ್ಯೆಗಳಿಗೆ ಕಾರಣವಾಗುತ್ತವೆ. ಗಂಡ ಅಪಘಾತದಲ್ಲಿ ಮೃತಪಟ್ಟ ಸಂದರ್ಭದಲ್ಲಿ ಪರಿಹಾರ ಪಡೆಯುವುದು, ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಾಬೀತುಪಡಿಸುವುದು ಅಥವಾ ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ಸಂದರ್ಭಗಳಲ್ಲಿ ಮಹಿಳೆಯರು ತೊಂದರೆ ಅನುಭವಿಸುವುದು ಸಾಮಾನ್ಯವಾಗಿದೆ. ಈಗ ಎಸ್‌ಐಆರ್ ಪ್ರಕ್ರಿಯೆಯೂ ಇದೇ ರೀತಿಯ ಹೊಸ ಸಂಕಷ್ಟಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ” ಎಂದು ಆತಂಕ ವ್ಯಕ್ತಪಡಿಸಿದರು.

“ಹೆಸರು ಅಥವಾ ದಾಖಲೆಗಳಲ್ಲಿ ಇರುವ ವ್ಯತ್ಯಾಸಗಳನ್ನು ಸರಿಪಡಿಸಿಕೊಳ್ಳಬೇಕಾದರೆ ನ್ಯಾಯಾಲಯದ ಮೆಟ್ಟಿಲೇರಬೇಕಾಗುತ್ತದೆ. ಇದು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಹಾಗೂ ಗ್ರಾಮೀಣ ಜನರಿಗೆ ಸುಲಭದ ಪ್ರಕ್ರಿಯೆಯಲ್ಲ. ಕಾನೂನು ಪ್ರಕ್ರಿಯೆಗಳು ಸಮಯ ಮತ್ತು ವೆಚ್ಚ ಎರಡನ್ನೂ ಬೇಡಿಕೊಳ್ಳುವುದರಿಂದ ಸಾಮಾನ್ಯ ನಾಗರಿಕರಿಗೆ ಅದು ಹೆಚ್ಚುವರಿ ಹೊರೆಯಾಗುತ್ತದೆ” ಎಂದು ಹೇಳಿದರು.

“ಎಸ್‌ಐಆರ್ ಪ್ರಕ್ರಿಯೆಯನ್ನು ಜಾರಿಗೊಳಿಸುವ ಮೊದಲು ಅದರ ಸಾಧಕ-ಬಾಧಕಗಳನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕಾಗಿತ್ತು. ಸಮಾಜದ ವಿವಿಧ ವರ್ಗಗಳ ವಾಸ್ತವ ಪರಿಸ್ಥಿತಿ, ದಾಖಲೆಗಳ ಲಭ್ಯತೆ, ಮಹಿಳೆಯರ ಹೆಸರು ಬದಲಾವಣೆ ಸಮಸ್ಯೆಗಳು, ಅಲೆಮಾರಿ ಮತ್ತು ಆದಿವಾಸಿ ಸಮುದಾಯಗಳ ಬದುಕಿನ ಸವಾಲುಗಳನ್ನು ಪರಿಗಣಿಸದೇ ಈ ಪ್ರಕ್ರಿಯೆಯನ್ನು ಜಾರಿಗೆ ತಂದಿರುವಂತೆ ಕಾಣುತ್ತಿದೆ” ಎಂದು ಅವರು ಟೀಕಿಸಿದರು.

