ಕೊಪ್ಪಳ ನಗರಸಭೆ ಮುಂದೆ 181 ದಿನಗಳಿಂದ ನಡೆಯಿತ್ತಿರುವ ʼಕಾರ್ಖಾನೆ ಮಾಲಿನ್ಯ ನಿಯಂತ್ರಿಸಿ, ಪರಿಸರ ಉಳಿಸಿʼ ಹೋರಾಟ ವೇದಿಕೆಯಲ್ಲಿ ಮಾನವ ವಿನಾಶಕಾರಿ, ಜೀವ ಸಂಕುಲ ವಿರೋಧಿ ಪರಮಾಣು ಸ್ಥಾವರ ನಿರ್ಮಾಣ ಯೋಜನೆ ಕೈಬಿಡಲು ಆಗ್ರಹಿಸಿ ಹೋರಾಟ ನಡೆಸಲು ವೇದಿಕೆ ತೀರ್ಮಾನ ಕೈಗೊಂಡಿದೆ.
ತಾಲೂಕಿನ ಬಂಡೆಕುಮಟ ಹಳೆಕುಮಟ, ಕುಮಾರ ರಾಮನಕುಮಟ ಪ್ರದೇಶದ ಏಳು ಗುಡ್ಡಗಳ ಸಾಲು ಜೀವ ವೈವಿಧ್ಯಕ್ಕೆ ಹೆಸರುವಾಸಿಯಾದ ತಾಣವಾಗಿದೆ. ಕೋಟೆ ಕೊತ್ತಲುಗಳಿಂದ ಕೂಡಿದ, ಪ್ರವಾಸಿಗರ ನೆಚ್ಚಿನ ಪಾರಂಪರಿಕ ತಾಣದಲ್ಲಿ ಪರಮಾಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಸರ್ಕಾರ ಯೋಜನೆ ರೂಪಿಸುತ್ತಿದೆ. ಮುಂದುವೆರೆದು ಕಾರ್ಖಾನೆ ಸ್ಥಾಪನೆಗೆ ಜಾಗ ಹುಡುಕಾಟಕ್ಕೆ ತೊಡಗಿರುವುದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.
ʼಕೊಪ್ಪಳ ಜಿಲ್ಲಾ ಬಚಾವೋʼ ಆಂದೋಲನ ಸಮಿತಿಯಿಂದ ಈ ಹಿಂದೆ ಅರಸನಕೇರಿ, ಚಿಕ್ಕಬೆಣಕಲ್ ಗ್ರಾಮದಲ್ಲಿ ಭೂಮಿ ಗುರುತಿಸಲು ಮುಂದಾದಾಗ ಆ ಗ್ರಾಮಗಳ ಜನರನ್ನು ಒಗ್ಗೂಡಿಸಿ ಹೋರಾಟ ಮಾಡಲು ನಿರ್ಣಯ ಮಾಡಲಾಗಿತ್ತು. ಅದರಂತೆ ಅರಸನಕೇರಿ, ಹೇಮಗುಡ್ಡದ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ರೈತರು, ಸಂಘಟನೆಗಳು, ಗ್ರಾಮಸ್ಥರು ಬೃಹತ್ ಪ್ರತಿಭಟನೆ ಮಾಡಿದ ಪರಿಣಾಮ ಅರಸಿನಕೇರಿ, ಚಿಕ್ಕಬೆಣಕಲ್ ಬಳಿ ಅಣುಸ್ಥಾವರ ನಿರ್ಮಾಣದ ಪ್ರಸ್ತಾವ ಕೈಬಿಡಲಾಗಿತ್ತು. ಪ್ರಸ್ತುತ ಚಿಕ್ಕಬೆಣಕಲ್ ಗ್ರಾಮಕ್ಕೆ 2 ಕಿ.ಮೀ ದೂರದಲ್ಲಿರುವ ಬಂಡೆಕುಮಟ ಗ್ರಾಮದಲ್ಲಿ ಸ್ಥಳ ಹುಡುಕಾಟ ನಡೆಸುತ್ತಿರುವುದನ್ನು ಜಂಟಿ ಕ್ರಿಯಾ ವೇದಿಕೆ ಖಂಡಿಸಿದೆ.
