ಕೊಪ್ಪಳ ತಾಲೂಕಿನ ಸುತ್ತಮುತ್ತಲಿನ ಜನರ ಸ್ಥಿತಿ ಸದ್ಯ ಆತಂಕದಲ್ಲಿದೆ. ಒಂದು ಕಡೆ ಬೃಹತ್ ಬಂಡವಾಳ ಮತ್ತು ಅಭಿವೃದ್ಧಿಯ ಮಾತು ಕೇಳಿಬರುತ್ತಿದ್ದರೆ, ಮತ್ತೊಂದು ಕಡೆ ತಮ್ಮ ಭೂಮಿ, ಆರೋಗ್ಯ ಮತ್ತು ಮುಂದಿನ ಮಕ್ಕಳ ಬದುಕನ್ನು ಉಳಿಸಿಕೊಳ್ಳಲು ಜನಸಾಮಾನ್ಯರು ನಿರಂತರವಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಸರ್ಕಾರದ ಕಟ್ಟುನಿಟ್ಟಿನ ಮಧ್ಯಸ್ಥಿಕೆ ಇಲ್ಲದಿದ್ದರೆ ಈ ಭಾಗದ ಜನರ ಪರಿಸರ ಮತ್ತು ಆರೋಗ್ಯ ಪರಿಸ್ಥಿತಿ ಮತ್ತಷ್ಟು ಹದಗೆಡುವುದರಲ್ಲಿ ಯಾವುದೇ ಸಂಶಯವಿಲ್ಲ.
ಕೊಪ್ಪಳ ತಾಲೂಕಿನ ಗಿಣಿಗೇರಾ, ಬಸಾಪೂರ, ಹಿರೇಬಾಗನಾಳ, ಹಲವರ್ತಿ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರ ಇಂದಿನ ಸ್ಥಿತಿಗತಿ ಅತ್ಯಂತ ಆತಂಕಕಾರಿ ಮತ್ತು ದಯನೀಯವಾಗಿದೆ. ಬಲ್ಡೋಟಾ ಸ್ಟೀಲ್ ಮತ್ತು ಪವರ್ ಲಿಮಿಟೆಡ್ (BSPL) ಕಂಪೆನಿಯು ಕೈಗೆತ್ತಿಕೊಂಡಿರುವ ಸುಮಾರು ₹54,000 ಕೋಟಿ ಹೂಡಿಕೆಯ ಬೃಹತ್ ಸಮಗ್ರ ಉಕ್ಕಿನ ಕಾರ್ಖಾನೆಯ ವಿಸ್ತರಣೆಯು ಜಿಲ್ಲೆಯ ಕೈಗಾರಿಕಾ ಪ್ರಗತಿಯ ಹೆದ್ದಾರಿ ಎಂದು ಬಿಂಬಿತವಾಗುತ್ತಿದ್ದರೂ, ಸ್ಥಳೀಯ ನಾಗರಿಕರ ಪಾಲಿಗೆ ಇದು ಮಾರಕವಾಗಿ ಪರಿಣಮಿಸಿದೆ.
24 ದೊಡ್ಡ ಕೆಂಪು-ವರ್ಗದ ಕೈಗಾರಿಕೆಗಳು ಐದು ಕಿಲೋಮೀಟರ್ ವ್ಯಾಪ್ತಿಯೊಳಗೆ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಹೆಚ್ಚಿನ ಹೊಗೆ ಹೊರಸೂಸುವಿಕೆ ಮತ್ತು ಮಾಲಿನ್ಯಕ್ಕೆ 13 ಬೀಡು ಕಬ್ಬಿಣದ ಘಟಕಗಳು ಕಾರಣವಾಗಿವೆ.