“ಸಾಕಷ್ಟು ಸಾಮಾಜಿಕ, ಕಾನೂನು ಹಾಗೂ ಆಡಳಿತಾತ್ಮಕ ಸವಾಲುಗಳ ನಡುವೆ ಸಾಮಾನ್ಯ ನಾಗರಿಕರು ತಮ್ಮ ಪೌರತ್ವವನ್ನು ಉಳಿಸಿಕೊಳ್ಳುವುದು ಹಾಗೂ ಅಗತ್ಯ ದಾಖಲೆಗಳನ್ನು ಒದಗಿಸುವುದು ಅಷ್ಟು ಸುಲಭದ ವಿಷಯವಲ್ಲ. ಮತದಾನದಂತಹ ಮೂಲಭೂತ ಪ್ರಜಾಪ್ರಭುತ್ವದ ಹಕ್ಕಿಗೆ ದಾಖಲೆಗಳ ಅಡೆತಡೆ ಉಂಟಾಗಬಾರದು. ಈ ಹಿನ್ನೆಲೆಯಲ್ಲಿ ಪ್ರಸ್ತುತ ರೂಪದಲ್ಲಿ ಜಾರಿಗೊಳ್ಳುತ್ತಿರುವ ಎಸ್‌ಐಆರ್ ಪ್ರಕ್ರಿಯೆಯನ್ನು ಒಪ್ಪಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟರು.

ಮಡಿಕೇರಿ ನಗರಸಭಾ ಸದಸ್ಯ ಅಮೀನ್ ಮೋಸಿನ್ ಈ ದಿನ.ಕಾಮ್ ಜತೆಗೆ ಮಾತನಾಡಿ, “ಈ ಬಾರಿ ಜಾರಿಗೊಂಡಿರುವ ಎಸ್‌ಐಆರ್ ಪ್ರಕ್ರಿಯೆ ಸಾಮಾನ್ಯ ಮತದಾರರ ಪಟ್ಟಿ ಪರಿಷ್ಕರಣೆಯಲ್ಲ, ಬದಲಾಗಿ ನಾಗರಿಕರ ಪೌರತ್ವವನ್ನೇ ಪ್ರಶ್ನಿಸುವ ಹಂತಕ್ಕೆ ತಲುಪಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಎಸ್‌ಐಆರ್ ಪ್ರಕ್ರಿಯೆ ದೇಶಕ್ಕೆ ಹೊಸದೇನಲ್ಲ. ಈ ಹಿಂದೆಯೂ ಹಲವು ಬಾರಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗಳು ನಡೆದಿವೆ ಮತ್ತು ಅದಕ್ಕೆ ಸಂಬಂಧಿಸಿದ ಕಾನೂನು ವ್ಯವಸ್ಥೆಯೂ ದೇಶದಲ್ಲಿ ಅಸ್ತಿತ್ವದಲ್ಲಿದೆ. ಆದರೆ ಈ ಬಾರಿಯ ಎಸ್‌ಐಆರ್ ಪ್ರಕ್ರಿಯೆಯ ಉದ್ದೇಶ ಮತ್ತು ಅನುಷ್ಠಾನದ ವಿಧಾನ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಒಂದು ನಿರ್ದಿಷ್ಟ ರಾಜಕೀಯ ಶಕ್ತಿಗೆ ಅನುಕೂಲ ಕಲ್ಪಿಸುವ ಹುನ್ನಾರದ ಭಾಗವಾಗಿ ಕಾಣುತ್ತಿದೆ” ಎಂದು ಆರೋಪಿಸಿದರು.

“ನುಸುಳುಕೋರರನ್ನು ಗುರುತಿಸಿ ಮತದಾರರ ಪಟ್ಟಿಯಿಂದ ಹೊರಗಿಡುವ ಉದ್ದೇಶದಿಂದ ಈ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಈವರೆಗೆ ನಡೆದಿರುವ ಪ್ರಕ್ರಿಯೆಗಳಲ್ಲಿ ನಿಜವಾಗಿಯೂ ಎಷ್ಟು ನುಸುಳುಕೋರರನ್ನು ಪತ್ತೆಹಚ್ಚಲಾಗಿದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಅಥವಾ ದೃಢವಾದ ಅಂಕಿಅಂಶಗಳನ್ನು ನೀಡಲಾಗಿಲ್ಲ. ಈಗಾಗಲೇ ಎಸ್‌ಐಆರ್ ಪ್ರಕ್ರಿಯೆ ಜಾರಿಯಾಗಿರುವ ರಾಜ್ಯಗಳ ಅನುಭವವನ್ನು ಗಮನಿಸಿದರೆ, ಈ ಕುರಿತು ವ್ಯಕ್ತವಾಗುತ್ತಿರುವ ಅನುಮಾನಗಳು ಇನ್ನಷ್ಟು ಬಲವಾಗುತ್ತವೆ” ಎಂದು ಹೇಳಿದರು.

