ಕರ್ನಾಟಕದಲ್ಲಿ ಆಡಳಿತ ನಡೆಸಿದ ಎಲ್ಲ ಪಕ್ಷಗಳು ಜನರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ಸಮಾನತೆ, ಸಾಮಾಜಿಕ ನ್ಯಾಯ, ಜಾತ್ಯತೀತತೆ ಹಾಗೂ ವೈಜ್ಞಾನಿಕ ಮನೋಭಾವದ ಸಂವಿಧಾನದ ಮೂಲ ತತ್ವಗಳನ್ನು ಆಧರಿಸಿ ಹೊಸ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಲಾಗುವುದು ಎಂದು ನಟ-ಹೋರಾಟಗಾರ ಚೇತನ್ ಅಹಿಂಸಾ ಹೇಳಿದರು.
ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ಪ್ರವಾಸಿ ಮಂದಿರದಲ್ಲಿ ಗುರುವಾರ ಸಂಜೆ ನಡೆದ ‘ಪೊಲಿಟಿಕಲ್ ಪ್ರಿವ್ಯೂ ಮೀಟ್’ನಲ್ಲಿ ಮಾತನಾಡಿದ ಅವರು, ಜನವರಿಯಲ್ಲಿ ಹೊಸ ಪ್ರಾದೇಶಿಕ ಪಕ್ಷವನ್ನು ಅಧಿಕೃತವಾಗಿ ಆರಂಭಿಸಲಾಗುವುದು ಎಂದು ಮಂಗಳೂರಿನಲ್ಲಿ ಘೋಷಿಸಿದ್ದೆ. ಅದೇ ಮಾತನ್ನು ಇಲ್ಲಿಯೂ ಪುನರುಚ್ಚರಿಸುತ್ತೇನೆ ಎಂದರು.
ಹೊಸ ಪಕ್ಷದ ನೋಂದಣಿ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಪಕ್ಷವನ್ನು ಯಾವುದೇ ಸ್ಟಾರ್ ಪವರ್ ಅಥವಾ ಫ್ಯಾನ್ ಕ್ಲಬ್ ಸುತ್ತ ಕಟ್ಟಲಾಗುವುದಿಲ್ಲ. ಬದಲಾಗಿ ರೈತರು, ಹೋರಾಟಗಾರರು, ಬುದ್ಧಿಜೀವಿಗಳು, ಪ್ರಜ್ಞಾವಂತರು ಹಾಗೂ ವರ್ಷಗಳಿಂದ ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಯುವಕರನ್ನು ಒಗ್ಗೂಡಿಸಿ ಸಮ ಸಮಾಜದ ರಾಜಕೀಯ ಚಳವಳಿಯನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ಬಾಬಾಸಾಹೇಬ್ ಅಂಬೇಡ್ಕರ್, ಪೆರಿಯಾರ್ ಹಾಗೂ ಕಾನ್ಷಿರಾಮ್ ಅವರ ಸಿದ್ಧಾಂತಗಳ ಮಾರ್ಗದರ್ಶನದಲ್ಲಿ ಪ್ರಾದೇಶಿಕ ರಾಜಕೀಯ ಚಳವಳಿಯನ್ನು ಬಲಪಡಿಸುವ ಉದ್ದೇಶ ಹೊಂದಲಾಗಿದೆ. ಜನರ ಸಮಸ್ಯೆಗಳೇ ಪಕ್ಷದ ಅಜೆಂಡಾವಾಗಲಿವೆ ಎಂದು ಚೇತನ್ ಅಹಿಂಸಾ ಹೇಳಿದರು.
ಶ್ರೀರಂಗಪಟ್ಟಣದಲ್ಲಿ ನಡೆದ ಕಾರ್ಯಕ್ರಮ ಚುನಾವಣಾ ಭಾಷಣವಲ್ಲ, ಬದಲಾಗಿ ಜನರು ತಮ್ಮ ಸಮಸ್ಯೆಗಳನ್ನು ನೇರವಾಗಿ ಹೇಳಿಕೊಳ್ಳುವ ಸಂವಾದ ಕಾರ್ಯಕ್ರಮವಾಗಿದೆ ಎಂದು ಅವರು ಹೇಳಿದರು.
ಸಂವಾದದಲ್ಲಿ ಸ್ಥಳೀಯರು ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಯಲ್ಲಿ ಆಗುತ್ತಿರುವ ವಿಳಂಬ, ಕೆರೆಗಳ ಒತ್ತುವರಿ, ಪ್ರವಾಸೋದ್ಯಮ ಅಭಿವೃದ್ಧಿಯ ನಡುವೆಯೂ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳ ಕೊರತೆ, ಪುರಾತತ್ವ ಇಲಾಖೆಯ ನಿರ್ಬಂಧಗಳಿಂದ ಮನೆ ನಿರ್ಮಾಣಕ್ಕೆ ಎದುರಾಗಿರುವ ಸಮಸ್ಯೆ, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ, ಕಾವೇರಿ ನೀರು ಹಂಚಿಕೆ ಹಾಗೂ ರೈತರ ಪ್ರತಿಭಟನೆ ಸೇರಿದಂತೆ ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸಿದರು.
ಈ ವೇಳೆ ಮಾತನಾಡಿದ ಚೇತನ್, “ನೀವು ನಿಮ್ಮ ಸಮಸ್ಯೆ ಹೇಳಿ, ನಾವು ನಿಮ್ಮ ಅಜೆಂಡಾ ಮಾಡುತ್ತೇವೆ” ಎಂಬುದು ಈ ಭೇಟಿಯ ಪ್ರಮುಖ ಉದ್ದೇಶವಾಗಿದೆ. 2028ರ ವಿಧಾನಸಭಾ ಚುನಾವಣೆಗೆ ಸಿದ್ಧತೆಯ ಭಾಗವಾಗಿ ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಪ್ರವಾಸ ನಡೆಸಿ, ಸ್ಥಳೀಯ ಸಮಸ್ಯೆಗಳನ್ನು ಅರಿತುಕೊಳ್ಳಲಾಗುತ್ತಿದೆ. ಜನರ ಧ್ವನಿಯನ್ನು ಆಧರಿಸಿ ಪಕ್ಷದ ನೀತಿ ಮತ್ತು ಅಜೆಂಡಾವನ್ನು ರೂಪಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?ಮಳೆಗಾಲದಲ್ಲೇ ಬರದ ಛಾಯೆ: ಮೈಸೂರು ಜಿಲ್ಲೆಯ ಕೃಷಿ ಬದುಕಿಗೆ ಕಾಡುತ್ತಿರುವ ಮಳೆ ಕೊರತೆ
ಸಭೆಯಲ್ಲಿ ಶ್ರೀರಂಗಪಟ್ಟಣ ಪ್ರಜ್ಞಾವಂತ ವೇದಿಕೆಯ ಸಂಚಾಲಕ ಸಿ.ಎಸ್. ವೆಂಕಟೇಶ್, ಸಮರ್ಪಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಜಯಶಂಕರ್, ಚಿಕ್ಕತಮ್ಮೇಗೌಡ, ಕಡತನಾಳು ಧರ್ಮೇಶ್, ಶ್ರೀನಿವಾಸ್, ಚಂದಗಾಲು ಶಿವಕುಮಾರ್ ಸೇರಿದಂತೆ ಹಲವು ಪ್ರಗತಿಪರ ಹೋರಾಟಗಾರರು ಹಾಗೂ ಸ್ಥಳೀಯರು ಇದ್ದರು.