“ಸರ್ಕಾರ ಅಣುಸ್ಥಾವರ ನಿರ್ಮಿಸಲು ಯೋಜಿಸಿರುವ ಪ್ರದೇಶದ ಮಗ್ಗುಲಲ್ಲೇ ಇರುವ ತುಂಗಭದ್ರಾ ಜಲಾಶಯ ರೈತರ ಜೀವನಾಡಿಯಾಗಿದ್ದು, ಒಂದೊಮ್ಮೆ ಸರ್ಕಾರ ಈ ಯೋಜನೆ ರೂಪಿಸಿದರೆ ಅಣೆಕಟ್ಟಿಗೆ ಅಪಾಯ ಒದಗುವ ಸಂಭವವಿದೆ. ರೈತರ, ಜನಜಾನುವಾರುಗಳ ಉದರಕ್ಕೆ ವಿಷ ಬೆರೆಸುವ ಯೋಜನೆ ಇದಾಗಿದೆ” ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಈ ಪ್ರದೇಶ ಐತಿಹಾಸಿಕ ಪ್ರಾತಿನಿಧ್ಯ ಹೊಂದಿದ್ದು, ಮೋರೇರ ಶಿಲಾ ಸಮಾಧಿಗಳ ಬೆಟ್ಟ ಇಲ್ಲಿದೆ, ಕುಮ್ಮಟದುರ್ಗಾ, ಕುಮಾರರಾಮನ ಬೆಟ್ಟ, ಅಂಜನಾದ್ರಿ ಬೆಟ್ಟಗಳಿಗೆ ಹಾನಿಯಾಗುವ ಸಾಧ್ಯತೆಗಳಿದ್ದು, ಪಕ್ಕದಲ್ಲಿಯೇ ಇರುವ ಮೀಸಲು ಅರಣ್ಯ ಪ್ರದೇಶ, ತೋಳ ಸಂರಕ್ಷಣಾ ವಲಯದಲ್ಲಿ ಚಿರತೆ, ಕರಡಿ, ನವಿಲು, ಕಾಡುಹಂದಿ, ಜಿಂಕೆ, ಮೊಲ, ಸೇರಿ ವಿವಿಧ ಪ್ರಕಾರದ ಜೀವ ಸಂಕುಲವಿದೆ. ಇಂತಹ ಜೀವವೈವಿಧ್ಯ ತಾಣದಲ್ಲಿ ಪರಮಾಣು ಸ್ಥಾವರ ನಿರ್ಮಿಸಿದರೆ ಪ್ರಾಣಿ-ಪಕ್ಷಿ ಸಂಕುಲಗಳು ನಿರ್ನಾಮವಾಗುವುದು ಖಚಿತ” ಎಂದರು.
“ಅಣುಸ್ಥಾವರದಿಂದ ಹೊರಬರುವ ವಿಕಿರಣಗಳು ಗಾಳಿಯಲ್ಲಿ ಸೇರುತ್ತದೆ. 40 ಕಿಮೀ ವ್ಯಾಪ್ತಿಯಲ್ಲಿ ವಾಸಿಸುವ ಜನರ ಆರೋಗ್ಯದ ಮೇಲೆ ಸ್ಥಾವರಗಳು ಹೊರಚೆಲ್ಲುವ ಅಪಾಯಕಾರಿ ವಿಕಿರಣಗಳು ದುಷ್ಪರಿಣಾಮ ಬೀರುತ್ತವೆ. ಜೀವಸಂಕುಲದ ವಿನಾಶದ ಜತೆಗೆ ಪರಿಸರದ ಅಸಮತೋಲನಕ್ಕೆ ಈ ಯೋಜನೆ ಕಾರಣವಾಗುತ್ತದೆ.