“ಹಿಂದೆ ಮತದಾರರ ದಾಖಲೆಗಳಲ್ಲಿ ಅಥವಾ ವೈಯಕ್ತಿಕ ಮಾಹಿತಿಗಳಲ್ಲಿ ವ್ಯತ್ಯಾಸ ಕಂಡುಬಂದ ಸಂದರ್ಭಗಳಲ್ಲಿ ನಾಗರಿಕರಿಗೆ ಅಫಿಡವಿಟ್ ಸಲ್ಲಿಸುವುದು, ಪತ್ರಿಕೆಗಳಲ್ಲಿ ಸಾರ್ವಜನಿಕ ಪ್ರಕಟಣೆ ನೀಡುವುದು ಹಾಗೂ ಇತರೆ ಕಾನೂನು ಪ್ರಕ್ರಿಯೆಗಳ ಮೂಲಕ ತಿದ್ದುಪಡಿ ಮಾಡಿಕೊಳ್ಳುವ ಅವಕಾಶವಿತ್ತು. ಆದರೆ ಪ್ರಸ್ತುತ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಂತಹ ಅವಕಾಶಗಳೇ ಸೀಮಿತವಾಗಿವೆ ಅಥವಾ ಲಭ್ಯವಿಲ್ಲ ಎಂಬ ಆತಂಕಗಳು ವ್ಯಕ್ತವಾಗಿವೆ. ಈ ಬೆಳವಣಿಗೆಗಳು ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಉದ್ದೇಶಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ” ಎಂದು ಹೇಳಿದರು.

“ಶಿಕ್ಷಿತರು, ಆರ್ಥಿಕವಾಗಿ ಸದೃಢರು ಹಾಗೂ ಎಲ್ಲ ದಾಖಲೆಗಳನ್ನು ಹೊಂದಿರುವವರು ತಮ್ಮ ದಾಖಲೆಗಳಲ್ಲಿ ದೋಷಗಳಿದ್ದರೆ ನ್ಯಾಯಮಂಡಳಿ ಅಥವಾ ನ್ಯಾಯಾಲಯದ ಮೊರೆ ಹೋಗಿ ವಕೀಲರ ನೆರವಿನಿಂದ ತಮ್ಮ ಹಕ್ಕುಗಳನ್ನು ಸಾಬೀತುಪಡಿಸಿಕೊಳ್ಳಬಹುದು. ಆದರೆ ಇಡೀ ಕುಟುಂಬ ಅಥವಾ ಸಮುದಾಯದ ಮಟ್ಟದಲ್ಲಿ ದಾಖಲೆಗಳ ಸಮಸ್ಯೆ ಇದ್ದರೆ ಆ ಜನರಿಗೆ ನ್ಯಾಯಾಂಗ ಹೋರಾಟ ನಡೆಸುವುದು ಎಷ್ಟು ಸಾಧ್ಯ ಎಂಬುದು ದೊಡ್ಡ ಪ್ರಶ್ನೆಯಾಗಿದೆ” ಎಂದು ಅಭಿಪ್ರಾಯಪಟ್ಟರು.

“ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಈ ಹಿಂದೆ ಬೂತ್ ಮಟ್ಟದ ಅಧಿಕಾರಿಗಳು(ಬಿಎಲ್ಒ) ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದರು. ಸ್ಥಳೀಯ ಮಟ್ಟದಲ್ಲಿ ಮಾಹಿತಿಗಳನ್ನು ಸಂಗ್ರಹಿಸಿ, ಮತದಾರರ ವಿವರಗಳನ್ನು ನಿಖರವಾಗಿ ದಾಖಲಿಸುವ ಪ್ರಯತ್ನಗಳೂ ನಡೆಯುತ್ತಿದ್ದವು. ಆದರೆ ಈ ಬಾರಿ ಆ ರೀತಿಯ ಸಮಗ್ರ ಪರಿಶೀಲನೆ ನಡೆದಿದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಸರಿಯಾದ ಸಮೀಕ್ಷೆ ಮತ್ತು ಪರಿಶೀಲನೆ ನಡೆಸದೇ ಕಾನೂನು ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ ಎಂಬ ಆತಂಕವೂ ಹೆಚ್ಚಾಗಿದೆ” ಎಂದು ಹೇಳಿದರು.