ಬೀಡು ಕಬ್ಬಿಣದ ಸ್ಥಾವರವು ಉಕ್ಕಿನ ತಯಾರಿಕೆಯಲ್ಲಿ ಬಳಸುವ ನೇರ ಕಬ್ಬಿಣವನ್ನು ಉತ್ಪಾದಿಸುತ್ತದೆ. ಮುಖ್ಯವಾಗಿ ಕಲ್ಲಿದ್ದಲು ಆಧಾರಿತ ರೋಟರಿ ಗೂಡುಗಳ ಮೂಲಕ, ಈ ಸ್ಥಾವರಗಳ ಕಣಗಳು, CO, CO₂, SO₂ ಮತ್ತು NOx ನಂತಹ ಹೊರಸೂಸುವಿಕೆಯಿಂದ ಮಾಲಿನ್ಯವನ್ನು ಉಂಟುಮಾಡುತ್ತಿದೆ. ಜತೆಗೆ ಸರಿಯಾಗಿ ನಿರ್ವಹದಿರುವ ಕಾರಣ ಹೊರಬರುವ ಬೂದಿ ಮತ್ತು ಮಸಿ ಗಾಳಿಯೊಟ್ಟಿಗೆ ಸೇರಿಕೊಂಡು ಭೂಮಿಯನ್ನು ಕಲುಷಿತಗೊಳಿಸುತ್ತಿವೆ.
ಕೊಪ್ಪಳ ಈಗಾಗಲೇ ಅತಿಹೆಚ್ಚು ಕೈಗಾರಿಕೆಯಿಂದುಂಟಾದ ಮಾಲಿನ್ಯದಿಂದ ‘ಆರೆಂಜ್ ಜೋನ್’ (ಕಿತ್ತಳೆ ವಲಯ) ವ್ಯಾಪ್ತಿಗೆ ಸೇರಿ ಉಸಿರುಗಟ್ಟುವ ವಾತಾವರಣ ಎದುರಿಸುತ್ತಿದ್ದು, ಈ ಬೃಹತ್ ಉಕ್ಕಿನ ಸ್ಥಾವರವು ಸ್ಥಳೀಯರಿಗೆ ಮತ್ತಷ್ಟು ಮಾರಕವಾಗಿ ಪರಿಣಮಿಸಿದೆ. ಕಾರ್ಖಾನೆಗಳು ಸದ್ಯ ಹೊರಸೂಸುತ್ತಿರುವ ವಿಷಕಾರಿ ಹೊಗೆ, ಹಾರುಬೂದಿ ಮತ್ತು ದಟ್ಟವಾದ ರಾಸಾಯನಿಕ ಧೂಳಿನ ಕಣಗಳು ಇಡೀ ವಾತಾವರಣವನ್ನು ಆವರಿಸಿಕೊಂಡಿದ್ದು, ಸ್ಥಳೀಯರು ನಿತ್ಯ ಮುಖಕ್ಕೆ ಮಾಸ್ಕ್ ಧರಿಸದಿದ್ದರೆ ಬದುಕಲಾರದ ಸ್ಥಿತಿ ನಿರ್ಮಾಣವಾಗಿದೆ.
ದಿನವೊಂದಕ್ಕೆ ಪ್ರತಿಯೊಬ್ಬ ನಾಗರಿಕನೂ ಪರೋಕ್ಷವಾಗಿ ಹತ್ತಾರು ಸಿಗರೇಟ್‌ಗಳನ್ನು ಸೇದಿದಷ್ಟೇ ಹಾನಿಕಾರಕ ಗಾಳಿಯನ್ನು ಇಲ್ಲಿನ ಜನ ಉಸಿರಾಡುತ್ತಿದ್ದು, ಹಸುಗೂಸುಗಳು, ಶಾಲಾ ಮಕ್ಕಳು ಮತ್ತು ವೃದ್ಧರಲ್ಲಿ ಅಸ್ತಮಾ, ತೀವ್ರ ಸ್ವರೂಪದ ಕೆಮ್ಮು, ಕ್ಷಯರೋಗ ಹಾಗೂ ವಿಚಿತ್ರ ಚರ್ಮ ರೋಗಗಳು ಸಾಂಕ್ರಾಮಿಕದಂತೆ ಹರಡುತ್ತಿವೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಉಸಿರಾಟದ ಸಮಸ್ಯೆಯಿಂದ ದಾಖಲಾಗುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ಇಲ್ಲಿನ ಜನರ ದೈಹಿಕ ಆರೋಗ್ಯ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಮಾಲಿನ್ಯದ ಈ ಕರಿನೆರಳು ಕೇವಲ ಜನರ ಆರೋಗ್ಯದ ಮೇಲಷ್ಟೇ ಅಲ್ಲದೆ, ಈ ಭಾಗದ ಪ್ರಮುಖ ಜೀವನಾಡಿಯಾಗಿರುವ ಕೃಷಿ ವಲಯದ ಮೇಲೂ ಅತ್ಯಂತ ತೀವ್ರವಾದ ಆಘಾತವನ್ನು ಉಂಟುಮಾಡಿದೆ. ಹಿರೇಬಾಗನಾಳ ಮತ್ತು ಬಸಾಪೂರ ಸುತ್ತಮುತ್ತಲಿನ ಫಲವತ್ತಾದ ಕೃಷಿ ಭೂಮಿಯ ಮೇಲೆ ಕಾರ್ಖಾನೆಯಿಂದ ಹರಡುವ ರಾಸಾಯನಿಕ ಮಿಶ್ರಿತ ಕಪ್ಪು ಧೂಳು ದಪ್ಪನೆಯ ಪದರದಂತೆ ಕುಳಿತುಕೊಳ್ಳುತ್ತಿದ್ದು, ಇದರಿಂದಾಗಿ ಬೆಳೆಗಳ ದ್ಯುತಿಸಂಶ್ಲೇಷಣಾ ಪ್ರಕ್ರಿಯೆ ಕುಂಠಿತಗೊಂಡು ಕಟಾವಿಗೆ ಬಂದ ಫಸಲು ಸಂಪೂರ್ಣವಾಗಿ ನಾಶವಾಗುತ್ತಿದೆ.
ರೈತರು ತಮ್ಮ ಬೆವರನ್ನು ನೀರಾಗಿ ಹರಿಸಿ ಬೆಳೆದ ಬೆಳೆಗಳು ಕಣ್ಣೆದುರೇ ಕರಕಲಾಗುತ್ತಿರುವುದನ್ನು ಕಂಡು, ಆ ಧೂಳು ತುಂಬಿದ ಬೆಳೆಗಳನ್ನೇ ಹಿಡಿದು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಇದರೊಂದಿಗೆ, ಈ ಬೃಹತ್ ಉಕ್ಕಿನ ಕಾರ್ಖಾನೆಯ ನಿರ್ವಹಣೆಗಾಗಿ ತುಂಗಭದ್ರಾ ಜಲಾಶಯದಿಂದ ಕೋಟ್ಯಂತರ ಲೀಟರ್ ನೀರನ್ನು ಬಳಸಿಕೊಳ್ಳಲು ಯೋಜನೆ ರೂಪಿಸಿರುವುದು ಇಡೀ ಜಿಲ್ಲೆಯ ಜನರಲ್ಲಿ ಭೀತಿ ಮೂಡಿಸಿದೆ.
ಇದು ಭವಿಷ್ಯದಲ್ಲಿ ತಾಲೂಕಿನ ಕುಡಿಯುವ ನೀರಿನ ಮೂಲಗಳಿಗೆ ಕಂಟಕ ತರುವುದಷ್ಟೇ ಅಲ್ಲದೆ, ಕೃಷಿ ಆಧಾರಿತ ನೀರಾವರಿ ವ್ಯವಸ್ಥೆಯನ್ನೇ ಬುಡಮೇಲು ಮಾಡಲಿದೆ. ಬಸಾಪೂರದ ಐತಿಹಾಸಿಕ ಸಾರ್ವಜನಿಕ ಕೆರೆ ಸೇರಿದಂತೆ ಸ್ಥಳೀಯ ಅಂತರ್ಜಲ ಮೂಲಗಳು ಈಗಾಗಲೇ ಕಾರ್ಖಾನೆಯ ತ್ಯಾಜ್ಯದಿಂದ ಕಲುಷಿತಗೊಂಡು ಮಲಿನವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಬದುಕಲಾರದೆ ಹಳ್ಳಿಗಳ ಅನೇಕ ಸಣ್ಣ ರೈತರು ಮತ್ತು ಕೂಲಿ ಕಾರ್ಮಿಕರು ತಮ್ಮ ಜಮೀನುಗಳನ್ನು ಕೈಬಿಟ್ಟು ವಲಸೆ ಹೋಗುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಈ ಪರಿಸರ ವಿನಾಶ ಮತ್ತು ಜನರ ಅಸಹಾಯಕತೆಯ ವಿರುದ್ಧ ಕೊಪ್ಪಳದಲ್ಲಿ ಸದ್ಯ ಹಿಂದೆಂದೂ ಕಾಣದಂತಹ ವ್ಯಾಪಕ ಜನಪ್ರತಿಭಟನೆ ಮತ್ತು ನಾಗರಿಕ ದ್ರೋಹದ ವಿರುದ್ಧದ ಆಕ್ರೋಶ ಭುಗಿಲೆದ್ದಿದೆ. ‘ಕೊಪ್ಪಳ ಜಿಲ್ಲಾ ಬಚಾವೋ ಮತ್ತು ಪರಿಸರ ಸಂರಕ್ಷಣಾ ಸಮಿತಿ’ಯ ನೇತೃತ್ವದಲ್ಲಿ 208 ದಿನಗಳಿಂದ ನಿರಂತರ ಧರಣಿ ಸತ್ಯಾಗ್ರಹಗಳು ನಡೆಯುತ್ತಿವೆ. ಈ ಜನಾಂದೋಲನಕ್ಕೆ ಕೊಪ್ಪಳದ ಪ್ರಸಿದ್ಧ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಹಾಗೂ ಸಾಣೆಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಂತಹ ಅತ್ಯಂತ ಪ್ರಭಾವಿ ಧಾರ್ಮಿಕ ಮುಖಂಡರು ಮುಂಚೂಣಿಗೆ ಬಂದು ಬೆಂಬಲ ಘೋಷಿಸಿರುವುದು ಹೋರಾಟಕ್ಕೆ ಮತ್ತಷ್ಟು ಬಲ ತಂದಿದೆ.
“ಇತ್ತೀಚೆಗೆ ನಡೆದ ಬೃಹತ್ ಕೊಪ್ಪಳ ಬಂದ್ ಮತ್ತು ಹತ್ತಾರು ಸಾವಿರ ಜನಸಾಮಾನ್ಯರು ಪಾಲ್ಗೊಂಡಿದ್ದ ರ‍್ಯಾಲಿಗಳು ಸರ್ಕಾರದ ನಿದ್ದೆಗೆಡಿಸಿದ್ದವು. ತೀವ್ರ ಜನಾಕ್ರೋಶಕ್ಕೆ ಮಣಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ʼಕಾರ್ಖಾನೆಯ ಸಿದ್ಧತಾ ಕಾಮಗಾರಿಗಳನ್ನು ತಕ್ಷಣವೇ ಸ್ಥಗಿತಗೊಳಿಸಬೇಕುʼ ಎಂದು ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿದ್ದರೂ ಕೂಡ, ಕಂಪನಿಯು ಆಡಳಿತದ ಕಣ್ಣು ತಪ್ಪಿಸಿ ಒಳಗೊಳಗೇ ಕಾಮಗಾರಿ ಮುಂದುವರಿಸಿದೆ” ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಬಲ್ಡೋಟಾ ಸಮೂಹವು ತಾವು ಅತ್ಯಾಧುನಿಕ ತಂತ್ರಜ್ಞಾನ ಬಳಸುತ್ತಿರುವುದಾಗಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಪಾಲಿಸುತ್ತಿರುವುದಾಗಿ ವಾದಿಸುತ್ತಿದ್ದರೂ, ಕಣ್ಣೆದುರಿನ ವಾಸ್ತವ ಪರಿಸ್ಥಿತಿ ಮಾತ್ರ ಅದಕ್ಕೆ ತದ್ವಿರುದ್ಧವಾಗಿದೆ. ಒಂದು ಕಡೆ ಸಿಎಸ್‌ಆರ್ ನಿಧಿಯ ಹೆಸರಿನಲ್ಲಿ ಹಳ್ಳಿಗಳ ದತ್ತು ಪ್ರಕ್ರಿಯೆಯ ನಾಟಕ ನಡೆಯುತ್ತಿದ್ದರೆ, ಮತ್ತೊಂದೆಡೆ ತಮ್ಮ ಅಸ್ತಿತ್ವ, ಶುದ್ಧ ಗಾಳಿ, ನೀರು ಮತ್ತು ಭೂಮಿಗಾಗಿ ಈ ಭಾಗದ ಜನರು ನಿತ್ಯವೂ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ.
