ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಲ್ಲಿ ನೀಡಿರುವ ಹೇಳಿಕೆ ದ್ವೇಷ ಭಾಷಣವಾಗಿದ್ದು, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹಾಗೂ ಧರ್ಮದ ಆಧಾರದಲ್ಲಿ ಜನರನ್ನು ಪ್ರಚೋದಿಸುವ ಉದ್ದೇಶ ಹೊಂದಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಕೂಡಲೇ ಬಂಧಿಸಬೇಕು ಎಂದು ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟ ಆಗ್ರಹಿಸಿದೆ.
ಒಕ್ಕೂಟದ ಮಾಧ್ಯಮ ವಕ್ತಾರ ಹಾಗೂ ಸಂಚಾಲಕರಲ್ಲೊಬ್ಬರಾದ ಸುಹೇಲ್ ಮರೂರು ಅವರು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, “ಮುಲ್ಲಾನಿಗೂ ನೀಟ್ ಪರೀಕ್ಷೆಗೂ ಏನು ಸಂಬಂಧ. ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ” ಎಂಬ ಸಿ.ಟಿ. ರವಿ ಅವರ ಹೇಳಿಕೆ ಒಂದು ಧರ್ಮದ ಗೌರವಾನ್ವಿತ ಧರ್ಮಗುರುಗಳನ್ನು ಅವಮಾನಿಸುವುದರ ಜೊತೆಗೆ ಧರ್ಮದ ಆಧಾರದಲ್ಲಿ ದ್ವೇಷ ಹರಡುವ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಚಿಕ್ಕಮಗಳೂರು ಜಾಮಿಯಾ ಮಸೀದಿ ಅಧ್ಯಕ್ಷ ಮುಜಾಹಿದ್ ಪಾಷಾ ಅವರು ಈಗಾಗಲೇ ದೂರು ದಾಖಲಿಸಿದ್ದು, ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧಕ್ಕೆ ಪ್ರಚೋದನೆ ನೀಡಿದ ಆರೋಪದಡಿ ಸಿ.ಟಿ. ರವಿ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಒಕ್ಕೂಟ ಒತ್ತಾಯಿಸಿದೆ.
ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳು ಹಾಗೂ ಯುವಜನರು ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರ ಸರ್ಕಾರ ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ಪ್ರಶ್ನೆಗಳಿಗೆ ಉತ್ತರ ನೀಡುವ ಬದಲು ಬಿಜೆಪಿ ನಾಯಕರು ಹಿಂದೂ-ಮುಸ್ಲಿಂ ವಿಭಜನೆಯ ರಾಜಕೀಯವನ್ನು ಮುಂದುವರಿಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ಟೀಕಿಸಲಾಗಿದೆ.
ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರಿಗೆ “ಮುಲ್ಲಾಗಳು ಬಿರಿಯಾನಿ ತಿನ್ನಿಸುತ್ತಿದ್ದಾರೆ” ಎಂದು ಹೇಳಿಕೆ ನೀಡಿರುವುದನ್ನೂ ಉಲ್ಲೇಖಿಸಿರುವ ಒಕ್ಕೂಟ, ಸರ್ಕಾರವನ್ನು ಪ್ರಶ್ನಿಸುವ ಜಾಗೃತ ನಾಗರಿಕರನ್ನು ಬಿಜೆಪಿ ಸಹಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದೆ.
ನೀಟ್ ಹಗರಣದ ವಿರುದ್ಧ ವಿದ್ಯಾರ್ಥಿಗಳೊಂದಿಗೆ ನಿಲ್ಲಬೇಕಾದ ಬಿಜೆಪಿ, ಅವರ ವಿರುದ್ಧವೇ ಪ್ರತಿಭಟನೆ ನಡೆಸುತ್ತಿರುವುದು ಜನವಿರೋಧಿ ಧೋರಣೆಯಾಗಿದೆ. ಅಂತಹ ಪ್ರತಿಭಟನೆಯಲ್ಲಿ ವಿಷಯಕ್ಕೆ ಸಂಬಂಧಿಸದ ಪ್ರಚೋದನಕಾರಿ ಹಾಗೂ ಕೀಳು ಅಭಿರುಚಿಯ ಹೇಳಿಕೆ ನೀಡಿರುವ ಸಿ.ಟಿ. ರವಿ ಅವರ ನಡೆ ಖಂಡನೀಯ ಎಂದು ಒಕ್ಕೂಟ ಹೇಳಿದೆ.
ಈ ವಿಶೇಷ ಸುದ್ದಿ ಓದಿದ್ದೀರಾ?ಶುಂಠಿ ಕೃಷಿ: ಕೇರಳದಿಂದ ಕರ್ನಾಟಕಕ್ಕೆ ವಲಸೆ ಬಂದ ಲಾಭದಾಯಕ ಬೆಳೆ; ಪರಿಸರಕ್ಕೆ ಎಚ್ಚರಿಕೆಯ ಗಂಟೆಯೂ ಹೌದು
ಮುಸ್ಲಿಮ್ ಸಮುದಾಯದ ಬಗ್ಗೆ ಬಿಜೆಪಿ ನಾಯಕರು ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿರುವ ಒಕ್ಕೂಟ, ಒಂದು ಕಡೆ ಹಿಜಾಬ್ ಹಾಗೂ ಶಿಕ್ಷಣದಲ್ಲಿನ ಮೀಸಲಾತೆಯನ್ನು ವಿರೋಧಿಸುವ ಬಿಜೆಪಿ, ಮತ್ತೊಂದು ಕಡೆ ಮುಸ್ಲಿಮ್ ಸಮುದಾಯಕ್ಕೆ ಶಿಕ್ಷಣದ ಬಗ್ಗೆ ಕಾಳಜಿ ಇರುವಂತೆ ಮಾತನಾಡುವುದು ರಾಜಕೀಯ ಉದ್ದೇಶದಿಂದ ಮಾತ್ರ ಎಂದು ಟೀಕಿಸಿದೆ.
ಈ ವಿಶೇಷ ಸುದ್ದಿ ಓದಿದ್ದೀರಾ?ತಂಬಾಕು ಮುಖ್ಯವಲ್ಲ; ತಂಬಾಕು ಬೆಳೆಗಾರರ ಬದುಕು ಮುಖ್ಯ
ಸಿ.ಟಿ. ರವಿ ಅವರ ಹೇಳಿಕೆಯಿಂದ ಸಮಾಜದಲ್ಲಿ ಅಶಾಂತಿ ಉಂಟಾಗುವ ಸಾಧ್ಯತೆ ಇದ್ದು, ನಿರ್ದಿಷ್ಟ ಸಮುದಾಯದ ವಿರುದ್ಧ ದ್ವೇಷ ಮತ್ತು ಅನುಮಾನವನ್ನು ಹರಡುವ ಉದ್ದೇಶ ಅವರ ಮಾತುಗಳಲ್ಲಿ ವ್ಯಕ್ತವಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಕಾನೂನು ಕ್ರಮ ಕೈಗೊಂಡು ಅವರನ್ನು ಬಂಧಿಸಬೇಕು ಎಂದು ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟ ಆಗ್ರಹಿಸಿದೆ.