ಈ ಪ್ರಕ್ರಿಯೆಯಿಂದ ದಾಖಲೆಗಳ ಕೊರತೆಯಿರುವ ಬಡವರು, ಅಲೆಮಾರಿ ಸಮುದಾಯಗಳು, ಆದಿವಾಸಿಗಳು, ಕಾರ್ಮಿಕ ವರ್ಗಗಳು ಹಾಗೂ ಸಮಾಜದ ಅಂಚಿನಲ್ಲಿರುವ ಜನರು ಹೆಚ್ಚು ತೊಂದರೆ ಅನುಭವಿಸುವ ಸಾಧ್ಯತೆಯಿದೆ. ಪೌರತ್ವಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಅವರು ಮತದಾನದ ಹಕ್ಕು ಮಾತ್ರವಲ್ಲದೆ ಸರ್ಕಾರಿ ಸೌಲಭ್ಯಗಳು ಮತ್ತು ಕಲ್ಯಾಣ ಯೋಜನೆಗಳಿಂದಲೂ ವಂಚಿತರಾಗುವ ಅಪಾಯವಿದೆ ಎಂದು ಎಚ್ಚರಿಸಿದರು.

ಮುಂದಿನ ದಿನಗಳಲ್ಲಿ ಪೌರತ್ವದ ಪ್ರಶ್ನೆ ಸಂಕೀರ್ಣ ಸ್ವರೂಪ ಪಡೆದುಕೊಂಡರೆ ಅದರ ಪರಿಣಾಮಗಳು ಕೇವಲ ಮತದಾರರ ಪಟ್ಟಿಗೆ ಸೀಮಿತವಾಗಿರುವುದಿಲ್ಲ. ವ್ಯಕ್ತಿಯ ಆಸ್ತಿ ಹಕ್ಕುಗಳು, ಪಿತ್ರಾರ್ಜಿತ ಆಸ್ತಿಗಳ ಮೇಲಿನ ಹಕ್ಕು, ಸರ್ಕಾರಿ ದಾಖಲೆಗಳು, ಶಿಕ್ಷಣ, ಉದ್ಯೋಗ ಹಾಗೂ ಇತರೆ ನಾಗರಿಕ ಸೌಲಭ್ಯಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಒಂದು ಸಮಸ್ಯೆ ಮತ್ತೊಂದು ಸಮಸ್ಯೆಗೆ ಕಾರಣವಾಗುವ ರೀತಿಯಲ್ಲಿ ಸರಣಿ ಸಂಕಷ್ಟಗಳು ಎದುರಾಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನ ಹಕ್ಕುಗಳನ್ನು ಸಂರಕ್ಷಿಸುವುದು ಅತ್ಯಂತ ಮುಖ್ಯವಾಗಿದೆ. ಆದ್ದರಿಂದ ಎಸ್‌ಐಆರ್ ಪ್ರಕ್ರಿಯೆ ಕುರಿತು ಉದ್ಭವಿಸಿರುವ ಅನುಮಾನಗಳಿಗೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕು. ಯಾವುದೇ ಅರ್ಹ ನಾಗರಿಕನ ಮತದಾನದ ಹಕ್ಕು ಅಥವಾ ಪೌರತ್ವದ ಹಕ್ಕಿಗೆ ಧಕ್ಕೆಯಾಗದಂತೆ ಪ್ರಕ್ರಿಯೆಯನ್ನು ಪಾರದರ್ಶಕ, ನ್ಯಾಯಸಮ್ಮತ ಹಾಗೂ ಜನಸ್ನೇಹಿಯಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ?ಗೃಹಲಕ್ಷ್ಮಿ ಫಲಾನುಭವಿಗಳ ಮರುಪರಿಶೀಲನೆ: ಮೈಸೂರಿನಲ್ಲಿ 18 ಸಾವಿರ ಅನರ್ಹರ ಪತ್ತೆ