ಮಂಜುಳಾ ನೇಕರ್ ಎಂಬುವರು ಕೊಪ್ಪಳದ ಹಿರೇಬಗನಾಳ ಗ್ರಾಮಕ್ಕೆ ಮದುವೆಯಾಗಿ ತೆರಳಿದ ಸುಮಾರು ಒಂದು ವರ್ಷದ ಬಳಿಕ ಅವರ ಆರೋಗ್ಯ ಸಮಸ್ಯೆಗಳು ಪ್ರಾರಂಭವಾದವು. ಕಳೆದ ನಾಲ್ಕು ವರ್ಷಗಳಿಂದ, ಅವರು ನಿರಂತರ ಕೆಮ್ಮಿನಿಂದ ಬಳಲುತ್ತಿದ್ದರು. ಕೆಲವೊಮ್ಮೆ ಕಫದಲ್ಲಿ ರಕ್ತ ಹೊಬರುತ್ತಿತ್ತು. ಶೀತ, ಉಸಿರಾಟದ ತೊಂದರೆಯಂತಹ ರೋಗಗಳಿಗೆ ತುತ್ತಾಗುತ್ತಿದ್ದರು. ಈಗ ಗಂಟಲಿನ ಸೋಂಕಿನಿಂದಾಗಿ ಕಳೆದ ಒಂದು ವಾರದಿಂದ ಮಾತನಾಡಲು ಸಾಧ್ಯವಾಗುತ್ತಿಲ್ಲ. ಬಲ್ಡೋಟಾ ಕೈಗಾರಿಕೆ ಧೂಳು ಮತ್ತು ಹೊಗೆಯನ್ನು ನಿರಂತರವಾಗಿ ಉಸಿರಾಡುತ್ತಿರುವುದೇ ಅವರಿಗೆ ಹೀಗೆ ಆಗಿರುವುದಕ್ಕೆ ಕಾರಣವೆಂದು ವೈದ್ಯರು ದೃಢಪಡಿಸಿರುವುದಾಗಿ ತಿಳಿದುಬಂದಿದೆ.
ಇದನ್ನೂ ಓದಿದ್ದೀರಾ? ಕೊಪ್ಪಳ | ಅಭಿವೃದ್ಧಿ ಹೆಸರಿನಲ್ಲಿ ಜನಜೀವನ ಬಲಿ ತೆಗೆದುಕೊಳ್ಳುತ್ತಿರುವ ಬಲ್ಡೋಟಾ ಕಂಪೆನಿ
ಒಟ್ಟಾರೆಯಾಗಿ ಹೇಳುವುದಾದರೆ, ಕೊಪ್ಪಳ ತಾಲೂಕಿನ ಸುತ್ತಮುತ್ತಲಿನ ಜನರ ಸ್ಥಿತಿ ಸದ್ಯ ಆತಂಕದಲ್ಲಿದೆ. ಒಂದು ಕಡೆ ಬೃಹತ್ ಬಂಡವಾಳ ಮತ್ತು ಅಭಿವೃದ್ಧಿಯ ಮಾತು ಕೇಳಿಬರುತ್ತಿದ್ದರೆ, ಮತ್ತೊಂದು ಕಡೆ ತಮ್ಮ ಭೂಮಿ, ಆರೋಗ್ಯ ಮತ್ತು ಮುಂದಿನ ಮಕ್ಕಳ ಬದುಕನ್ನು ಉಳಿಸಿಕೊಳ್ಳಲು ಜನಸಾಮಾನ್ಯರು ನಿರಂತರವಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಸರ್ಕಾರದ ಕಟ್ಟುನಿಟ್ಟಿನ ಮಧ್ಯಸ್ಥಿಕೆ ಇಲ್ಲದಿದ್ದರೆ ಈ ಭಾಗದ ಜನರ ಪರಿಸರ ಮತ್ತು ಆರೋಗ್ಯ ಪರಿಸ್ಥಿತಿ ಮತ್ತಷ್ಟು ಹದಗೆಡುವುದರಲ್ಲಿ ಯಾವುದೇ ಸಂಶಯವಿಲ್ಲ.