“ಕೊಪ್ಪಳ ನಗರಕ್ಕೆ ಹೊಂದಿಕೊಂಡ ಬಲ್ಡೋಟ ಕಾರ್ಖಾನೆಯು ಜನಜೀವನದ ಮೇಲೆ ಇಂಥದ್ದೇ ದುಷ್ಪರಿಣಾಮ ಬೀರಲಿದೆ. ಸರ್ಕಾರ ಭಾಗ್ಯನಗರದ ಒಂದೂವರೆ ಲಕ್ಷ ಜನರ ಜೀವ ಕಸಿದುಕೊಳ್ಳಲು ಹೊರಟಿದೆ. ಮುಂದಿನ ದಿನಗಳಲ್ಲಿ ಬಲ್ಡೋಟ ಯೋಜನೆಯನ್ನು ವಿರೋಧಿಸಿ ತೀವ್ರ ಹೋರಾಟಕ್ಕೆ ಸಿದ್ಧತೆ ನಡೆಸಲು ನಿರ್ಣಯ ತೆಗೆದುಕೊಳ್ಳಲಾಗಿದೆ. ಕಾರ್ಖಾನೆ ನಿರ್ಮಾಣದಿಂದ ಸಮಸ್ಯೆಗೊಳಗಾದ 22 ಹಳ್ಳಿಗಳಿವೆ. ಅದರಲ್ಲಿ ಹಿರೇಬಗನಾಳ ಮತ್ತು ಅಲ್ಲಾನಗರ ಸುತ್ತಲಿನ ಕಾರ್ಖಾನೆಗಳನ್ನು ಸ್ಥಳಾಂತರ ಮಾಡಬೇಕು. ಬಲ್ಡೋಟ ಅತಿಕ್ರಮಿಸಿರುವ ಬಸಾಪುರ ಕೆರೆಯನ್ನು ಜಾನುವಾರುಳಿಗೆ ನೀರು ಒದಗಿಸುವ ಸಲುವಾಗಿ ಮುಕ್ತವಾಗಿಸಬೇಕು. ಮುಖ್ಯವಾಗಿ ತುಂಗಭದ್ರಾ ನೀರು ವಿಷಗೊಳಿಸುವ ಕಾರ್ಖಾನೆಗಳಿಗೆ ಬೀಗ ಜಡಿಯಲು ಸರ್ಕಾರ ಮುಂದಾಗಬೇಕು. ಎಐಐಎಂಎಸ್, ಐಐಎಸ್ಸಿ ಸಂಸ್ಥೆಗಳ ಮೂಲಕ ಆರೋಗ್ಯ ಮತ್ತು ಪರಿಸರ ಹಾನಿ ಸಮೀಕ್ಷೆ ಮಾಡಬೇಕು” ಎಂಬುದು ಹೋರಾಟಗಾರರ ಬೇಡಿಕೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಗದಗ | ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಿ: ಕೃಷ್ಣಗೌಡ ಪಾಟೀಲ್
ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ರವಿ ಕಾಂತನವರ, ಪ್ರಕಾಶಕ ಡಿಎಂ ಬಡಿಗೇರ, ಶಿವಾನಂದಯ್ಯ ಬೀಳಗಿಮಠ, ಶರಣು ಶೆಟ್ಟರ್, ಶಂಭುಲಿಂಗಪ್ಪ ಹರಗೇರಿ, ಅಮರೇಶ ಕರಡಿ, ಶೇಖಪ್ಪ ಮೈನಹಳ್ಳಿ, ಮಹಾದೇವಪ್ಪ ಮಾವಿನಮಡು, ಗುಡದಪ್ಪ ಕರಿಗಾರ, ಯಮನೂರಪ್ಪ ಹಾಲಳ್ಳಿ, ನಾಗರಾಜ ಕುಷ್ಟಗಿ, ಮಹಿಳಾ ನಾಯಕಿ ಕಾವ್ಯ ಪ್ರಸನ್ನ ಗಡಾದ, ವಿಜಯಮಹಾಂತೇಶ ಹಟ್ಟಿ, ಶಿವಪ್ಪ ಜಲ್ಲಿ, ಕನಕಪ್ಪ ಪೂಜಾರ, ಬಸವರಾಜ ಹೂಗಾರ, ಪಾಂಡುರಂಗಪ್ಪ ಗೌಡ್ರು, ಗವಿಸಿದ್ದಪ್ಪ ಗೌಡ್ರು, ಬಸವರಾಜಪ್ಪ ಶೆಟ್ಟರ್, ರಾಮಲಿಂಗಯ್ಯ ಶಾಸ್ತ್ರಿ, ಭೀಮಪ್ಪ ಯಲಬುರ್ಗಾ, ಗಂಗಮ್ಮ ಕುರುಗೋಡ ಸೇರಿದಂತೆ ಇತರರು ಇದ್ದರು.