ಪ್ರಜಾಪ್ರಭುತ್ವದ ಬಲ ಮತದಾರರ ವಿಶ್ವಾಸದಲ್ಲಿದೆ. ಮತದಾರರ ಪಟ್ಟಿಯ ಶುದ್ಧೀಕರಣ ಎಂಬ ಉದ್ದೇಶ ಎಷ್ಟೇ ಸದುದ್ದೇಶಪೂರ್ಣವಾಗಿದ್ದರೂ, ಯಾವುದೇ ಅರ್ಹ ನಾಗರಿಕನ ಮತದಾನದ ಹಕ್ಕಿಗೆ ಧಕ್ಕೆಯಾಗುವಂತಿಲ್ಲ. ಚುನಾವಣಾ ಆಯೋಗ ಮತ್ತು ಸರ್ಕಾರ ಎರಡೂ ಪಾರದರ್ಶಕತೆ, ನ್ಯಾಯಸಮ್ಮತತೆ ಹಾಗೂ ಜನವಿಶ್ವಾಸವನ್ನು ಕಾಪಾಡುವ ಜವಾಬ್ದಾರಿಯನ್ನು ಹೊಂದಿವೆ. ಪ್ರತಿಯೊಬ್ಬ ಅರ್ಹ ನಾಗರಿಕನ ಮತದಾನದ ಹಕ್ಕು ರಕ್ಷಿತವಾಗಿರುವುದನ್ನು ಖಚಿತಪಡಿಸುವ ಮೂಲಕವೇ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸಲು ಸಾಧ್ಯ. ಆದ್ದರಿಂದ ಎಸ್‌ಐಆರ್ ಪ್ರಕ್ರಿಯೆ ಕುರಿತು ಉದ್ಭವಿಸಿರುವ ಎಲ್ಲ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡುವುದು ಮತ್ತು ಜನರ ವಿಶ್ವಾಸವನ್ನು ಉಳಿಸಿಕೊಳ್ಳುವುದು ಕಾಲದ ಅಗತ್ಯವಾಗಿದೆ.

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈಶಾನ್ಯ ಶಿಕ್ಷಕರ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಶಶೀಲ್‌ ನಮೋಶಿ ಗೆಲುವು

ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ...

ಕನ್ನಡಿಗರ ಉದ್ಯೋಗ ಹಕ್ಕುಗಳ ರಕ್ಷಣೆಗೆ ʼನಮ್ಮ ನಾಡು ನಮ್ಮ ಉದ್ಯೋಗʼ ಚಳವಳಿ ಆರಂಭ

ಕರ್ನಾಟಕದಲ್ಲಿ ಕನ್ನಡಿಗರ ಉದ್ಯೋಗಾವಕಾಶಗಳ ರಕ್ಷಣೆ ಹಾಗೂ ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ನ್ಯಾಯಯುತ...

ಸೌಜನ್ಯ ಪ್ರಕರಣ ಮರು ತನಿಖೆಗೆ ವೇಗ: ಹಿಂದಿನ ತನಿಖಾಧಿಕಾರಿಗಳಿಗೆ SIT ನೋಟಿಸ್, 15ಕ್ಕೂ ಹೆಚ್ಚು ಮಂದಿಗೆ ಬುಲಾವ್

ರಾಜ್ಯಾದ್ಯಂತ ತೀವ್ರ ಗಮನ ಸೆಳೆದಿರುವ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ...

ಕರ್ನಾಟಕ SIR | ಅಂತಿಮ ಮತದಾರರ ಪಟ್ಟಿ ಪ್ರಕಟ; ನಿಮ್ಮ ಹೆಸರಿದೆಯೇ ಪರಿಶೀಲಿಸಿ

ರಾಜ್ಯದಲ್ಲಿ ಗ್ಯಾನೇಶ್‌ ಕುಮಾರ್‌/ಚುನಾವಣಾ ಆಯೋಗ ಹೇರಿದ್ದ ಎಸ್‌ಐಆರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಿಮ...