- ಫ್ಲೆಕ್ಸ್ ಅಳವಡಿಸಿದವರಿಗೆ ಕಾನೂನು ಕ್ರಮದ ಎಚ್ಚರಿಕೆ
- ಪಕ್ಷಗಳು ಆಯೋಜಿಸುವ ಸಭೆಗಳಲ್ಲಿ ಧ್ವನಿವರ್ಧಕಕ್ಕೆ ಅನುಮತಿ ಅಗತ್ಯ
ರಾಜಕೀಯ ಪಕ್ಷಗಳು, ಸಾರ್ವಜನಿಕರು ಪ್ರಚಾರ ಸಾಮಗ್ರಿಗಳ ಬಳಕೆಯನ್ನು ನಿಷೇಧಿಸಿ ಮೈಸೂರು ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ. ರಾಜಕೀಯ ಪಕ್ಷಗಳು ತಮ್ಮ ಟಿಕೆಟ್ ಆಕಾಂಕ್ಷಿಗಳ ಫ್ಲೆಕ್ಸ್, ಬ್ಯಾನರ್, ಬಂಟಿಂಗ್, ಕಟೌಟ್, ಹೋರ್ಡಿಂಗ್ ಮತ್ತು ಭಿತ್ತಿಪತ್ರಗಳಂತಹ ಪ್ರಚಾರ ಸಾಮಗ್ರಿಗಳನ್ನು ಬಳಸದಂತೆ ಆದೇಶ ಹೊರಡಿಸಿದೆ.
ಮಹಾನಗರ ಪಾಲಿಕೆ ಗುರುತಿಸಿದ ಸ್ಥಳಗಳಲ್ಲಿ ಪ್ರಚಾರ ಸಾಮಗ್ರಿಗಳನ್ನು ಹಾಕುವಂತಹವರು ಮೊದಲು ಪಾಲಿಕೆಯಿಂದ ಅನುಮತಿ ಪಡೆಯಬೇಕು. ಗುರುತು ಪಡಿಸಿದ ಸ್ಥಳಗಳನ್ನು ಹೊರತುಪಡಿಸಿ, ನಗರದಾದ್ಯಂತ ಯಾವುದೇ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ.
“ಅನಧಿಕೃತ ಫ್ಲೆಕ್ಸ್ ಬ್ಯಾನರ್‌ಗಳನ್ನು ಅಳವಡಿಸುವವರ ವಿರುದ್ಧ ‘ಕರ್ನಾಟಕ ಮುಕ್ತ ಸ್ಥಳಗಳ ವಿರೂಪಗೊಳಿಸುವಿಕೆ ತಡೆ ಕಾಯಿದೆ 1981’ ಮತ್ತು ‘ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ಸ್ ಕಾಯಿದೆ 1976’ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು” ಎಂದು ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ರಾಜಕೀಯ ಪಕ್ಷಗಳು ಆಯೋಜಿಸುವ ಸಭೆಗಳಲ್ಲಿ ಧ್ವನಿವರ್ಧಕ ಅಳವಡಿಸಲು ಪಾಲಿಕೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ” ಎಂದು ಸೂಚಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ದಾಸ್ತಾನು ಆಗಿದ್ದ 18 ರಾಶಿ ಅದಿರಿಗೆ ಮುಕ್ತಿ
“ಸರ್ಕಾರಿ ಕಟ್ಟಡ ಮತ್ತು ಆವರಣಗಳಲ್ಲಿ ರಾಜಕೀಯ ಪಕ್ಷಗಳ ಪ್ರಚಾರ ಸಾಮಗ್ರಿಗಳನ್ನು ಪ್ರದರ್ಶಿಸುವಂತಿಲ್ಲ. ಒಂದು ವೇಳೆ ಸರ್ಕಾರಿ ಸ್ಥಳಗಳಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಕಂಡರೆ ಯಾವುದೇ ಮುಲಾಜಿಲ್ಲದೆ ಅವುಗಳನ್ನು ತೆರವುಗೊಳಿಸುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ.
“ಖಾಸಗಿ ಸ್ಥಳದಲ್ಲಿ ಅಳವಡಿಸಿದ ಚುನಾವಣಾ ಫ್ಲೆಕ್ಸ್‌ಗಳಿಗೆ ಸಂಬಂಧಿಸಿದಂತೆ ಪಾಲಿಕೆ ಮಧ್ಯಪ್ರವೇಶಿಸುವುದಿಲ್ಲ. ಏಕೆಂದರೆ, ಅದನ್ನು ಖಾಸಗಿ ಕಟ್ಟಡದ ಮಾಲೀಕರು ಮತ್ತು ಸಂಬಂಧಪಟ್ಟ ರಾಜಕೀಯ ಪಕ್ಷಗಳಿಗೆ ಬಿಡಲಾಗಿದೆ, ಆದರೆ, ಅವರು ತಮ್ಮ ಆವರಣದಲ್ಲಿ ಫ್ಲೆಕ್ಸ್ ಅಳವಡಿಸಲು ಮಾನ್ಯ ಅನುಮತಿ ತೆಗೆದುಕೊಳ್ಳಬೇಕು” ಎಂದು ಸೂಚಿದ್ದಾರೆ.