ಬಿಜೆಪಿಗೆ ಮತ ಹಾಕದ ಮತದಾರರನ್ನು ಟಾರ್ಗೆಟ್ ಮಾಡಿ ಅವರನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಗುತ್ತಿದೆ ಎಂದು ಹಿರಿಯ ಹೋರಾಟಗಾರ ಅಲ್ಲಮ ಪ್ರಭು ಬೆಟ್ಟದೂರು ಆರೋಪಿಸಿದರು.
ಕೊಪ್ಪಳದಲ್ಲಿ ಎಸ್ಐಆರ್ ವಿರೋಧಿ ಬೃಹತ್ ಪ್ರತಿಭಟನಾ ವೇದಿಕೆ ಅಧ್ಯಕ್ಷತೆ ವಹಿಸಿ ಮಾತನಾಡಿ, ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳನ್ನು ಕೇಂದ್ರ ಸರ್ಕಾರ, ಚುನಾವಣಾ ಆಯೋಗದ ಮೂಲಕ ಮತದಾನದಿಂದ ಹೊರಗಿಡುತ್ತಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ಗಡಿಯಾರ ಕಂಬ ಸರ್ಕಲ್ ನಿಂದ ಅಶೋಕ್ ಸರ್ಕಲ್ ವರೆಗೂ ಬೃಹತ್ ಮೆರವಣಿಗೆ ನಡೆಯಿತು. ಅಶೋಕ್ ಸರ್ಕಲ್ ನ ವೇದಿಕೆ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಓದುವ ಮೂಲಕ ಸಮಾನತೆಯ ಸಂದೇಶ ಸಾರಲಾಯಿತು.
ರೈತ ಸಂಘದ ಜಿಲ್ಲಾಧ್ಯಕ್ಷ ವೀರ ಸಂಗಯ್ಯ ಅವರು ಪ್ರಾಸ್ತಾವಿಕ ಮಾತನಾಡಿ, “ಎಸ್ಐಆರ್ ಪ್ರಕ್ರಿಯೆ ನಡೆಯುವಾಗ ಎಲ್ಲರೂ ಹಾಜರಿದ್ದು, ಸರಿಯಾದ ದಾಖಲೆಗಳನ್ನು ಒದಗಿಸಬೇಕು. ಎಸ್ಐಆರ್ ಚುನಾವಣಾ ಆಯೋಗದ ದುರುದ್ದೇಶಪೂರಿತ ಪ್ರಕ್ರಿಯೆ” ಎಂದು ಟೀಕಿಸಿದರು.
ಲಿಂಗತ್ವ ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷೆ ರಮ್ಯಾ ಮಾತನಾಡಿ, ʼಜಾತಿ, ಧರ್ಮದ ಹೆಸರಿನಲ್ಲಿ ಯಾಕೆ ವಿಭಜನೆ ಮಾಡ್ತಿದ್ದೀರಿʼ? ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು. ಇದೇ ವೇಳೆ ಮುಸ್ಲಿಂ ಮುಖಂಡರೊಬ್ಬರು ಮಾತನಾಡಿ, ʼಮತದಾರರ ಪಟ್ಟಿಯಿಂದ ಹೊರಗುಳಿದವರನ್ನು ದೇಶದಿಂದ ಹೊರಗಟ್ಟುವ ಕೆಲಸ ನಡೆಯುತ್ತಿದೆʼ ಎಂದು ಆರೋಪಿಸಿದರು.
“SIR ಎನ್ನುವುದು ಪ್ರತಿ ರಾಜ್ಯದಲ್ಲಿ ಕ್ಷುಲ್ಲಕ ಕಾರಣ ನೀಡಿ ಲಕ್ಷಾಂತರ ಜನರನ್ನು ಮತದಾನದ ಪಟ್ಟಿಯಿಂದ ಹೊರಗಿಡುವ ಕುತಂತ್ರವಾಗಿದೆ. ಎಸ್ಐಆರ್ ಪ್ರಕ್ರಿಯೆ ಮೂಲಕ ಅಲ್ಪಸಂಖ್ಯಾತರು ಹಾಗೂ ಜಾತ್ಯತೀತ ಮತದಾರರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಹೀಗಾಗಿ, ಜನ ವಿರೋಧಿ ಎಸ್ಐಆರ್ ಪ್ರಕ್ರಿಯೆಯನ್ನು ನಿಲ್ಲಿಸಬೇಕು. ಜನಸ್ನೇಹಿ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯನ್ನು ಜಾರಿಗೆ ತರಬೇಕು. ಕರಡು ಪಟ್ಟಿ ತಯಾರಾದ ನಂತರ ಕಡ್ಡಾಯವಾಗಿ ಗ್ರಾಮಸಭೆ ಮತ್ತು ವಾರ್ಡ್ ಸಭೆಗಳಲ್ಲಿ ಪಟ್ಟಿ ಸಾರ್ವಜನಿಕ ಪರಿಶೀಲನೆಗೆ ಒಳಪಡಬೇಕು. ಮುಕ್ತವಾಗಿ ತಿದ್ದುಪಡಿಗಳನ್ನು ಸಂಗ್ರಹಿಸಿದ ನಂತರವೇ ಅಂತಿಮಗೊಳಿಸಬೇಕು. ಜನರು ದೂರದ ಊರುಗಳಿಗೆ ದುಡಿಯಲು ಹೋಗಿರುವುದರಿಂದ ಕೂಡಲೇ ದಾಖಲೆಗಳನ್ನು ಪಡೆಯುವುದು ಸಾಧ್ಯವಿಲ್ಲ. ಹೀಗಾಗಿ, ಅಪೀಲ್ ಸಲ್ಲಿಕೆಗೆ ಮತ್ತು ಪರಿಶೀಲನೆಗೆ ಕನಿಷ್ಠ ಆರು ತಿಂಗಳು ಸಮಯಾವಕಾಶ ಇರಬೇಕು” ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿಗಳ ಮೂಲಕ ಡಿ.ಸಿಗೆ ಸಲ್ಲಿಸಿದರು.

ಈ ಹೋರಾಟದಲ್ಲಿ ಪ್ರಗತಿಪರ ಚಿಂತಕರು, ಹಿರಿಯ ಹೋರಾಟಗಾರರು, ಮುಸ್ಲಿಂ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪ್ರಾಧಿಕಾರಕ್ಕೆ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ಗಂಗಾವತಿ, ಕನಕಗಿರಿ, ಹೊಸಪೇಟೆ ಸೇರಿದಂತೆ ಸುತ್ತಮುತ್ತಲಿನ ಊರುಗಳ ಸ್ಥಳೀಯರು ಇದ್ದರು.




